'ಶಿವರಾಂ ವಿರುದ್ಧ ಮಾತನಾಡಲು ರಾಜಪ್ಪಗೆ ನೈತಿಕ ಹಕ್ಕಿಲ್ಲ'
ಚನ್ನರಾಯಪಟ್ಟಣ: ಕಾಂಗ್ರೆಸ್ ಸಂಘಟನೆಯಲ್ಲಿ ಪಾಲ್ಗೊಳ್ಳದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕೆಪಿಸಿಸಿ ಸದಸ್ಯ ಸಿ.ವಿ. ರಾಜಪ್ಪ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರನ್ನು ಒತ್ತಾಯಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರಲ್ಲಿ ಲಾಬಿ ನಡೆಸಿ ಕೆಪಿಸಿಸಿ ಸದಸ್ಯರಾದ ಸಿ.ವಿ ರಾಜಪ್ಪ ತಾಲೂಕು ಅಥವಾ ಜಿಲ್ಲೆಯಲ್ಲಿ ಯಾವ ಸಂದರ್ಭದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ ಎಂದು ಸವಾಲು ಹಾಕಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಮಾತನಾಡಲು ಇವರಿಗೆ ನೈತಿಕ ಹಕ್ಕಿಲ್ಲ. ಜಿಲ್ಲೆ ಉಸ್ತುವಾರಿ ಸಚಿವರಂತೆ ವರ್ತಿಸುತ್ತಿರುವ ಎಚ್.ಡಿ ರೇವಣ್ಣ ಅವರನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ಶಿವರಾಂ ಮುಂದಾಗಿದ್ದು, ಎಚ್.ಡಿ ರೇವಣ್ಣ ಅವರಿಂದ ಸಹಾಯ ಪಡೆದಿರುವ ಬಗ್ಗೆ ತಮಗೆ ಅನುಮಾನವಿದೆ ಎಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಗೆ ಜಿಲ್ಲಾ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸುವ ಸಂದರ್ಭದಲ್ಲಿ ಸಿ.ವಿ ರಾಜಪ್ಪ ಜಿಲ್ಲಾಧ್ಯಕ್ಷರ ವಿರುದ್ಧ ಹೇಳಿಕೆ ನೀಡಿರುವುದರಿಂದ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಕೆಪಿಸಿಸಿಗೆ ಒತ್ತಾಯಿಸುವುದಲ್ಲದೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಕುರ್ಚಿಯ ಆಸೆ ಹೆಚ್ಚಾಗಿದೆ: ಶಾಸಕ ಸಿ.ಎನ್.ಬಾಲಕೃಷ್ಣ ಅವರು 8ಕ್ಕೂ ಹೆಚ್ಚು ಹುದ್ದೆಗಳನ್ನು ಹೊಂದಿಸಿಕೊಂಡು ಅವರು ಚುನಾವಣೆಗೆ ಮಾತ್ರ ಸೀಮಿತವಾಗಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ಧಿಗಿಂತ ಕುರ್ಚಿಯ ಆಸೆ ಹೆಚ್ಚಾಗಿದ್ದು, ತಾಲೂಕಿನಲ್ಲಿ ಜನತೆ ಮೂಲಭೂತ ಸೌಕರ್ಯಗಳಿಲ್ಲದೆ ಪರಿತಪಿಸುತ್ತಿರುವ ಸಂದರ್ಭದಲ್ಲಿಯೂ ಅವರು ಬ್ಯಾಂಕ್ನ ಕಾರನ್ನು ದುರುಪಯೋಗ ಪಡಿಸಿಕೊಂಡು ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.
ಉತ್ತಮ ಸಂಘಟನೆಗೆ ಕಾರಣ: ತಾಪಂ ಸದಸ್ಯ ಪೂಮಡಿಹಳ್ಳಿ ಮಂಜುನಾಥ್ ಮಾತನಾಡಿ ಸಿ.ವಿ. ರಾಜಪ್ಪ ಅವರಿಗೆ ಬೆಂಗಳೂರು ಚನ್ನರಾಯಪಟ್ಟಣ ಮಾತ್ರ ತಿಳಿದಿದೆ. ತಾಲೂಕಿನಲ್ಲಿ ಎಷ್ಟು ಮಂದಿ ತಾಲೂಕು ಪಂಚಾಯಿತಿ ಸದಸ್ಯರಿದ್ದಾರೆ ಎಂಬುದೇ ತಿಳಿಯದ ಅವರಿಗೆ ತಮ್ಮ ತಾಲೂಕಿನಲ್ಲಿ ಯಾವ ಕಾರ್ಯಕರ್ತರೂ ಬೆಲೆ ಕೊಡುವುದಿಲ್ಲ. ಅವರು ಪಕ್ಷ ತ್ಯಜಿಸಿದರೆ ಅವರ ಸ್ಥಾನಕ್ಕೆ ಮತ್ತೊಬ್ಬರು ಬಂದರೆ ಉತ್ತಮ ಸಂಘಟನೆಗೆ ಕಾರಣರಾಗಬಹುದು ಎಂದರು.
ಹೊಳೆನರಸೀಪುರ ಶಾಸಕ ಎಚ್.ಡಿ ರೇವಣ್ಣ ಬಿಜೆಪಿ ಸರ್ಕಾರದಲ್ಲಿ ತಾವೇ ಉಸ್ತುವಾರಿ ಮಂತ್ರಿಯಂತೆ ವರ್ತಿಸಿ ಜಿಲ್ಲೆಯನ್ನು ತಮ್ಮ ನಿಯಂತ್ರಣದಲ್ಲಿಟ್ಟು ಕೊಂಡಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಹಿಂದಿನಂತ ನಡೆದುಕೊಳ್ಳಲು ಇಂದು ಬಿಡುವುದಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಜಯರಾಮು, ರಂಗೇಗೌಡ, ಶಿವರಾಂ, ಮಹೇಶ್, ನಂಜೇಗೌಡ, ಮೋಹನ್ಕುಮಾರ್, ಶಿವಯ್ಯ ವೆಂಕಟೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

