ಹಾಸನ

ಮುಂದುವರೆದ ಕಾಡಾನೆ ದಾಳಿ

Published On :

ಕ.ಪ್ರ. ವಾರ್ತೆ, ಹಾಸನ, ಡಿ. 22
ಆನೆಗಳ ದಾಳಿ ಮತ್ತೆ ಮುಂದುವರಿದಿದೆ. ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಡಿಬಯಲು ಗ್ರಾಮ ಹಾಗೂ ಬಸವನಹಳ್ಳಿ, ಕಾಣಗೆರೆ ಶನಿವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣ ಶನಿವಾರ ರಾತ್ರಿ ಬೆಳೆ ನಾಶಗೊಳಿಸಿವೆ.
ಅಡಿಬಯಲು ಗ್ರಾಮದ ನಿಂಗರಾಜು, ಪುಟ್ಟಸ್ವಾಮಿ, ಕಾಣಗೆರೆ ಗ್ರಾಮದ ಕೃಷ್ಣೇಗೌಡ, ಸದಾನಂದ, ರಂಗೇಗೌಡ ಎಂಬವರ ಭತ್ತ, ಬಾಳೆ, ಅಡಕೆ ಹಾಗೂ ಮುಂತಾದ ಬೆಳೆಗಳನ್ನು 26ಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಮನಸೋ ಇಚ್ಛೆ ದಾಳಿ ನಡೆಸಿ ಹಾಳು ಮಾಡಿದ್ದು, ಇದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ನಾಶ: ಗ್ರಾಮಗಳ ಆಸುಪಾಸಿನಲ್ಲಿ ಇರುವ ರಂಗನಬೆಟ್ಟ, ದೊಡ್ಡಬೆಟ್ಟ ಹಾಗೂ ಕರಡಿ ಬೆಟ್ಟ ಹಾಗೂ ಕೊಡಗಿನ ಉಂಬಳಿಬೆಟ್ಟ ಅರಣ್ಯಪ್ರದೇಶದಲ್ಲಿ ನಾಲ್ಕು ಮರಿಯಾನೆಗಳೊಂದಿಗೆ ವಿಭಾಗವಾಗಿ ಬೀಡುಬಿಟ್ಟಿರುವ ಕಾಡಾನೆಗಳು ಕಳೆದ 15 ದಿನಗಳಿಂದ ಕಲ್ಲಾರೆ, ಕಾಣಿಗೆರೆ, ಅಡಿಬಯಲು, ಆಂಜಳಿಗೆ, ಮಾದಿಹಳ್ಳಿ, ನಾಗವಾರ, ಭರತೂರು, ಪುರಭೈರವನಹಳ್ಳಿ, ಕೊಡಗತ್ತವಳ್ಳಿ, ಮಣಿಪುರ, ಉಲುಕುಂದ ಗ್ರಾಮಗಳಲ್ಲಿ ಪ್ರತಿದಿನ ದಾಳಿ ನಡೆಸಿತ್ತಿದ್ದು, 15 ದಿನಗಳ ಹಿಂದೆ ಮಾದಿಹಳ್ಳಿ ಹಾಗೂ ನಾಗವಾರ ಗ್ರಾಮಗಳಲ್ಲಿ ಸತತವಾಗಿ 1 ವಾರ ದಾಳಿ ನಡೆಸಿ ಬೆಳೆ ನಷ್ಟಗೊಳಿಸಿದ್ದ ಕಾಡಾನೆಗಳು ಆ ಪ್ರದೇಶದಲ್ಲಿ ಬೆಳೆದಿದ್ದ ಭತ್ತವನ್ನು ಸಂಪೂರ್ಣ ನಾಶಗೊಳಿಸಿದ್ದು, ಈಗ ಈ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ.
ಗ್ರಾಮಸ್ಥರ ಅಳಲು: ಪ್ರತಿ ಬಾರಿ ದಾಳಿ ನಡೆಸಿದಾಗಲೂ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ಈ ಪ್ರದೇಶದಿಂದ ಆನೆಗಳನ್ನು ಬೇರೆಡೆಗೆ ಓಡಿಸಿ ಎಂದು ಗೋಗರೆಯುತ್ತಿದ್ದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆನೆಗಳನ್ನು ಓಡಿಸಲಾಗದ ಅರಣ್ಯ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಜನ ಅಳಲು ತೋಡಿಕೊಳ್ಳುತ್ತಿದ್ದಾರೆ.
ಭೀತಿಯಲ್ಲಿ ಗ್ರಾಮಸ್ಥರು: ಡಿ. 18ರಂದು ಆರ್‌ಎಫ್‌ಓ ಹಾಗೂ ಫಾರೆಸ್ಟರ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳಿದ್ದ ಜೀಪನ್ನು ಕಲ್ಲಾರೆ ಗ್ರಾಮಸ್ಧರು ತಡೆದು ದಿಗ್ಬಂಧನ ಹಾಕಿ ಪ್ರತಿಭಟಿಸಿದ್ದರು. ಆ ಸಂದರ್ಭದಲ್ಲಿ ಆರ್‌ಎಫ್‌ಓ ದೇವರಾಜ್ ಅವರು, ಆನೆಗಳನ್ನು ಓಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಒಂದು ವಾರ ಕಳೆದರೂ ಸಹ ಆನೆಗಳು ಇದೇ ಗ್ರಾಮಗಳ ಬದಿಯಲ್ಲಿ ಬೀಡುಬಿಟ್ಟಿದ್ದು, ರಾತ್ರಿಯಾಗುತ್ತಿದ್ದಂತೆ ಈ ಗ್ರಾಮಗಳಲ್ಲಿ ದಾಳಿ ನಡೆಸುತ್ತಿವೆ. ಅದರಲ್ಲೂ ಅತ್ಯಂತ ಅಪಾಯಕಾರಿಯಾದ ಒಂಟಿ ಸಲಗ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದು, ರಾತ್ರಿಯ ಸಮಯದಲ್ಲಿ ಗ್ರಾಮದೊಳಗೆ ನುಗ್ಗಲು ಅದು ಪ್ರಯತ್ನಿಸುತ್ತಿದ್ದು, ಇದು ಗ್ರಾಮಸ್ಥರನ್ನು ಆತಂಕ್ಕೀಡುಮಾಡಿದೆ.
ರಸ್ತೆ ಮಧ್ಯೆ ಕಟ್ಟಿಹಾಕುತ್ತೇವೆ: ಪ್ರತಿದಿನ ದಾಳಿಯಿಂದ ಬೆಳೆ ನಷ್ಟವಾಗುತ್ತಿದ್ದರೂ ಸಹ ಕನಿಷ್ಟ ಆನೆಗಳನ್ನು ಹೇಮಾವಾತಿ ಹಿನ್ನೀರಿನ ಆಚೆಗೆ ಕೊಡಿಗಿನ ಭಾಗಕ್ಕಾದರೂ ಓಡಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದು, ಡಿ. 23ರ ಸಂಜೆಯೊಳಗೆ ಆನೆಗಳನ್ನು ಬೇರೆಡೆ ಓಡಿಸದಿದ್ದರೆ, ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹಿಡಿದು ತಂದು ಭೈರಾಪುರದ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಮಧ್ಯದಲ್ಲಿ ಅವರನ್ನು ಕಟ್ಟಿಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಏನು ಸಮಸ್ಯೆ ?: ಈ ಸಂಬಂಧವಾಗಿ ಆರ್‌ಎಫ್‌ಓ ದೇವರಾಜ್ ಮಾತನಾಡಿ, ದೊಡ್ಡಬೆಟ್ಟ, ರಂಗನಬೆಟ್ಟ, ಕರಡಿಬೆಟ್ಟ ಹಾಗೂ ಕೊಡಗಿನ ಉಂಬಳಿಬೆಟ್ಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಇವುಗಳೊಂದಿಗೆ ಮರಿಯಾನೆಗಳೂ ಇರುವುದರಿಂದ ಅವುಗಳನ್ನು ಬೇರೆಡೆ ಓಡಿಸಲು ಆಗುತ್ತಿಲ್ಲ. ಒಂದು ದಿನಕ್ಕೆ ಕನಿಷ್ಟ 3 ಕಿಮೀನಷ್ಟು ಹರಸಾಹಸಪಟ್ಟರೂ ಹೋಗುತ್ತಿಲ್ಲ. ಪುನಃ ರಾತ್ರಿಯಾದೊಂಡನೆ ಈ ಭಾಗದಲ್ಲಿ ಯಥೇಚ್ಛವಾಗಿ ಭತ್ತ ಬೆಳೆದಿದ್ದು, ಮತ್ತೆ ಇದೇ ಸ್ಥಳಕ್ಕೆ ಬಂದು ಬೆಳೆಗಳನ್ನು ತಿನ್ನುತ್ತಿವೆ.
ಈ ಎಲ್ಲಾ ಆನೆಗಳು ತಿಂದರೂ ಸಹ ನಷ್ಟವಾಗುವುದಕ್ಕಿಂತ 10 ಪಟ್ಟು ಬೆಳೆ ಹಾನಿಯನ್ನು ಮರಿಯಾನೆಗಳು ಚಿನ್ನಾಟವಾಡಿ ನಾಶಪಡಿಸುತ್ತಿವೆ. ಈಗ ಗ್ರಾಮಸ್ಥರಿಗೆ ನಷ್ಟದ ಪರಿಹಾರಕ್ಕಾಗಿ ಪ್ರತಿಗ್ರಾಮಕ್ಕೂ ತೆರಳಿ ಆನೆ ಹಾವಳಿಯಿಂದ ನಷ್ಟ ಅನುಭವಿಸಿದರಿಗೆ ಪರಿಹಾರ ನೀಡುವ ಹಿನ್ನೆಲೆಯಲ್ಲಿ, ಮಾಹಜರು ನಡೆಸಿದ್ದು, ಈಗಾಗಲೇ 1800 ಅರ್ಜಿ ಬಂದಿದ್ದು, ಕಳೆದ ಹಾಗೂ ಈ ಸಾಲಿನ ಬೆಳೆನಷ್ಟು ರು. 60 ಲಕ್ಷದಷ್ಟು ಬರಬೇಕಿದ್ದು, ಪರಿಹಾರ ಬಂದ ಕೂಡಲೇ ವಿತರಿಸಲಾಗುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.