ಹಾಸನ

ಮೌಢ್ಯ ನಿಷೇಧದಿಂದ ಸರ್ಕಾರ ಸಮಾಜಮುಖಿ ಎನಿಸಿಕೊಳ್ಳದು

Published On :

ಕ.ಪ್ರ.ವಾರ್ತೆ ,  ಅರಸೀಕೆರೆ ,  ಡಿ.22
ಯಾರೋ ನಾಲ್ಕು ಜನ ಬುದ್ದಿವಂತರು ಸೇರಿಕೊಂಡು ಮೌಢ್ಯ ನಿಷೇಧ ಕಾನೂನು ರಚಿಸಿದರೆ ಸರ್ಕಾರ ಸಮಾಜ ಮುಖಿಯಾಗುವುದಿಲ್ಲ. ಬದಲಿಗೆ ಪ್ರಗತಿಪರ ಚಿಂತನೆಯುಳ್ಳ ಎಲ್ಲ ಧರ್ಮದ ಗುರುಗಳು, ಸ್ವಾಮೀಜಿಗಳೊಂದಿಗೆ ಚರ್ಚಿಸಿ ಎಲ್ಲರೂ ಒಪ್ಪುವಂತಹ ಕಾನೂನು ರಚಿಸಬೇಕು ಎಂದು ಸಾಣೇಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಹರಳಕಟ್ಟೆ ಗ್ರಾಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರಾಮಲಿಂಗಪ್ಪ ಅವರ ಪುಣ್ಯ ಸಂಸ್ಮರಣೆ ಹಾಗೂ ಸರ್ವ ಶರಣ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಮೌಢ್ಯ ನಿಷೇಧಕ್ಕಾಗಿ ಸರ್ಕಾರ ತರಲು ಹೊರಟಿರುವ ಕಾನೂನಿಗೆ ನಮ್ಮ  ಸಹಮತವಿದೆ. ಆದರೆ ಆ ಕಾನೂನು ರೂಪಿಸುವ ಮುನ್ನ ಚರ್ಚೆಯಾಗಬೇಕು. ಇಲ್ಲದಿದ್ದರೆ ಸಮಾಜದ ಸೌಹಾರ್ದತೆ ಕದಡುವಂತಹ ಕಾನೂನಾಗಿ ಅದು ಪರಿಣಮಿಸುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಪ್ರಸ್ತುತ ಧರ್ಮ ರಕ್ಷಿಸಿ ಸಮಾಜ ಮತ್ತು ಸಂಸ್ಕತಿಯನ್ನು ಉಳಿಸುವುದು ನಮ್ಮ ಗುರಿಯಾಗಬೇಕು. ಆಸೆ ಎಂಬುದು ತುಂಬಾ ಕೆಟ್ಟದ್ದು, ಆಸೆಯಿಂದ ಪ್ರತಿಯೊಬ್ಬ ಮಾನವನ ಜೀವನದಲ್ಲಿ ದುಃಖವೇ ತುಂಬಿರುತ್ತದೆಯೇ ವಿನಃ ಯಾವುದೇ ಫಲ ದೊರೆಯುವುದಿಲ್ಲ. ಎಲ್ಲರೂ ಕೂಡಾ ತಮ್ಮ ಅವಶ್ಯಕತೆಗೆ ಬೇಕಾದಷ್ಟನ್ನು ಮಾತ್ರ ಸಂಪಾದಿಸುವಲ್ಲಿ ಮುಂದಾಗಬೇಕು. ಬೇರೆಯವರ ಏಳಿಗೆಯನ್ನು ಕಂಡು ಸಂತಸಪಡುವ ಮನೋಭಾವ ನಿಮ್ಮದಾಗಲಿ ಎಂದು ಅವರ ಕರೆ ನೀಡಿದರು.
ನೆಮ್ಮದಿ ಕಂಡುಕೊಳ್ಳಿ: ಸದಾ ಶಿವಚಿಂತೆ, ಸದ್ವಿಚಾರ, ಸದ್ಭಾವನೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ದ್ವೇಷ ಅಸೂಯೆಗಳನ್ನು ನಿಮ್ಮ ಮನಸ್ಸಿನಿಂದ ತೊಡೆದುಹಾಕಿ ನೆಮ್ಮದಿ ಕಂಡುಕೊಳ್ಳಿ ಎಂದು ಆಶೀರ್ವಚನ ನೀಡಿದರು.
ಚಲನಶೀಲವಾಗಿರಬೇಕು: ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, 12ನೇ  ಶತಮಾನದ ಬಸವಾದಿ ಶಿವ ಶರಣರ ದಾರ್ಶನಿಕರಂತೆ ಪರಿವರ್ತನೆಯ ಪಥ ಕಂಡುಕೊಳ್ಳಬೇಕು. ಅಲ್ಲದೆ ನಿಸ್ವಾರ್ಥದ ಬದುಕು ಸಾಗಿಸಬೇಕು. ಎಲ್ಲರೂ ನನಗಾಗಿ ಎಂುಬುದು ಸ್ವಾರ್ಥ, ನಾನು ಎಲ್ಲರಿಗಾಗಿ ಎಂಬುದು ನಿಸ್ವಾರ್ಥ, ನಮ್ಮ ಬದುಕು ನಿಂತ ನೀರಾಗಬಾರದು. ನಿರಂತರ ಚಲನಶೀಲವಾಗಿರಬೇಕು ಎಂದು ಹೇಳಿದರು.
ಆದರ್ಶಗಳನ್ನು ಬೆಳೆಸಬೇಕಿದೆ: ಶರಣರಿಗೆ ಎಂದೂ ಕೂಡಿಡುವ ಮನೋಭಾವ ಇರಲಿಲ್ಲ. ಅವರಿಗೆ ತಾವು ದುಡಿಮೆ ಮಾಡಿದ್ದುದರಲ್ಲಿ ಅಲ್ಪವನ್ನಾದರೂ ಸಮಾಜಕ್ಕೆ ನೀಡುವ ಮನೋಭಾವನೆಯನ್ನು ಹೊಂದಿದ್ದರು. ಅದನ್ನೇ ಅವರು ದಾಸೋಹ ಎಂದು ಕರೆದರು. ಶರಣರು ಸಮಸ್ತ ಸಮಾಜವನ್ನು ನಿರ್ಮಾಣ ಮಾಡಲು ಪ್ರಯತ್ನಿಸದವರು. ಅದರಂತೆ ನಾವು ಸಹ ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
  ಚಿಕ್ಕಮಗಳೂರಿನ ಸಾಹಿತಿ ತಿಪ್ಪೇರುದ್ರಸ್ವಾಮಿ, ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಹಿರಿಯೂರು ರೇವಣ್ಣ, ತಾಲೂಕು ಯುವ ಕಾಂಗ್ರೆಸ್ ಮುಖಂಡ ಅಣ್ಣಾಯಕನಹಳ್ಳಿ ವಿಜಯ್ ಕುಮಾರ್, ಕ್ಯಾತನಹಳ್ಳಿ ಚನ್ನಬಸಪ್ಪ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.