ಹಾಸನ

ನಂಬಿಸಿ ಕೈ ಕೊಟ್ಟ ಯುವಕ; ವಿಧವೆ ಆತ್ಮಹತ್ಯೆಗೆ ಯತ್ನ

Published On :

ಹಾಸನ: ವಿಧವೆಯನ್ನು ಮದುವೆಯಾಗುವುದಾಗಿ ಯುವಕನೋರ್ವ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿ ಕೈಕೊಟ್ಟ ಪರಿಣಾಮ ಆಕೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನದಲ್ಲಿ ಶನಿವಾರ ನಡೆದಿದೆ. ನಗರದ ಸಿದ್ದಯ್ಯನಗರದ ವಾಸಿ ಅನುಷಾ (24) ಯುವಕನಿಂದ ಮೋಸ ಹೋಗಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ.
ಈಕೆ ಅರಕಲಗೂಡಿನ ವಾಸಿ ಸಾಗರ್ ಎಂಬ ಯುವಕನೊಂದಿಗೆ ಪರಿಚಯವಾಗಿದ್ದು, ಆತ ಈಕೆಯೊಂದಿಗೆ ಆತ್ಮೀಯವಾಗಿ ವರ್ತಿಸಿದ್ದಾನೆ. ನಂತರ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಇಟ್ಟುಕೊಂಡು, ಈಗೆ ಆಕೆಯನ್ನು ವಿವಾಹವಾಗಲು ಹಿಂದೆ ಸರಿದಿದ್ದಾನೆ. ಇದರಿಂದ ಮನನೊಂದು ಅನುಷ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಆಕೆಯ ಪತಿ ಕಳೆದ ಒಂದೂವರೆ ವರ್ಷದಿಂದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸಾಗರ್ ನೆರವಿಗೆ ಬಂದಿದ್ದು, ನಂತರ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ದೈಹಿಕ ಸಂಬಂಧವನ್ನು ಹೊಂದಿ ಕೈಕೊಟ್ಟಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಸಾಗರ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಶೌಚಾಲಯ ನಿರ್ಮಾಣಕ್ಕೆ ಚೆಕ್ ವಿತರಣೆ
ಆಲೂರು: ಮನೆಗೆ ಒಂದು ದೇವಾಲಯ ಎಷ್ಟು ಮುಖ್ಯವೋ, ಶೌಚಾಲಯ ಕೂಡ ಅಷ್ಟೇ ಮುಖ್ಯ ಎಂದು ಕಣತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಟರಾಜ ನಾಕಲಗೂಡು ತಿಳಿಸಿದರು.
ಕಣತೂರು ಗ್ರಾಮದಲ್ಲಿ  ಎನ್.ಆರ್.ಇ.ಜಿ.ಎ. ಮತ್ತು ನಿರ್ಮಲ ಭಾರತ ಅಭಿಯಾನದಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ರು. 4700ನ  ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಿ ಶೇ. 50ರಷ್ಟು  ಮಂದಿ ಶೌಚಾಲಯ ನಿರ್ಮಿಸಿಕೊಂಡಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಡಿ.ಆರ್. ಮಂಜು,  ಸದಸ್ಯ ರಾಜಯ್ಯ,  ಗ್ರಾಮ ಪಂಚಾಯ್ತಿ  ಸಿಬ್ಬಂದಿಗಳಾದ ರಾಮಚಂದ್ರ , ದೀಪಕ್, ಜನಾರ್ಧನ  ಇತರರು ಇದ್ದರು.
ಸಹಕಾರ ಚುನಾವಣಾ ಆಯೋಗದಿಂದ ತರಬೇತಿ
ಹಾಸನ: ಮುಂದಿನ ಮಾರ್ಚ್ 31ರ ಅಂತ್ಯಕ್ಕೆ ಬಾಕಿ ಇರುವ ಸಹಕಾರ ಸಂಘಗಳ ಚುನಾವಣೆ ಕುರಿತು ಮತದಾರರ ಪಟ್ಟಿ ತಯಾರಿಸುವ ಬಗ್ಗೆ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ಮೈಸೂರು ಪ್ರಾಂತ್ಯದ ನಾಲ್ಕು ಜಿಲ್ಲೆಗಳಾದ ಹಾಸನ,ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಹಕಾರ ಇಲಾಖೆಯ, ಸಹಕಾರ ಸಂಘಗಳ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿ, ನೌಕರರುಗಳಿಗೆ ಮತ್ತು ಡಿಸಿಸಿ ಬ್ಯಾಂಕಿನ ಅಧಿಕಾರಿಗಳಿಗೆ ಸಹಕಾರ ಚುನಾವಣಾ ಆಯೋಗ, ಬೆಂಗಳೂರು ಇವರಿಂದ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು.
ಕರ್ನಾಟಕ ಸಹಕಾರ ಚುನಾವಣಾ ಆಯೋಗದ ಉಪ ನಿಬಂಧಕರಾದ ಆರ್. ಲೋಕೇಶ್ ಮತದಾರರ ಪಟ್ಟಿ ಸಿದ್ಧಪಡಿಸುವ ಬಗ್ಗೆ ಹಾಗೂ ಚುನಾವಣೆ ನಡೆಸುವ ಕುರಿತು ಕಾಯ್ದೆಗನುಗುಣವಾಗಿ ಉಪಯುಕ್ತ ಮಾಹಿತಿ ನೀಡಿದರು.  ಕರ್ನಾಟಕ ಸಹಕಾರ ಚುನಾವಣಾ ಆಯೋಗದ ಕಾರ್ಯದರ್ಶಿ ಬಿ.ಹೆಚ್. ಮಂಜಪ್ಪ ಮತದಾರರ ಪಟ್ಟಿ ಸಿದ್ಧಪಡಿಸುವಾಗಿನ ಸಮಸ್ಯೆಗಳು, ಸಮಸ್ಯೆಗಳಿಗೆ ಪರಿಹಾರ ನೀಡಿದರು. ಜಿಲ್ಲಾ ಉಪನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್, ಚಿಕ್ಕಮಗಳೂರು ಜಿಲ್ಲಾ ಉಪನಿಬಂಧಕರಾದ ಶಿವಕುಮಾರಸ್ವಾಮಿ, ಉಡುಪಿ ಜಿಲ್ಲಾ ಉಪನಿಬಂಧಕರಾದ ಕಾಂತರಾಜು, ಎಲ್ಲಾ ಉಪವಿಭಾಗೀಯ ಸಹಾಯಕ ನಿಬಂಧಕರು  ಇದ್ದರು.
ಅಂಚೆ ಅದಾಲತ್
ಹಾಸನ: ಸಾರ್ವಜನಿಕರು ಅಂಚೆ ವ್ಯವಸ್ಥೆಯ ಕುಂದು ಕೊರತೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ನೀಡಲು ಅಂಚೆ ಅದಾಲತ್ ಅನ್ನು ಡಿಸೆಂಬರ್ 26ರಂದು ಬೆಳಗ್ಗೆ 10.30ಕ್ಕೆ ಅಂಚೆ ಅಧೀಕ್ಷಕರ ಕಚೇರಿ, ಹಾಸನದಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಅಂಚೆ ಸೇವೆಯ ಬಗ್ಗೆ ಕುಂದು ಕೊರತೆಗಳು ಏನಾದರೂ ಇದ್ದಲ್ಲಿ ಈ ಕಚೇರಿಗೆ ಡಿ. 23ರ ಒಳಗೆ ಸಲ್ಲಿಸುವಂತೆ ಹಾಸನ ವಿಭಾಗದ ಅಂಚೆ ಅಧೀಕ್ಷಕರು ಕೋರಿದ್ದಾರೆ.
ಅಧ್ಯಕ್ಷರಾಗಿ ಸಮೀವುಲ್ಲಾ ಆಯ್ಕೆ
ಅರಸೀಕೆರೆ: ಪಟ್ಟಣದ ಪುರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಸಮೀವುಲ್ಲಾ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕಾಂಗ್ರೆಸ್‌ನ ಓ.ಜಿ.ಗೀತಾ, ಮತ್ತು ರಂಗನಾಥ್, ಜೆಡಿಎಸ್‌ನ ಪಾರ್ಥಸಾರಥಿ ಹಾಗೂ ಪಕ್ಷೇತರ ಸದಸ್ಯ ಭಬ್ರುವಾಹನ ಆಯ್ಕೆಯಾಗಿದ್ದಾರೆ.  
25 ವರ್ಷಗಳಿಂದ ಪಟ್ಟಣದ ಪುರಸಭೆಯಲ್ಲಿ ಸ್ಥಾಯಿ ಸಮಿತಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಈ ಬಾರಿ ಅಸ್ತಿತ್ವಕ್ಕೆ ಬಂದಿರುವುದು ನಾಗರೀಕರಲ್ಲಿ ಆಶ್ಚರ್ಯ ಮೂಡಿಸಿದೆ.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾ ಸಮೀವುಲ್ಲಾ ಮಾತನಾಡಿ,  ಪಟ್ಟಣದ ನೈರ್ಮಲ್ಯವನ್ನು ಹೋಗಲಾಡಿಸಿ ಸರ್ವತೋಮುಖ ಪ್ರಗತಿಯತ್ತ ಕೊಂಡೊಯ್ಯುವುದೇ ತಮ್ಮ ಮೂಲ ಉದ್ದೇಶವಾಗಿದೆ ಎಂದರು. ತಾವು ಈ ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಭಿವೃದ್ಧಿಗೆ ಶ್ರಮಿಸಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ಭಾಗ್ಯಲತಾ ಮಂಜು, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಹಾಗೂ ಎಲ್ಲಾ ಸದಸ್ಯರು ಇದ್ದರು.
ಚೆಕ್ ವಿತರಣೆ
ಜಾವಗಲ್: ರೈತರು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಬೇಕೆಂದು ಸಂಘದ ಅಧ್ಯಕ್ಷ ಎನ್. ಮಲ್ಲೇಗೌಡ ತಿಳಿಸಿದರು. ನೇರ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 107 ಜನರಿಗೆ ರು. 28.90 ಲಕ್ಷ  ಬಡ್ಡಿರಹಿತ ಕೆ.ಸಿ.ಸಿ ಸಾಲದ ಚೆಕ್ ವಿತರಿಸಿ ಮಾತನಾಡಿದರು.  66 ಜನ ಸಣ್ಣ ಮತ್ತು ಅತಿ ಸಣ್ಣ ರೈತರು 22 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, 17ಜನ ರೈತ ಮಹಿಳೆ ಸಾಲ ಸೌಲಭ್ಯ ಪಡೆದಿದ್ದಾರೆ ಎಂದರು.  ಸಂಘದ ನಿರ್ದೇಶಕರಾದ ಎನ್.ಸಿ. ಸಿದ್ದಮಲ್ಲಪ್ಪ, ಡಿ.ಎಚ್. ಗಂಗಾಧರಪ್ಪ, ಮಾತನಾಡಿದರು. ಎನ್.ಕೆ. ರಮೇಶ್, ಈಶ್ವರಪ್ಪ, ರವೀಶ್ ಇದ್ದರು.
ಯುವ ಸಂಸತ್ ಕಾರ್ಯಕ್ರಮ
ಹಾಸನ: ಜಿಲ್ಲಾ ಮಟ್ಟದ ಯುವಸಂಸತ್ ಕಾರ್ಯಕ್ರಮವನ್ನು ಡಿ. 27ರಂದು ಬೆಳಗ್ಗೆ 10: 30ಕ್ಕೆ ಹಾಸನ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಿ.ಆರ್. ಬಸವರಾಜ ಅವರು ತಿಳಿಸಿದ್ದಾರೆ.
'ಹೈನುಗಾರಿಕೆಗೂ ಒತ್ತು ನೀಡಬೇಕು'
ಸಕಲೇಶಪುರ: ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಗತಿಪರ ರೈತ ಯಡೇಹಳ್ಳಿ ರುದ್ರಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ಶಿಡಿಗಳಲೆ ಗ್ರಾಮದಲ್ಲಿ ಆತ್ಮ ಯೋಜನೆಯಡಿ ಕೃಷಿ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ಬತ್ತದ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.