ಹಾಸನ

ಬ್ಯಾಂಕ್ ಮುಷ್ಕರ: ಗ್ರಾಹಕರ ಪರದಾಟ

Published On :

ಕನ್ನಡಪ್ರಭ ವಾರ್ತೆ, ಹಾಸನ, ಡಿ. 18
ವೇತನ ಪರಿಷ್ಕರಣೆ  ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಬುಧವಾರ ಮುಷ್ಕರ ನಡೆಸಿದರು. ಇದರ ಪರಿಣಾಮ ರಾಷ್ಟ್ರೀಕೃತ ಬ್ಯಾಂಕ್‌ಗಳ ಕಾರ್ಯ ಸ್ಥಗಿತಗೊಂಡಿತ್ತು.
ಖಾಸಗಿ ಬ್ಯಾಂಕ್‌ಗಳ ಸಹಕಾರ: ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ, ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಎಲ್ಲಾ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿಲ್ಲ. ಈ ಹಿನ್ನೆಲೆಯಲ್ಲಿ, ಗ್ರಾಹಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಖಾಸಗಿ ಬ್ಯಾಂಕ್‌ಗಳು ಸಹ ಮುಷ್ಕರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ಬಂದ್ ಮಾಡಿದ್ದವು.
ಗ್ರಾಹಕರ ಪರದಾಟ: ಎಟಿಎಂಗಳಲ್ಲಿ ಹಣ ಇಲ್ಲದ ಕಾರಣ ಗ್ರಾಹಕರು ಪರದಾಟ ಬೇಕಾಯಿತು. ಸಿಬ್ಬಂದಿಗಳು ಮುಷ್ಕರ ನಿರತರಾಗಿದ್ದರಿಂದ ಬಹುತೇಕ ಎಟಿಎಂಗಳಿಗೆ ಹಣ ತುಂಬಿರಲಿಲ್ಲ. ಹಾಸನ ನಗರದ ಎಸ್‌ಬಿಎಂ ಬ್ಯಾಂಕ್‌ನ ಮುಂದೆ ನೌಕರರು ಪ್ರತಿಟನೆ ನಡೆಸಿ ನಗರದಲ್ಲಿ ಮೆರವಣಿಗೆ ನಡೆಸಿದರು. ಬ್ಯಾಂಕ್ ಮುಷ್ಕರದಿಂದಾಗಿ ಹಣಕಾಸು ವಹಿವಾಟು ನಡೆಯದ ಕಾರಣ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜವರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿದ ಘಟನೆ ನಡೆಯಿತು.
ಆಕ್ರೋಶ: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ದೇಶಾದ್ಯಂತ ಪ್ರತಿಭಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಬ್ಯಾಂಕ್‌ಗಳೂ ಬಂದ್ ಮಾಡಿದ್ದವು. 9 ಸಂಘಟನೆಗಳಿಂದ ಸುಮಾರು 10 ಲಕ್ಷ ಬ್ಯಾಂಕ್ ನೌಕರರಿದ್ದಾರೆ. ವೇತನ ಪರಿಷ್ಕರಣೆ ಮಾಡದೆ ಸರ್ಕಾರಗಳು ನೌಕರರಿಗೆ ವೇತನ ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರು ಸಹ ಯಾರೊಬ್ಬರೂ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ: 2012ರಿಂದಲೇ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಯಾಗಬೇಕಿದೆ. ಆದರೆ ವೇತನ ಪರಿಷ್ಕರಣೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತವೆ. ವೇತನ ಪರಿಷ್ಕರಣೆ ಕುರಿತಂತೆ ಭಾರತೀಯ ಬ್ಯಾಂಕ್‌ಗಳ ಸಂಘದ ಜೊತೆಗೆ ನಡೆಸಿದ ಸಭೆ ವಿಫಲವಾಗಿದೆ. ಬ್ಯಾಂಕ್‌ಗಳಲ್ಲಿ ಕೆಲಸದ ಒತ್ತಡದಿಂದಾಗಿ ನೌಕರರ ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿರುವುದರಿಂದ ನೌಕರರ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ ಎಂದು ಆರೋಪಿಸಿದರು.
ಪ್ರಯೋಜನವಿಲ್ಲ: ಸಾರ್ವಜನಿಕ ಕ್ಷೇತ್ರವಾದ ಬ್ಯಾಂಕ್‌ಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರವು ಜನ ವಿರೋಧಿ ಬ್ಯಾಂಕಿಂಗ್ ನೀತಿಯನ್ನು ಅನುಸರಿಸುತ್ತಿದೆ. ಈ ಜನ ವಿರೋಧಿ ಬ್ಯಾಂಕ್ ನೀತಿಯಿಂದ ಸಾರ್ವಜನಿಕರು ಸಂಕಷ್ಟವನ್ನು ಎದುರಿಸಲಿದ್ದಾರೆ. ಶೇ.51ರಷ್ಟು ಸಾರ್ವಜನಿಕರ ಶೇರ್‌ಗಳನ್ನು ವಾಪಸ್ ನೀಡಲಿದೆ. ಇದರಿಂದ ಸಾರ್ವಜನಿಕರಿಗೆ ಅನ್ಯಾಯವಾಗಲದೆ. ಕೇಂದ್ರದ ಬ್ಯಾಂಕಿಂಗ್ ನೀತಿಯಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ದೂರಿದರು.
ಕಿಡಿ: ಅಷ್ಟೇ ಅಲ್ಲದೆ, ಸಾರ್ವಜನಿಕ ಬ್ಯಾಂಕ್‌ಗಳನ್ನು ಬಂಡವಾಳ ಶಾಹಿಗಳ ಪಾಲುದಾರಿಕೆಗೆ ಅನುವು ಮಾಡಿಕೊಡಲಾಗುತ್ತಿದೆ. ವಿದೇಶಿ ಬಂಡವಾಳಗಾರರಿಗೆ ನೇರವಾಗಿ ಬ್ಯಾಂಕ್‌ಗಳ ಲೈಸನ್ಸ್‌ಗಳನ್ನು ನೀಡಲಾಗುತ್ತಿದೆ. ವಿದೇಶಿ ಬ್ಯಾಂಕ್‌ಗಳಿಗೆ ಪರವಾನಗಿ ನೀಡುವುದರಿಂದ ಭಾರತೀಯ ಬ್ಯಾಂಕ್‌ಗಳನ್ನು ಮೂಲೆಗುಂಪು ಮಾಡಿದಂತಾಗುತ್ತಿದೆ. ವಿದೇಶ ಬಂಡವಾಳಗಾರರಿಗೆ ಅನುಮತಿ ನೀಡುವುದು ಜನ ವಿರೋಧಿ ಕೃತ್ಯವಾಗಿದೆ ಎಂದು ಕಿಡಿಕಾರಿದರು.
ವ್ಯವಸ್ಥೆ ಕದಡಬೇಡಬಾರದು: ಈಗ ಇರುವಂತಹ ಸುಸಜ್ಜಿತ ಬ್ಯಾಂಕ್‌ಗಳು, ವಿದೇಶಿ ಬಂಡವಾಳಗಾರರಿಂದ ಅವ್ಯವಸ್ಥೆಯ ತಾಣವಾಗಲಿದೆ. ಸಾರ್ವಜನಿಕರ ಹಿತ ರಕ್ಷಣೆಯನ್ನು ಕಾಪಾಡಬೇಕಾದಂತಹ ಸರ್ಕಾರ ಈಗ ಜನರ ಹಿತ ರಕ್ಷಣೆಯನ್ನು ಬದಿಗೊತ್ತಿದೆ. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆಯನ್ನು ಅನುಭವಿಸಲಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳ ಸುಸಜ್ಜಿತ ವ್ಯವಸ್ಥೆಯನ್ನು ಕದಡಬಾರದು ಎಂದು ಒತ್ತಾಯಿಸಿದರು.
ಆಗ್ರಹ: ಜೊತೆಗೆ ರು. 1 ಕೋಟಿಗೂ ಅಧಿಕವಾಗಿ ಬ್ಯಾಂಕ್‌ಗಳಲ್ಲಿ ಸಾಲವನ್ನು ಪಡೆದಿರುವಂತಹ ಮಾಹಿತಿಯನ್ನು ಬಹಿರಂಗ ಪಡಿಸಬೇಕು. ಆದ್ದರಿಂದ ಬ್ಯಾಂಕ್‌ಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಎಚ್ಚರಿಕೆ: ಒಟ್ಟಿನಲ್ಲಿ ಬ್ಯಾಂಕ್ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ, ರಾಮನಾಥ, ಪುಟ್ಟಸ್ವಾಮಿ, ಲೋಕೇಶ್, ಭಾಸ್ಕರ್, ಚಂದ್ರಶೇಖರ್, ಮಂಜುನಾಥ್, ಮೋಹನ್, ಕುಮಾರ್, ಸುನೀಲ್ ಕುಮಾರ್, ಚಂದ್ರಶೇಖರ್ ಹಾಗೂ ಇತರರು ಇದ್ದರು.
ಮುಷ್ಕರದಿಂದ ಜನರ ಪರದಾಟ
ಬ್ಯಾಂಕ್ ನೌಕರರು ಮುಷ್ಕರದಿಂದಾಗಿ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಳಗ್ಗೆ ಬ್ಯಾಂಕ್‌ಗಳು ಬಂದ್ ಆಗಿದ ಪರಿಣಾಮ ಸಾರ್ವಜನಿಕರ ಬಂದ ದಾರಿಗೆ ಸುಂಕ ಇಲ್ಲದಂತೆ ಪರಿತಪಿಸಿದರು. ಹಣಕಾಸು ವಹಿವಾಟು ಬಂದ್ ಆಗಿದ್ದರಿಂದ ಹಣ ತೆಗೆದುಕೊಳ್ಳುವುದಕ್ಕೆ ಬ್ಯಾಂಕ್‌ಗೆ ಬಂದಿದ ಜನರು ವಾಪಸ್ ತೆರಳಿದರು. ನಗರದ ಎಲ್ಲಾ ಬ್ಯಾಂಕ್‌ಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.