ಹಾಸನ

ಕುಡಿವ ನೀರಿನ ಯೋಜನೆ ವರ್ಷದೊಳಗೆ ಪೂರ್ಣ

Published On :

ಹಾರನಹಳ್ಳಿ (ಅರಸೀಕೆರೆ ತಾ.): ಅರಸೀಕೆರೆ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಯಗಚಿ ಹಾಗೂ ಹೇಮಾವತಿ ನದಿ ಮೂಲಕ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದು, ವರ್ಷದಲ್ಲಿ ಈ ಕಾಮಗಾರಿ ಮುಗಿಯುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು.
 ಹಾರನಹಳ್ಳಿ ಪದವಿ ಪೂರ್ವ ಕಾಲೇಜು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನಂತರ ಆಂಜನೇಯ ದೇವಾಲಯ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯೋಜನೆ ಪೂರ್ಣದಿಂದ ತಾಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಪಶಮನವಾಗಲಿದೆ ಎಂದರು.
 ತಾಲೂಕಿನ ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಈ ಹಿಂದೆ ಕೆ.ಸಿ.ರೆಡ್ಡಿ ವರದಿ ಪ್ರಕಾರ ಅಪ್ಪರ್ ಭದ್ರಾ ಯೋಜನೆ ಮೂಲಕ 2.5 ಟಿ.ಎಂ.ಸಿ. ನೀರನ್ನು ಅರಸೀಕೆರೆ ತಾಲೂಕಿಗೆ ಕೊಡಬಹುದೆಂದು ವರದಿ ನೀಡಲಾಗಿತ್ತು. ಪರಮಶಿವಯ್ಯ ವರದಿ ಪ್ರಕಾರ ನೇತ್ರಾವತಿ ನದಿ ನೀರು ಅರಸೀಕೆರೆ, ತಿಪಟೂರು, ಕಡೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಿಗೆ ನೀರು ಕೊಡುವ ಯೋಜನೆಗೆ ಸರ್ಕಾರ ಆದ್ಯತೆ ನೀಡಬೇಕೆಂದರು.
 ನೇತ್ರಾವತಿ ತಿರುವು ಯೋಜನೆಗೆ ಕೆಲವರು ದಿಕ್ಕು ತಪ್ಪಿಸುತ್ತಿದ್ದು ಕೆಲವರು ರಾಜಕೀಯ ಲಾಭಕ್ಕೆ ಮಣಿಯಬಾರದು. ಅರಸೀಕೆರೆ ತಾಲೂಕು ತೀವ್ರ ಬರಗಾಲದಿಂದ ಕೂಡಿದ್ದು ತೆಂಗು ಇತರ ಬೆಳೆಗಳು ಸಂಪೂರ್ಣ ಹಾನಿಯಾಗಿದೆ. ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ.
 ಈ ನಿಟ್ಟಿನಲ್ಲಿ ಅರಸೀಕೆರೆ ಕೆರೆಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕಾಗಿದೆ. ಮುಂದಿನ ದಿನಗಳಲ್ಲಿ ನೀರಾವರಿ ತಜ್ಞರನ್ನು ಒಳಗೊಂಡ ಸಮಿತಿ ರಚನೆ ಮಾಡಿ ಸಾರ್ವಜನಿಕ ಸಭೆ ಕರೆದು ಶಾಶ್ವತ ನೀರಾವರಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸುವುದಾಗಿ ತಿಳಿಸಿದರು.
 ತಾಲೂಕಿನಲ್ಲಿ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದು, ಅರಸೀಕೆರೆ - ತಿರುಪತಿ ರಸ್ತೆಯಲ್ಲಿ ಗಾರ್ಮೆಂಟ್ ಕೈಗಾರಿಕೆ ಪ್ರಾರಂಭಿಸಲು ಮುಂದೆ ಬಂದಿದ್ದು ಈಗಾಗಲೇ ಜಮೀನನ್ನು ನೀಡಿರುವುದಾಗಿ ತಿಳಿಸಿದರು.  ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ಸರ್ಕಾರ ಶಾಶ್ವತ ವಿದ್ಯುತ್ ಯೋಜನೆಗಳಿಗೆ ಆದ್ಯತೆ ನೀಡಬೇಕು. ಬರಿ ಪ್ರಚಾರಕ್ಕಾಗಿ ಯೋಜನೆಗಳನ್ನು ರೂಪಿಸದೆ ಸರ್ಕಾರ ಅಗತ್ಯ ಶಾಶ್ವತ ಯೋಜನೆಗಳನ್ನು ರೂಪಿಸಲು ಮುಂದಾಗಬೇಕೆಂದರು.
ಹಾರನಹಳ್ಳಿ ಪುರಾತನ ಐತಿಹಾಸಿಕ ಗ್ರಾಮವಾಗಿದ್ದು,  ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ದೇವಾಲಯಗಳಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯ ಕಲ್ಪಿಸಲಾಗಿದ್ದು ರಾಜ್ಯಮಟ್ಟದಲ್ಲೇ ಅರಸೀಕೆರೆ ತಾಲೂಕಿನ ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಅನುದಾನ ತರುವುದಾಗಿ ಭರವಸೆ ನೀಡಿದರು.
 ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಮಾತನಾಡಿ, ಹಾರನಹಳ್ಳಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಕಾಲೇಜು ಆವರಣದಲ್ಲಿ ಪಾಕಶಾಲೆ ನಿರ್ಮಾಣಕ್ಕೆ ಮೂರೂವರೆ ಲಕ್ಷ ರು. ಮಂಜೂರು ಆಗಿರುವುದಾಗಿ ತಿಳಿಸಿದರು.
 ತಾಲೂಕು ಪಂಚಾಯ್ತಿ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಮಾತನಾಡಿ,  ಗ್ರಾಮದಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು ಇದರಿಂದ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಆಗುತ್ತಿದ್ದು ಶುದ್ಧವಾದ ನೀರು ಕೊಡುವ ಬಗ್ಗೆ ಅನೇಕ ವೈದ್ಯಕೀಯ ವರದಿ ತಿಳಿಸಿತ್ತು.
 ಈ ದೃಷ್ಟಿಯಿಂದ ವಾಟರ್ಲೈಫ್ ಸಂಸ್ಥೆಯಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭವಾಗಿದ್ದು 200 ರು. ಠೇವಣಿ ಹಾಗೂ  2- 20 ರು. ಲೀಟರ್ ನೀರು ಕ್ಯಾನ್ ಕೊಡುವುದಾಗಿ ತಿಳಿಸಿದರು.
 ಗ್ರಾಪಂ ಅಧ್ಯಕ್ಷೆ ಜಮುನಾ ಅಧ್ಯಕ್ಷತೆ ವಹಿಸಿ ಮಾತನಾಡಿ ಹಾರನಹಳ್ಳಿಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಅವರ ಸಹಕಾರದಿಂದ ಗ್ರಾಮದಲ್ಲಿ ಇನ್ನು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.
ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಜಿಪಂ ಮುಖ್ಯ ಎಂಜಿನಿಯರ್ ಶೇಖರಪ್ಪ, ಉಮೇಶ್, ಪಿಡಿಓ ಶಾರದಮ್ಮ, ಹಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕರೀಂಸಾಬ್, ಪಂಕಜ, ಉಪಾಧ್ಯಕ್ಷ ಬಸವರಾಜ್, ಸದಸ್ಯ ಕೃಷ್ಣಪ್ಪ, ಓಂಕಾರಮೂರ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.