ಹಾಸನ

ಶೋಭಾಯಾತ್ರೆ ಘಟನೆಗೆ ಪೊಲೀಸರೇ ಹೊಣೆ

Published On :

ಬೇಲೂರು: ಪಟ್ಟಣದಲ್ಲಿ ನಡೆದ ದತ್ತ ಮಾಲಾದಾರಿಗಳ ಶೋಭಯಾತ್ರೆಯಲ್ಲಿ ನಡೆದ ಅಹಿತಕರ ಘಟನೆಗೆ ಪೊಲೀಸರೇ ನೇರ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿರುವ ಶಾಸಕ ವೈ.ಎನ್. ರುದ್ರೇಶ್ ಗೌಡರು, ಸಂಬಂಧಿಸಿದ ಪೊಲೀಸರ ಮೇಲೆ ಸೂಕ್ತ ಕಾನೂನು ಕ್ರಮ  ಜರುಗಿಸಿ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂಜಾಗ್ರತೆ ಕೈಗೊಂಡಿರಲಿಲ್ಲ: ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಪಟ್ಟಣದಿಂದ ಚಿಕ್ಕಮಗಳೂರು ದತ್ತ ಪೀಠಕ್ಕೆ ಹೋಗಲು ಶೋಭ ಯಾತ್ರೆ ನಡೆಸಿದ ಸಂದರ್ಭದಲ್ಲಿ ಬೇಲೂರಿಗೆ ಪ್ರವೇಶಿಸುವ ಮುನ್ನ ಅರೇಹಳ್ಳಿಯಲ್ಲಿ ಮಾಲಾಧಾರಿಗಳು ಅನ್ಯ ಕೋಮಿನವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿರುವ ವಿಚಾರ ಪೊಲೀಸ್‌ಗೆ ತಿಳಿದಿದ್ದರೂ ಸಹ ಬೇಲೂರಿನಲ್ಲಿ ಮೆರವಣಿಗೆಗೆ ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಇರುವುದು ಘಟನೆಗೆ ಕಾರಣವಾಗಿದೆ ಎಂದರು.
ರಕ್ಷಣೆಗೆ ಸರ್ಕಾರ ಸಿದ್ಧ: ತಾಲೂಕು ಕಾಂಗ್ರೆಸ್ ಅಧ್ಯಕ್ಷ ವೈ.ಟಿ. ದಾಮೋದರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಹಿತ ಕಾಯಲು ಬದ್ದವಾಗಿದ್ದು ಎಲ್ಲಾ ವರ್ಗದ ಜನರು ಶಾಂತಿಯಿಂದ ಜೀವನ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರಲ್ಲದೆ ತಾಲ್ಲೂಕಿನ ಅಲ್ಪಸಂಖ್ಯಾತರು ಯಾವುದೇ ಬಯ ಪಡದೆ ನಿರ್ಭೀತಿಯಿಂದ ಇರಲು ಮನವಿ ಮಾಡಿದರಲ್ಲದೆ ನಿಮ್ಮ ರಕ್ಷಣೆಗೆ ಸರ್ಕಾರ ಸದಾ ಸಿದ್ದ ಎಂದರು.
ದೂರು: ಕಾಂಗ್ರೆಸ್ ಮುಖಂಡ ವಿಶ್ವನಾಥ್ ಮಾತನಾಡಿ, ಪ್ರತಿ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಲವಾರು ಭಾಗಗಳಿಂದ ಕಾರ್ತಿಕ ಮಾಸದಲ್ಲಿ ಭಕ್ತರು ಯಾತ್ರೆ ಬರುತ್ತಾರೆ. ಈ ಸಂದರ್ಭದಲ್ಲಿ ಜಾತಿ- ಜನಾಂಗವೆಂಬ ಭೇದವಿಲ್ಲದೆ ತಳಿರು ತೋರಣ ಕಟ್ಟುವ ಮೂಲಕ ಗ್ರಾಮೀಣ ಭಾಗದಲ್ಲಿ ಇವರನ್ನು ಸ್ವಾಗತಿಸಲಾಗುತ್ತದೆ. ಇದು ನಿಜವಾದ ಭಕ್ತಪೂರ್ವ ಯಾತ್ರೆ. ಆದರೆ ಭಜರಂದಳ ಚುನಾವಣೆಯ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಶೋಭಾಯಾತ್ರೆ ನಡೆಸಿದ್ದಾರೆ. ಶೋಭಾ ಯಾತ್ರೆಯ ನೆಪದಲ್ಲಿ ಕೋಮು ಭಾವನೆಯನ್ನು ಕೆರಳಿಸುವಂತಹ ಕೆಲಸ ಮಾಡುತ್ತಾರೆ ಎಂದು ಅವರು ದೂರಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಎಂ.ಆರ್. ವೆಂಕಟೇಶ್, ಸಲೀಂಪಾಷ ಇದ್ದರು.
ನಿರಪರಾಧಿಗಳ ಬಂಧನ: ಬಿಜೆಪಿ ಆರೋಪ
ಸಕಲೇಶಪುರ: ಬೇಲೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ನಿರಪರಾಧಿಗಳನ್ನು  ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕ್ಯಾಮನಹಳ್ಳಿ ರಾಜ್‌ಕುಮಾರ್ ಆರೋಪಿಸಿದ್ದಾರೆ. ದತ್ತ ಪೀಠ ಮಾಲಾಧಾರಿಗಳ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಬೆಗೆ ಸಂಬಂಧಿಸಿದಂತೆ ದತ್ತ ಪೀಠಕ್ಕೆ ಹೋಗದೆ ಮನೆಯಲ್ಲಿದ್ದ ಪಟ್ಟಣದ ಬಾಳೆಗದ್ದೆ ನಿವಾಸಿಗಳನ್ನು ಅರೇಹಳ್ಳಿ ಪೊಲೀಸರು ಬಂಧಿಸಿದ್ದು, ದೂರು ದಾಖಲು ಮಾಡಿರುವುದು ಕಂಡುಬಂದಿದೆ. ಈ ರೀತಿ ನಿರಪರಾಧಿಗಳನ್ನು ಬಂಧಿಸುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವ ಇರುವುದರಿಂದ ತಕ್ಷಣ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಅಮಾಯಕರಿಗೆ ನ್ಯಾಯ ದೊರಕಿಸಿಕೊಡಬೇಕು.     ಅಮಾಯಕರನ್ನು ಅಪರಾಧಿಗಳೆಂದು ಪರಿಗಣಿಸುವುದು ತಪ್ಪು ಎಂದು ಅವರು ತಿಳಿಸಿದ್ದಾರೆ.
ಡಿಸಿ ಅನ್ಬುಕುಮಾರ್ ಭರವಸೆ
ಬೇಲೂರು: ಸೋಮವಾರ ನೆಡದ ದತ್ತ ಪೀಠ ಶೋಭಾಯತ್ರೆಯಲ್ಲಿ ನಡೆದ ಪ್ರಕರಣಕ್ಕೆ ಪೊಲೀಸರ ವೈಪಫಲ್ಯ ಕಾರಣವೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು  ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪಾಡುವುದು ಆದ್ಯ ಕರ್ತವ್ಯವಾಗಿದ್ದು, ಶಾಂತಿಯಿಂದ ಇರುವಂತೆ ಹಲವು ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಗಲಭೆಗೆ ಕಾರಣರಾದವರ ಮೇಲೆ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದರು.  ಮುಂಜಾಗ್ರತಾ ಕ್ರಮವಾಗಿ ಬೇಲೂರು ಮತ್ತು ಅರೇಹಳ್ಳಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ. ಸಮಾಜದ ಎಲ್ಲಾ ವರ್ಗದರನ್ನು ಗೌರವದಿಂದ ಕಾಣಲಾಗುವುದಲ್ಲದೆ ಯಾವುದೇ ದೂರುಗಳಿದ್ದರೆ, ಪೊಲೀಸ್ ವರಿಷ್ಠಾಧಿಕಾರಿ ಅಥವಾ ತಮಗೆ ದೂರು ನೀಡುವಂತೆ ಜನರಲ್ಲಿ ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.