ಹಾಸನ

ಕೊಳ್ಳಂಗಿಲ್ಲ ಕಾಳುಮೆಣಸು, ಬೇಕು ಅಂದ್ರೆ ಸಿಕ್ಕಾಪಟ್ಟೆ ಕಾಸು

Published On :

ದಯಾಶಂಕರ ಮೈಲಿ
ಹಾಸನ: ಕರಿ ರಾಣಿ ಎಂದೇ ಸಾಂಬಾರ ಲೋಕದಲ್ಲಿ ಕರೆಸಿಕೊಳ್ಳುವ ಕಪ್ಪು ಮೆಣಸು ತನ್ನ ಬೆಲೆಯಿಂದಲೇ ಕೊಳ್ಳುವವನ ಮೂಗನ್ನು ಕೆಂಪಾಗಿಸಿ ಕಣ್ಣಲ್ಲಿ ನೀರಿಳಿಸುವಷ್ಟು ಖಾರದ ಘಮಟು ಬೀರುತ್ತಿದೆ. ಹೌದು, ಇದೇ ಮೊದಲ ಬಾರಿಗೆ ಮೆಣಿಸಿನ ಬೆಲೆ ದಾಖಲೆ ಏರಿಕೆ ಕಂಡಿದ್ದು ಪ್ರತಿ ಕೆಜಿಗೆ 540ರಿಂದ 550 ಇದೆ.
ಮುಂಗಾರಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಶೀತ ಹೆಚ್ಚಾದ ಪರಿಣಾಮ ಮೆಣಸಿನ ಬಳ್ಳಿಗಳಿಗೆ ರೋಗ ತಗುಲಿ ಕೇರಳ ಮತ್ತು ಕರ್ನಾಟಕದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕರಿ ಕಾಳುಮೆಣಸು ಉದುರಿ ಹೋಯಿತು. ಅಲ್ಲದೇ ದೂರದ ವಿಯಟ್ನಾಂನಲ್ಲೂ ಮೆಣಸು ಹೆಚ್ಚು ಬೆಳೆಯಲಿಲ್ಲ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ ಮೆಣಸು ಲಭ್ಯವಾಗುತ್ತಿಲ್ಲ. ಪರಿಣಾಮ, ಮಾರುಕಟ್ಟೆಯಲ್ಲಿ ದಾಖಲೆ ಬೆಲೆ ಏರಿಕೆ ಕಂಡು ಬಂದಿದೆ.
ಇದೇ ಕಾಲಕ್ಕೆ ಮಸಾಲೆ ಪದಾರ್ಥಗಳಿಗೆ ಒಣ ಮತ್ತು ಹಸಿ ಮೆಣಸಿನಕಾಯಿ ಬಳಕೆ ಮಾಡುವುದನ್ನು ಕಡಿಮೆ ಮಾಡಲಾಗಿದೆ. ಮೆಣಸಿನಕಾಯಿಯಿಂದ ಗ್ಯಾಸ್ಟ್ರಿಕ್ ಹೆಚ್ಚಾಗುವುದಲ್ಲದೆ ಕರುಳಿಗೆ ತೊಂದರೆ ಆಗುತ್ತದೆ ಎಂದು ಈಗ ಕರಿಮೆಣಸನ್ನು ಹೆಚ್ಚು ಬಳಕೆ ಮಾಡಿ ಮಸಾಲೆ ಪದಾರ್ಥಗಳನ್ನು ತಯಾರು ಮಾಡಲಾಗುತ್ತಿದೆ. ಪ್ರಸಕ್ತ ರಾಜ್ಯದಲ್ಲಿ 1.50 ಲಕ್ಷ ಮೆಟ್ರಿಕ್ ಟನ್ ಮೆಣಸು ಬೆಳೆಯಬೇಕಾಗಿತ್ತು. ಉತ್ಪಾದನೆಯಾಗಿರೋದು 30 ಸಾವಿರದಿಂದ 40 ಸಾವಿರ ಮೆಟ್ರಿಕ್ ಟನ್ ಮಾತ್ರ.
ಹಿಂದೆಲ್ಲಾ ಕೆಜಿ ಮೆಣಸಿಗೆ 150ರಿಂದ 180 ಬೆಲೆ ಏರಿಕೆಯಾಗಿತ್ತು. ಅದೇ ಹೆಚ್ಚಾಯಿತು ಅನ್ನುತ್ತಿದ್ದೆವು. ಮೊನ್ನೆ ಮೊನ್ನೆ ಗ್ರಾಹಕರು 250ಕ್ಕೆ ಹೊಟ್ಟೆಯುರಿದುಕೊಳ್ಳುತ್ತಲೇ ಖರೀದಿಸಿದರು. ಈಗ ಕೆಜಿಗೆ 500ಕ್ಕಿಂತ ಹೆಚ್ಚಾಗಿದೆ. ಬಳ್ಳಿ ರೋಗ ಕಾಡಿದ್ದರಿಂದ ಮತ್ತು ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರಿಂದ ಮೆಣಸು ಹೆಚ್ಚು ಉತ್ಪಾದನೆಯಾಗಲಿಲ್ಲ.
ಭಾರತದಲ್ಲಿ 15,000 ಟನ್ ಮೆಣಸು ಮಾತ್ರ ದಾಸ್ತಾನಿದೆ. ಚಳಿಕಾಲ ಪ್ರಾರಂಭವಾದರೆ ಕಾಳುಮೆಣಸು ಸೇರಿದಂತೆ ಇತರೆ ಮಸಾಲೆ ಪದಾರ್ಥಗಳ ಬೆಲೆ ಇನ್ನಷ್ಟು ಹೆಚ್ಚಾಗುವುದು ಖಚಿತ. ಈ ಎಲ್ಲ ಕಾರಣಗಳಿಂದಲೂ ಕಾಳು ಮೆಣಸಿನ ಬೇಡಿಕ್ಕೆ ಹೆಚ್ಚಾಗಿದೆ. ಇದೀಗ ಪ್ರಪಂಚದಲ್ಲೇ ಉತ್ತಮ ಗುಣಮಟ್ಟದ ಭಾರತದ ಮೆಣಸು ಟನ್ ಒಂದಕ್ಕೆ 6000 ಡಾಲರ್ನಂತೆ ಮಾರಾಟವಾಗುತ್ತಿದೆ.
ಕಾಫಿಗೂ ಬೆಲೆ ಇದೆ: ಈಗ ರಾಜ್ಯದಲ್ಲಿ ಅರೇಬಿಕಾ ಕಾಫಿ ಬೆಲೆಯಷ್ಟೇ ರೋಬಸ್ಟಾ ಕಾಫಿಗೂ ಸಿಗುತ್ತಿದೆ. 50 ಕೆಜಿ ರೋಬಸ್ಟಾಗೆ 5 ಸಾವಿರ ಬೆಲೆ ಇದೆ. ಅದೂ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಆಗಿಲ್ಲ. ಏಲಕ್ಕಿ, ಮೆಣಸಿಗೆ ಹದವಾದ ಮಳೆ ಮತ್ತು ನೆರಳು ಬೇಕು. ಅವೆರಡೂ ಇಲ್ಲದ ಸಂದರ್ಭದಲ್ಲಿ ರೋಗಗಳು ತಗುಲಿವೆ. ಏಲಕ್ಕಿ, ಮೆಣಸು ನಷ್ಟವಾದದ್ದಕ್ಕೆ ಕೇಂದ್ರ ಸರ್ಕಾರ ನೀಡುವ ಪರಿಹಾರಗಳೆಲ್ಲವನ್ನೂ ಕೇರಳದವರೆಗೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿರುವ ಸಾಂಬಾರ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಕರ್ನಾಟಕದ ಬೆಳೆಗಾರರ ನೆರವಿಗೆ ಧಾವಿಸುತ್ತಿಲ್ಲ ಎಂದು ಸಕಲೇಶಪುರ ತಾಲೂಕು ಬಾಳ್ಳುಪೇಟೆಯ ಏಲಕ್ಕಿ, ಮೆಣಸು, ಕಾಫಿ ಬೆಳೆಗಾರ ಬಿ.ಎ.ಜಗನ್ನಾಥ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.