ಹಾಸನ

ಹೊಳೆನರಸೀಪುರದಲ್ಲಿ ಭಾವಪೂರ್ಣ ನುಡಿ ನಮನ

Published On :

ಕ.ಪ್ರ.ವಾರ್ತೆ   ಹೊಳೆನರಸೀಪುರ   ಡಿ.24
ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿ ಮರಳಿ ಬಾರದ ಲೋಕಕ್ಕೆ ತೆರಳಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಅಕಾಲಿಕ ನಿಧನಕ್ಕೆ ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ನಾನಾ ಸಂಘಟನೆಗಳು ಸೇರಿ ಮಂಗಳವಾರ ತಾಲೂಕು ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಅಗಲಿದ ಚೇತನಕ್ಕೆ ನುಡಿ ನಮನ ಸಲ್ಲಿಸಿದರು.
ಜಿಎಸ್ಎಸ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಬಳಿಕ ಮೌನಾಚರಣೆ ನಡೆಸಿದ ನಂತರ ಅಗಲಿದ ಕವಿಜೀವಕ್ಕೆ ಶಿಕ್ಷಕ ದಿವಾಕರ್ ಹಾಗೂ ಕೆ.ಶಿವಕುಮಾರಾಚಾರಿ ಅವರು ಜಿಎಸ್ಎಸ್ ಭಾವಗೀತೆಗಳನ್ನು ಮನದುಂಬಿ ಹಾಡುವ ಮೂಲಕ ಗೀತನಮನ ಸಲ್ಲಿಸಿದರು.
ನಿವೃತ್ತ ಉಪನ್ಯಾಸಕ ಎಸ್.ಕೃಷ್ಣಮೂರ್ತಿ ಅವರು, ಹಳೆಯ ಮತ್ತು ಹೊಸ ತಲೆಮಾರಿನ ಎಲ್ಲಾ ವರ್ಗದ ಜನಮಾನಸವನ್ನೂ ತಲುಪಿ, ಎಲ್ಲರ ಭಾವನೆಗಳನ್ನು ಸಮನ್ವಯಗೊಳಿಸಿದ ರಮ್ಯಕವಿ ಜಿಎಸ್ಎಸ್ ಎಂದ ಅವರು, ತಮ್ಮ ಸಾಹಿತ್ಯದ ಮೂಲಕ ಪ್ರತಿಯೊಬ್ಬರ ಮನೆ ಮನಗಳನ್ನೂ ತಲುಪಿದ ಸಾರಸ್ವತ ಲೋಕದ ದಿಗ್ಗಜವೊಂದು ಅಸ್ತಂಗತವಾಗಿದೆ ಎಂದರು. ಹಳ್ಳಿಮೈಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎಸ್.ಪ್ರಭುಶಂಕರ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ಸದಾ ಕಾಲವೂ ಕನ್ನಡಿಗರ ಎದೆಯಲ್ಲಿ ಅನುರಣಗೊಳಿಸಿದವರಲ್ಲಿ ಜಿಎಸ್ಎಸ್ ಪ್ರಮುಖರಾಗಿದ್ದರು ಎಂದರಲ್ಲದೇ, ಕನ್ನಡ ಅಧ್ಯಯನ ಸಂಸ್ಥೆಯ ಬೆಳವಣಿಗೆ ಮತ್ತು ಏಳಿಗೆಯಲ್ಲಿ ಜಿಎಸ್ಎಸ್ ಅವರ ಶ್ರಮ ಬಹುಮುಖ್ಯವಾದುದಾಗಿದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಅವರು ಮಾತನಾಡಿದರು.  ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ಅವರು ಮಾತನಾಡಿ, ತಮ್ಮ ಸಾಹಿತ್ಯದ ಮೂಲಕ ನೀಡಿರುವ ಕೊಡುಗೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆಯ ಬಾಳ್ವೆಯನ್ನು ಬಾಳಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದರು. ಸಭೆಯಲ್ಲಿ ಅಗಲಿದ ರಾಷ್ಟ್ರಕವಿಯ ಸ್ಮರಣಾರ್ಥವಾಗಿ ಪಟ್ಟಣದ ಹಣದಯ ಭಾಗದಲ್ಲಿರುವ ಪುರಸಭಾ ಉದ್ಯಾನವನದಲ್ಲಿ ಗಿಡವನ್ನು ನೆಟ್ಟು, ಕವಿಯ ಹೆಸರನ್ನು ಸದಾ ಹಸಿರಾಗಿಡುವ ನಿಟ್ಟಿನಲ್ಲಿ ನೆನಪಿನ ಮರವಾಗಿಸುವಂತೆ ಸಲಹೆಗಳು ವ್ಯಕ್ತವಾದವು.
ತಹಸೀಲ್ದಾರ್ ಶಿವಶಂಕರಪ್ಪ ಹಾಗೂ ಕಸಾಪ ಅಧ್ಯಕ್ಷರು ಪ್ರತಿಕ್ರಿಯಿಸಿ ಜಿಎಸ್ಎಸ್ ಅವರ ಅಂತ್ಯಸಂಸ್ಕಾರ ನಡೆಯುವ ದಿನವಾದ ಗುರುವಾರ ಉದ್ಯಾನವನದಲ್ಲಿ ಗಿಡ ನೆಡಲು ನಿರ್ಧರಿಸಲಾಯಿತು.  ತಾಲೂಕು ಪತ್ರಕರ್ತರ ಸಂಘದ ಹಿರಿಯ ಸದಸ್ಯ ಎಚ್.ವಿ.ಸುರೇಶ್ಕುಮಾರ್, ಉಪನ್ಯಾಸಕ ಎನ್.ಆರ್.ಶಿವರಾಂ, ಸಾಹಿತ್ಯಾಸಕ್ತ ಕುಮಾರ್ ಛಲವಾದಿ, ತಾ. ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿದರು.
ಲಯನ್ಸ್ ಕ್ಲಬ್ನ ಎಂ.ಎನ್.ಜೈಪ್ರಕಾಶ್, ರೋಟರಿ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ತಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಎಸ್.ರಾಧಾಕೃಷ್ಣ, ಕೆಜಿವಿಎಸ್ ಘಟಕದ ಅಧ್ಯಕ್ಷ ಉಮೆಶ್ ಪದಾಧಿಕಾರಿಗಳು, ತಾ. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ಡಾ.ಕೆ.ಸಿ.ಮರಿಯಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.