ನೀರಿನ ಸಮಸ್ಯೆ ನೀಗಬೇಕು...
ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ನಡೆದರೂ ಬೇಲೂರು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳು ಕೆಸಗೋಡು ಗ್ರಾಮ ಪಂಚಾಯ್ತಿ ಕಟ್ಟಡ ಮಳೆ ಬಂದರೆ ಎಲ್ಲೆಡೆ ಸೋರುತ್ತದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಳಲು ಗ್ರಾಮದಲ್ಲಿ ಬೋರ್ವೆಲ್ ಕೆಟ್ಟು ಹೋಗಿದ್ದರೆ, ಕೆಲವರು ತಮ್ಮ ಮನೆಗೆ ಮೋಟಾರ್ ಅಳವಡಿಸಿಕೊಂಡಿದ್ದಾರೆ. ಸಾರ್ವಜನಿಕ ಬೋರ್ವೆಲ್ನಲ್ಲಿ ಜನರು ನೀರು ಕುಡಿಯುವಂತಹ ಭಾಗ್ಯ ಇಲ್ಲದಾಗಿದೆ. ಬೋರ್ವೆಲ್ ಕೆಟ್ಟು ಹೋದರೆ ಅದನ್ನು ರಿಪೇರಿ ಮಾಡಿಸುವುದು ಸಂಬಂಧಪಟ್ಟವರ ಜವಾಬ್ದಾರಿ. ಆದರೆ ಗ್ರಾಮದ ಇಬ್ಬರು ಪ್ರಭಾವಿಗಳು ಮೋಟಾರ್ ಇಳಿಸಿಕೊಂಡಿದ್ದಾರೆ. ಹೆದ್ದವಳ್ಳಿ ಗ್ರಾಮದಲ್ಲಿ ಸಿಂಗವಳ್ಳಿ, ಗುಮ್ಮನಹಳ್ಳಿ, ಕೆಸಗೋಡಿನಲ್ಲಿ ಬೋರ್ವೆಲ್ಗಳು ಇವೆ. ಕೆಸಗೋಡು ಗ್ರಾಮ ಪಂಚಾಯ್ತಿ ವತಿಯಿಂದ ಪಂಪ್ಹೌಸ್ ಹತ್ತಿರ 150 ಅಡಿ ಬೋರ್ವೆಲ್ಲ್ಕೊರೆಸಿ ಗುತ್ತಿಗೆದಾರರಿಗೆ ಬಿಲ್ ಮಾಡಿಕೊಡಲಾಗಿದೆ. ಅಲ್ಲಿ ಯಾವ ಮನೆ ಇಲ್ಲ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
- ಕೆ.ಎಸ್. ತೀರ್ಥಪ್ಪ, ಸಮಾಜ ಸೇವಕ, ಬೇಲೂರು.
ಸೌಕರ್ಯವಿಲ್ಲದೇ ನರಳುತ್ತಿರುವ ಆಸ್ಪತ್ರೆ
ಅರಸೀಕೆರೆ ತಾಲೂಕಿನ ಗ್ರಾಮಾಂತರ ಪ್ರದೇಶದ ಬಡ ರೋಗಿಗಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಲಕ್ಷಾಂತರ ರು ವೆಚ್ಚ ಮಾಡಿ ನಿರ್ಮಾಣ ಮಾಡಿ ತಾಲೂಕಿನ ಗಂಡಸಿ ಹೋಬಳಿಯ ಮುದುಡಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಗೆ ಸೂಕ್ತ ನಿರ್ವಹಣೆ ಹಾಗೂ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದ್ದು ಕೂಡಲೇ ವೈದ್ಯರ ಸೇವೆ ಒದಗಿಸಬೇಕಾಗಿದೆ.
3-4 ವರ್ಷಗಳ ಹಿಂದೆ ಈ ಆಯುರ್ವೇದಿಕ್ ಆಸ್ಪತ್ರೆಯನ್ನು ತೆರೆದಾಗ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಆಸ್ಪತ್ರೆಯನ್ನು ತೆರೆದಿದ್ದು, ಇನ್ನು ಮುಂದೆ ಸಣ್ಣ ಪುಟ್ಟ ಕಾಯಿಲೆಗಳಿಗೆ ನಗರ ಪ್ರದೇಶಗಳಿಗೆ ಹೋಗುವ ಅವಶ್ಯಕತೆಯಿಲ್ಲ ಎಂದು ಭಾವಿಸಿದ್ದರು. ಆದರೆ ಆಸ್ಪತ್ರೆ ನಿರ್ಮಿಸಿದ ಆರೋಗ್ಯ ಇಲಾಖೆ ಈವರೆಗೆ ಖಾಯಂ ವೈದ್ಯರನ್ನು ನೇಮಿಸದೇ ಆಸ್ಪತ್ರೆ ಇದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಇಲ್ಲಿಗೆ ಬೇರೆ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರನ್ನು ತಾತ್ಕಾಲಿಕ ಸೇವೆಗೆ ನಿಯೋಜಿಸಲಾಗುತ್ತಿದೆ. ಇದರಿಂದಾಗಿ ಮುದುಡಿ, ಸಿದ್ದಾಪುರ, ಹಲಗೆನಹಳ್ಳಿ, ತಾಂಡ್ಯ, ಬೋರೆಹಳ್ಳಿ, ಬಿಸಲೇಹಳ್ಳಿ, ಚೀಲನಹಳ್ಳಿ ಗ್ರಾಮದ ಜನತೆ ಚಿಕಿತ್ಸೆಗಾಗಿ ಪಟ್ಟಣ ಪ್ರದೇಶಗಳಿಗೆ ಆಗಮಿಸುವಂತಾಗಿದೆ. ಕೂಡಲೇ ಪೂರ್ಣ ಪ್ರಮಾಣದ ವೈದ್ಯರನ್ನು ನಿಯೋಜಿಸಬೇಕು.
- ವೆಂಕಟೇಶ್, ಗುರುಬಸಪ್ಪ ಮತ್ತು ಇತರರು
ಹೆಚ್ಚಿನ ಔಷಧಿ ನೀಡಿ...
ಹಾಸನ ನಗರದಲ್ಲಿ ಇರುವ ಪ್ರಾಥಮಿಕ ನಗರ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಔಷಧಿ ಸಾಮಗ್ರಿಗಳನ್ನು ಒದಗಿಸಬೇಕಾಗಿದೆ. ಹಾಸನ ಜಿಲ್ಲೆಯಲ್ಲಿ 136 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಹಾಸನ ನಗರ ಪೆನ್ಷನ್ ಮೊಹಲ್ಲಾದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಮೀರ್ ಮೊಹ್ಲಲಾ ವಲ್ಲಭಾಯಿ ರಸ್ತೆಯಲ್ಲಿ ಇರುವ ಎಂ. ಕೃಷ್ಣ ಆಸ್ಪತ್ರೆಯು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜನನಿಬಿಡ ಪ್ರದೇಶದಲ್ಲಿ ಇವೆ. ಇವುಗಳ ವ್ಯಾಪ್ತಿಗೆ ಹಲವಾರು ಬಡಾವಣೆಗಳು, ಪ್ರದೇಶಗಳು ಬರುತ್ತವೆ. ಒಂದೊಂದು ಕೇಂದ್ರಕ್ಕೆ 20 ಸಾವಿರ ಜನ ವ್ಯಾಪ್ತಿಗೊಳಪಡಲಿದ್ದಾರೆ. ಇರುವ ಪ್ರದೇಶದಲ್ಲಿ ಶೇ. 60ರಷ್ಟು ಬಡವರು ಹಿಂದುಳಿದವರು, ಕೂಲಿ ಕಾರ್ಮಿಕರು, ಗಾರೆ ಕೆಲಸದವರು, ಹಮಾಲಿಗಳ, ರಸ್ತೆಬದಿ ವ್ಯಾಪಾರಸ್ಥರು ಹಾಗೂ ಎಲ್ಲ ವರ್ಗದವರು ಇದ್ದಾರೆ. ದಿನನಿತ್ಯ 100 ರಿಂದ 150 ರು. ದುಡಿಮೆ ಮಾಡುವವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಂತಹ ಬಡವರ ಪ್ರದೇಶದಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವುದು ಒಳ್ಳೆಯದು.
ಆದರೆ, ಆರೋಗ್ಯ ಕೇಂದ್ರಗಳಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ವಾರ್ಷಿಕ 75 ಸಾವಿರ ಮೌಲ್ಯದ ಔಷಧಿ ಸಾಮಗ್ರಿಗಳು ಮಾತ್ರ ನೀಡುತ್ತಿದೆ. ಇಷ್ಟು ಅಲ್ಪಪ್ರಮಾಣದ ಔಷಧಿಗಳು ಇಲ್ಲಿ ಬರುವ ಎಲ್ಲಾ ರೋಗಿಗಳಿಗೆ ನೀಡಲು ಸಾಕಾಗುವುದಿಲ್ಲ. ಪೆನ್ಷನ್ ಮೊಹಲ್ಲಾ ಕೇಂದ್ರಕ್ಕೆ ದಿನವೊಂದಕ್ಕೆ ಕನಿಷ್ಠ 50 ರೋಗಿಗಳು ತಪಾಸಣೆ ಮಾಡಿಸುತ್ತಾರೆ. ಇಲ್ಲಿ ಉನ್ನತ ದರ್ಜೆಯ ಔಷಧಿಗಳನ್ನು ವೈದ್ಯರು ನೀಡುವುದು ಕಷ್ಟಸಾಧ್ಯ. ಆದರೆ, ಪ್ರಾಥಮಿಕ ಔಷಧಿಗಳು ನೀಡುವುದೇ ಕಷ್ಟ ಎನ್ನುವಾಗ ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಮಾತು.
ಈ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸಮಸ್ಯೆಗಳಾದ ಕುಡಿಯುವ ಶುದ್ಧನೀರು, ಗಾಳಿ, ಕೂರಲು ಆಸನಗಳು, ಮತ್ತಿತರ ಸೌಲಭ್ಯಗಳ ಕೊರತೆ ಇರುವುದರಿಂದ ಇವುಗಳ ವ್ಯವಸ್ಥೆ ಅತಿ ಶೀಘ್ರ ಕಲ್ಪಿಸಿಕೊಡಬೇಕು. ನೂತನವಾಗಿ ಹಳೇ ಮಟನ್ ಮಾರ್ಕೆಟ್ ಸ್ಥಳದಲ್ಲಿ ಕಟ್ಟಿರುವ ಆಸ್ಪತ್ರೆಯು ಶೀಘ್ರ ಸಾರ್ವಜನಿಕವಾಗಿ ಉಪಯೋಗಕ್ಕೆ ದೊರಕಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯಾಧಿಕಾರಿಗಳನ್ನು ಅತ್ಯವಶ್ಯಕವಾಗಿ ನೇಮಿಸಬೇಕು.
- ಅಬ್ದುಲ್ಲಾ, ನಹೀಂ ಇತರರು
ರಸ್ತೆ ಸರಿಪಡಿಸಿ...
ಸಕಲೇಶಪುರ ತಾಲೂಕಿನ ಬಹುತೇಕ ರಸ್ತೆಗಳು ಹೊಂಡದಿಂದ ತುಂಬಿಹೋಗಿದ್ದು, ವಾಹನಗಳ ಸುಗಮ ಸಂಚಾರ ಅಸಾಧ್ಯವಾಗಿದೆ. ತಾಲೂಕಿನಲ್ಲಿ 749 ಕಿ.ಮೀ. ಜಿಲ್ಲಾ ಪಂಚಾಯ್ತಿ ಸೇರಿದ ರಸ್ತೆಗಳಿದ್ದರೆ, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ 189 ಕಿ.ಮೀ. ರಾಜ್ಯಹೆದ್ದಾರಿ, 371 ಕಿ.ಮೀ. ಮುಖ್ಯ ಜಿಲ್ಲಾ ರಸ್ತೆಗಳಿದ್ದು (ಎಂ.ಡಿ.ಆರ್) ಈ ಬಹುತೇಕ ರಸ್ತೆಗಳು ದುಸ್ಥಿತಿಗೆ ಈಡಾಗಿವೆ.
ಬಿರಡಹಳ್ಳಿ- ಬ್ಯಾಕರವಳ್ಳಿ ಮಾರ್ಗವಾಗಿ ಸೋಮವಾರಪೇಟೆ ಸಂಪರ್ಕಿಸುವ 45 ರಾಜ್ಯ ಹೆದ್ದಾರಿ ಗುಂಡಿಯಿಂದಲೇ ತುಂಬಿ ಹೋಗಿದ್ದರೆ, ಬೈಂದೂರು-ವಿರಾಜಪೇಟೆ ಸಂಪರ್ಕಿಸುವ ಸುಮಾರು 40 ಕಿ.ಮೀ. ರಸ್ತೆಯಲ್ಲಿ ವಾಹನ ಸಂಚರ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಜನ್ನಾಪುರ-ವಣಗೂರು ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ. ಬಿಸ್ಲೆ ಸುಬ್ರಮಣ್ಯ ರಸ್ತೆಯಲ್ಲಿ ಡಾಂಬರ್ ಕಿತ್ತುಹೋಗಿದ್ದರೂ ದುರಸ್ತಿ ಕಾಣದಾಗಿದೆ. ಅಲ್ಲದೇ, ಮಲೆನಾಡ ಪ್ರದೇಶಗಳಿಗೆ ಪ್ರತಿವರ್ಷ ರಸ್ತೆ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮೀಸಲಿಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಗಮನಹರಿಸಬೇಕು.
- ಸಾ.ಸು. ವಿಶ್ವನಾಥ್, ಮಹೇಶ್ ಕುಮಾರ್, ಸಚಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

