ಹಾಸನ

ಕಾಡಾನೆ ದಾಳಿ; ಬೆಳೆ ನಾಶ

Published On :

ಕ.ಪ್ರ.ವಾರ್ತೆ ,  ಆಲೂರು ,  ಡಿ. 20
ತಾಲ್ಲೂಕಿನ ಕೆ. ಹೊಸಕೋಟೆ ಹೊಬಳಿಯ ಕಾಣಿಗೆರೆ ಹಾಗೂ ಆಂಜಳಿಗೆ ಗ್ರಾಮದಲ್ಲಿ ಕಾಡಾನೆಗಳು ಶುಕ್ರವಾರ ದಾಳಿ ನಡೆಸಿ ಅಪಾರ ಪ್ರಮಾಣದ ಬತ್ತ, ಬಾಳೆ ಹಾಗೂ ಸಪೋಟ ಬೆಳೆಗಳನ್ನು ನಾಶಗೊಳಿಸಿದ್ದು, ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.
ಕಾಣಿಗೆರೆ ಗ್ರಾಮದ ಪಟೇಲ್ ಪುಟ್ಟರಾಜು, ಸದಾನಂದ, ನ್ಯಾಯಬೆಲೆ ಅಂಗಡಿ ಹನುಮೇಗೌಡ, ಮಾಲಿಂಗಯ್ಯ ಹಾಗೂ ಆಂಜಳಿಗೆ ಗ್ರಾಮದ ಧರ್ಮಪ್ಪ ಎಂಬುವರ ಗದ್ದೆ ಹಾಗೂ ತೋಟಗಳಿಗೆ ಗುರುವಾರ ದಾಳಿ ಮಾಡಿ 20 ಆನೆಗಳ ಹಿಂಡು ಸದಾನಂದ ಎಂಬುವರ ಬಾಳೆ ತೋಟದ ಗೇಟ್ ಮುರಿದು ಸಂಪೂರ್ಣ ಬೆಳೆಯನ್ನು ನಾಶಗೊಳಿಸಿದ್ದು, ನಂತರ ಹನುಮೇಗೌಡ ಎಂಬುವರ ಸಪೋಟ ತೋಟಕ್ಕೆ ನುಗ್ಗಿ 50ಕ್ಕೂ ಹೆಚ್ಚು ಗಿಡಗಳನ್ನು ಮುರಿದು ಹಾಕಿವೆ.
ದೊಡ್ಡಬೆಟ್ಟದಲ್ಲೇ ಬೀಡು: ಮಾಲಿಂಗಯ್ಯ, ಪಟೇಲ್ ಪುಟ್ಟರಾಜು ಎಂಬುವರ ಗದ್ದೆಯನ್ನು ಸಂಪೂರ್ಣ ನಾಶಗೊಳಿಸಿದ್ದು, ಕೊಯ್ಲಿಗೆ ಬಂದ ಬೆಳೆ ಮಣ್ಣು ಪಾಲಾಗಿದೆ. ಆಂಜಳಿಗೆ ಗ್ರಾಮದ ಧರ್ಮಪ್ಪ ಎಂಬುವರ 2 ಎಕರೆ ಪ್ರದೇಶದಲ್ಲಿ ಕೊಯ್ಲು ಮಾಡಿದ್ದ ಗದ್ದೆಯನ್ನು ಹಾಳುಗೆಡವಿ ನಂತರ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿವೆ.  
ಗ್ರಾಮಸ್ಥರ ಅಳಲು: ಕಳೆದ 10 ದಿನಗಳಿಂದಲೂ ಕಲ್ಲಾರೆ, ಕಾಣಿಗೆರೆ, ಅಡಿಬೈಲು, ಭರತೂರು, ಆಂಜಳಿಗೆ, ಪುರಭೈರವನಹಳ್ಳಿ, ಕೋಡತವಳ್ಳಿ, ಹುಲುಕುಂದ, ನಾಗಾವರ ಹಾಗೂ ಮಾದಿಹಳ್ಳಿ ಸುತ್ತಮುತ್ತ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಬೆಳಗಿನ ಸಮಯದಲ್ಲಿ ದೊಡ್ಡಬೆಟ್ಟ, ರಂಗನ ಬೆಟ್ಟ, ಹಾಗೂ ಕೊಡಗಿನ ಉಂಬಳಿ ಬೆಟ್ಟ ಅರಣ್ಯ ಪ್ರದೇಶದಲ್ಲಿದ್ದು, ರಾತ್ರಿ ಆಗುತ್ತಿದ್ದಂತೆಯೇ, ಈ ಮೂರು ಬೆಟ್ಟಗಳ ತಪ್ಪಲಿನಲ್ಲಿರುವ ಮೇಲ್ಕಂಡ ಗ್ರಾಮಗಳ ಮೇಲೆ ದಾಳಿ ಮಾಡುತ್ತಿದ್ದು, ಈವರೆಗೂ ಇಲಾಖೆಯವರು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ಕಳೆದ ಬುಧವಾರವಷ್ಟೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಲ್ಲಾರೆ ಗ್ರಾಮದಲ್ಲಿ ಜೀಪನ್ನು ತಡೆದು ದಿಗ್ಭಂಧನ ಹಾಕಿ ಪ್ರತಿಭಟನೆ ನಡೆಸಿದ್ದರು.
ಆ ಸಂದರ್ಭದಲ್ಲಿ, ಆನೆಗಳನ್ನು ಬೇರೆಡೆಗೆ ಓಡಿಸುವುದಾಗಿ ತಿಳಿಸಿದ್ದ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಆನೆಗಳು ಗ್ರಾಮಗಳ ಮೇಲೆ ದಾಳಿ ನಡೆಸುತ್ತಿವೆ. ಇಲಾಖೆಯವರು ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದು, ಆನೆಗಳನ್ನು ಹಿಡಿಯುವುದಾಗಲಿ, ಕನಿಷ್ಟ ಬೆಳೆ ಕಟಾವು ಮಾಡುವ ಸಂದರ್ಭದಲ್ಲಾದರೂ, ಆನೆಗಳು ಕಾಡಿನಿಂದ ಬರದಂತೆ ತಡೆಗಟ್ಟುವ ಕೆಲಸವನ್ನಾದರೂ ಮಾಡಬಹುದಿತ್ತು.
ಆದರೆ, ಇವರು ಸುತ್ತಮುತ್ತಲ ಯಾವುದೇ ಪ್ರದೇಶದಲ್ಲಿ ಇರದೇ ಆಲೂರು ಹಾಗೂ ಹಾಸನ ಪಟ್ಟಣದಲ್ಲಿ ವಾಸವಾಗಿದ್ದು, ಇದರಿಂದಾಗಿ ಯಾರು ನಮ್ಮ ಗೋಳನ್ನು ಕೇಳದೇ ತಟಸ್ಥವಾಗಿದ್ದಾರೆ.
ಅರಣ್ಯ ಇಲಾಖೆಯವರಾಗಲೀ ಹಾಗೂ ನಮ್ಮಿಂದ ಓಟು ಪಡೆದು ಅಧಿಕಾರದಲ್ಲಿರುವ ಜನಪ್ರತಿನಿಧಿಗಳಗಲೀ ನಮ್ಮ ಕಷ್ಟಕ್ಕೆ ಸ್ಪಂದಿಸದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.