ಸಿಇಟಿ ಕಾಯ್ದೆ ತಿದ್ದುಪಡಿ ಖಂಡಿಸಿ ಎಬಿವಿಪಿ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಡಿ 18
ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ 2006ರ ಸಿಇಟಿ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಯಮ್ಯನವರ ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಿಎಂ ಸಿದ್ದರಾಮಯ್ಯನವರ ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಈ ಕಾಯ್ದೆಯ ತಿದ್ದುಪಡಿಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿರುವ, ಎಂಜಿನಿಯರಿಂಗ್ನ ಶೇ. 45, ಮೆಡಿಕಲ್ನ ಶೇ.40ರಷ್ಟು, ದಂತ ವೈದ್ಯಕೀಯದ ಶೇ.35ರಷ್ಟು ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿದೆ.
ಆಕ್ರೋಶ: ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದು ಸರ್ಕಾರಿ ಕೋಟಾದ ಸೀಟುಗಳು ಇಲ್ಲದಂತಾಗಲಿದೆ. ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್- ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆ ಈಗಾಗಲೇ ಹಲವಾರು ದೂರುಗಳಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಉಳಿದ ಸರ್ಕಾರಿ ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್- ಕೆಗೆ ಬಿಟ್ಟುಕೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಂಚಿತರಾಗಲಿದ್ದಾರೆ: ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುಕೂಲವಾಗುತ್ತದೆ. ಇದನ್ನು ತಡೆಯಲೆಂದೇ 2006ರ ಕಾಯ್ದೆ ಅನುಷ್ಠಾನಕ್ಕೆ ತುರತ್ತಿರುವುದಾಗಿ ಸರ್ಕಾರ ಹೇಳುತ್ತಿದ್ದರೂ ಪರಿಣಾಮ ವ್ಯತಿರಿಕ್ತವಾಗಲಿದೆ. ಖಾಸಗಿ ವೈದ್ಯಕೀಯ, ದಂತ, ಎಂಜಿನಿಯರಿಂಗ್, ಯುನಾನಿ, ಆಯುರ್ವೇದ, ಯೋಗ, ನ್ಯಾಚರೋಪತಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶ ಶುಲ್ಕ ಕುರಿತಂತೆ ಸರ್ಕಾರದ ಪೂರ್ಣ ನಿಯಂತ್ರಣ ತಪ್ಪಿ, ಖಾಸಗಿ ಆಡಳಿತ ಮಂಡಳಿಗಳಿಗೆ ಪರಮಾಧಿಕಾರ ಕೊಟ್ಟಂತಾಗುತ್ತದೆ. ಇತರೆ ರಾಜ್ಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಡ್- ಕೆ ಪ್ರವೇಶ ಬರೆಯುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಸ್ಪರ್ಧೆ ಹೆಚ್ಚಾಗಿ, ಅವರು ಸೀಟು ವಂಚಿತರಾಗಲಿದ್ದಾರೆ ಎಂದರು.
ಶುಲ್ಕ ಏರಿಕೆ ಸಾಧ್ಯತೆ: ಆಯಾ ಕಾಲೇಜಿನ ಮೂಲ ಸೌಕರ್ಯ ಇತ್ಯಾದಿಗಳ ಆಧಾರದ ಮೇಲೆ ಶುಲ್ಕವನ್ನು, ಶುಲ್ಕ ನಿಗದಿ ಸಮಿತಿಯ ನಿರ್ಧರಿಸುವುದರಿಂದ ರಾಜ್ಯದಾದ್ಯಂತ ಏಕರೂಪ ಶುಲ್ಕ ಇಲ್ಲದಂತಾಗುತ್ತದೆ. ಒಂದೊಂದು ಕಾಲೇಜಿಗೆ ಒಂದೊಂದು ಶುಲ್ಕವನ್ನು ವಿದ್ಯಾರ್ಥಿಗಳು ಕೊಡಬೇಕಾಗುತ್ತದೆ. ಸಹಜವಾಗಿಯೇ ಈ ಶುಲ್ಕ ದುಬಾರಿಯಾಗಲಿದ್ದು, ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ಅಸಾಧ್ಯವಾಗುತ್ತದೆ. ಪಟ್ಟಣ ಪ್ರದೇಶದ ಖಾಸಗಿ ಕಾಲೇಜುಗಳಂತೂ ಇದನ್ನೇ ಉಪಯೋಗಿಸಿಕೊಂಡು ಶುಲ್ಕವನ್ನು ಸಿಕ್ಕಾಬಟ್ಟೆ ಏರಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಸಾಕ್ಷಿ: 210 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 21 ಮತ್ತು 32 ವೈದ್ಯಕೀಯ ಕಾಲೇಜುಗಳಲ್ಲಿ 10 ಕಾಲೇಜುಗಳಲ್ಲಿ ಸುಮಾರು 5 ಸಾವಿರ ಸೀಟಗಳಿಗೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರವೇಶ ಪರೀಕ್ಷೆ ನಡೆಸಲಿದೆ. ಉಳಿದ ಸುಮಾರು 75 ಸಾವಿರ ಸೀಟುಗಳಿಗೆ ಕಾಮೆಡ್- ಕೆ ಪ್ರವೇಶ ಪರೀಕ್ಷೆ ನಡೆಸುವುದರಿಂದ ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಆಗುತ್ತದೆ. ಏಕೆಂದರೆ ಕಾಮೆಡ್- ಕೆ ಹಿಂದೆ ನಡೆಸಿದ ಪ್ರವೇಶ ಅವ್ಯವಹಾರಗಳೇ ಇದಕ್ಕೆ ಸಾಕ್ಷಿಯಾಗಿದೆ.
ಪಟ್ಟು: ವಾಮ ಮಾರ್ಗಗಳ ಮೂಲಕ ಖಾಸಗಿ ಕಾಲೇಜುಗಳು ಲಕ್ಷಾಂತರ ರು.ಗೆ ಸೀಟು ಮಾರಾಟ ಮಾಡಿಕೊಳ್ಳುತ್ತಿದ್ದವು. ಆದರೆ ಸರ್ಕಾರ ತರಲಿರುವ ಈ ಕಾಯ್ದೆಯಿಂದಾಗಿ ಕಾನೂನು ಬದ್ಧವಾಗಿಯೇ ಹಣ ಕೊಳ್ಳೆ ಹೊಡೆಯಲು ಅನುಕೂಲವಾಗತ್ತದೆ. ಇನ್ನು ಅಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು ಎಂದು ಪಟ್ಟು ಹಿಡಿದರು.
ಸರ್ಕಾರದ ನೀತಿಯಿಂದ ಅನಾನುಕೂಲಗಳು: ರಾಜ್ಯದ ಯಾವುದೇ ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಯಾವುದೇ ಸೀಟುಗಳು ಇರುವುದಿಲ್ಲ. ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಮೆಡ್-ಕೆ ನಡೆಸುವ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಅಂದರೆ 21 ಎಂಜಿನಿಯರಿಂಗ್ಮ್ತ್ತು 10 ಮೆಡಿಕಲ್ ಕಾಲೇಜುಗಳಿಗೆ ಮಾತ್ರ ಸರ್ಕಾರದ ಸಿಇಟಿ ಪರೀಕ್ಷೆ ಅನ್ವಯವಾಗುತ್ತದೆ.
ಸಿಇಟಿಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಯೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಲು ಅನಿವಾರ್ಯವಾಗಿ ಲಕ್ಷಾಂತರ ರು. ಶುಲ್ಕ ಭರಿಸಬೇಕಾಗುತ್ತದೆ. ಯಾವುದೇ ಅನುದಾನ ರಹಿತ ಕಾಲೇಜುಗಳ ಶುಲ್ಕ ನೀತಿ ಮತ್ತು ಸೀಟು ಹಂಚಿಕೆಯಲ್ಲಿ ಸರ್ಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಸೀಟ್ ರ್ಯಾಂಕಿಂಗ್ ದಂಧೆಯಲ್ಲಿ ತೊಡಗಿರುವ ಕಾಮೆಡ್-ಕೆ ಪರೀಕ್ಷೆ ನಡೆಸುವ ಅಧಿಕಾರ ನೀಡಲಾಗಿದ್ದು, ಇದರಿಂದ ಪರೀಕ್ಷಾ ವ್ಯವಸ್ಥೆಯೇ ಪ್ರಶ್ನಾರ್ಹವಾಗಿದೆ.
ಈ ಹಿಂದೆ ಸರ್ಕಾರದ ಕೋಟಾದಲ್ಲಿದ್ದ ಶೇ.45 ಎಂಜಿನಿಯರಿಂಗ್, ಶೇ.40ರಷ್ಟು ಮೆಡಿಕಲ್ ಮತ್ತು ಶೇ.35 ದಂತ ವೈದ್ಯಕೀಯ ಕಾಲೇಜುಗಳ ಸೀಟುಗಳು ಖಾಸಗಿಯವರ ಪಾಲಾಗಲಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಹಿಪಾಲ್, ಕೇಶವ್, ಮಂಜುನಾಥ್, ಮನು, ಸುರೇಶ್, ಕಿರಣ್, ರಾಕೇಶ್, ನಿರಂಜನ್, ಕಾವ್ಯ, ಸುಷ್ಮಾ, ಮಂಜುಳ, ರಶ್ಮಿ, ಪಲ್ಲವಿ, ಸೌಮ್ಯ, ಸಂಧ್ಯಾ, ಕವಿತಾ, ಸಹನಾ, ವೇದ, ಕಮಲ, ಸುಜಾತ, ಪೂರ್ಣಿಮಾ, ಲಕ್ಷ್ಮೀ, ಸುಮ, ರಮ್ಯ, ಕುಸುಮ, ಪೂಜಾ, ರಕ್ಷಿತ, ರಾಣಿ, ಕುಮುದ, ನಾಗವೇಣಿ, ಪಲ್ಲವಿ, ರೂಪ, ಕಾವ್ಯ, ಸುಜಿ, ಮಮತ, ಪ್ರಿಯ, ಕೋಮಲ, ಲೋಕೇಶ್ವರಿ, ಮಂಜುಳ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

