ಹಾಸನ

ಕನಕದಾಸರ ನುಡಿ ಎಲ್ಲಾ ತಲೆಮಾರಿಗೂ ಅಕ್ಷಯ ನಿಧಿ

Published On :

ಕ.ಪ್ರ.ವಾರ್ತೆ   ಹೊಳೆನರಸೀಪುರ   ಡಿ.26
ಶ್ರೇಷ್ಠ ದಾಸವರೇಣ್ಯರಾದ ಕನಕದಾಸರ ವಿವೇಕದ ನುಡಿಗಳು ಎಲ್ಲ ತಲೆಮಾರಿಗೂ ಅಕ್ಷಯ ನಿಧಿಯಂತಿದ್ದು, ಅವರ ವಿವೇಕದ ಬೆಳಕಿನಲ್ಲಿ ಎಂತಹ ಗಾಢಾಂಧಕಾರವನ್ನೂ ಜಯಿಸಬಹುದಾಗಿದೆ ಎಂದು ಮೈಸೂರು ವಿವಿ ಪ್ರಸಾರಾಂಗ ವಿಭಾಗ ನಿರ್ದೇಶಕ ಹಿರಿಯ ಸಾಹಿತಿ ಡಾ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಕೋಡಿಹಳ್ಳಿಯಲ್ಲಿ ಇಂಟರ್ ನ್ಯಾಷನಲ್ ಕನಕದಾಸ ಮಿಷನ್ ಸಂಸ್ಥೆಯಿಂದ ಸದ್ಗುರು ಸದಾನಂದ ಶುಭಾಂಗಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ಕನಕೋತ್ಸವ, ಕನ್ನಡೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರ ಅಂತರಂಗವು ತಿಳಿಜಲದಂತೆ ಸ್ಫಟಿಕ ಶುಭ್ರವಾಗಿರುವುದರಿಂದ ಅಲ್ಲಿ ಲೋಕದ ಸಂಕಟ, ಸಂಭ್ರಮ, ಪರಿತಾಪ, ಒಲುಮೆ, ಬಂಧನ, ಬಿಡುಗಡೆ ಎಲ್ಲವೂ ಪ್ರತಿಫಲಿತವಾಗಿದೆ ಎಂದರು.
ಆಧ್ಯಾತ್ಮಿಕ ಹಸಿವು ಬಳಲಿಕೆಗಳಿಗೆ ಅನವರತವೂ ಅಮೃತ ನೀಡುವ ಕನಕದಾಸರ ಚಿಂತನೆಗಳು ಕನ್ನಡಿಗರ ಪಾಲಿಗೆ ಅಕ್ಷಯ ನಿಧಿಯಾಗಿ ಪರಿಣಮಿಸಿವೆ ಎಂದ ಅವರು, ವರ್ತಮಾನವು ನಮ್ಮನ್ನು ಇನ್ನಿಲ್ಲದಂತೆ ಕಟ್ಟಿ ಹಾಕಿರುವಾಗ ಅದರ ಇಕ್ಕಟ್ಟಿನಿಂದ ಬಿಡಿಸಿಕೊಂಡು ವಿಶಾಲವಾಗಿ ಆಲೋಚಿಸುವ ಮಾರ್ಗವನ್ನು ತಿಳಿಯಲು ಕನಕದಾಸರ ವಾಣಿಗಳು ನಿಜಕ್ಕೂ ದಾರಿದೀಪವಾಗಿದೆ ಎಂದು ತಿಳಿಸಿದರು.
ವೈಕುಂಠ ಬೇರೆಲ್ಲಿಯೋ ಇಲ್ಲ, ಭೂಮಿಯ ಮೇಲೆ ಸಮಾಜದ ನಡುವೆ ಇದ್ದುಕೊಂಡೇ ಸಾಧಸಬೇಕಾದ ಆತ್ಮಸಾಕ್ಷಾತ್ಕಾರವೇ ಕಾಯಕ ಜೀವನ ಎಂಬ ಸಮಾನತೆಯ ಸಾರವನ್ನು ನಾಡಿಗೆ ಸಾರಿದ ಕನಕದಾಸರು, ಭಕ್ತಿ ಶರಣಾಗತಿಗಳನ್ನು ತಮ್ಮ ಜೀವನದಲ್ಲಿ ಸಮರಸದಲ್ಲಿ ಹೊಂದಿಸಿಕೊಂಡಂತೆ ಕರ್ಮಜ್ಞಾನಾಧಿ ಯೋಗಗಳ ಸಮನ್ವಯವನ್ನು ಸಾಧಿಸಿದ ವೈರಾಗ್ಯವೇ ಅವರ ಬದುಕಿನ ದೀಪಿಕೆಯಾಗುತ್ತದೆ ಎಂದು ವರ್ಣಿಸಿದರು.
ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ಮಹದೇವು  ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ಕಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಕಲಗೂಡು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಭೈರೇಗೌಡ ಮಾತನಾಡಿದರು.
ಇಂಟರ್ ನ್ಯಾಷನಲ್ ಕನಕದಾಸ ಮಿಷನ್ ಅಧ್ಯಕ್ಷ ಕೋಡಿಹಳ್ಳಿ ನಂಜುಂಡೇಗೌಡ ಸ್ವಾಗತಿಸಿದರು.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಶ್ರೀಕ್ಷೇತ್ರ ಮೈಲಾರದ ವೆಂಕಯ್ಯ ಒಡೆಯರ್ ಸ್ವಾಮೀಜಿ  ಹಾಗೂ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ  ಸಾನ್ನಿದ್ಯ ವಹಿಸಿದ್ದರು.
ರಾಷ್ಟ್ರೀಯ ತೆಂಗು ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕಬ್ಬಳಿ ರಂಗೇಗೌಡ, ಹಳ್ಳಿಮೈಸೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪುಟ್ಟೇಗೌಡ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಬಿ.ವೆಂಕಟಸ್ವಾಮಿ, ಮೈಸೂರಿನ ಹಿರಿಯ ರಂಗ ತಜ್ಞ ಕೆ.ಜೆ.ನಾರಾಯಣ್ ಇತರರು ಇದ್ದರು.
ಪೂರ್ಣಶ್ರೀ ಕಲಾ ವೃಂದದವರು ನಾಡಗೀತೆ ಹಾಡಿದರು. ವೈಷ್ಣವಿ ವೈಭವಿ ಪ್ರಾರ್ಥಿಸಿದರು. ಅಧ್ಯಕ್ಷ  ಕೋಡಿಹಳ್ಳಿ ನಂಜುಂಡೇಗೌಡ ಅಧ್ಯಕ್ಷತೆ ವಹಿಸಿದ್ದರು. ಸವಿತಾ ರಮೇಶ್ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.