ನುಗ್ಗೇಹಳ್ಳಿ ಗ್ರಾಮಸ್ಥರ ರಸ್ತೆ ತಡೆ, ಧರಣಿ
ಚನ್ನರಾಯಪಟ್ಟಣ: ಕಳೆದ 60 ವರ್ಷಗಳಿಂದ ಗ್ರಾಮ ಪಂಚಾಯಿತಿ ವಶದಲ್ಲಿರುವ ಆಸ್ತಿಯನ್ನು ಮಂಜೂರು ಮಾಡಿಸಿ ಕೊಂಡಿರುವದನ್ನು ಖಂಡಿಸಿ ನುಗ್ಗೇಹಳ್ಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಧರಣಿ ನಡೆಸಿದರು.
ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯ ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯಿತಿ ವಶದಲ್ಲಿರುವ ಆಸ್ತಿಯನ್ನು ಮಂಜೂರು ಮಾಡಿದ್ದು, ಅದನ್ನು ರದ್ದುಪಡಿಸಿ ಗ್ರಾಮ ಪಂಚಾಯಿತಿಗೆ ಆಸ್ತಿಯನ್ನು ಖಾತೆ ಮಾಡಬೇಕಾಗಿ ಆಗ್ರಹಿಸಿದರು.
ನುಗ್ಗೇಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 247ರಲ್ಲಿ 1.17 ಎಕರೆ ಪ್ರದೇಶದಲ್ಲಿ 1.03 ಎಕರೆ ಪ್ರದೇಶವನ್ನು ಪರಿಶಿಷ್ಟ ಜನಾಂಗಕ್ಕೆ ಮೀಸಲಿಟ್ಟು 6 ಮಂದಿಗೆ 25 ವರ್ಷಗಳ ಹಿಂದೆ ಸರ್ಕಾರ ಮಂಜೂರು ಮಾಡಿದೆ. ಉಳಿದ ಖರಾಬು ಜಮೀನಿನಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಕೊಳವೆ ಬಾವಿ ಹಾಗೂ ಪಂಪ್ಹೌಸ್ ಇದ್ದು, ಇದರ ಪಕ್ಕದಲ್ಲಿಯೇ ಹಳೆ ಸಬ್ ರಿಜಿಸ್ಟಾರ್ ಕಚೇರಿಗೆ ಸಂಬಂಧಿಸಿದ ನಿವೇಶನವಿದೆ. ಇವೆಲ್ಲವನ್ನೂ ಸೇರಿಸಿಕೊಂಡು ಕಳೆದ ಜೂನ್ ತಿಂಗಳಲ್ಲಿ 6 ಮಂದಿಗೆ ಮಂಜೂರು ಮಾಡಿ ಪಹಣಿ ಹಾಗೂ ಮ್ಯುಟೇಷನ್ಗೆ ನಮೂದಿಸಿರುವುದು ತಪ್ಪು ಎಂದು ಆರೋಪಿಸಿದರು.
13ಗುಂಟೆ ಜಮೀನನ್ನು ಕಂದಾಯ ಇಲಾಖೆಯವರು ಯಾರದೋ ಒತ್ತಡಕ್ಕೆ ಮಣಿದು ಮೃತರ ಹೆಸರಿನಲ್ಲಿ ಮಂಜೂರು ಮಾಡಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಕಳೆದ 60 ವರ್ಷಗಳಿಂದ ಗ್ರಾಮ ಪಂಚಾಯಿತಿ ವಶದಲ್ಲಿರುವ ಜಮೀನು ಖರಾಬು ಆಗಿದ್ದರೂ ಜಮೀನಿನಲ್ಲಿ 6 ಮಂದಿ ಸಾಗುವಳಿ ಮಾಡದಿದ್ದರೂ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಂಜೂರು ಮಾಡುವಲ್ಲಿ ಅಧಿಕಾರಿಗಳು ಕೆಲವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ವಿವಾದಾತ್ಮಕ ಜಮೀನಿನಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಬೋರ್ವೆಲ್ ಇದ್ದು, ಇಲ್ಲಿಂದಲೇ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಾಗಬೇಕಿದೆ. ಜಮೀನಿಗೆ ಹೋಗಲು ಮಂಜೂರು ಮಾಡಿಸಿಕೊಂಡಿರುವವರಲ್ಲಿ ಪ್ರಮುಖರಾದ ಜಿಪಂ ಮಾಜಿ ಅಧ್ಯಕ್ಷೆ ಮಹದೇವಮ್ಮ ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ತಾಪಂ ಮಾಜಿ ಉಪಾಧ್ಯಕ್ಷ ಕಿರಣ್, ಗ್ರಾ ಪಂ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಪಂ ಸದಸ್ಯರಾದ ಮಂಜೇಗೌಡ(ಗೌಡಕಿ) ಮಹೇಶ್, ಜಾವಿದ್, ನಾಗೇಶ್, ಗೋಪಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

