ಪ್ರತಿವರ್ಷ 50 ಲಕ್ಷ ಹೆಣ್ಣು ಭ್ರೂಣಹತ್ಯೆ: ಪ್ರೊ. ಶ್ರೀನಿವಾಸ್
ಕ.ಪ್ರ.ವಾರ್ತೆ ಹಾಸನ ಡಿ. 28
ಭಾರತದಲ್ಲಿ ಪ್ರತಿ ವರ್ಷ 50 ಲಕ್ಷ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದೆ ಎಂದು ವಿಶ್ವ ಸಂಸ್ಥೆಯ ಯೂನಿಸೆಫ್ ವರದಿ ಹೇಳುತ್ತಿದೆ ಎಂದು ಎಂ. ಕೃಷ್ಣ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ. ಶ್ರೀನಿವಾಸ್ ತಿಳಿಸಿದರು.
ನಗರದ ಶಾಂತಿನಗರ ಭಾರತ ಜ್ಞಾನ ವಿಜ್ಞಾನ ಸಮಿತಿಯು ಹಮ್ಮಿಕೊಳ್ಳುವ ಮಾಸಿಕ ಅನಿಸಿಕೆ- ಅಭಿವ್ಯಕ್ತಿ ಕಾರ್ಯಕ್ರಮದ 12ನೇ ತಿಂಗಳ ಕಾರ್ಯಕ್ರಮದಲ್ಲಿ ಭಾರತದಲ್ಲಿ ಮಹಿಳಾ ದೌರ್ಜನ್ಯ ಹಾಗೂ ಅವುಗಳ ತಡೆಯಲ್ಲಿ ಭಾರತ ಸಂವಿಧಾನದ ಕಾನೂನುಗಳ ಕುರಿತು ಅವರು ಮಾತನಾಡುತ್ತಿದ್ದರು.
ದುರಂತ: ಅಲ್ಲದೇ, ಭಾರತ ದೇಶದಲ್ಲಿ ಪ್ರತಿ 34 ನಿಮಿಷಕ್ಕೊಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, 43 ನಿಮಿಷಕ್ಕೊಂದು ಹೆಣ್ಣು ಮಕ್ಕಳ ಅಪಹರಣ, 42 ನಿಮಿಷಕ್ಕೊಂದು ಲೈಂಗಿಕ ದೌರ್ಜನ್ಯ ಹಾಗೂ 93 ನಿಮಿಷಕ್ಕೊಂದು ವರದಕ್ಷಿಣೆ ಸಾವು ಸಂಭವಿಸುತ್ತಿವೆ ಎಂದು ಭಾರತದ ಸ್ಯಾಂಪಲ್ಸ್ ಸರ್ವೇ ಆಫ್ ಇಂಡಿಯಾದ ವರದಿ ಹೇಳುತ್ತಿದೆ.
ಇದೊಂದು ಭಾರತ ತನ್ನ ಸಾಮಾಜಿಕ ಸ್ಥಿತಿಯನ್ನು ಹೇಗೆ ಕಾಪಾಡುತ್ತಿದೆ ಮತ್ತು ಭಾರತದಲ್ಲಿ ಹೆಣ್ಣು ಮಕ್ಕಳು ಅಸುರಕಿತ ಭಾವನೆಯಿಂದ ಬದುಕುತ್ತಿರುವ ದುರಂತವಾಗಿದೆ ಎಂದು ಹೇಳಿದರು.
ಸಾಮಾನ್ಯ ಭಾಷೆಯಲ್ಲಿ ತಿಳಿಸಬೇಕು: ವರದಕ್ಷಿಣೆ ವಿರೋಧಿ ಕಾನೂನು 1960ರಲ್ಲೇ ಭಾರತಕ್ಕೆ ಬಂದರೂ 93 ನಿಮಿಷಕ್ಕೊಂದು ವರದಕ್ಷಿಣೆ ಸಾವು ಸಂಭವಿಸುತ್ತಿರುವುದು ಭಾರತದ ಸಂವಿಧಾನದ ಅಪಮಾನವಾಗಿದೆ. ಮಾತ್ರವಲ್ಲ, ಮಹಿಳಾ ದೌರ್ಜನ್ಯ ತಡೆಗಳು ಹತ್ತಾರು ಇದ್ದರೂ, ಈ ಅಂಕಿ ಅಂಶಗಳು ಭಾರತದ ಪ್ರಜಾತಂತ್ರದ ವ್ಯವಸ್ಥೆಯ ಶೀಥಿಲಗೊಳ್ಳುತ್ತಿರುವುದರ ಸಂಕೇತ. ಹಾಗಾಗಿ, ಜನತೆಗೆ ಭಾರತದ ಕಾನೂನುಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ತಿಳಿಸಲೇಬೇಕಿದೆ ಎಂದರು.
ತಿಳಿದುಕೊಳ್ಳಲೇ ಬೇಕು: ಕಾನೂನು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸಂವಿಧಾನವಾಗಿದೆ. ಅದನ್ನು ಗೌರವಿಸಲೇಬೇಕೆಂದ ಅವರು, ಕಾನೂನು ಜನಪರವಾಗಿಲ್ಲದೇ ಹೋದರೆ ಅಥವ ಅದು ಕಾಲದ ಜತೆ ಹೊಂದಾಣಿಕೆಯಾಗದೆ ಅವೈಜ್ಞಾನಿಕವಾಗಿರದಿದ್ದರೆ ಅದರ ಬದಲಾವಣೆಗೆ ಹೋರಾಡಬೇಕು ಎಂದರು. ಈ ಕೆಲಸದಲ್ಲಿ ಜನರ ಜವಾಬ್ದಾರಿ ಹೆಚ್ಚಿದೆ ಹಾಗಾಗಿ ಭಾರತದ ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ಎಂದರು.
ವ್ಯವಸ್ಥೆ ಮಾಡಿಕೊಡಬೇಕು: ಹಿರಿಯ ವಕೀಲೆ ಪುಷ್ಪಕೆಂಚಪ್ಪ ಮಾತನಾಡಿ, ವರದಕ್ಷಿಣೆ ಎನ್ನುವುದು ಸಮಾಜ ಮಹಿಳೆಗೆ ಆಸ್ತಿಯ ಹಕ್ಕನ್ನು ಕೊಡದ ಕಾರಣ ಹುಟ್ಟಿಕೊಂಡಿದೆ ಮಹಿಳೆಗೆ ಆರ್ಥಿಕ ಬಲವಿಲ್ಲದ ಕಾರಣ ಪುರುಷನ ಅಡಿಯಲ್ಲೇ ಬದುಕಬೇಕಾದ ಸ್ಥಿತಿಯನ್ನು ನಿರ್ಮಾಣಮಾಡಿದೆ. ಸಂವಿಧಾನ ಇತ್ತೀಚೆಗೆ ಮಹಿಳಾ ಸಶಕ್ತತೆಗಾಗಿ ಆಸ್ತಿ ಹಕ್ಕನ್ನು ಕೊಡಮಾಡಿದೆ ಇದು ಕೌಟುಂಬಿಕ ಕಲಹಕ್ಕೆ ಕಾರಣವಾಗಿದೆ ಎಂಬ ಕೂಗನ್ನು ಕೂಡ ಹುಟ್ಟು ಹಾಕಿದೆ ಆದರೆ ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ನಡೆಸಲು ವ್ಯವಸ್ಥೆ ಮಾಡಿಕೊಡಬೇಕಾಗಿದೆ ಎಂದರು.
ಬದಲಾಗಬೇಕಿದೆ: ನಿವೃತ್ತ ಎಂಜಿನಿಯರ್ ಎನ್. ಕುಮಾರ್ ಮಾತನಾಡಿ, ಜಾತಿ ವ್ಯವಸ್ಥೆ ಮಾನವನನ್ನು ತರತಮ ಭಾವನೆಯಿಂದ ಬದುಕುವಂತೆ ಮಾಡಿದೆ. ಹೆಣ್ಣು ಮಕ್ಕಳನ್ನು ಆಸ್ತಿ ಹಕ್ಕಿನಿಮದ ದೂರ ಇಟ್ಟಿದ್ದು ಮಹಿಳಾ ದೌರ್ಜನ್ಯಕ್ಕೆ ಎಡೆ ಮಾಡಿ ಕೊಟ್ಟಿದೆ. ಜಗತ್ತು ಬದಲಾದಂತೆ ಭಾರತದ ವ್ಯವಸ್ಥೆಯೂ ಕೂಡ ಹೆಚ್ಚು ಮಾನವಂತವಾರಾಗಿ ಬದಲಾಗಬೇಕಾದ ಅಗತ್ಯ ಇದೆ ಎಂದರು.
ಸಲಹೆ: ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಮತ್ತು ಜಿಲ್ಲಾ ಖಜಾಂಚಿ ಗೋಪಾಲಕೃಷ್ಣ, ಎಸ್.ಎಫ್.ಐ ಅನ್ಶಾದ್, ಬಿಜಿವಿಎಸ್ ತಾಲೂಕು ಕಾರ್ಯದರ್ಶಿ, ಜಯಪ್ರಕಾಶ್ ಹಾಗೂ ಅಧ್ಯಕ್ಷೆ ಮಮತ ಶಿವು ಭಾಗವಹಿಸಿ ಸಂವಾದಿಸಿದರು.
ಚೂಡಾಮಣಿ, ಅಹಮದ್, ಸುಜಾತ, ಸತ್ಯನಾರಾಯಣಶರ್ಮ, ವೇದಶ್ರಿರಾಜ್, ಕವಿತ, ಪದ್ಮಾವತಿ, ಪದ್ಮ ಮಂಜುನಾಥ್ ಕವನ ವಾಚಿಸಿದರು ನಿವೃತ್ತ ಶಿಕ್ಷಕ ಸತ್ಯನಾರಾಯಣ ಶರ್ಮ ಹಾಗೂ ಸಾಹಿತಿ ಎನ್.ಎಲ್. ಚನ್ನೇಗೌಡ ಕವನವನ್ನು ವಿಮರ್ಶಿಸಿ ಸಲಹೆ ನೀಡಿದರು. ವಿದ್ಯಾರ್ಥಿ ದೀಪಕ್ ಕಲಾಚಿತ್ರ ಪ್ರದರ್ಶಿಸಿದರು. ಬಿಜಿವಿಎಸ್ ಶಾಂತಿನಗರ ಘಟಕಾಧ್ಯಕ್ಷ ದೇವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು.
ಪದ್ಮ ಮಂಜುನಾಥ್ ಬೊಂಬೆಯಾಟದ ಮೂಲಕ ಸಭಿಕರನ್ನು ಸ್ವಾಗತಿಸಿದರು, ಬಿಜಿವಿಎಸ್ ಘಟಕ ಕಾರ್ಯದರ್ಶಿ ವೇದಶ್ರೀ ರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತ ಕಾರ್ಯಕ್ರಮ ನಿರೂಪಿಸಿದರು. ಬಿಜಿವಿಎಸ್ ಶಾಂತಿನಗರ ಘಟಕದ ಸಹ ಕಾರ್ಯದರ್ಶಿ ದೀಪಕ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

