ಅರಣ್ಯಾಧಿಕಾರಿಗಳಿಗೆ ಘೇರಾವ್
ಕ.ಪ್ರ.ವಾರ್ತೆ , ಆಲೂರು , ಡಿ. 18
ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿಯ ಕಲ್ಲಾರೆ, ಕೋಡಗತ್ತವಳ್ಳಿ, ಆಂಜಳಿಗೆ, ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆನಾಶಗೊಳಿಸಿದ್ದು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬುಧವಾರ ಸ್ಥಳಕ್ಕಾಗಮಿಸಿದ ಅರಣ್ಯಧಿಕಾರಿಗಳ ಜೀಪನ್ನು ತಡೆದು ಆರ್ಎಫ್ಓ ಹಾಗೂ ಸಿಬ್ಬಂದಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಘೋಷಣೆ: ಸೋಮವಾರ ಹಾಗೂ ಮಂಗಳವಾರ ರಾತ್ರಿ ದೊಡ್ಡಬೆಟ್ಟ, ರಂಗನಬೆಟ್ಟ, ಉಂಬಳಿಬೆಟ್ಟ ಪ್ರದೇಶಗಳಲ್ಲಿ 3 ಗುಂಪುಗಳಾಗಿ ಬೀಡು ಬಿಟ್ಟಿರುವ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಲ್ಲಾರೆ ಗ್ರಾಮದ ಜವರೇಗೌಡ, ಕೆ.ಮಂಜುನಾಥ್, ಕೆ.ಟಿ. ಸುರೇಶ್, ಮಂಜಯ್ಯ, ಕೆ.ಆರ್.ಚಂದ್ರಶೇಖರ್, ಲಕ್ಷ್ಮೇಗೌಡ, ಕೆ.ವಿರುಪಾಕ್ಷ, ಕೃಷ್ಣೇಗೌಡ, ಸಂಜೀವ್ ಕುಮಾರ್, ಕೆ.ಎಂ.ಮಂಜುನಾಥ್, ಕೆ. ಅಶ್ವತ್, ಕೆ. ರಾಜಸುಗುಣ, ಕೋಡಗತ್ತವಳ್ಳಿ ಗ್ರಾಮದ ಕೆ.ಟಿ.ನಾಗರಾಜ್, ಕೆ.ಟಿ. ಸುರೇಶ್, ಬಾಲಕೃಷ್ಣ, ಅಂಜಳಿಗೆ ಗ್ರಾಮದ ಮಂಜಯ್ಯ ಎಂಬುವರ 35 ಎಕರೆ ಪ್ರದೇಶದಲ್ಲಿ ಬೆಳೆದಿದ್ದ, ಕುಯಿಲಿಗೆ ಬಂದ ಬತ್ತದ ಬೆಳೆಯನ್ನು ನಾಶಗೊಳಿಸಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಆರ್.ಎಫ್.ಓ. ದೇವರಾಜ್ ಹಾಗೂ ಸಿಬ್ಬಂದಿಗಳಿದ್ದ ಜೀಪನ್ನು ಕಲ್ಲಾರೆ ಸುತ್ತಮುತ್ತಲ ಗ್ರಾಮಸ್ಥರು ತಡೆಗಟ್ಟಿ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ಮಾತನಾಡಿದ ಪ್ರತಿಭಟನಾಕಾರರು, ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟರುವ ಕಾಡಾನೆಗಳು ಕಳೆದ 1 ವಾರದಿಂದ ದೊಡ್ಡಬೆಟ್ಟ, ರಂಗನಬೆಟ್ಟ, ಉಂಬಳಿಬೆಟ್ಟ ಅರಣ್ಯ ಪ್ರದೇಶದ ತಪ್ಪಲಿನ ಗ್ರಾಮಗಳಲ್ಲಿ ಹಾವಳಿ ನಡೆಸಿ ಕಷ್ಟ ಪಟ್ಟು ಬೆಳೆದ ಬೆಳೆಯನ್ನು ನಾಶಗೊಳಿಸುತ್ತಿವೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಬೇರೆಡೆಗೆ ಓಡಿಸುವುದನ್ನು ಬಿಟ್ಟು ಬೇಜಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ವಾರಗಟ್ಟಲೆ ಪ್ರತಿ ದಿನ ನಮ್ಮ ಗ್ರಾಮಗಳ ಜಮೀನಿನಲ್ಲಿ ದಾಂಧಲೆ ನಡೆಸುತ್ತಿರುವ ಆನೆಗಳನ್ನು ಓಡಿಸುವುದಿರಲಿ ಕನಿಷ್ಠ ಪಟಾಕಿಗಳನ್ನು ನೀಡಿಲ್ಲ, ಕಳೆದ ವರ್ಷ ನಾಶಗೊಂಡ ಬೆಳೆಗೆ ಈವರೆಗೂ ಪರಿಹಾರ ನೀಡಲಾಗಿಲ್ಲ, ಅಲ್ಲದೆ ಕಳೆದ ವರ್ಷವಿದ್ದ, ಫಾರೆಸ್ಟರ್ ಹೆಚ್ಚು ಬೆಳೆ ಹಾನಿಗೊಳಗಾದವರಿಗೆ ಕಡಿಮೆ ಹಾಗೂ ಕಡಿಮೆ ಬೆಳೆ ಹಾನಿಗೊಳಗಾದವರಿಗೆ ಹೆಚ್ಚು ಪರಿಹಾರಕ್ಕೆ ಶಿಫಾರಸ್ಸು ಮಾಡಿದ್ದು, ಇದರಿಂದಾಗಿ ನಿಜವಾಗಿ ಬೆಳೆ ಕಳೆದುಕೊಂಡವರಿಗೆ ನೈಜ ಪರಿಹಾರ ದೊರೆಯದೆ ಅನ್ಯಾಯವಾಗಿದೆ.
ಸರ್ಕಾರ ನೀಡುತ್ತಿರುವ ಪರಿಹಾರ ಅವೈಜ್ಞಾನಿಕವಾಗಿದ್ದು, ಅವರು ನೀಡೋ ಪರಿಹಾರ ಗದ್ದೆಗಳ ಬದುಗಳನ್ನು ಸರಿಪಡಿಸಿಕೊಳ್ಳಲು ಸಾಕಾಗುವುದಿಲ್ಲ. ಕಳೆದ ವರ್ಷವೂ ಬೆಳೆ ಕಳೆದುಕೊಂಡಿದ್ದ ನಾವು ಈ ಬಾರಿಯೂ ಬೆಳೆದ ಬೆಳೆ ಕೈಗೆ ಬಾರದೆ ಒಂದೊತ್ತಿನ ಊಟಕ್ಕಾಗಿ ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ಕಾಡಾನೆಗಳು ಗ್ರಾಮದೊಳಕ್ಕೆ ನುಗ್ಗುತ್ತಿದ್ದು, ಪ್ರಾಣ ಭೀತಿಯಿಂದ ಬದುಕುವಂತಾಗಿದೆ ಎಂದರು.
ಮನವೊಲಿಕೆಗೆ ಯತ್ನ: ಪ್ರತಿಭಟನಾಕಾರರನ್ನು ಮನಮೊಲಿಸಿ ಮಾತನಾಡಿದ ಆರ್.ಎಫ್.ಓ. ದೇವರಾಜ್ ದೊಡ್ಡಬೆಟ್ಟ, ರಂಗನ ಬೆಟ್ಟ, ಹಾಗೂ ಕೊಡಗಿನ ಉಂಬಳಿ ಬೆಟ್ಟದಲ್ಲಿರುವ ಕಾಡಾನೆಗಳ ಹಿಂಡಿನಲ್ಲಿ 4 ಮರಿಯಾನೆಗಳಿರುವುದರಿಂದಾಗಿ ಆನೆಗಳನ್ನುದೂರಕ್ಕೆ ಓಡಿಸಲು ಸಾಧ್ಯವಾಗುತ್ತಿಲ್ಲ, ಪಟಾಕಿ ಸಿಡಿಸಿ ಜೋರಾಗಿ ಸದ್ದು ಮಾಡಿದರೂ ಆನೆಗಳೆಲ್ಲ ಮರಿ ಆನೆಗಳನ್ನು ಸುತ್ತುವರಿದು ನಿಂತರೆ ಹಿಂಡಿನ ಮುಖ್ಯಸ್ಥ ಆನೆ ನಮ್ಮ ಮೇಲೆ ದಾಳಿ ನಡೆಸಲು ಮುಂದಾಗುತ್ತದೆ.
ಅಲ್ಲದೆ ಹೇಮಾವತಿ ಹಿನ್ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಕೊಡಗಿಗೆ ಆನೆಗಳನ್ನು ಓಡಿಸಿದರೆ, ರಾತ್ರಿಯಲ್ಲಿ ಪುನಃ ಅವು ವಾಪಸ್ಸು ಬರುತ್ತವೆ.
ಕಳೆದ ವರ್ಷ ಬೆಳೆ ಪರಿಹಾರ ರು. 10 ಲಕ್ಷ ಬಾಕಿ ಇದ್ದೂ ಈ ವರ್ಷ ಈಗಾಗಲೇ 1800 ಅರ್ಜಿಗಳು ಬಂದಿದ್ದು, ರು. 50 ಲಕ್ಷ ಪರಿಹಾರ ಮೊತ್ತ ಬರಬೇಕಾಗಿದೆ.
ಬಂದ ತಕ್ಷಣ ಪರಿಹಾರವನ್ನು ವಿತರಿಸಲಾಗುವುದು ಎಂದ ಅವರು, ಈ ಭಾಗದ ಜನರ ಕಷ್ಟ ಕಂಡು ನಮಗೂ ಕಣ್ಣೀರು ಬರುತ್ತಿದ್ದೂ, ಕೇಂದ್ರ ಸರ್ಕಾರದ ಆದೇಶ ದೊರೆತ ತಕ್ಷಣವೇ ಆನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

