ನಿಲ್ಲದ ರೈಲು... ಬಾರದ ಪ್ರಯಾಣಿಕರು...
ಆಲೂರು: ಪಟ್ಟಣದಿಂದ ಕೇವಲ ಫರ್ಲಾಂಗ್‌ದೂರದಲ್ಲಿರುವ ಹಂತನಮನೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರೇಲ್ವೆ ನಿಲ್ದಾಣ ಆಲೂರಿನ ಜನತೆಗೆ ಇದ್ದೂ ಇಲ್ಲದಂತಾಗಿದೆ.
ಆಲೂರಿನ ಮೂಲಕ ಯಶವಂತಪುರ- ಮಂಗಳೂರು, ಕಾರವಾರಕ್ಕೆ ಪ್ರತಿದಿನ ರಾತ್ರಿ ರೈಲು ಸಂಚಾರವಿದ್ದರೆ, ಸೋಮವಾರದಿಂದ ಶನಿವಾರದವರೆಗೆ ಒಂದು ಯಶವಂತಪುರದಿಂದ ಮಂಗಳೂರಿಗೆ ಸಂಚರಿಸಿದರೆ, ಮತ್ತೊಂದು ದಿನ ಮಂಗಳೂರಿನಿಂದ ಬೆಂಗಳೂರಿಗೆ ರೈಲು ಸಂಚರಿಸುತ್ತದೆ. ಇದರೊಂದಿಗೆ ದಿನಕ್ಕೆ ಐದಾರು ಗೂಡ್ಸ್ ರೈಲು ಸಂಚಾರವಿದೆ. ಇಷ್ಟು ರೈಲುಗಳ ಸಂಚಾರವಿದ್ದರೂ ಆಲೂರಿನ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಇಲ್ಲಿ ಯಾವುದೇ ಪ್ಯಾಸೆಂಜರ್ ರೈಲಿನ ನಿಲುಗಡೆ ಇಲ್ಲವೇ ಇಲ್ಲ.
ರೈಲಿನ ನಿಲುಗಡೆಯೇ ಇಲ್ಲ: 23 ಡಿಸೆಂಬರ್ 2009 ರಲ್ಲಿ ಉದ್ಘಾಟನೆಗೊಂಡ ಈ ರೈಲ್ವೆ ನಿಲ್ದಾಣ ಯಾರ ಪ್ರಯೋಜನಕ್ಕಾಗಿ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಈ ರೈಲ್ವೆ ನಿಲ್ದಾಣ ಹೆಸರಿಗಷ್ಟೆ ನಿಲ್ದಾಣವಾಗಿ ಪರಿಣಮಿಸಿದೆ. ಇಲ್ಲಿ ಯಾವುದೇ ರೈಲಿನ ನಿಲುಗಡೆ ಈವರೆಗೂ ಆಗದಿರುವುದೆ ಪ್ರಯಾಣಿಕರ ನಿರಾಸೆಗೆ ಕಾರಣ.
1966 ರಲ್ಲಿ ಈ ಗ್ರಾಮದಲ್ಲಿ ಹಿಂದಿದ್ದ ರೈಲ್ವೇ ನಿಲ್ದಾಣ ಸ್ಥಳದಲ್ಲಿ ನೂತನ ನಿಲ್ದಾಣ ನಿರ್ಮಾಣವಾಗಿ ಆ ಸಂದರ್ಭದಲ್ಲಿ ಇಲ್ಲಿನ 60 ಎಕರೆ ಭೂಮಿಯನ್ನು ರೈಲ್ವೇ ಇಲಾಖೆ ವಶಪಡಿಸಿಕೊಂಡಿತ್ತು. ಆ ಸಮಯದಲ್ಲಿ ಮೀಟರ್‌ಗೇಜ್‌ನ ಒಂದು ಜತೆ ಹಳಿಯನ್ನು ಹಾಗೂ ಚಿಕ್ಕದಾದ ನಿಲ್ದಾಣ ನಿರ್ಮಿಸಿ ನಂತರ ಇಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಿ ಬೆಂಗಳೂರು - ಮಂಗಳೂರು ಪ್ಯಾಸೆಂಜರ್ ರೈಲು ನಿಲುಗಡೆ ಮಾಡಲಾಗುತ್ತಿತ್ತು.
ತಾಲೂಕಿನ ಜನತೆ ಇಲ್ಲಿಂದ ಮಂಗಳೂರು, ಸಕಲೇಶಪುರ, ಹಾಸನ, ಬೆಂಗಳೂರು, ಮೈಸೂರುಗಳಿಗೆ ಪ್ರಯಾಣಿಸುತ್ತಿದ್ದರು. ಅಲ್ಲದೇ ಅರಸೀಕೆರೆ ಜಂಕ್ಷನ್‌ನಿಂದ ದೇಶದ ನಾನಾ ಭಾಗಗಳಿಗೆ ಪ್ರಯಾಣಿಸುತ್ತಿದ್ದರು. ದಸರಾ ರಜೆ ಸಂದರ್ಭದಲ್ಲಿ ರಾಜ್ಯದಲ್ಲಿ ನಾನಾ ಭಾಗಗಳಿಂದ ಪ್ರಕೃತಿ ಪ್ರಿಯರು ಆಲೂರು ಗ್ರಾಮದಲ್ಲಿರುವ ನೆಂಟರಿಷ್ಟರ ಮನೆಗಳಿಗೆ ಬಂದು ಇಲ್ಲಿಂದ ರೈಲಿನಲ್ಲಿ ಸುಬ್ರಹ್ಮಣ್ಯಕ್ಕೆ ಹಾಗೂ ಪಶ್ಚಿಮ ಘಟ್ಟದ ರುದ್ರರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಂಡು ಸುಬ್ರಹ್ಮಣ್ಯ, ಧರ್ಮಸ್ಥಳಗಳಲ್ಲಿರುವ ದೇವಸ್ಥಾನಗಳ ದರ್ಶನ ಪಡೆದು ಪುನ: ರೈಲಿನಲ್ಲಿ ವಾಪಸಾಗುತ್ತಿದ್ದರು.
3 ಕಿ.ಮೀ. ಡಬಲ್ ಕ್ರಾಸಿಂಗ್ ಹಳಿ: ಆದರೆ ಈ ಮಾರ್ಗವನ್ನು ಮೀಟರ್‌ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಏರಿಸುವ ಕಾಮಗಾರಿಗಾಗಿ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡ ನಂತರ ಈ ಸ್ಥಳದಲ್ಲಿದ್ದ ಹಳೇ ನಿಲ್ದಾಣದ ಸ್ಥಳದಲ್ಲಿ ನೂತನವಾಗಿ ಸುಸಜ್ಜಿತ ರೈಲು ನಿಲ್ದಾಣ ನಿರ್ಮಿಸಿ ಒಂದು ಕಿ.ಮೀ. ಪ್ಲ್ಲಾಟ್‌ಫಾರಂ ಹಾಗೂ 3 ಕಿ.ಮೀ. ಡಬಲ್ ಕ್ರಾಸಿಂಗ್ ಹಳಿಗಳನ್ನು ನಿರ್ಮಿಸಲಾಯಿತು. ಹಾಗೂ 3 ಕಿ.ಮೀ ವರೆಗೂ ನಿಲ್ದಾಣದ ಒಂದು ಬದಿಯಲ್ಲಿ ತಂತಿ ಬೇಲಿಯನ್ನು ಹಾಕಲಾಯಿತು.
ಇದರಿಂದಾಗಿ ನಿಲ್ದಾಣ ಹಾಗೂ ರೈಲ್ವೇ ಕ್ರಾಸಿಂಗ್‌ಗಾಗಿ 60 ಎಕರೆ ಜಾಗ ನೀಡಿದ ಹಂತನಮನೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ನಿಲ್ದಾಣವಾದರೆ ಗ್ರಾಮ ಅಭಿವೃದ್ಧಿ ಕಾಣುತ್ತದೆ ಎಂಬ ಕನಸು ಕಂಡಿದ್ದ ಗ್ರಾಮಸ್ಥರು ನಿಲ್ದಾಣದಿಂದಾಗಿ ತಮ್ಮ ಜೀವನ ದುಸ್ಥರವಾಗುತ್ತಿರುವುದಕ್ಕೆ ರೈಲ್ವೆ ಇಲಾಖೆಯವರನ್ನು ಶಪಿಸುವಂತಾಗಿದೆ.
ಏಕೆಂದರೆ ಗ್ರಾಮವಿರುವುದು ನಿಲ್ದಾಣದ ಒಂದು ಬದಿಯಲ್ಲಾದರೆ, ಗ್ರಾಮಸ್ಥರ ಹೊಲ ಗದ್ದೆಗಳಿರುವುದು ಇನ್ನೊಂದು ಬದಿಯಲ್ಲಿ. ಕೇವಲ ಒಂದು ಹಳಿಯನ್ನು ದಾಟಿದರೆ ಸಿಗುವ ಜಮೀನಿಗೆ 3 ಕಿ.ಮೀ ಬಳಸಿ ಬರುವಂತಾಗಿದ್ದು, ಕೃಷಿ ಉಪಕರಣ ಹಾಗೂ ಜಾನುವಾರುಗಳನ್ನು ಸಾಗಿಸಲು ಹಾಗೂ ತಾವು ಬೆಳೆದ ಬೆಳೆಯನ್ನು ಮನೆಗೆ ತರಲು ಪರದಾಡುವಂತಾಗಿದೆ. ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದಾಗ ಅಂಡರ್‌ಪಾಸ್ ರಸ್ತೆ ಮಾಡಿಕೊಡುವ ಭರವಸೆ ನೀಡಿದ್ದರು. ಇನ್ನೂ ಕೂಡ ಭರವಸೆ ಭರವಸೆಯಾಗಿಯೇ ಉಳಿದಿದೆ.
ಕಳೆದ ವರ್ಷ ಮಾರ್ಗ ಪರಿಶೀಲನೆಗಾಗಿ ಬಂದಿದ್ದ ಜಿ.ಎಂ. ಆರ್.ಎನ್. ಚರ್ತುವೇದಿ ಹಾಗೂ ಇಂದಿನ ರೈಲ್ವೆ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಅಷ್ಟೇ ಅಲ್ಲದೆ ತಾಲೂಕು ಕಾಂಗ್ರೆಸ್ ಮುಖಂಡರು, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ರಂಗನಾಥ್, ಹೆಮ್ಮಿಗೆ ಮೋಹನ್, ಎಚ್.ವಿ. ಶಿವರಾಮೇಗೌಡ ನೇತೃತ್ವದಲ್ಲಿ ಚಿಕ್ಕಮಗಳೂರು ರೈಲ್ವೆ ನಿಲ್ದಾಣ ಉದ್ಘಾಟನೆಗೆ ಬಂದಿದ್ದ, ಕೇಂದ್ರ ರೇಲ್ವೇ ಸಚಿವ ಮಲ್ಲಕಾರ್ಜುನ ಖರ್ಗೆ ಅವರಿಗೆ ರೈಲ್ವೆ ನಿಲುಗಡೆ ಹಾಗೂ ಅಂಡರ್‌ಪಾಸಿಂಗ್ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಇನ್ನಾದರೂ ಆಲೂರು ಜನತೆಗೆ ತಮ್ಮ ನಿಲ್ದಾಣದಿಂದಲೇ ರೈಲಿನಲ್ಲಿ ಪ್ರಯಾಣಿಸುವ ಭಾಗ್ಯ ದೊರೆಯಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಎಚ್.ವಿ.ರಾಘವೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

