11 ತಿಂಗಳಲ್ಲಿ 401 ಮಂದಿ ಸಾವು
ಹಾಸನ: ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಜಿಲ್ಲೆಯಲ್ಲಿ ಮಾತ್ರ ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಕಳೆದ 11 ತಿಂಗಳ ಅಂತರದಲ್ಲಿ ಬರೋಬ್ಬರಿ 401 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿದ್ದರೂ ಅಪಘಾತದಿಂದ ಸಾಯುವವರ ಸಂಖ್ಯೆಯೇನೊ ಕುಂಠಿತಗೊಂಡಿಲ್ಲ. ರಸ್ತೆ ಅಪಘಾತ ಮತ್ತು ಅದರಿಂದಾಗುವ ಸಾವು ನೋವು ತಡೆಗೆ ಏನೆಲ್ಲಾ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರೂ, ಸಾವಿನ ಸರಣಿಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ. ಇದಕ್ಕೆ ಸವಾರರಿಂದ ಸಂಚಾರಿ ನಿಯಮಗಳ ಉಲ್ಲಂಘನೆಯೇ ನೇರ ಕಾರಣವೆಂದರೆ ತಪ್ಪಾಗದು.
ಜಿಲ್ಲೆಯಲ್ಲಿ 3 ರಾಷ್ಟ್ರೀಯ ಹೆದ್ದಾರಿ: ಜಿಲ್ಲೆಯಲ್ಲಿ 3 ರಾಷ್ಟ್ರೀಯ ಹೆದ್ದಾರಿ, 28 ರಾಜ್ಯ ಹೆದ್ದಾರಿ ಮತ್ತು 268 ಜಿಲ್ಲಾ ರಸ್ತೆಗಳಿವೆ. ಅಪಘಾತಗಳಿಂದ ಕೇವಲ ಸಾವು ನೋವು ಮಾತ್ರವೇ ಅಲ್ಲ. ದಿಢೀರ್ ಪ್ರತಿಭಟನೆ, ಸರ್ಕಾರಿ ವಾಹನಗಳಿಗೆ ಕಲ್ಲು ತೂರಾಟ ಇಲ್ಲವೆ ಬೆಂಕಿ ಹಚ್ಚುವ ಕೃತ್ಯಗಳಿಂದ ಸಾರ್ವಜನಿಕ ಆಸ್ತಿಪಾಸ್ತಿಯೂ ನಷ್ಟವಾಗುತ್ತಿದೆ. ಇಷ್ಟಾದರೂ ಅಪಘಾತದಿಂದ ಸಾವನ್ನಪ್ಪಿರುವ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಕಳವಳ ಕಾರಿ ಸಂಗತಿ ಎಂದರೆ ದಿನವೊಂದಕ್ಕೆ ಸರಾಸರಿ 5 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ದಿನಕ್ಕೊಬ್ಬರಂತೆ ಮರಣ ಹೊಂದುತ್ತಿದ್ದಾರೆ. ಇತ್ತೀಚೆಗೆ ಪೊಲೀಸರು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.
ಸಮೀಕ್ಷೆಯಿಂದ ಬಹಿರಂಗ: ಅವೈಜ್ಞಾನಿಕ ರಸ್ತೆ ನಿರ್ಮಾಣವೋ ಚಾಲಕರ ಆಜಾಗರೂಕತೆಯೋ ಇಲ್ಲವೇ ಹಳೆಯದಾದ ವಾಹನಗಳ ಓಡಾಟದಿಂದಲೋ ಗೊತ್ತಿಲ್ಲ. ರಸ್ತೆ ದುರಂತ ಮತ್ತು ಅದರಿಂದಾಗುತ್ತಿರುವ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯೊಂದರಲ್ಲೇ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಘಾತಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಏರಿಕೆಯಾಗಿದೆ ಅನ್ನೋ ಆತಂಕಕಾರಿ ಅಂಶ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಪೊಲೀಸರ ಸಮೀಕ್ಷೆ ಪ್ರಕಾರ ವರ್ಷದಲ್ಲಿ ಸಾವಿರಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 2011ರಲ್ಲಿ 418 ಮಂದಿ ಮೃತಪಟ್ಟಿದ್ದರೆ, 2012 ರಲ್ಲಿ 399 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
2013 ರಲ್ಲಿ ನವೆಂಬರ್ ಅಂತ್ಯದ ವೇಳೆ ಅಪಘಾತದಿಂದ ಸತ್ತವರ ಸಂಖ್ಯೆ 400 ದಾಟಿದ್ದು, ಡಿಸೆಂಬರ್ ವೇಳೆ 2011 ರ ಅಂಕಿ-ಸಂಖ್ಯೆಯನ್ನು ದಾಟುವ ಸಾಧ್ಯತೆ ಇದೆ. 1 ದಿನಕ್ಕೆ ಸರಾಸರಿ 5 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಒಂದಕ್ಕಿಂತ ಮೇಲ್ಪಟ್ಟು ಸಾವು ಸಂಭವಿಸುತ್ತಿವೆ.
50ಕ್ಕೂ ಹೆಚ್ಚು ಮಂದಿ ಬಲಿ: ರಸ್ತೆ ಅಪಘಾತ ತಡೆಯಲು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪೊಲೀಸರು ಹಲವು ರೀತಿಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರೂ, ದುರಂತವಂತೂ ಕಡಿಮೆಯಾಗಿಲ್ಲ. ಈ ಮಧ್ಯೆ ಇತ್ತೀಚೆಗೆ ಚತುಷ್ಪಥವಾಗಿರುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಂಡು ಬಂದಿರುವ ಕೆಲವು ಲೋಪದೋಷಗಳೂ ಜಿಲ್ಲೆಯಲ್ಲಿ ಅಪಘಾತದಿಂದ ಸಾವಿನ ಸಂಖ್ಯೆ ಏರಲು ಕಾರಣವಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಜಿಲ್ಲೆಯ ಹಿರೀಸಾವೆ ಗಡಿಯಿಂದ ಹಾಸನದ ವರೆಗೆ ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದು ನಿಜಕ್ಕೂ ಆತಂಕ ಹೆಚ್ಚಿಸಿದೆ.
ಹಿರೀಸಾವೆಯಿಂದ ಹಾಸನವರೆಗಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಒಂದೇ ಒಂದು ಅಂಡರ್ಪಾಸ್ ನಿರ್ಮಾಣ ಮಾಡದೇ ಇರುವುದು. ಹಳ್ಳಿಗಳ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ಇಲ್ಲದೇ ಇರುವುದು. ಜನಜಂಗುಳಿ ಇರುವ ಕಡೆ ಸೂಚನಾ ಫಲಕ ಹಾಕದೇ ಇರುವುದರಿಂದ ಹಿಟ್ ಅಂಡ್ ರನ್ ಇತ್ಯಾದಿಯಾಗಿ ಅಪಘಾತ ಹೆಚ್ಚುತ್ತಿವೆ. ಇಂಥ ನ್ಯೂನ್ಯತೆ ಸರಿಪಡಿಸುವಂತೆ ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಮೂಹಿಕ ಜಾಗೃತಿ ಮೂಲಕ ಕಡಿಮೆ ಮಾಡಲು ಮುಂದಾಗಬೇಕಿದೆ.
ವಾಹನ ಸವಾರರಿಂದ ಸಂಚಾರಿ ನಿಯಮ ಉಲ್ಲಂಘನೆ ಹಾಗೂ ವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಲು ಕಾರಣ. ಸಂಚಾರಿ ನಿಯಮ ಸರಿಯಾಗಿ ಪಾಲಿಸಿದಲ್ಲಿ ಅಪಘಾತಗಳ ಸಂಖ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ಸಾರ್ವಜನಿಕರು ಸಂಚಾರಿ ನಿಯಮ ಪಾಲಿಸುವ ಮೂಲಕ ತಮ್ಮ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು.
- ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪಿ.ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

