ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ
ಹೊಳೆನರಸೀಪುರ: ಮಾದಿಗ ಸಮುದಾಯ ಇಂದಿಗೂ ಸಹ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದ್ದು ಎಲ್ಲಾ ಸ್ಥಾನ ಸಮಾನತೆ ಹೊಂದಲು ಹೋರಾಟದ ಅಗತ್ಯವಿದ್ದು, ಈ ಹೋರಾಟಕ್ಕಾಗಿ ಸಂಘಟನೆಯನ್ನು ಇನ್ನೂ ಬಲಪಡಿಸಬೇಕೆಂದು ತಾಲೂಕು ಪಂಚಾಯ್ತಿ ಸದಸ್ಯ ಸಿ.ಆರ್. ಮಂಜುನಾಥ್ ನುಡಿದರು. ಇತ್ತೀಚೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮಾದಿಗ ದಂಡೋರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹೊಸೂರು ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ರಘುರಾಂ, ಸದಸ್ಯ ಎಚ್.ಎಸ್. ಸ್ವಾಮಿ. ವಕೀಲರಾದ ಟಿ.ಎಸ್. ಕೃಷ್ಣಮೂರ್ತಿ, ತೆವಡಹಳ್ಳಿಮಂಜು, ನ್ಯಾಯಬೆಲೆ ಅಂಗಡಿ ಕುಮಾರ್, ಕಡವಿನಹೊಸಹಳ್ಳಿ ರಾಜು, ರಾಮದಾಸು. ಸತೀಶ್ ಉಮೇಶ್, ಕಾಳಪ್ಪ, ಮಹದೇವ್, ಅಶೋಕ್, ರಂಗಸ್ವಾಮಿ ಮುಂತಾದ ಕಾರ್ಯಕರ್ತರು ಇದ್ದರು. ಶಿಕ್ಷಕ ನಾಗಣ್ಣ ಸ್ವಾಗತಿಸಿದರು. ಕೆ.ಎಂ. ಮಹೇಶ್ ನಿರೂಪಿಸಿದರು. ಗೋವಿಂದರಾಜು ವಂದಿಸಿದರು.
ಅಕ್ಕಿ ಗಿರಿಣಿಗೆ ಕನ್ನ: ಹಣ ದರೋಡೆ
ಹೊಳೆನರಸೀಪುರ: ಪಟ್ಟಣದ ಟಿಎಪಿಸಿಎಂಎಸ್ಸ್ಹಕಾರಿ ಸಂಘಕ್ಕೆ ಸೇರಿದ ಅಕ್ಕಿಗಿರಿಣಿಯಲ್ಲಿ ಶುಕ್ರವಾರ ರಾತ್ರಿ ಕನ್ನ ಹಾಕಿ ನಗದು ಹಣ ಸಮೇತ ಪರಾರಿ ಆಗಿರುವ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಸಿಬ್ಬಂದಿ ಎಂದಿನಂತೆ ಅಕ್ಕಿ ಗಿರಣಿಗೆ ಬೀಗ ಹಾಕಿಕೊಂಡು ಮನೆಗೆ ಹಿಂತಿರುಗಿದ್ದಾರೆ. ಆದರೆ ಮದ್ಯರಾತ್ರಿ ವೇಳೆ ಅಕ್ಕಿಗಿರಣಿ ಕಟ್ಟಡದಲ್ಲಿ ಇರುವ ದೊಡ್ಡ ರಂಧ್ರದಲ್ಲಿ ಆಗುಂತಕರು ನುಸುಳಿ ಈ ಕೃತ್ಯ ಎಸಗಿ ಹದಿನೈದು ಸಾವಿರ ನಗದು ಹಣ ಸಮೇತ ಪರಾರಿ ಆಗಿದ್ದಾರೆ. ಅಕ್ಕಿಗಿರಣಿಯಲ್ಲಿ ನಡೆದಿರುವ ಕೃತ್ಯವನ್ನು ಗಮನಿಸಿದರೆ ಗಿರಿಣಿಯಲ್ಲಿನ ಪೂರ್ಣ ವಿವರಗಳನ್ನು ತಿಳಿದವರೆ ಈ ಕೃತ್ಯ ಎಸಗಿರಬಹುದೆಂದು ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ದೇವೇಗೌಡ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೇಲೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಬೇಲೂರು: ಕೇವಲ ಲೋಕಸಭೆ ಚುನಾವಣೆ ಗುರಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡದೇ, ಶಾಶ್ವತವಾಗಿ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ ಹೇಳಿದರು. ಒಕ್ಕಲಿಗರ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಶಾಶ್ವತವಾಗಿ ಬೇರೂರುವ ರೀತಿಯಲ್ಲಿ ಸಂಘಟನೆಯನ್ನು ಮಾಡಬೇಕಿದೆ. ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗೊತ್ತಿ ದುಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ. ಮಾಜಿ ಪ್ರಧಾನಿ ದೇವೇಗೌಡರು ನಾಲ್ಕೂವರೆ ವರ್ಷಗಳ ಕಾಲ ಏನೂ ಮಾಡದೆ ಸುಮ್ಮನಿದ್ದು ಈಗ ಏಕಾಏಕಿ 4 ತಿಂಗಳಿಂದ ಜಿಲ್ಲೆಯ ಮೇಲೆ ಪ್ರೀತಿ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ದೇವೇಗೌಡರು, ಈಗ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ಎಲ್ಲರ ಮೇಲೆ ಅಕ್ಕರೆ ತೋರುತ್ತಿರುವುದು ಲೋಕಸಭೆ ಚುನಾವಣೆಯ ಗಿಮಿಕ್ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ. ವಿಧಾನ ಪರಿಷತ್ ಸದಸ್ಯ ಆನಂದ್, ತಾಲೂಕು ಅಧ್ಯಕ್ಷ ದಾಮೋದರ್, ಯುವ ಅಧ್ಯಕ್ಷ ಪುನಿತ್ ಗೌಡ, ಪುರಸಭೆ ಸದಸ್ಯ ಎಂ.ಆರ್. ವೆಂಕಟೇಶ್, ಮಾಜಿ ಸದಸ್ಯ ಜಮಾಲುದ್ದೀನ್, ಕಾರ್ಮಿಕ ಒಕ್ಕೂಟದ ಹರಿಯಪ್ಪ, ಅಲ್ಪಸಖ್ಯಾತ ಘಟಕದ ಸಲೀಂ, ತಾಪಂ ಸದಸ್ಯೆ ಪವಿತ್ರಾ, ಸತ್ಯನಾರಾಯಣ್ ಇತರರು ಇದ್ದರು.
ಚಾಲನೆ...
ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಸಮೀಪದ ನವಿಲೆಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಸಿ. ಎನ್. ಬಾಲಕೃಷ್ಣ ಇತ್ತೀಚೆಗೆ ಗುದ್ದಲಿ ಪೂಜೆ ನೆರೆವೇರಿಸಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್ ಕುಂಟೆ, ಗ್ರಾಪಂ ಅಧ್ಯಕ್ಷ ಕೆ.ನಾಗಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ ಇತರರು ಇದ್ದಾರೆ.
ಜನಮನ ಸೆಳೆದ ಹಾಸನ ಡ್ಯಾನ್ಸ್ ಶೋ
ಹಾಸನ: ನಗರದ ಹೊಸ ಬಸ್ ನಿಲ್ದಾಣದ ಸಮೀಪ ರೈಬೋ ಗ್ರೂಪ್ಸ್ ನಡೆಸುತ್ತಿರುವ ಹೊಯ್ಸಳ ಸಂಭ್ರಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಾಸನ ಡ್ಯಾನ್ಸ್ ಶೋ ಕಾರ್ಯಕ್ರಮ ಜನಮನ ಸೆಳೆಯಿತು.
ವಿವಿಧ ನೃತ್ಯ ತಂಡಗಳು ನಡೆಸಿದ ಡ್ಯಾನ್ಸ್ ಶೋ ಸ್ಪರ್ಧೆಯಲ್ಲಿ ಸಬ್ ಜ್ಯೂನಿಯರ್, ಜೂನಿಯರ್, ಸೀನಿಯರ್ ತಂಡಗಳನ್ನಾಗಿ ಆಯ್ಕೆ ಮಾಡಿದ್ದು ಸಬ್ ಜೂನಿಯರ್ ತಂಡದಲ್ಲಿ ನುಪುರ ನೃತ್ಯ ತಂಡ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಜೂನಿಯರ್ ಭಾಗದಲ್ಲಿ ಜಸ್ಟ್ಡ್ಯಾನ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಳ್ಳವಲ್ಲಿ ಯಶಸ್ವಿಯಾಯಿತು. ಸೀನಿಯರ್ ವಿಭಾಗದಲ್ಲಿ ನುಪು ನೃತ್ಯ ತಂಡ ಪ್ರಥಮಸ್ಥಾನ ಪಡೆದರೆ ಗಂಧರ್ವ ನೃತ್ಯ ತಂಡ, ದ್ವಿತೀಯ ಸ್ಥಾನ ಪಡೆದು ತೃಪ್ತಿಪಟ್ಟುಕೊಂಡರು. ವಿಜೇತರಿಗೆ ಶಾಸಕ ಹೆಚ್.ಎಸ್. ಪ್ರಕಾಶ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ನಟ ಜೀವನ್, ನಿರ್ದೇಶಕ ಲಕ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೃತ್ಯ ವಿಮರ್ಶೆ ರೈನ್ ಬೋ ಗ್ರೂಪ್ಸ್ನ ಮೋಹನ್, ಯೋಗೇಶ್, ಆನಂದ್, ಡಾ. ಲೋಹಿತ್ ,ಇಸ್ಮಾ ಯಿಲ್, ಮತ್ತಿತರರು ಇದ್ದರು.
ಪೋಷಕರು ಅಂಕಗಳಿಗೆ ಒತ್ತು ನೀಡುತ್ತಿದ್ದಾರೆ: ಪಟೇಲ್
ಹಾಸನ: ಬಹಳಷ್ಟು ಪೋಷಕರು ಅಂಕಗಳಿಗೆ ಒತ್ತು ನೀಡುತ್ತಿದ್ದಾರೆಯೇ ಹೊರತು ಪ್ರತಿಭೆ ಗುರುತಿಸಲು ಮುಂದಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ವಿಷಾದಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬಾಲವಿಕಾಸ ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ,ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲ ವಿಕಾಸ ಅಕಾಡೆಮಿ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಿ.ಜೆ. ಅಂಬಿಕಾ ರಾಮಣ್ಣ ಮಾತನಾಡಿ, ಇಂತಹ ಕಾರ್ಯಕ್ರಮದಿಂದ ಮಕ್ಕಳಲ್ಲಿ ಉತ್ಸಾಹ ಮೂಡಿ ಎಲ್ಲಾ ಮಕ್ಕಳು ಸಂಕೋಚವನ್ನು ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಲು ಧೈರ್ಯ ತುಂಬುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಹೆಚ್.ಸಿ. ಚಿದಾನಂದ, ಡಿಡಿಪಿಐ ಬಸವರಾಜ್ ಮಾತನಾಡಿದರು. ಮಧುರ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಬಾಲವಿಕಾಸ ಅಕಾಡೆಮಿ ಸದಸ್ಯ ಬಿ.ಎಸ್. ದೇಸಾಯಿ, ಬಾಲ ವಿಕಾಸ ಅಕಾಡೆಮಿ ಸದಸ್ಯರು ಇದ್ದರು. ಭಾನು ವಂದಿಸಿದರು.
ದೇವಾಲಯದಲ್ಲಿ ಸರ್ಪ ಸೇವೆ
ರಾಮನಾಥಪುರ: ಅರಕಲಗೂಡು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ತಾಲೂಕಿನ ಎಲ್ಲಾ ಕಾರ್ಯನಿರತ ಪತ್ರಕರ್ತರು ಒಂದೆಡೆ ಕಲೆತು ರಾಮನಾಥಪುರದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಪರಿವಾರ ಸಮೇತ ಆಗಮಿಸಿ ಸ್ವಾಮಿಗೆ ಸರ್ಪ ಸೇವೆ ಪೂಜೆಯನ್ನು ಕೈಗೊಂಡಿದ್ದರು. ಸಂಘದ ಅಧ್ಯಕ್ಷ ಎ.ಪಿ. ಶಂಕರ್, ಕಾರ್ಯದರ್ಶಿ ಎಂ.ಎನ್. ಕುಮಾರಸ್ವಾಮಿ, ಸದಸ್ಯರಾದ ಟಿ. ವಿಜಯಕುಮಾರ್, ಬಸವಾಪಟ್ಟಣ ಜಯಕುಮಾರ್, ಆನಂದ್ ಶಿರದನಹಳ್ಳಿ, ಎಂ.ಆರ್. ಬಾಬು, ಬೆಟ್ಟಸೋಗೆ ರವಿ, ಕೊಣನೂರು ಚೆನ್ನಕೇಶವಯ್ಯ, ದೇವಕಿ ಚಂದ್ರಶೇಖರ್, ಅರಕಲಗೂಡು ಚಂದ್ರಶೇಖರ್, ಮಲ್ಲಿಪಟ್ಟಣ ಕೃಷ್ಣಮೂರ್ತಿ, ಅರಕಲಗೂಡು ಯೋಗೇಶ್, ಗಣೇಶ್ಸಾಹಸಿ ಭಾಗವಹಿಸಿ ಪೂಜಾದಿ ಕೈಂಕರ್ಯಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು.
ಪೋಷಕರಿಗೆ ಆಟೋಟ ಸ್ಪರ್ಧೆ
ಬೇಲೂರು: ಪೋಷಕರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮನೋಲ್ಲಾಸದ ಜೊತೆಗೆ ಪರಸ್ವರ ಪರಿಚಯದ ಮೂಲಕ ಆತ್ಮೀಯತೆ ಬೆಳೆದಂತಾಗುತ್ತದೆ ಎಂದು ಯುನೈಟೆಡ್ ಅಕಾಡೆಮಿ ಶಾಲೆಯ ಮುಖ್ಯ ಕಾರ್ಯದರ್ಶಿ ವಿ.ಎಸ್. ಬೋಜೇಗೌಡ ತಿಳಸಿದರು. ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿನ ಕುವೆಂಪು ನಗರದಲ್ಲಿರುವ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಪೋಷಕರಿಗಾಗಿ ಇತ್ತೀಚೆಗೆ ಏರ್ಪಡಿಸಿದ್ದ ನಾನಾ ಆಟೋಟ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸದಾ ಒಂದಲ್ಲಾ ಒಂದು ಜಂಜಾಟದಲ್ಲಿ ಇರುವ ಮನಸ್ಸಿಗೆ ಮುದವನ್ನು ಕೊಡಲು ಪೋಷಕರಿಗಾಗಿ ಆಟೋಟ ಸ್ಪರ್ಧೆಯನ್ನು ಕಳೆದ 2 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದೆ. ಬಹಳ ಖುಷಿಯಿಂದ ಕ್ರೀಡೆಯಲ್ಲಿ ಭಾಗವಹಿಸುವ ಪೋಷಕರು ತಾವೂ ಮಕ್ಕಳಂತಾಗಿ ಆಟವಾಗಿ ಮನರಂಜನೆ ಪಡೆಯುತ್ತಾರೆ ಎಂದರು. ದಿನವಿಡಿ ಆಟೋಟ ಸ್ಪರ್ಧೆಯಿದ್ದು ಮಧ್ಯಾಹ್ನ ಭೋಜನ ಕೂಟವನ್ನು ಏರ್ಪಡಿಸಿದ್ದು ನಂತರ ಸಂಜೆಯವರೆಗೆ ನಡೆಯಲಿದೆ. ಶಾಲಾ ವಾರ್ಷಿಕೋತ್ಸವದಂದು ಗೆದ್ದ ಪೋಷಕರಿಗೆ ಬಹುಮಾನ ನೀಡಲಾಗುವುದು ಎಂದರು.
ಇಂದು ನಾಟಕ ಪ್ರದರ್ಶನ
ಹಾಸನ: ಕನ್ನಡ ಮತ್ತು ಸಂಸ್ಕತಿ ಇಲಾಖೆ, ಬೆಂಗಳೂರು ಹಾಗೂ ಶ್ರೀ ಚಾಮುಂಡೇಶ್ವರಿ ಕಲಾನಿಕೇತನ ಆಶ್ರಯದಲ್ಲಿ ಡಿ.29ರಂದು ಬೆಳಗ್ಗೆ 11.30ಕ್ಕೆ ನಗರದ ಹಾಸನಾಂಭ ಕಲಾಕ್ಷೇತ್ರದಲ್ಲಿ ರಂಗ ಕೌಸ್ತುಭ ಪ್ರಶಸ್ತಿ ಪುರಸ್ಕೃತ ಎ.ಸಿ. ರಾಜು ಅವರ ನಿರ್ದೇಶನದಲ್ಲಿ ಸರ್ಪ ಲಾಂಛನ ಪರಾಭವ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಆದ್ಯಕ್ಷತೆಯನ್ನು ಶಾಸಕ ಹೆಚ್.ಎಸ್.ಪ್ರಕಾಶ್ ವಹಿಸುವರು. ಕರ್ನಾಟಕ ರಂಗ ಸಂಗೀತ ಪರಿಷತ್ ಅಧ್ಯಕ್ಷ ಗೋವಿಂದಗೌಡ ಕಾರ್ಯಕ್ರಮ ಉದ್ಘಾಟಿಸುವರು. ನಗರ ಸಭೆಯ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಇಂಜಿನಿಯರ್ ಎ.ಸಿ. ರುಕ್ಮಾಂಗದ, ಸಾಹಿತಿ ಗೊರೂರು ಅನಂತರಾಜು, ಮೈಸೂರಿನ ಸರ್ ಎಂ.ವಿ. ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಹೆಚ್.ಟಿ. ವೆಂಕಟೇಶಮೂರ್ತಿ, ಜಿಲ್ಲಾ ದೈಹಿಕ ಅಧೀಕ್ಷಕರು ಕೆ.ಜಿ. ಈಶ್ವರಪ್ಪ, ಉಜಿರೆಯ ಎಂಜಿನಿಯರ್ ಹೇಮಚಂದ್ರ, ಹಾಸನಾಂಬ ಕಲಾಸಂಘದ ಅಧ್ಯಕ್ಷ ಗಾಡೇನಹಳ್ಳಿ ಕೃಷ್ಣೇಗೌಡ ಇತರರು ಹಾಜರಿರಲಿದ್ದಾರೆ.
ದಿನಾಚರಣೆ...
ಆಲೂರು ತಾಲೂಕು ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜ್ನಲ್ಲಿ ಏರ್ಪಡಿಸಿದ್ದ ಏಡ್ಸ್ ದಿನಾಚರಣೆ ಜಾಥಾವನ್ನು ಗ್ರಾಪಂ ಅಧ್ಯಕ್ಷ ನಟರಾಜು ನಾಕಲಗೂಡು ಉದ್ಘಾಟಿಸಿದರು. ಪ್ರಾಂಶುಪಾಲ ಜಗದೀಶ್, ರವಿ ಕುಮಾರ್, ಲೋಕೇಶ್, ಕಸಾಪ ಅಧ್ಯಕ್ಷ ಗುಲಾಂ ಸತ್ತಾರ್ ಇತರರು ಇದ್ದಾರೆ.
'ಅಪರಾಧ ತಡೆಯಲು ಸಾರ್ವಜನಿಕರು ಸಹಕರಿಸಿ'
ಜಾವಗಲ್: ಸಾರ್ವಜನಿಕರು ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಜಾವಗಲ್ ಸಬ್ಇನ್ಸ್ಸ್ಪೆಕ್ಟರ್ ಸಿ.ಪಿ. ನವೀನ್ ಅವರು ಕರೆ ನೀಡಿದರು. ಅಪರಾಧ ತಡೆ ಮತ್ತು ರಸ್ತೆ ಸಂಚಾರ ಮತ್ತು ಸುರಕ್ಷತೆಯ ಮಾಸಾಚರಣೆ ಅಂಗವಾಗಿ ಜಾವಗಲ್ನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಲ್ಲಿ ಆಟೋಗಳಿಗೆ ಮತ್ತು ಕೆಎಸ್ಆರ್ಟಿಸಿ ಬಸ್ಗೆ ಸ್ಟಿಕ್ಕರ್ಗಳನ್ನು ಅಂಟಿಸುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆಟೋ ಚಾಲಕರು ಮತ್ತು ಮ್ಯಾಕ್ಸಿಕ್ಯಾಬ್ ವಾಹನ ಚಾಲಕರು ಮತ್ತು ನಿರ್ವಾಹಕರುಗಳಿಗೆ ರಸ್ತೆ ಸಂಚಾರ ಮತ್ತು ಸುರಕ್ಷತೆ ಕುರಿತು ಮಾತನಾಡಿ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು. ಗ್ರಾಮಗಳಲ್ಲಿನ ಪ್ರಮುಖ ದೇವಾಲಯಗಳಲ್ಲಿ ಖಾಸಗಿ ಭದ್ರತಾ ವ್ಯವಸ್ಥೆ ಸೈರನ್ ವ್ಯವಸ್ಥೆ ಮಾಡಿಕೊಳ್ಳುವುದು, ಬ್ಯಾಂಕ್, ಸಹಕಾರಿ ಬ್ಯಾಂಕ್ಗಳಲ್ಲಿ ಸಿ.ಸಿ. ಟಿವಿ ಮತ್ತು ಕ್ಯಾಮರಾ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಪೊಲೀಸ್ ಸಿಬ್ಬಂದಿಗಳಾದ ತಿಮ್ಮೇಗೌಡ, ಶಿವರಾಂ, ಮಂಜುನಾಥ್, ಅಮೃತೇಶ್ವರ್, ಮಲ್ಲೇಶ್, ಆಟೋ ಮತ್ತು ಮ್ಯಾಕ್ಸಿಕ್ಯಾಬ್ ವಾಹನ ಚಾಲಕರು, ನಿರ್ವಾಹಕರು ಮತ್ತು ಸಾರ್ವಜನಿಕರು ಇದ್ದರು.
ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ
ಹಾಸನ: ಗುರುದೇವ ಲಲಿತ ಕಲಾ ಅಕಾಡೆಮಿ ನೃತ್ಯ ಸಂಗೀತ ತರಬೇತಿ ಸಂಸ್ಥೆ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಫೆಬ್ರವರಿ 7 ರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 3 ರವರೆಗೆ ಏರ್ಪಡಿಸಿದೆ. ಕಾರ್ಯಕ್ರಮ ಸಂಜೆ 6 ಕ್ಕೆ ನಡೆಯಲಿದೆ ಎಂದು ನಿರ್ದೇಶಕಿ ಡಾ. ಚೇತನ ರಾಮಕೃಷ್ಣ ತಿಳಿಸಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಸ್ಪರ್ಧೆಯಲ್ಲಿ ಕಿರಿಯರ, ಹಿರಿಯರ ವಿಭಾಗಗಳಲ್ಲಿ ತಲಾ 3 ಪ್ರಶಸ್ತಿ ನೀಡಲಾಗುವುದು. ಭರತನಾಟ್ಯ ಸ್ಪರ್ಧೆಯಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ನಾಟ್ಯಮಂದಾರ, ನಾಟ್ಯವರ್ಷಿಣಿ ಹಾಗೂ ನಾಟ್ಯ ಸಮ್ಮೋಹಿನಿ ಎಂಬ ಬಿರುದು ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲಾ ಅಭ್ಯರ್ಥ್ಥಿಗಳಿಗೂ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು. ಮಾಹಿತಿಗಾಗಿ ಗುರುದೇವ ಕುಟೀರ, 1240 ಎ1, ಅಶೋಕನಗರ ಮಂಡ್ಯ -01 ಅಥವಾ ನಂ.45, ಶ್ರೀಧರ ನಿಲಯ, 3ನೇಬ್ಲಾಕ್, 6ನೇ ಮುಖ್ಯ ರಸ್ತೆ, ಜಯಲಕ್ಷ್ಮೀಪುರಂ, ಮೈಸೂರು-12ನಲ್ಲಿ ಸಂಪರ್ಕಿಸಿ.
'ಭ್ರಷ್ಟಾಚಾರ ಸಂಪೂರ್ಣ
ಗುಡಿಸಿ ಹಾಕಬೇಕು'
ಬೇಲೂರು: ದೇಗುಲದ ಸುತ್ತ ಮುತ್ತ ಇರುವ ಕಸವನ್ನು ಸ್ವಚ್ಛ ಮಾಡಿದಂತೆ ದೇಶದಲ್ಲಿನ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಗುಡಿಸಿ ಹಾಕಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ಹೇಳಿದರು. ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ವಿಶ್ವವಿಖ್ಯಾತ ಶ್ರೀ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಅರ್ಚನೆ ನಂತರ ದೇಗುಲದ ಸುತ್ತಮುತ್ತಲಿರುವ ಕಸ ಕಡ್ಡಿಯನ್ನು ಸ್ವಚ್ಛ ಮಾಡುವ ಮೂಲಕ ವಿಭಿನ್ನವಾಗಿ ಅಟಲ್ ಹುಟ್ಟು ಹಬ್ಬ ಆಚರಿಸಿದ ಸಂದರ್ಭ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಜನತೆಗೆ ಸಿಹಿ ಹಂಚಿ, ಚನ್ನಕೇಶವಸ್ವಾಮಿ ದಾಸೋಹ ಸಮಿತಿಯಲ್ಲಿ ಊಟವನ್ನು ಬಡಿಸುತ್ತಿರುವ 10 ಮಹಿಳೆಯರಿಗೆ ಉಚಿತ ಸಮವಸ್ತ್ರವನ್ನು ಬಿಜೆಪಿ ಘಟಕದಿಂದ ವಿತರಿಸಲಾಯಿತು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೆಣ್ಣೂರು ಪೂರ್ಣೇಶ್,ಮುಖಂಡರಾದ ಶ್ರೀಧರ್, ವಿಜಯಲಕ್ಷ್ಮಿ ಜಯಲಿಂಗಪ್ಪ, ಕೋಟೆ ಶ್ರೀನಿವಾಸ್, ಶಿವಣ್ಣ, ಶಾಂತಮ್ಮ ಇತರರು ಇದ್ದರು.
ರಸ್ತೆ ಕಾಮಗಾರಿ: ಶೀಘ್ರ ರು. 300 ಕೋಟಿ ಬಿಡುಗಡೆ
ಹಾಸನ: ಜಿಲ್ಲೆಯ ನಾನಾ ತಾಲೂಕು ರಸ್ತೆ ಕಾಮಗಾರಿಗಾಗಿ ರಾಜ್ಯ ಸರ್ಕಾರ ಜಿಲ್ಲೆಗೆ 300 ಕೋಟಿ ರುಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತಿದ್ದು, ಜೆಡಿಎಸ್ ಕಾಲಾವಧಿಯಲ್ಲಿ ಇರುವವರೆಗೂ ಈ ಪ್ರಮಾಣದ ಹಣ ಬಿಡುಗಡೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ ಹೇಳಿದರು. ಡೈರಿ ವೃತ್ತದಿಂದ ಸಾಲಗಾಮೆ ರಸ್ತೆಯ ರಿಂಗ್ ರಸ್ತೆಗೆ 28 ಕೋಟಿ ರು. ಬಿಡುಗಡೆ ಆಗಿದೆ. ಈಗಾಗಲೇ ಪ್ರಾರಂಭದಲ್ಲಿ 5 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ರೈಲ್ವೆ ಬಜೆಟ್ನಲ್ಲಿ ಹಾಸನ-ಹೊಳೆನರಸೀಪುರ ಸಂಪರ್ಕ ರಸ್ತೆಯ ಮೇಲ್ಸೇತುವೆಗಾಗಿ 36 ಕೋಟಿ ರು. ಜತೆಗೆ 18 ಕೋಟಿ ಸೇರ್ಪಡೆಗೆ ಆದೇಶ ಮಾಡಲಾಗಿದೆ. ಸಕಲೇಶಪುರ ಸುತ್ತ ಮುತ್ತಲ ಜನರ ಸಮಸ್ಯೆ ಅರಿತು ಕಾಡಾನೆ ಹಿಡಿಯಲು ಅನುಮತಿ ಕೇಳಲಾಗಿದ್ದು, ಇನ್ನು 15 ದಿವಸಗಳ ಒಳಗೆ ಎಲ್ಲಾ ಆನೆಯನ್ನು ಸ್ಥಳಾಂತರ ಮಾಡುವ ಮೂಲಕ ರೈತರಿಗೆ ಶಾಶ್ವತ ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದು ಭರವಸೆ ನೀಡಿದರು.
ಪಿಡಿಓಗಳಿಗೆ ತರಬೇತಿ ಕಾರ್ಯಕ್ರಮ
ಹಾಸನ: ಗ್ರಾಮೀಣ ಪ್ರದೇಶದ ಜನರೊಂದಿಗೆ ಸ್ಪಂದಿಸಿ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವಂತೆ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ ಕರೆ ನೀಡಿದರು.
ಜಿಲ್ಲಾ ತರಬೇತಿ ಕೇಂದ್ರದಲ್ಲಿ ನೂತನವಾಗಿ ಆಯ್ಕೆಗೊಂಡಿರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಅನೇಕ ಸಮಸ್ಯೆಗಳಿರುತ್ತವೆ.
ನ್ಯಾಯಯುತವಾಗಿ ಪರಿಶೀಲಿಸಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುವಂತೆ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎಚ್.ಸಿ.ಪುಟ್ಟಸ್ವಾಮಿ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಗೌಡ ಇತರರು ಇದ್ದರು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ನಾಗರಾಜು ಸ್ವಾಗತಿಸಿದರು. ಜಯಸ್ವಾಮಿ ವಂದಿಸಿದರು.
'ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ'
ಅರಕಲಗೂಡು: ಮಕ್ಕಳಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಶಿಕ್ಷಕರ ಭವನದಲ್ಲಿ ಏಕಲ್ ವಿದ್ಯಾಲಯ ಯೋಜನೆಯ ಕಲಿಕೆಯಲ್ಲಿ ಹಿಂದುಳಿದಿರುವ ಒಂದರಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸಂಸ್ಕಾರ ಸಂಗ್ರಾಮ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಯೋಜನೆಯಡಿ ಗ್ರಾಮಾಂತರ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಬಗೆಗೆ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಹಾಗೂ ಜಿಲ್ಲಾ ಅಂಚಲಲ್ಸಮಿತಿ ಕಾರ್ಯದರ್ಶಿ ಪಿ.ನಂದಕುಮಾರ್, ದೊಡ್ಡಮಗ್ಗೆ ಸಂಚ್ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಅಂಚಲ್ ಮೌಲ್ಯಾಂಖನ ಪ್ರಮುಖ ಜಿ.ಜಿ. ಕೇಶವ ಇತರರು ಉಪಸ್ಥಿತರಿದ್ದರು.
ಇಂದು ಜಿಲ್ಲಾ ಗ್ರಾಪಂ ನೌಕರರ ಸಭೆ
ಹಾಸನ: ನಗರದ ಕೋರ್ಟ್ ಆವರಣದಲ್ಲಿರುವ ಪತ್ರಕರ್ತರ ಭವನದ ಹಿಂಬಾಗದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಸ್ವಾಭಿಮಾನಿ ಭವನದಲ್ಲಿ ಡಿ. 29ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಗ್ರಾಮ ಪಂಚಾಯತ್ ನೌಕರರ ಸಭೆ ಕರೆಯಲಾಗಿದೆ ಎಂದು ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದ್ದಾರೆ. ಸಭೆಗೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಾಡಗೌಡ ಆಗಮಿಸಿ, ರಾಜ್ಯ ಮಟ್ಟದಲ್ಲಿ ಆರ್ಡಿಪಿಆರ್ನಲ್ಲಿ ಆಗಿರುವ ಬೆಳವಣಿಗೆಗಳು ಹಾಗೂ ನೌಕರರ ಬೇಡಿಕೆಗಳು ಮತ್ತು ಸರ್ಕಾರದ ಸ್ಪಂದನೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಭೆಯು ಅತ್ಯಂತ ಮಹತ್ವದ್ದಾಗಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳ ನೌಕರರು ಕಡ್ಡಾಯವಾಗಿ ಸಭೆ ಆಗಮಿಸಬೇಕೆಂದು ಕೋರಿದ್ದಾರೆ.
ಕ್ರಿಸ್ಮಸ್ ಆಚರಣೆ...
ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಸಮೀಪದ ಎಂ. ದಾಸಪುರದ ಚರ್ಚ್ನಲ್ಲಿ ರೋಮನ್ ಕ್ಯಾಥೋಲಿಕ್ ಪಂಥದವರು ಪವಿತ್ರ ಕುಟುಂಬ ಕ್ರಿಸ್ಮಸ್ ಹಬ್ಬದ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಏಸು ಕ್ರಿಸ್ತನಿಗೆ ಬುಧವಾರ ಪ್ರಾರ್ಥನೆ ಸಲ್ಲಿಸಿ ಹೊಸ ವರ್ಷದ ಶುಭಾಶಯ ಹಂಚಿಕೊಂಡರು.
ಅವರು ಹೇಳಿದ್ದು
ವಿಧಾನಸೌಧ ಮಾಲ್ ಆಗಿಬಿಟ್ಟಿದೆ. ಅಲ್ಲಿ ಈಗ ಏನನ್ನು ಬೇಕಾದರೂ ಕ್ರಯ ಮಾಡಬಹುದು, ಏನನ್ನು ಬೇಕಾದರೂ ಮಾರಾಟ ಮಾಡಬಹುದು.
ಟಿ ವಿಶ್ವನಾಥ್, ಸಂಸದ
ಒಳಮರ್ಮ
ವಿಧಾನಸೌಧದಲ್ಲಿ ಕುಳಿತು ಏನೇ ಡೀಲ್ ಮಾಡಿದ್ರೂ ಯಾರೂ ಕೇಳಂಗಿಲ್ಲ. ಏಕೆಂದರೆ ಅದು 'ಮಾಲ್' ಎಂದು ಹೇಳುತ್ತಿದ್ದಾರೆ.
ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
ಅಗ್ಝಝಢಿಜಝಢಿಝ್ಠಇಛಡಿ
ನಮ್ಮ ಕಚೇರಿ ವಿಳಾಸ
ಎಂಐಜಿ 16, 2ನೇ ಮುಖ್ಯರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ, ಕುವೆಂಪುನಗರ, ಹಾಸನ - 573201 ದೂ.: 269511, ಮೊ.ಸಂ. : 9448323207
ಎಂಐಜಿ 16, 2ನೇ ಮುಖ್ಯರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ, ಕುವೆಂಪುನಗರ, ಹಾಸನ - 573201 ದೂ.: 269511, ಮೊ.ಸಂ. : 9448323207
ನೀವು ಕನ್ನಡಪ್ರಭ ಪತ್ರಿಕೆಗೆ ಚಂದಾದಾರರಾಗಬೇಕೆ? ಸಂಪರ್ಕಿಸಿ ದೂರವಾಣಿ
8884216777
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

