ಆಯುಷ್ ಆಸ್ಪತ್ರೆ ಅಭಿವೃದ್ಧಿಗೆ ಆದ್ಯತೆ
ಕನ್ನಡಪ್ರಭ ವಾರ್ತೆ ಅರಸೀಕೆರೆ ಡಿ. 25
ದೀರ್ಘಕಾಲೀನ ವ್ಯಾಧಿಗಳಿಗೆ ಅಲೋಪತಿಗಿಂತ ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಪಟ್ಟಣದ ಜೆ.ಸಿ.ಆಸ್ಪತ್ರೆ ಆವರಣದಲ್ಲಿ 50 ಲಕ್ಷ ರು. ವೆಚ್ಚದಲ್ಲಿ ತಾಲೂಕು ಆಯುಷ್ ಆಸ್ಪತ್ರೆ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಲೋಪತಿ ವೈದ್ಯಪದ್ದತಿ ಚಿಕಿತ್ಸೆಗೆ ಹೋಲಿಸಿದರೆ ಆಯುರ್ವೇದ ಚಿಕಿತ್ಸೆ ರೋಗಿ ಮೇಲೆ ಅಡ್ಡ ಪರಿಣಾಮ ಬೀರುವುದು ಅತೀ ವಿರಳ. ಆದರೂ ಜನ ಶೀಘ್ರ ಗುಣಮುಖವಾಗಲು ಅಲೋಪತಿ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ ಎಂದರು.
ಗಿಡಮೂಲಿಕೆಗಳಿಂದ ಸಿದ್ದಪಡಿಸಲಾಗುವ ಆಯುರ್ವೇದ ಔಷಧಿ ಮನುಷ್ಯನ ಖಾಯಿಲೆಯನ್ನ ನಿಧಾನವಾಗಿ ಗುಣಪಡಿಸುತ್ತದೆ. ಆದರೆ ರೋಗಿಯಲ್ಲಿ ರೋಗದ ಲಕ್ಷಣಗಳನ್ನು ಬುಡ ಸಮೇತ ಕಿತ್ತು ಹಾಕುತ್ತದೆ. ಹಾಗಾಗಿ ಆಯುಷ್ ಆಸ್ಪತ್ರೆಗಳ ಅಭಿವೃದ್ಧಿಗೆ ಸರಕಾರ ವಿಶೇಷ ಆದ್ಯತೆ ನೀಡುತ್ತಿದ್ದು, ಆಯುಷ ಚಿಕಿತ್ಸೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ಮಧುಮೇಹ, ರಕ್ತದೊತ್ತಡ ಕೀಲುನೋವು ಹಾಗೂ ಇತರೆ ಜೀವನ ಶೈಲಿ ಕಾಯಿಲೆಗಳಿಗೆ ಆಯುರ್ವೇದದ ಪಂಚಕರ್ಮ ಚಿಕಿತ್ಸೆ ರಾಮಬಾಣ ಇದ್ದಂತೆ. ಈ ಪದ್ದತಿಯನ್ನು ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದರಿಂದ ಅವರೆಲ್ಲ ಶತಾಯುಷಿಗಳಾಗಿ ತುಂಬು ಜೀವನ ನಡೆಸಿದರು. ಆದರೆ ನಾವು ಆಧುನಿಕತೆ ಹೆಸರಿನಲ್ಲಿ ಅಲೋಪತಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನಮ್ಮ ಆಯಸ್ಸು ವೃದ್ಧಿಗಿಂತ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.
ವೈದ್ಯ ರವೀಂದ್ರ ಮಾತನಾಡಿ, ತಾಲೂಕಿನ ಜನತೆಯ ಬಹುದಿನಗಳ ಆಶಯದಂತೆ ಪಟ್ಟಣದಲ್ಲಿ ನೂತನವಾಗಿ ಆಯುಷ್ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು, ಇದು ಹತ್ತು ಹಾಸಿಗೆಯುಳ್ಳದ್ದಾಗಿದ್ದು, ಇಲ್ಲಿ ಪಂಚಕರ್ಮ ಪದ್ದತಿ ಸೇರಿದಂತೆ ಎಲ್ಲಾ ರೀತಿಯ ಆಯುರ್ವೇದ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಪುರಸಭೆ ಸದಸ್ಯ ರಂಗನಾಥ್, ಲಯನ್ಸ್ ಅಧ್ಯಕ್ಷ ಎಂ.ವೈ.ಖಾನ್, ತಾಲೂಕು ರೆಡ್‌ಕ್ರಾಸ್ ಅಧ್ಯಕ್ಷ ಎನ್.ಜಿ.ಮಧು ಜೆಸಿ ಆಸ್ಪತ್ರೆಯ ವೈದ್ಯರಾದ ಹೆಬ್ಬಾರ್, ಚಕ್ರಪಾಣಿ, ವಿಜಯಕುಮಾರ್, ಆರೋಗ್ಯ ಸಮಿತಿ ಸದಸ್ಯ ಖ್ವಾಜಾಮೊಹಿಯುದ್ದೀನ್ ಇನ್ನೂ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

