ಹಾಸನ

ವಿದ್ಯುತ್ ಕ್ಷಾಮ ಭೀಕರಗೊಳ್ಳುವ ಆತಂಕ

Published On :

ಕನ್ನಡಪ್ರಭ ವಾರ್ತೆ, ಹಾಸನ, ಡಿ. 22
ಬೇಸಿಗೆ ಪ್ರಾರಂಭವಾಗುವ ಮೊದಲೇ ಹಾಸನ ಜಿಲ್ಲೆಯ ಜನತೆ ವಿದ್ಯುತ್ ಕಡಿತದ ಕಹಿ ಅನುಭವವನ್ನು ಅನುಭವಿಸಬೇಕಾಗಿದೆ. ಬೇಡಿಕೆಯಷ್ಟು ವಿದ್ಯುತ್ ಪೂರೈಸುತ್ತಿಲ್ಲ.
ಪ್ರತಿದಿನ ನಗರ ಸೇರಿದಂತೆ ಜಿಲ್ಲಾದ್ಯಂತ 130ರಿಂದ 140 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಆದರೆ, ಪೂರೈಕೆ ಆಗುತ್ತಿರುವುದು 80ರಿಂದ 90 ಮೆಗಾವ್ಯಾಟ್.  
ಇದರ ಪರಿಣಾಮ ಬೇರೆ ದಾರಿಯಿಲ್ಲದೇ, ಬೇಸಿಗೆ ಆರಂಭದ ಹಂತದಲ್ಲೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಪಂಪ್ ಸೆಟ್‌ಗಳಿಗೆ ಅಗತ್ಯದಷ್ಟು ವಿದ್ಯುತ್ ನೀಡದ ಕಾರಣ ಕೃಷಿ ಚಟುವಟಿಕೆಗೆ ಹಿನ್ನೆಡೆ ಆಗುತ್ತಿದೆ. ಬೇಸಿಗೆಯಲ್ಲಿ ಜಿಲ್ಲೆಯ ಹಲವೆಡೆ ಪಂಪ್ಸೆಟ್ ಅವಲಂಬಿಸಿ ತರಕಾರಿ ಬೆಳೆಯಲಾಗುತ್ತದೆ. ವಿದ್ಯುತ್ ತೊಂದರೆಯಾದರೇ ತರಕಾರಿ ಬೆಳೆಯುವ ಕೃಷಿಗೆ ತೊಂದರೆ ಆಗುತ್ತದೆ.
ಈಗಲೇ ಆತಂಕ: ಇಂದಿನ ವಿದ್ಯುತ್ ಸ್ಥಿತಿಗತಿ ಗಮನಿಸಿದರೆ, ಬೇಸಿಗೆಯಲ್ಲಿ ಕುಡಿಯಲು ನೀರು ಒದಗಿಸಲು ವಿದ್ಯುತ್ ಸರಬರಾಜನ್ನು ಸೂಕ್ತ ರೀತಿಯಲ್ಲಿ ಮಾಡುವುದು ಕಷ್ಟಕರ.
ಇದರಿಂದ ಕುಡಿಯುವ ನೀರಿಗೂ ತೊಂದರೆ ಉಂಟಾಗಲಿದೆ. ಬೇಸಿಗೆ ದಿನಗಳಲ್ಲಿ ಹೊಟೇಲ್‌ಗಳು, ಉಳ್ಳವರ ಮನೆಗಳಲ್ಲಿ ಮತ್ತು ಸರ್ಕಾರಿ ಉನ್ನತಾಧಿಕಾರಿಗಳ  ಕಚೇರಿಗಳಲ್ಲಿ ಮತ್ತು ಖಾಸಗಿ ಕಂಪನಿಗಳ ಮೇಲಾಧಿಕಾರಿಗಳ ಕಚೇರಿಗಳಲ್ಲಿ ಏರ್ ಕಂಡೀಷನ್‌ಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ.
ಆದರೆ, ಅವು ಫೆಬ್ರವರಿಯಿಂದ ಚಾಲನೆ ಮಾಡುವುದು ಕಷ್ಟವೇ. ಜಿಲ್ಲೆಯ ಕೈಗಾರಿಕೆಗಳೂ ವಿದ್ಯುತ್ ಕೊರತೆಯಿಂದ ಉತ್ಪಾದನೆಯನ್ನು ಸಮರ್ಪಕವಾಗಿ ಮಾಡುವುದು ಕಷ್ಟಕರವೇ ಎಂಬ ಆತಂಕ ಈಗಲೇ ಶುರುವಾಗಿದೆ ಕೈಗಾರಿಕೋದ್ಯಮಿಗಳಲ್ಲಿ.
ಜಿಲ್ಲಾದ್ಯಂತ 72,000  ಅಧಿಕೃತ ಕೃಷಿ ಪಂಪ್ ಸೆಟ್‌ಗಳಿದ್ದರೇ, ಸೆಸ್ಕ್ ಮಾಡಿರುವ ಸಮೀಕ್ಷೆ ಪ್ರಕಾರ 24, 000 ಅನಧಿಕೃತ ಪಂಪ್‌ಸೆಟ್‌ಗಳು ಇವೆ. ಅಧಿಕೃತ ಮತ್ತು  ಅನಧಿಕೃತ ಪಂಪ್‌ಸೆಟ್‌ಗಳಿಗೆ ಪ್ರತಿದಿನ 400 ಕಿಲೋ ವ್ಯಾಟ್ ವಿದ್ಯುತ್ ಬೇಕು. ಕೈಗಾರಿಕೆ, ಏತನೀರಾವರಿ, ವಾಣಿಜ್ಯ ಉದ್ದೇಶಗಳಿಗೆ 41,200 ಕಿ.ವ್ಯಾ. ಗೃಹ ಬಳಕೆಗೆ   420 ಕಿ.ವ್ಯಾ. ವಿದ್ಯುತ್ ಬೇಕು. ಬೀದಿ ದೀಪ ಮತ್ತು ಭಾಗ್ಯ ಜ್ಯೋತಿಯಡಿ ಕುಟುಂಬಗಳಿಗೆ 90 ಕಿ. ವ್ಯಾಟ್ ವಿದ್ಯುತ್ ಬೇಕು ಪ್ರತಿದಿನ.
ಅಷ್ಟು ಲಭ್ಯವಾಗುತ್ತಿಲ್ಲ: ಆದರೆ ಆ ಪ್ರಮಾಣದ ವಿದ್ಯುತ್ ಲಭ್ಯವಾಗುತ್ತಿಲ್ಲ. ಇದರಿಂದ ಈಗ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 6 ಗಂಟೆ ತ್ರೀ ಫೇಸ್, ಗ್ರಾಮೀಣ ಪ್ರದೇಶಕ್ಕೆ 8 ಗಂಟೆ, ನಗರಗಳಿಗೆ 15ರಿಂದ 18 ಗಂಟೆಗಳು ವಿದ್ಯುತ್ ನೀಡಲಾಗುತ್ತಿದೆ. ಜನವರಿ ನಂತರ ಈ ಪ್ರಮಾಣ ತೀವ್ರವಾಗಿ ಕುಗ್ಗುವುದು ಖಚಿತ. ಏಕೆಂದರೆ, ಉಡುಪಿ ವಿದ್ಯುತ್ ಉತ್ಪಾದನಾ ಕೇಂದ್ರ ಯುಪಿಸಿಎಲ್‌ನಲ್ಲಿ ಜನರೇಟರ್‌ಗಳು ಸ್ಥಗಿತಗೊಂಡಿವೆ. ಆದ್ದರಿಂದ ಬೇಕಾಗುವಷ್ಟು ವಿದ್ಯುತ್ ಸರಬರಾಜು ಆಗುತ್ತಿಲ್ಲ. ಸೆಸ್ಕ್ ಉನ್ನತಾಧಿಕಾರಿಗಳ ಪ್ರಕಾರ ಈಗ ಶೇ. 72ರಷ್ಟು ಮಾತ್ರ ವಿದ್ಯುತ್ ಸಿಗುತ್ತಿದೆ.
ಗುಂಡ್ಯಾ ಯೋಜನೆ ಸ್ಥಗಿತ: ಜಿಲ್ಲೆಯಲ್ಲಿ ಪವನ (ಗಾಳಿ) ವಿದ್ಯುತ್‌ನಿಂದ ಪ್ರತಿದಿನ ಕೇವಲ ಒಂದೇ ಒಂದು ಮೆಗಾವ್ಯಾಟಟ್ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದು ಣಆನೆಗೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ  ಎಂಬಂತಾಗಿದೆ. ಸಕಲೇಶಪುರ ತಾಲೂಕು ಗುಂಡ್ಯಾ ಬಳಿ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಕಾಮಗಾರಿಗೆ ಮಾಜಿ ಸಿಎಂ ಯಡಿಯೂರಪ್ಪನವರು ಶಂಕುಸ್ಥಾಪನೆ ಮಾಡಿದ್ದರು. ಆದರೆ, ಪಶ್ಥಿಮಘಟ್ಟದಲ್ಲಿ ವಿದ್ಯುತ್ ಉತ್ಪಾದನೆ ಕೇಂದ್ರ ಆರಂಭಿಸುವುದು ಸರಿಯಲ್ಲ. ಆದರಿಂದ ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಪರಿಸರ ವಾದಿಗಳು ಕೋರ್ಟ್ ಮೆಟ್ಟಿಲು ಏರಿದ್ದರಿಂದ ಗುಂಡ್ಯಾ ಯೋಜನೆ ಸ್ಥಗಿತಗೊಂಡಿತ್ತು. ಈಗ ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮಘಟ್ಟದೊಳಗೆ ಯಾವುದೇ ರೀತಿಯ ಯೋಜನೆಗಳು ಆರಂಭಿಸುವಂತಿಲ್ಲ ಎಂದು ಹೇಳಲಾಗಿದೆ.
ಅಧಿಕಾರಿ ಏನಂತಾರೆ...?
ಯುಪಿಸಿಎಲ್‌ನಲ್ಲಿ ವಿದ್ಯುತ್ ಉತ್ಪಾದಿಸುವ ಜನರೇಟರ್‌ಗಳು ವಿಫಲವಾಗಿವೆ. ಆದ್ದರಿಂದ ಬೇಡಿಕೆಯಷ್ಟು ವಿದ್ಯುತ್ಪೂರೈಕೆ ಆಗುತ್ತಿಲ್ಲ. ಹಾಗಾಗಿ ವಿದ್ಯುತ್ ಕಡಿತ ಅನಿವಾರ್ಯವಾಗಿದೆ.
ಮತ್ತೇನು ಮಾಡಬೇಕು ?
ಕೂಡಲೇ ಜನರೇಟರ್‌ಗಳು ರಿಪೇರಿ ಮಾಡಬೇಕು. ಇಲ್ಲವೇ ಅಧಿಕವಾಗಿ ವಿದ್ಯುತ್ ಉತ್ಪಾದಿಸುವ ಸಿಕ್ಕಿಂ, ಮೇಘಾಲಯ, ಅಸ್ಸಾಂನಿಂದ ವಿದ್ಯುತ್ ಖರೀದಿಸಬೇಕು. ಕರ್ನಾಟಕದದ ನದಿಗಳ ಹರಿವಿನ ಪ್ರಮಾಣ ಬೇಸಿಗೆಯಲ್ಲಿ ಕುಗ್ಗುತ್ತವೆ. ಹಾಗಾಗಿ ಶರಾವತಿ ಮತ್ತಿತರ ಕಡೆ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಗುವುದಿಲ್ಲ. ಕಲ್ಲಿದ್ದಲು ಪೂರೈಕೆ ಕೂಡ ಕಡಿಮೆ ಆಗುವುದರಿಂದ ರಾಯಚೂರು ಥರ್ಮಲ್ ವಿದ್ಯುತ್ ಘಟಕಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚು ಮಾಡಲಾಗುವುದಿಲ್ಲ. ಆಳುವ ಸರ್ಕಾರಗಳು ವಿದ್ಯುತ್ ಉತ್ಪಾದನೆ ಮತ್ತು ಖರೀದಿಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ
ಈ ಕಾರಣಗಳಿಂದ ಬಹಳ ಹಿಂದಿನಿಂದಲೂ ಬೇಸಿಗೆ ಆರಂಭವಾದಾಗಲೆಲ್ಲಾ ವಿದ್ಯುತಕಡಿತದ ಗೋಳು ತಪ್ಪುವುದಿಲ್ಲ ಎಂಬ ಅಸಮಾಧಾನ ಹಾಸನ ಜಿಲ್ಲೆಯ ಗ್ರಾಹಕರದ್ದು.



-ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.