ಚರಣ್ಸಿಂಗ್ ದೇಶ ಕಂಡ ಅಪ್ರತಿಮ ರೈತ ಹೋರಾಟಗಾರ
ಕನ್ನಡಪ್ರಭ ವಾರ್ತೆ ಹಾಸನ ಡಿ. 25
ದೇಶವು ಕಂಡ ರೈತ ಹೋರಾಟಗಾರ, ರೈತರ ಬಗ್ಗೆ ಕಾಳಜಿಯನ್ನು ವಾಸ್ತವಾಂಶವಾಗಿ ತೋರಿಸಿ ಸಾಧಿಸಿ, ಯಶಸ್ವಿಯಾದ ಧೀಮಂತ ನಾಯಕರಲ್ಲಿ ದಿ. ಚೌಧರಿ ಚರಣ್ಸಿಂಗ್ ಪ್ರಮುಖರು. ರೈತರಿಗೆ ಬೆಂಬಲವಾಗಿ ಕೆಲಸ ಮಾಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಜಿಲ್ಲಾ ಪಂಚಾಯ್ತಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ ಅನುಗನಾಳು ಇವರ ಸಂಯುಕ್ತಾಶ್ರಯದಲ್ಲಿ ನಡೆದ ರೈತ ದಿನಾಚರಣೆ ಹಾಗೂ ಸಾವಯವ ಕೃಷಿ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಚರಣ್ ಜನ್ಮ ದಿನವನ್ನು ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುವುದಿಲ್ಲ. ಜೊತೆಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ದೊರಕದೆ ರೈತ ವ್ಯವಸಾಯವನ್ನು ತ್ಯಜಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದಲ್ಲಿ ರೈತರನ್ನು ಕಡೆಗಣಿಸಿದರೆ ಬೆಳೆ ಬೆಳೆಯುವವರೂ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿ ರೈತರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದರಲ್ಲದೆ ರೈತ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕುವಂತೆ ನೋಡಿಕೊಳ್ಳಬೇಕು ಎಂದರು.
ಕೃಷಿ ಚಟುವಟಿಕೆಗಳಲ್ಲಿ ಬೆಳೆಗಳಿಗೆ ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುತ್ತಿದ್ದು ಅಂತಹ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಎಚ್ಚೆತ್ತುಕೊಳ್ಳಬೇಕು. ಕೊಟ್ಟಿಗೆ ಗೊಬ್ಬರ ಹಾಗೂ ಸೊಪ್ಪುಗಳನ್ನು ಬಳಸಿ ಬೇಸಾಯ ಮಾಡುವುದರ ಮೂಲಕ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು. ರೈತ ಬಾಂಧವರಿಗೆ ಪ್ರತಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಶ್ಲಾಘಿಸಿದ ಅವರು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಯಲ್ಲಿ ಶೇ.60ರಷ್ಟು ಹುದ್ದೆಗಳು ಖಾಲಿ ಇವೆ. ಇಲಾಖೆ ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಿಬ್ಬಂದಿ ಅವಶ್ಯಕತೆ ಇದೆ. ರೈತಾಪಿ ಕುಟುಂಬಗಳು ತಿಂಗಳಿಗೆ 15 ಸಾವಿರ ರು. ವರಮಾನ ಪಡೆಯುವಂತಾಗಬೇಕು ಎಂಬುದು ಮಾಜಿ ಪ್ರಧಾನಿ ದೇವೇಗೌಡರ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಾಗುವುದು ಎಂದು ನುಡಿದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಪತಿ ನಿಧನ ಹೊಂದಿದಾಗ ಪತ್ನಿಗೆ ಪರಿಹಾರ ಧನ ನೀಡುವಂತದ್ದು, ಸಕಾಲಕ್ಕೆ ಧನಸಹಾಯ ದೊರಕುತ್ತಿಲ್ಲ ಎಂದು ವಿಷಾದಿಸಿದ ಅವರು, ಗ್ರಾಮದಲ್ಲಿರುವ ಶಾಲೆ, ಅಂಗನವಾಡಿ ಕೇಂದ್ರ, ವಸತಿ ನಿಲಯಗಳಲ್ಲಿ ಶುಚಿತ್ವದೊಂದಿಗೆ ಮಕ್ಕಳಿಗೆ ಉತ್ತಮವಾಗಿ ಆಹಾರ ನೀಡುತ್ತಿದ್ದಾರೆಯೇ ಎಂಬುದರ ಬಗ್ಗೆ ಗ್ರಾಮದ ಮುಖಂಡರು ಗಮನ ಹರಿಸಬೇಕು ಎಂದು ಹೇಳಿದರು.
ಕೃಷಿ ಮಹಾ ವಿದ್ಯಾಲಯದ ಡೀನ್ ಡಾ ಎಲ್.ಮಂಜುನಾಥ್ ಮಾತನಾಡಿ, ಚರಣಸಿಂಗ್ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ 6 ತಿಂಗಳಲ್ಲಿ ನಬಾರ್ಡ್ ಸ್ಥಾಪನೆಗೆ ಕಾರಣೀಭೂತರಾದರು. ಇವರ ಸೇವೆಯನ್ನು ಜಾತಿ ಭೇದ ಮರೆತು ನೆನಪಿಸಿಕೊಳ್ಳಬೇಕು. ದೇಶ ಉಳಿಯಲು ರೈತ ಕಾರಣ. ಒಕ್ಕಲುತನದಲ್ಲಿ ಇಡೀ ಕುಟುಂಬದವರು ಉದ್ಯೋಗ ಮಾಡುತ್ತಿದ್ದರು. ಇಂದಿನ ದಿನಗಳಲ್ಲಿ ಒಕ್ಕಲುತನದಲ್ಲಿ ಇಡೀ ಕುಟುಂಬ ತೊಡಗಿಸಿಕೊಳ್ಳುವುದಿಲ್ಲ ಜೊತೆಗೆ ನಗರಕ್ಕೆ ವಲಸೆ ಹೋಗುವವರು ಹೆಚ್ಚಿದ್ದಾರೆ ಎಂದು ನುಡಿದರು.
ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ, ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಗಾಗಿ ರಾಸಾಯನಿಕ ಗೊಬ್ಬರ ಬಳಸುವ ಮೂಲಕ ಮನುಷ್ಯನಿಗೆ ರೋಗರುಜಿನಗಳಿಗೆ ಅವಕಾಶ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.
ತಾಪಂ ಸದಸ್ಯ ಹನುಮೇಗೌಡ ಮಾತನಾಡಿ, ಗ್ರಾಮದ ಪ್ರತಿ ಕುಟುಂಬವೂ ಸಾವಯವ ಕೃಷಿಯನ್ನು ಸಮಗ್ರ ಬೇಸಾಯ ಪದ್ಧತಿಯಲ್ಲಿ ಅಳವಡಿಸಿಕೊಂಡು ಇತರೆ ಗ್ರಾಮಗಳಿಗೆ ಮಾದರಿಯಾಗುವಂತೆ ತಿಳಿಸಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ ಬಿ.ಎಸ್.ಬಸವರಾಜು ಮಾತನಾಡಿ, ಸಿಂಗ್ ರೈತ ಸಮುದಾಯವು ಹಿಂದೆಂದೂ ಕಂಡರಿಯದಂತಹ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.
ಡಾ.ಚನ್ನಕೇಶವ ಮಾತನಾಡಿ, ಭೂಮಿ ತಾಯಿಯ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಇಂದಿನ ದಿನಗಳಲ್ಲಿ ಅನೇಕ ವಿಷ ವಸ್ತುಗಳು ಭೂಮಿಗೆ ಸೇರುತ್ತಿವೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಮಣ್ಣಿನ ಶಕ್ತಿಯನ್ನು ಕುಂದದಂತೆ ನೋಡಿಕೊಳ್ಳಬೇಕು ಎಂದರು.
ಬಿಸಿಆರ್ಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ನಾಗರಾಜು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೆಟ್ಟಿ ಮಾತನಾಡಿದರು. ವಿಜ್ಞಾನ ಕೇಂದ್ರದ ಡಾ ಕೆ.ಜೆ.ಕಾಂತರಾಜು, ಡಾ. ಎಚ್.ಕೆ.ಪಂಕಜ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

