ರಾಸಾಯನಿಕ ಕೃಷಿ ಪದ್ಧತಿಯಿಂದ ಹೊಸ ಕಾಯಿಲೆ
ಕ.ಪ್ರ.ವಾರ್ತೆ ಅರಸೀಕೆರೆ ಡಿ. 27
ರಾಸಾಯನಿಕ ಕೃಷಿ ಪದ್ದತಿಯಲ್ಲಿ ಬೆಳೆಯುತ್ತಿರುವ ಆಹಾರ ಪದಾರ್ಥಗಳ ಸೇವನೆಯಿಂದ ಜನರಿಗೆ ಅನೇಕ ರೀತಿಯ ಹೊಸ, ಹೊಸ ಕಾಯಿಲೆಗಳು ಬರುತ್ತಿರುವ ಕಾರಣ ಸರ್ಕಾರ ಈಗ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ರೈತರಿಗೆ ಸಲಹೆ ನೀಡುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬ್ಯಾಂಕರ್ಸ್ರಿಕ್ರಿಯೇಷನ್ ಅಸೋಸಿಯೇಷನ್ ಹಾಗೂ ಭಾರತೀಯ ವೈದ್ಯಕೀಯ ಸಂಘದ ಆಶ್ರಯದಲ್ಲಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಹೃದಯ ರೋಗ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ನಿತ್ಯ ಮನುಷ್ಯ ತೀವ್ರವಾದ ಒತ್ತಡಕ್ಕೆ ಸಿಲುಕಿ ಕೆಲಸ ಕಾರ್ಯ ಮಾಡುವುದು. ಅಲ್ಲದೆ ರಾಸಾಯನಿಕ ಕಲಬೆರಕೆ ಆಹಾರ ಪದಾರ್ಥಗಳ ಸೇವನೆಯನ್ನು ಅತಿ ಹೆಚ್ಚು ಮಾಡುತ್ತಿರುವ ಪರಿಣಾಮ ವಂಶಪಾರಂಪರ್ಯ ಕಾಯಿಲೆಗಳು ಎಂದು ಹೇಳಲಾಗುತ್ತಿದ್ದ ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಮತ್ತು ಹೃದಯಾಘಾತಕ್ಕೆ ಸಂಬಂಧಿಸಿದ ಕಾಯಿಲೆಗಳಿಂದು ಸರ್ವೇ ಸಾಮಾನ್ಯವಾಗಿದ್ದು, ಅವುಗಳು ಎಲ್ಲಾ ವರ್ಗದ ಜನರಲ್ಲಿ ಇಂದು ಕಂಡು ಬರುತ್ತಿದೆ ಎಂದು ಅಂತಕ ವ್ಯಕ್ತಪಡಿಸಿದರು.
ಹಿಂದಿನ ಕಾಲದಲ್ಲಿ ನೆಲಪಟ್ಟು ಎಂದು ಕರೆಯಲಾಗುತ್ತಿದ್ದ ಕಾಯಿಲೆ ಇಂದು ನಾವು ಹೃದಯಾಘಾತ ಎಂದು ಹೆಸರಿಸುತ್ತಿದ್ದು, ಶೇ.20 ಭಾಗದ ಜನರು ಈ ಭೀಕರ ಕಾಯಿಲೆಯಿಂದ ನರಳುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಶೇ.50ಕ್ಕೆ ಹೆಚ್ಚುವ ಸಾಧ್ಯತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥ ಬೆಳೆಯಲು ರಸಾಯನಿಕ ಕೃಷಿ ಪದ್ದತಿ ನಾವುಗಳು ಅನುಸರಿಸಿದ ಪರಿಣಾಮ ಇಂದು ವಿಷಪೂರಿತ ಕಲಬೆರಕೆ ಆಹಾರವನ್ನು ಸೇವಿಸುವ ದುಸ್ಥಿತಿಯಲ್ಲಿದ್ದೇವೆ. ಇತ್ತೀಚಿನ ಅನೇಕ ಸಂಶೋಧನೆಗಳ ಫಲವಾಗಿ ಈ ವಿಷಯಗಳು ಬೆಳಕಿಗೆ ಬಂದಿರುವ ಕಾರಣ ಸರ್ಕಾರ ಸಾವಯವ ಕೃಷಿ ಪದ್ದತಿ ಅನುಸರಿಸಲು ರೈತರಿಗೆ ಹೆಚ್ಚಿನ ನೇರವು ನೀಡುತ್ತಿದ್ದು, ರಾಗಿ ಮುದ್ದೇ ತಿಂದವನೇ ಯೋಗಿ ಎಂಬ ಮಾತು ಸತ್ಯವಾಗುತ್ತಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡಬೇಕಾಗಿದ್ದು, ಬ್ಯಾಂಕರ್ಸ್ ಸಂಸ್ಥೆ ಮುಂದೆ ಬಂದಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ತಾಲೂಕಿನ ಬಹುತೇಕ ಭಾಗದಲ್ಲಿ ಸುಮಾರು 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಗರ್ಭಕೋಶದ ಕಾಯಿಲೆಗಳು ಅತಿ ಹೆಚ್ಚು ಕಂಡು ಬರುತ್ತಿದ್ದು, ಅವರಿಗೆ ಆರ್ಥಿಕ ತೊಂದರೆಯ ಕಾರಣ ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಪಡೆಯಲು ಅಸಾಧ್ಯವಾಗಿದೆ. ಆದ್ದರಿಂದ ಯಾವುದೇ ಸ್ವಯಂ ಸೇವಾ ಸಂಸ್ಥೆ ಈ ಕಾರ್ಯಕ್ಕೆ ಮುಂದೆ ಬಂದಲ್ಲಿ ತಾವುಗಳು ಅದಕ್ಕೆ ಬೇಕಾದ ಔಷಧಿ ಮಾತ್ರೆಗಳ ಸಂಪೂರ್ಣ ವೆಚ್ಚ ನೀಡಲು ಸಿದ್ದರಾಗಿದ್ದೇನೆ ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಮೋಹನ್ಕುಮಾರ್ ಮಾತನಾಡಿ, ಮನುಷ್ಯ ಬಾಯಿಗೆ ರುಚಿಕರವಾದ ಆಹಾರ ಬಯಸುವುದು ಮತ್ತು ತೀವ್ರ ಒತ್ತಡದಲ್ಲಿ ಕೆಲಸ ಮಾಡುವುದರ ಜೊತೆಗೆ ತನ್ನ ದೇಹಕ್ಕೆ ದೈಹಿಕ ಶ್ರಮ ನೀಡದ ಪರಿಣಾಮ ದೇಹದಲ್ಲಿ ಬೊಜ್ಜು ಬೆಳೆದು ಇಲ್ಲದ ಕಾಯಿಲೆಗಳನ್ನು ಆಹ್ವಾನಿಸಲು ರಹದಾರಿ ನೀಡುವಂತಾಗಿದೆ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.
ಲಯನ್ಸ್ ಅಧ್ಯಕ್ಷ ಎಂ.ವೈ.ಖಾನ್ ಮಾತನಾಡಿದರು. ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಎನ್.ಎಸ್.ಸಿದ್ದರಾಮಶೆಟ್ಟಿ, ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್, ಮಕ್ಕಳ ತಜ್ಞ ಡಾ.ಮಧು, ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷ ಡಾ.ಉಮಾಪತಿ, ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಡಾ.ಶ್ರೀಧರ್, ಡಾ.ಆಶಾ, ಆದರ್ಶ ಲ್ಯಾಬ್ನ ಜಗನ್ನಾಥ್, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜಪ್ಪ, ಪ್ರಸನ್ನ ಗಣಪತಿ ಭಕ್ತ ಮಂಡಲಿ ಪ್ರಧಾನ ಕಾರ್ಯದರ್ಶಿ ಸಿ.ರಾಜಣ್ಣ, ರೋಟರಿ ಸಂಸ್ಥೆ ಅಧ್ಯಕ್ಷ ಪ್ರವೀಣ್ಕುಮಾರ್, ರೆಡ್ಕ್ರಾಸ್ ಅಧ್ಯಕ್ಷ ಎನ್.ಜಿ.ಮಧು ಇದ್ದರು.
ಶಿಬಿರದಲ್ಲಿ ತಾಲೂಕಿನ 290 ಮಂದಿಗೆ ತಪಾಸಣೆ ನಡೆಸಿ, ಅವರಲ್ಲಿ 32 ಮಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬರಲು ಸಲಹೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

