ಹಾಸನ

ಎಚ್.ಡಿ.ರೇವಣ್ಣ ಸಾರ್ವಜನಿಕ ಕ್ಷಮಾಯಾಚನೆಗೆ ರೈತ ಮುಖಂಡರ ತೀವ್ರ ಒತ್ತಾಯ

Published On :

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ದಂಡಾಧಿಕಾರಿಯವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತಾಕೀತು ಮಾಡುವ ಮೂಲಕ ಶಾಸಕ ಎಚ್.ಡಿ ರೇವಣ್ಣ  ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ತಾಲೂಕು ರೈತ ಮುಖಂಡ ಪಿ.ಎ. ನಾಗರಾಜು ತಿಳಿಸಿದರು.
 ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಮಂತ್ರಿ, ಶಾಸಕರಾದ ಎಚ್.ಡಿ ರೇವಣ್ಣ ಇತ್ತೀಚಿನ ದಿನಗಳಲ್ಲಿ ನಿಷ್ಠಾವಂತ ಅಧಿಕಾರಿಗಳ ವಿರುದ್ಧ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದು, ಅದಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಹಾಸನದಲ್ಲಿ ಮರಳು ದಂದೆ ನಡೆಸುವವರ ಪರವಾಗಿ ನಿಂತು ಮರಳು ಲಾರಿಗಳನ್ನು ತಡೆಯುವವರ ಜೀಪ್ಗೆ ಬೆಂಕಿ ಹಾಕಿ ಎಂದು ಹೇಳಿದ್ದು ಮಾಸುವ ಮುನ್ನವೇ ಮರಳು ಲಾರಿಗಳನ್ನು ತಡೆಯುತ್ತಿರುವ ಚನ್ನರಾಯಪಟ್ಟಣ ತಹಸೀಲ್ದಾರ್ ವಿರುದ್ಧ ಧರಣಿ ನಡೆಸುವುದಲ್ಲದೆ ಅವರ ವಿರುದ್ಧ ಎಪ್ಐಆರ್ ದಾಖಲಿಸುವಂತೆ ತಾಕೀತು ಮಾಡಿರುವ ಎಚ್.ಡಿ ರೇವಣ್ಣ ಅವರು ಕ್ಷಮೆ ಯಾಚಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 ತಾಲೂಕಿನಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿಯನ್ನು ತಮ್ಮ ಹಿಂಬಾಲಕರಿಗೆ ಗುತ್ತಿಗೆ ರೂಪದಲ್ಲಿ ಎಚ್.ಡಿ ರೇವಣ್ಣ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತೊಂದರೆ ನೀಡಲು ಮುಂದಾಗುತ್ತಿದ್ದಾರೆ ಎಂದು ಹೇಳಿದರು.
ಕಾರು ದುರ್ಬಳಕೆ: ತಾಲೂಕು ರೈತ ಮುಖಂಡ ಸತ್ತೀಗೌಡ ಮಾತನಾಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಅವರು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಜ.5ರಂದು ನಡೆಯಲಿರುವ ರಾಜ್ಯ ಒಕ್ಕಲಿಗರ ಕ್ಷೇತ್ರದ ಚುನಾವಣೆಯ ಅಖಾಡದಲ್ಲಿದ್ದು, ಇವರು ಚುನಾವಣೆ ಪ್ರಚಾರ ಕಾರ್ಯಕ್ಕೆ ಬ್ಯಾಂಕ್ನ ಕಾರು ಬಳಕೆ ಮಾಡಿಕೊಳ್ಳುತ್ತಿದ್ದು, ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರು ಕಾರನ್ನು ವಾಪಸ್ ಪಡೆಯದಿದ್ದರೆ ಹೋರಾಟ ನಡೆಸುವುದಾಗಿ  ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಜಿಲ್ಲಾ ಬ್ಯಾಂಕ್ ಕಾರನ್ನು ದುರ್ಬಳಕೆ ಮಾಡಿಕೊಂಡಂತೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್ ಕಾರನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಅದು ಮುಂದುವರಿದರೆ ಧರಣಿ ನಡೆಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.