ಹಾಸನ

ಇಂದು ನೀರು ಸರಬರಾಜು ಇಲ್ಲ

Published On :

ಹಾಸನ: ನಗರಕ್ಕೆ ನೀರು ಸರಬರಾಜು ಮಾಡುವ 500 ಎಂ.ಎಂ ವ್ಯಾಸದ ರೈಸಿಂಗ್ ಪೈಪ್‌ಲೈನ್ ನಗರದ ಬಬೈಪಾಸ್ ರಸ್ತೆಯಾದ ಗೂರೂರು ರಸ್ತೆ ಸರ್ಕಲ್‌ನಲ್ಲಿ ಒಡೆದು ಹೋಗಿದ್ದು, ದುರಸ್ಥಿ ಕಾರ್ಯ ನಡೆಯಬೇಕಾಗಿದೆ. ಆದ್ದರಿಂದ ಡಿ. 21ರಂದು ನಗರಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಹಾಸನ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕೋರಿದ್ದಾರೆ.
ಕಸಾಯಿಖಾನೆಗೆ ರವಾನಿಸುತ್ತಿದ್ದ ಕರುಗಳು ವಶ
ಹಾಸನ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 10 ಕರುಗಳನ್ನು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಗುರುವಾರ ರಾತ್ರಿ ನಗರದಲ್ಲಿ ನಡೆದಿದೆ.
ನಗರದ ಪೆನ್‌ಷನ್ ಮೊಹಲ್ಲಾ ಬಳಿ ಕರುಗಳನ್ನು ಆಪ್ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಯುವ ಮೋರ್ಚಾದ ಕಾರ್ಯಕರ್ತರು ನಿಲ್ಲಿಸಿ ವಿಚಾರಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ.
ಬಾಡಿಗೆಗೆ ವಾಹನವನ್ನು ಪಡೆದು ಕರುಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.  
ಕೂಡಲೇ ಅವರನ್ನು ಪೆನ್‌ಷನ್ ಮೊಹಲ್ಲಾ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ನಾಗೇಶ್, ನಗರಾಧ್ಯಕ್ಷ ಪದ್ಮರಾಜ್, ಪ್ರಶಾಂತ್ ಹೊಸಮನೆ, ವಿಜಿಕುಮಾರ್ ಹಾಗೂ ಮಿಲ್ ಶ್ರೀನಿವಾಸ್ ಇತರರು ಇದ್ದರು.
ದೇವೇಗೌಡ ಯುವಕ ಸಂಘದಿಂದ ಕ್ರಿಕೆಟ್ ಪಂದ್ಯಾವಳಿ
ಹಾಸನ: ತಾಲೂಕಿನ ಮೊಸಳೆಹೊಸಹಳ್ಳಿಯ ಹೆಚ್.ಡಿ. ದೇವೇಗೌಡ ಯುವಕರ ಸಂಘದ ವತಿಯಿಂದ ಜನವರಿ 4 ಮತ್ತು 5 ರಂದು ಅಂತರರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು    ಮೊಸಳೆಹೊಸಳ್ಳಿ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನವಾಗಿ ರು. 1 ಲಕ್ಷ, ದ್ವಿತೀಯ ರು. 50 ಸಾವಿರ ನೀಡಲಾಗುವುದು. ಪ್ರವೇಶ  ಶುಲ್ಕ ರು. 5 ಸಾವಿರ ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಡಿ. 25ರೊಳಗೆ ಹರೀಶ್ ಮೊ. 99720 65212 ಸಂಪರ್ಕಿಸಬಹುದು.
ಮನೆ ಸುರಕ್ಷತೆಗೆ ನಿಯಮ ಪಾಲಿಸಿ
ಹಾಸನ: ಮನೆಗಳು ಸುರಕ್ಷಿತವಾಗಿರ ಬೇಕಾದರೆ ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕು ಎಂದು ದುದ್ದ ಪೊಲೀಸ್ ಠಾಣೆ ಪಿಎಸ್‌ಐ ಜಗದೀಶ್ ತಿಳಿಸಿದರು. ತಾಲೂಕಿನ ದುದ್ದ ಸಮೀಪದ ಬಸವಾಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮನೆಯಿಂದ ಹೊರಗೆ ಹೋಗುವಾಗ ಯಾರಾದರೂ ಒಬ್ಬರನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕು. ಅನಿವಾರ್ಯ ಎನ್ನಿಸಿದಾಗ ಮನೆಗೆ ಬೀಗ ಮತ್ತು ಡೋರ್‌ಲಾಕ್‌ಗಳನ್ನು ಅಳವಡಿಸಬೇಕು. ಮುಖ್ಯವಾಗಿ ಹಿತ್ಯೆಷಿಗಳ ಅಥವಾ ಸಂಬಂಧಿಸಿದ ಪೊಲೀಸ್ ಠಾಣೆಗೆ ಮುಂಚಿತವಾಗಿ  ತಿಳಿಸುವುದು ಒಳ್ಳೆಯದು ಎಂದರು. ಬೆಲೆಬಾಳುವ  ವಸ್ತುಗಳನ್ನು ಕಿಟಕಿಗಳ ಬಳಿ ದಾರಿಹೋಕರಿಗೆ ಕಾಣಿಸುವಂತೆ ಇಡಬಾರದು.  ಪ್ರವಾಸ ಹೋಗುವ ಬಗ್ಗೆ ಅನಾವಶ್ಯಕವಾಗಿ ಯಾರೊಡನೆಯೂ ಚರ್ಚಿಸಬಾರದು. ಮನೆಗೆಲಸಕ್ಕೆ ನೇಮಿಸಿಕೊಳ್ಳುವ ಕೆಲಸಗಾರರ ಬಗ್ಗೆ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ಅಪರಿಚಿತರು ಮನೆಗೆ ಬಂದಾಗ ಬಾಗಿಲು ತೆರೆಯದೆ ಕಿಟಕಿಯಲ್ಲಿಯೇ ವಿಚಾರಿಸಬೇಕು. ಮುಂಬಾಗಿಲಿಗೆ ನೋಡುವ ರಂದ್ರಗಳನ್ನು ಅಳವಡಿಸಬೇಕಲ್ಲದೆ ಯಾರ ಬಗ್ಗೆಯಾದರೂ ಅನುಮಾನ ಬಂದರೆ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.
ಜಿಲ್ಲಾಧ್ಯಕ್ಷರಾಗಿ ನವೀನ್
ಹಾಸನ: ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷರನ್ನಾಗಿ ಬಿ.ಎಸ್. ನವೀನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ನಗರದಲ್ಲಿ ಶುಕ್ರವಾರ ಮಾಜಿ ಜಿಲ್ಲಾಧ್ಯಕ್ಷ ನಟೇಶ್ ಮಾತನಾಡಿ, ಅನಿವಾರ್ಯಗಳಿಂದ ನಾನು ಸಂಘಟನೆಯ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ನನ್ನ ಸ್ಥಾನವನ್ನು ಬಿಟ್ಟುಕೊಟ್ಟಿದ್ದು, ಬಿ.ಎಸ್.ನವೀನ್ ಕುಮಾರ್ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದರು. ಇನ್ನು ಮುಂದೆ ನವೀನ್ ಕುಮಾರ್ ಕಾವಲು ಪಡೆಯ ಕಾರ್ಯಚಟುವಟಿಕೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು, ಅವರೇ ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂದರು. ಬಾನು ಪ್ರಕಾಶ್, ಪೇಂಟ್ ರವಿ, ಸೈಯದ್ ಎಜಾಜ್ ಹಾಗೂ ಇತರರು ಇದ್ದರು.
'ಟಿಪ್ಪು ಜನ್ಮದಿನಕ್ಕೆ ಸರ್ಕಾರಿ ರಜೆ ನೀಡಿ'
ಗಂಡಸಿ (ಅರಸೀಕೆರೆ ತಾ.): ಜನರಿಗೆ ಉಪಯೋಗವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದ ಟಿಪ್ಪುವಿನ ಜನ್ಮದಿನದಂದು ಸರ್ಕಾರ ರಜೆ ಕೊಡಬೇಕು ಎಂದು ಜಿಲ್ಲಾ ಟಿಪ್ಪು ಮಹಾ ವೇದಿಕೆ  ಅಧ್ಯಕ್ಷ ಎ.ಪಿ. ಅಹಮದ್ ಒತ್ತಾಯಿಸಿದರು. ಇತ್ತೀಚೆಗೆ ಟಿಪ್ಪುಸುಲ್ತಾನ್ ಯುವಕರ ಬಳಗದ ವತಿಯಿಂದ ನಡೆದ ರಾಜ್ಯೋತ್ಸವ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಟಿಪ್ಪು ಸಂಘದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಫೀಸ್ ಮಾತನಾಡಿ, ವೀರಕನ್ನಡಿಗ  ಟಿಪ್ಪು, ಬ್ರಿಟಿಷರ ವಿರುದ್ಧ ನಾಡಿಗೆ ಹೋರಾಡಿ ಮಡಿದ ವ್ಯಕ್ತಿ ಎಂದರು. ರಾಜ್ಯ ಟಿಪ್ಪು ಪ್ರಚಾರ ಸಮಿತಿಯ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಟಿಪ್ಪು ತಮ್ಮ  ಆಡಳಿತ ಅವಧಿಯಲ್ಲಿ ಅನೇಕ ಸುಧಾರಣೆಗಳನ್ನು ತಂದವರು ಎಂದು ಹೊಗಳಿದರು.
ಲೋಕಾಯುಕ್ತ ಅಧೀಕ್ಷಕರ ಕಾರ್ಯಕ್ರಮ
ಹಾಸನ: ಲೋಕಾಯುಕ್ತ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ಹಾಗೂ ತಂಡದವರು ಡಿ. 21ರಂದು ಅರಸೀಕರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ನಂತರ ಚನ್ನರಾಯಪಟ್ಟಣ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ಯ 2ರಿಂದ ಸಂಜೆ 5.30ರವರೆಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ವಾರ್ಷಿಕೋತ್ಸವ
ಹಾಸನ: ನಗರದ ಸಂತಜೋಸೆಫರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಡಿ. 21ರಂದು ಸಂಜೆ 4 ಗಂಟೆಗೆ  ಕಾಲೇಜಿನ ಆವರಣದಲ್ಲಿ  ನಡೆಯಲಿದೆ. ಹಾಸನ ಜೆಸ್ವಿಟ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಐವನ್ ಮೆಂಡೋನ್ಸಾ ಎಸ್.ಜೆ. ಅಧ್ಯಕ್ಷತೆ  ವಹಿಸುವರು. ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ  ಪ್ರತಾಪ್ ಸಿಂಗ್, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ ಮೂರ್ತಿ ಭಾಗವಹಿಸುವರು.
ಪಟ್ಟಣದ ನೈರ್ಮಲ್ಯ ಕಾಯ್ದುಕೊಳ್ಳಲು ಕರೆ
ಅರಕಲಗೂಡು: ಆರೋಗ್ಯವಂತ ಬದುಕು ನಡೆಸುವ ಸಲುವಾಗಿ ಪ್ರತಿಯೊಬ್ಬರೂ ಪಟ್ಟಣದ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಶಾಸಕ ಎ.ಮಂಜು ಅವರು ಕರೆ ನೀಡಿದರು.
ಅವರು ಇಲ್ಲಿನ ಪಟ್ಟಣ ಪಂಚಾಯಿತಿ ಆಯೋಜಿಸಿದ್ದ ಡಸ್ಟ್ ಬಿನ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು ಅವರು ರು. 8 ಲಕ್ಷ ವೆಚ್ಚದಲ್ಲಿ 6 ಸಾವಿರ ಡಸ್ಟ್ ಬಿನ್‌ಗಳನ್ನು ಖರೀದಿಸಲಾಗಿದೆ.
ಪ್ರತಿ ಮನೆಗೂ ಎರಡು ಡಸ್ಟ್‌ಬಿನ್‌ಗಳನ್ನು ನೀಡುತ್ತಿದ್ದು, ಒಂದರಲ್ಲಿ ಹಸಿ ಪದಾರ್ಥಗಳಾದರೆ, ಮತ್ತೊಂದು ಡಸ್ಟ್‌ಬಿನ್‌ನಲ್ಲಿ ಒಣಗಿದ ಪದಾರ್ಥಗಳನ್ನು ಹಾಕಿ, ಪೌರ ಕಾರ್ಮಿಕರ ವಾಹನ ಬಂದಾಗ ಅದಕ್ಕೆ ಹಾಕುವಂತಾಗಬೇಕು. ಮನೆಯ ಮುಂದೆ ಅಲ್ಲಲ್ಲಿ ಕಸಗಳನ್ನು ಹಾಕುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾಗಿರುವ ಪಟ್ಟಣ ಪಂಚಾಯಿತಿ ಸದಸ್ಯರುಗಳು,ಪಟ್ಟಣ ಪಂಚಾಯಿತಿ ಎಂಜಿನಿಯರ್ ಕವಿತ ಸೇರಿದಂತೆ ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.