ಹಾಸನ

'ಗುಡಿಸಲು ಕಳೆದುಕೊಂಡವರಿಗೆ ಸೌಲಭ್ಯ ನೀಡಿ'

Published On :

ಕ.ಪ್ರ.ವಾರ್ತೆ ,  ಹಾಸನ ,  ಡಿ. 18
ಆಕಸ್ಮಿಕ ಬೆಂಕಿ ದುರಂತದಲ್ಲಿ 7 ಗುಡಿಸಲುಗಳು ಸುಟ್ಟು ಹೋಗಿದ್ದು, ಸಂಬಂಧಿಸಿದ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ನೇತೃತ್ವದಲ್ಲಿ ಗುಡಿಸಲು ಕಳೆದುಕೊಂಡವರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವಾತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ಗೆ ಮನವಿ ನೀಡಿದರು.
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ನಂಜಾಪುರ ಗ್ರಾಮದಲ್ಲಿ ಡಿ.7ರಂದು ಸಂಭವಿಸಿದ ಅಗ್ನಿ ದುರುಂತದಲ್ಲಿ 7 ಗುಡಿಸಲುಗಳು ಸಂಪೂರ್ಣ ಭಸ್ಮವಾಗಿದ್ದು, ಆಹಾರ-ಧಾನ್ಯ, ಬಟ್ಟೆ, ಹಣ ದಾಖಲೆಪತ್ರಗಳು, ಪ್ರಾತೆ-ಪಗಡೆಗಳು ಸುಟ್ಟು ಭಸ್ಮವಾಗಿದೆ. ಎಲ್ಲಾ ದಲಿತ ಕುಟುಂಬಗಳಾಗಿದ್ದು, ಈ ದಲಿತರು ಸರ್ವಸ್ವವನ್ನು ಕಳೆದುಕೊಂಡಿದ್ದಾರೆ. ಜಿಲ್ಲಾಡಳಿತ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ.
ಆಕ್ರೋಶ: ಆದರೆ, ಅಗ್ನಿ ದುರಂತದಲ್ಲಿ ಸರ್ವಸ್ವವನ್ನೂ ಕಳೆದುಕೊಂಡಿರುವ 7 ದಲಿತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ, ಶಾಶ್ವತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಇದುವರೆಗೂ ಮುಂದಾಗಿಲ್ಲ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಜಿಲ್ಲಾಧಿಕಾರಿಗಳಾಗಲೀ ಇದುವರೆಗೂ ಈ ದುರುಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ದಲಿತರ ಗೋಳು ಕೇಳುವಂತಹ ಪ್ರಯತ್ನವನ್ನು ಕೂಡ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ತಾಲೂಕಿನ ದ್ಯಾಪಲಾಪುರ ಗ್ರಾಮದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಘರ್ಷಣೆ ಸಂಬಂಧಿಸಿದ ಸಂದರ್ಭದಲ್ಲಿ ಅಗ್ನಿ ದುರುಂತದಲ್ಲಿ ಅಲ್ಲಿನ ಮನೆಗಳು ಸಂಪೂರ್ಣವಾಗಿ ಭಸ್ಮವಾದಾಗ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ತಕ್ಷಣವೇ ಸ್ಪಂದಿಸಿದ ರೀತಿ, ನೀಡಿದ ಪರಿಹಾರ ಹಾಗೂ ಕೈಗೊಂಡ ಪುನರ್ವಸತಿ ಕಾಮಗಾರಿಗಳನ್ನು ನೋಡಿದರೆ, ನಂಜಾಪುರದಲ್ಲಿ ದಲಿತರು ಸರ್ವಸ್ವವನ್ನು ಕಳೆದುಕೊಂಡಾಗ ಸರ್ಕಾರ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಮೇಲ್ವರ್ಗ ಮತ್ತು ದಲಿತರ ನಡುವೆ ಸರ್ಕಾರ, ಜನಪ್ರತಿನಿಧಿಗಳು ಮತ್ತು ನಾಗರೀಕ ಸಮಾಜ ಎಷ್ಟೊಂದು ತಾರತಮ್ಯ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ವಿಪರ್ಯಾಸ: ನಂಜಾಪುರದಲ್ಲಿ ಇರುವ ದಲಿತರಿಗೆ ಸರಿಯಾದ ಉದ್ಯೋಗ, ಭೂಮಿ ಇಲ್ಲದೆ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರು. ಇಂತಹ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಜನರ ಪರವಾಗಿ ಸರ್ಕಾರ ನಿಲ್ಲಬೇಕು. ನಂಜಾಪುರದಲ್ಲಿ ಒಟ್ಟು 150ಕ್ಕೂ ಹೆಚ್ಚು ದಲಿತ ಕುಟುಂಬಗಳಿದ್ದು, ಅಲ್ಲಿನ ಬಹುತೇಕ ದಲಿತರು ಇಂದಿಗೂ ಗುಡಿಸಲುಗಳಲ್ಲಿ ವಾಸಿಸುತ್ತಿರುವುದ ವಿಪರ್ಯಾಸವಾಗಿದೆ ಎಂದು ಅಲವತ್ತುಕೊಂಡರು.
ಆಗ್ರಹ: ಈ ಗ್ರಾಮದ ದಲಿತರು ಕೃಷಿ ಮಾಡಲು ಸಾಕಷ್ಟು ಭೂಮಿಯು ಇಲ್ಲ. ಬಗರ್ ಹುಕುಂ ಭೂಮಿಯನ್ನು ಸರ್ಕಾರ ಇದುವರೆಗೂ ಸಕ್ರಮಗೊಳಿಸಿಲ್ಲ. ಆ ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಸಾರಿಗೆ ವ್ಯವಸ್ಥೆಯಿಲ್ಲ. ಇಲ್ಲಿನ ದಲಿತರ ಜೀವನೋಪಾಯಕ್ಕಾಗಿ ಅಕ್ಕಪಕ್ಕದ ಊರುಗಳಿಗೆ ಹೋಗಿ ಕೂಲಿ ಮಾಡಿಕೊಂಡು ಜೀವನ ಸಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಕಾಳಜಿವಹಿಸಿ, ದಲಿತ ಕುಟುಂಬಗಳಿಗೆ ವಸತಿ, ಭೂಮಿ, ಉದ್ಯೋಗ ಮತ್ತು ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯ್ಕುಮಾರ್, ಸಿಪಿಎಂ ಮುಖಂಡ ಧರ್ಮೇಶ್, ಎಚ್.ಕೆ.ಸಂದೇಶ್, ಕ್ರಾಂತಿ ಸಿ.ತ್ಯಾಗಿ, ಮರಿಜೋಸೆಫ್, ರೂಪ ಹಾಸನ್, ಮಧು, ನಾಗರಾಜು ಹಾಗೂ ಇತರರು ಇದ್ದರು.
ಜಿಲ್ಲಾಧಿಕಾರಿ ಸ್ಪಷ್ಟನೆ
ಅಗ್ನಿ ದುರುಂತದಿಂದ ಮನೆಗಳು ಭಸ್ಮವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಅದಕ್ಕೆ ತಕ್ಷಣವೇ ಜಿಲ್ಲಾಡಳಿತ ಸ್ಪಂದಿಸುವಂತೆ ನಮ್ಮ ಅಧಿಕಾರಿಗಳು ಕಳುಹಿಸಿದ್ದೇವೆ. ಗುರುವಾರ ನಾನೇ ಸ್ಥಳಕ್ಕೆ ಬಂದು ಅಲ್ಲಿನ ಉಂಟಾಗಿರುವ ಸಮಸ್ಯೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರಸವೆ ನೀಡಿದರು.
ಬೇಡಿಕೆಗಳು
1.  ನಂಜಾಪುರ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ದುರುಂತದಲ್ಲಿ ತಮ್ಮ ಸರ್ವಸ್ವವನ್ನು ಕಳೆದುಕೊಂಡಿರುವ ದಲಿತ ಕುಟುಂಬಗಳಿಗೆ ಕೂಡಲೇ 5 ಲಕ್ಷ ರು.ಧನ ಪರಿಹಾರ ನೀಡಬೇಕು.
2.  ಕೂಡಲೇ ಪುನರ್ವಸತಿ ಕಾಮಗಾರಿ ಆರಂಭಿಸಿ, ಮನೆ ಕಳೆದುಕೊಂಡ ದಲಿತರಿಗೆ ಮತ್ತು ಅಲ್ಲಿನ ವಸತಿ ರಹಿತ ದಲಿತ ಕುಟುಂಬಗಳಿಗೆ ಗುಣಮಟ್ಟದ ಮತ್ತು ವ್ಯವಸ್ಥಿತವಾದ ಆಧುನಿಕವಾದ ವಸತಿಗಳನ್ನು ನಿರ್ಮಿಸಿ, ನಂಜಾಪುರ ಗ್ರಾಮವನ್ನು ಗುಡಿಸಲು ಮುಕ್ತ ಗ್ರಾಮವನ್ನಾಗಿ ಮಾಡಬೇಕು ಹಾಗೂ ಆ ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಆಧುನಿಕ ರಸ್ತೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
3.  ನಂಜಾಪುರ ಗ್ರಾಮದ ದಲಿತರಿಗೆ ಅಲ್ಲಿಯೇ ಉದ್ಯೋಗ ನೀಡಬೇಕು ಹಾಗೂ ಪ್ರತಿ ದಲಿತ ಕುಟುಂಬಗಳಿಗೆ ಕೃಷಿಯೋಗ್ಯ ಭೂಮಿ ನೀಡಬೇಕು. ಬಗರ್ಹುಕುಂ ಸಾಗುವಳಿ ಮಾಡಿರುವ ಭೂಮಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು.
4.  ಅಗ್ನಿ ದುರಂತದಲ್ಲಿ ಅಲ್ಲಿನ ದಲಿತ ಕುಟುಂಬಗಳು ತಮ್ಮ ಎಲ್ಲಾ ಅಗತ್ಯ ದಾಖಲಾತಿ-ಪತ್ರಗಳನ್ನು ಕಳೆದುಕೊಂಡಿದ್ದು, ಕೂಡಲೆ ಅವರಿಗೆ ರೇಷನ್ಕಾರ್ಡ್, ಆಧಾರ ಕಾರ್ಡ್, ಗುರುತಿನ ಪತ್ರ ಇತ್ಯಾದಿ ಅಗತ್ಯವಾದ ದಾಖಲೆಗಳನ್ನು ಜಿಲ್ಲಾಡಳಿತ ನೀಡಬೇಕು.
5.  ಈ ಸಂಬಂಧ ಜಿಲ್ಲಾಧಿಕಾರಿಯವರ ಆಧ್ಯಕ್ಷತೆಯಲ್ಲಿ ಕೂಡಲೇ ಸಭೆ ಕರೆದು ಪರಿಹಾರ ಮತ್ತು ಪುನರ್ವಸತಿ ಕಾಮಗಾರಿಗೆ ಚಾಲನೆ ನೀಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.