ಹಾಸನ

ಶಿವರಾಂ ವಿರುದ್ಧ ಬಂಡಾಯದ ಅಲೆ

Published On :

ಕ.ಪ್ರ.ವಾರ್ತೆ   ಹಾಸನ   ಡಿ. 24
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ವಿರುದ್ಧ ಕಾಂಗ್ರೆಸ್ನಲ್ಲೀಗ ಬಂಡಾಯದ ಅಲೆ ಎದ್ದಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಜೆಡಿಎಸ್ ಶತ್ರುವಾಗಿಲ್ಲ, ಶಿವರಾಂ ಅವರೇ ಪಕ್ಷಕ್ಕೆ ದೊಡ್ಡ ಶತ್ರುವಾಗಿದ್ದಾರೆ. ನಮ್ಮ ಮುಂದೆ ಜೆಡಿಎಸ್ನ್ನು ಬೈಯ್ಯುತ್ತಾರೆ. ಆದರೆ ಅವರೊಂದಿಗೆ ಒಡನಾಟ ಇಟ್ಟುಕೊಂಡು ಚುನಾವಣೆ ಸಂದರ್ಭಗಳಲ್ಲಿ ಮ್ಯಾಚ್ಫಿಕ್ಸಿಂಗ್ ಮಾಡಿ ಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡ  ಸಿ.ವಿ.ರಾಜಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶೇಷೇಗೌಡ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಪ್ರಧಾನ ಕಾರ್ಯದರ್ಶಿ ಡಿ.ಸಿ.ಸಣ್ಣಸ್ವಾಮಿ ಹಾಗೂ ಇತತರ ಸಮ್ಮುಖದಲ್ಲಿ ನಡೆದ ಬಿ.ಶಿವರಾಂ ಹಠಾವೋ - ಕಾಂಗ್ರೆಸ್ ಬಚಾವೋ  ಪ್ರಮುಖರ ಸಭೆಯಲ್ಲಿ ಈ ಆರೋಪ ಕೇಳಿ ಬಂತು.
ಸರ್ವಾಧಿಕಾರಿ ಧೋರಣೆ:  ಶಿವರಾಂ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಶಿವರಾಂಗೆ ಟಿಕೆಟ್ ನೀಡಿದ್ದೇ ಆದಲ್ಲಿ ಅದರ ವಿರುದ್ಧ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಶಿವರಾಂ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿರುವ ಕಾಂಗ್ರೆಸ್ನ ಕೆಲ ಮುಖಂಡರು ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಘಟಕದ ಮೂಲಕ ಮುಂಬರುವ ಲೋಕಸಭೆಗೆ ಪಕ್ಷವನ್ನು ಕಟ್ಟುವ ತೀರ್ಮಾನಕ್ಕೆ ಬಂದಿದ್ದು, ಶಿವರಾಂ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪಕ್ಷದ ಹೈಕಮಾಂಡ್ ಒಬ್ಬ ಸಮರ್ಥ ನಾಯಕನನ್ನು ಜಿಲ್ಲಾಧ್ಯಕ್ಷನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಐಸಿಸಿ ಅಧ್ಯಕ್ಷರ ಗಮನಕ್ಕೆ:  ಕಾಂಗ್ರೆಸ್ ಶಿವರಾಂಗೆ ಎಲ್ಲಾ ರೀತಿಯ ಅಧಿಕಾರವನ್ನು ನೀಡಿದೆ. ಆದರೆ ಶಿವರಾಂ ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿಯ ಅಧಿಕಾರ ನೀಡಿದ್ದಾರೆ ಅನ್ನೋದನ್ನು ಮನದಟ್ಟು ಮಾಡಿಕೊಳ್ಳಬೇಕು. ಪಕ್ಷ ಸಂಘಟನೆ ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಜನರಿಂದ ಕಡೆಗಣನೆಗೆ ಒಳಗಾಗಿರುವ ಹಾಗೂ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲದಂತಹ ವ್ಯಕ್ತಿಯನ್ನು ಆ ಸ್ಥಾನದಿಂದ ಕೆಳಗೆ ಇಳಿಸಬೇಕು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷರ ಗಮನಕ್ಕೂ ತರಲು ಸಭೆ ತೀರ್ಮಾನಿಸಿತು.
ಜಿಲ್ಲೆಯ ಜನತೆಯ ಒಗ್ಗುವುದಿಲ್ಲ:  ಮುಖಂಡ ಸಿ.ವಿ.ರಾಜಪ್ಪ ಮಾತನಾಡಿ, ಶಿವರಾಂ ವರ್ತನೆ ಜಿಲ್ಲೆಯ ಜನತೆಗೆ ಒಗ್ಗುವುದಿಲ್ಲ. 3 ಚುನಾವಣೆಗಳಲ್ಲಿ ಸೋಲನ್ನು ಕಂಡಿದ್ದಾರೆ. ಜೊತೆಗೆ ಅವರು ಅಧಿಕಾರವಹಿಸಿಕೊಂಡ ನಂತರ ಯಾವುದೇ ಚುನಾವಣೆಯನ್ನು ಗೆಲ್ಲಿಸಿಕೊಟ್ಟಿಲ್ಲ. ಇವರನ್ನು ಜಿಲ್ಲೆಯ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಆದ್ದರಿಂದ ಶಿವರಾಂ ನೈತಿಕ ಹೊಣೆ ಹೊತ್ತು ಜಿಲ್ಲಾಧ್ಯಕ್ಷ  ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಶಿವರಾಂಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬಾರದು. ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲು ಖಚಿತ. ಆದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ನ್ನು ಸಮರ್ಥವಾಗಿ ಕಟ್ಟುವ ಅನಿವಾರ್ಯತೆಯಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶೇಷೇಗೌಡ ಮಾತನಾಡಿ, ಪಕ್ಷ ಶಿವರಾಂ ಅವರಿಗೆ ಅಧಿಕಾರ ನೀಡಿದೆ. ಆದರೆ ಶಿವರಾಂ ಕಾರ್ಯಕರ್ತರಿಗೆ ಯಾವ ಅಧಿಕಾರ ನೀಡಿದ್ದಾರೆ ಅನ್ನೋದನ್ನು ಮನದಟ್ಟು ಮಾಡಿಕೊಳ್ಳಬೇಕು. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರಿಂದಾಗಿ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸರಿಯಾಗಿ ಅವಕಾಶಗಳೇ ಸಿಗುತ್ತಿಲ್ಲ. ಕಾರ್ಯಕರ್ತರೇ ಒಂದು ಪಕ್ಷದ ಆಸ್ತಿಯಾಗುತ್ತಾರೆ. ಅದನ್ನು ಶಿವರಾಂ ಮರೆತ್ತಿದ್ದಾರೆ ಎಂದು ನುಡಿದರು.
ಶಾಸಕ ಎ.ಮಂಜು ಅವರಿಗೆ ಸಚಿವ ಸ್ಥಾನ ತಪ್ಪಲು ಮೂಲ ಕಾರಣವೇ ಶಿವರಾಂ. ಜಿಲ್ಲೆಯಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಮುಂದೆ ಬರಬಾರದು ಅನ್ನೋದು ಅವರ ಭಾವನೆ. ಜಿಲ್ಲೆಯಲ್ಲಿ ನಮಗೆ ಜೆಡಿಎಸ್ನವರು ಶತ್ರುವಲ್ಲ, ನಮ್ಮಲ್ಲಿಯೇ ಇದ್ದುಕೊಂಡು ಶಿವರಾಂ ಶತ್ರುವಿನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಪ್ರಧಾನ ಕಾರ್ಯದರ್ಶಿ ಡಿ.ಸಿ.ಸಣಸ್ವಾಮಿ ಮಾತನಾಡಿ, ಶಿವರಾಂ ಅವರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ನೈತಿಕ ಹೊಣೆ ಹೊತ್ತು ಶಿವರಾಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ 4 ಲಕ್ಷ ದಲಿತರಿದ್ದರೂ ಎಸ್ಸಿ ಘಟಕಕ್ಕೆ ದಲಿತರ ನಾಯಕರನ್ನು ಅಧ್ಯಕ್ಷರುನ್ನಾಗಿ ಮಾಡಲು ಇವರು ಸಿದ್ದವಿಲ್ಲ. ಹೈಕಮಾಂಡ್ ಆದೇಶವಾಗಿದ್ದರೂ ಶಿವರಾಂ ಮನಸ್ಸು ಮಾಡುತ್ತಿಲ್ಲ. ಹಿಂದುಳಿದ, ದಲಿತ ಹಾಗೂ ಮಹಿಳೆಯರ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ. ಆದ್ದರಿಂದ ಜಿಲ್ಲೆಗೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ಇದೆ ಎಂದು ಹೇಳಿದರು. ಮುಖಂಡ ಲಕ್ಕೂರು ಬಸವರಾಜು, ತುಳಸಿ ಪ್ರಸಾದ್, ಲಕ್ಷ್ಮಣೇಗೌಡ, ಮಹೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.