ಜಿಲ್ಲಾ ಕಾಂಗ್ರೆಸ್ ಈಗ ಒಡೆದ ಮನೆ?
ದಯಾಶಂಕರ ಮೈಲಿ
ಕ.ಪ್ರ.ವಾರ್ತೆ ಹಾಸನ ಡಿ.29
ಈಗ ಹಾಸನ ಜಿಲ್ಲಾ ಕಾಂಗ್ರೆಸ್ ಅಕ್ಷರಶಃ ಒಡೆದ ಮನೆಯಾಗಿದೆ. ಕಾಂಗ್ರೆಸ್ ಮುಖಂಡರು ಸಾರ್ವಜನಿಕವಾಗಿ ಪರಸ್ವರ ಟೀಕೆ, ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ಮುರಿದು ಬಿದ್ದ ಮನೆಯಾಗುತ್ತದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಮಂಡ್ಯ ಮತ್ತು ರಾಮನಗರ ಲೋಕಸಭೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರು, ನಮ್ಮ ಮುಂದಿನ ಟಾರ್ಗೆಟ್ ಹಾಸನ ಎಂದು ಆರ್ಭಟಿಸಿದ್ದರು. ಆದರೆ ಇದು ಬರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಮುರುಟಿ ಹೋಗುವ ಲಕ್ಷಣಗಳು ಕಾಣುತ್ತಿವೆ.
ಠುಸ್ ಪಟಾಕಿ?: ಹೀಗೆ, ಒಂದೇ ಪಕ್ಷದ ಮುಖಂಡರು ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿರುವುದು ಪಕ್ಷ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಮುಖಂಡರ ಕಚ್ಚಾಟ ಪಕ್ಷ ಸಂಘಟನೆಗೆ ಮಾತ್ರವಲ್ಲದೇ ಎದುರಾಗುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಂಥಹ ಘಟಾನುಘಟಿ ರಾಜಕಾರಣಿಯನ್ನು ಎದುರಿಸಲು ಕಷ್ಟವಾಗುತ್ತದೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಹೇಳಿರುವ, ಹಾಸನ ಮುಂದಿನ ಟಾರ್ಗೆಟ್ ಎಂಬ ಸವಾಲಿನ ಮಾತು ಠುಸ್ ಪಟಾಕಿ ಆಗುತ್ತದೆ ಎಂಬುದರಲ್ಲಿ ಸಂಶಯವೇ ಬೇಡ ಎಂಬ ಧಾಟಿಯಲ್ಲಿ ವಾದಿಸಲಾಗುತ್ತಿದೆ.
ಒಂದು ಕಡೆ ಪಕ್ಷದ ಮುಖಂಡರು ಒಬ್ಬರ ಮುಖ ಇನ್ನೊಬ್ಬರು ಕಂಡೆ ಆಗದಂತೆ ವರ್ತಿಸುತ್ತಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಇದಕ್ಕೆ ತಮಗೂ ಸಂಬಂಧವಿಲ್ಲ ಎಂಬ ವರ್ತಿಸುತ್ತಿದ್ದಾರೆ. ಹೊಸದರಲ್ಲಿ ತಿಂಗಳಿಗೊಮ್ಮೆ ಬರುವುದಾಗಿ ಹೇಳಿದ ಸಚಿವರು ಹಲವು ತಿಂಗಳಾದರೂ ಜಿಲ್ಲೆಗೆ ಕಾಲಿಟ್ಟಿಲ್ಲ. ತಿಂಗಳಿಗೊಮ್ಮೆಯಾದರೂ ಭೇಟಿ ನೀಡದ ಉಸ್ತುವಾರಿ ಸಚಿವರು ಜಿಲ್ಲೆಯ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿಗಳು ನ್ಯಾಯವಾಗಿ ನಡೆಯುತ್ತಿಲ್ಲ. ಈ ಬಗ್ಗೆ ಹೈಕಮಾಂಡ್ಗೆ ದೂರು ನೀಡುವುದಾಗಿ ಕೆಪಿಸಿಸಿ ಸದಸ್ಯ ವಿನಯಗಾಂಧಿ ಮತ್ತವರ ಬೆಂಬಲಿಗರು ಹೇಳಿಕೆ ನೀಡಿದ್ದರು.
ಖಂಡನೆ: ಇದರಿಂದ ಕುಪಿತರಾದ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಜಯಕುಮಾರ್, ಜಿ.ಎಸ್. ಕುಮಾರಸ್ವಾಮಿ, ಹಾಸನ ಬ್ಲಾಕ್ ಅಧ್ಯಕ್ಷ ಎಸ್.ಕೆ. ರಾಜು ಮತ್ತಿತರರು, ಉಸ್ತುವಾರಿ ಸಚಿವರ ವಿರುದ್ಧ ಮಾತನಾಡಿರುವ ವಿನಯಗಾಂಧಿ ಮತ್ತವರ ಬೆಂಬಲಿಗರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಪಕ್ಷದಿಂದ ಉಚ್ಛಾಟಿಸಬೇಕು ಎಂದು ಖಂಡಾತುಂಡಾವಾಗಿ ಖಂಡಿಸಿದ್ದರು.
ಪ್ರತ್ಯಾರೋಪ: ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ಮುಖಂಡರ ಎಂ.ಕೆ. ಶೇಷೇಗೌಡರು, ರಾಜ್ಯ ಸರ್ಕಾರ 9 ತಿಂಗಳಲ್ಲಿ ಬಿದ್ದು ಹೋಗುತ್ತದೆ ಎಂದು ಕೋಡಿಮಠದ ಶ್ರೀಗಳು ಹೇಳಿರುವುದು ಖಂಡನೀಯ. ಅದು ಅಪ್ಪಟ ಸುಳ್ಳು ಎಂದು ಟೀಕಾ ಪ್ರಹಾರ ನಡೆಸಿದರು. ಇದನ್ನು ಒಪ್ಪಿಕೊಳ್ಳದ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ತಾರಾ ಚಂದನ್, ಮುಖಂಡರಾದ ಅಪ್ಪಾಜಿಗೌಡ ಮತ್ತಿತರರು, ಶೇಷೇಗೌಡರಿಗೆ ಮಠದ ಇತಿಹಾಸವೇ ಗೊತ್ತಿಲ್ಲ.
ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ನರಸಿಂಗರಾವ್, ರಾಷ್ಟ್ರ ಮುಖಂಡರಾದ ಬೂಟಾಸಿಂಗ್, ಎಸ್.ಎಂ. ಕೃಷ್ಣರಂಥಹ ಘಟಾನುಘಟಿ ರಾಜಕಾರಣಿಗಳು ಮಠಕ್ಕೆ ಬಂದು ಭವಿಷ್ಯ ಕೇಳಿಕೊಂಡು ಆಶೀರ್ವಾದ ಪಡೆದುಕೊಂಡು ಹೋಗಿದ್ದಾರೆ. ಅವರು ಮುರ್ಖರಾಗಿ ಕಾಣಿಸುತ್ತಾರೆಯೇ ಶ್ರೀಗಳ ಭವಿಷ್ಯವಾಣಿ ನಿಜವಾಗಿರುವುದು ಉಂಟು ಎಂದು ಪ್ರತ್ಯೋರೋಪ ಮಾಡಿದರು.
ಈಗ ಅಮಾನತ್ತಿನ ಆಟ: ಮತ್ತೀಗ ರಾಜೀವ್ಗಾಂಧಿ ಪಂಚಾಯತ್ರಾಜ್ ಘಟಕ ಜಿಲ್ಲಾಧ್ಯಕ್ಷ ಸಿ.ವಿ. ರಾಜಪ್ಪ, ಜಿಲ್ಲಾ ಎಸ್ಸಿ ಘಟಕದ ಡಿ.ಸಿ. ಸಣ್ಣಸ್ವಾಮಿ ಮತ್ತು ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶೇಷೇಗೌಡರು, ಜಿಲ್ಲಾಧ್ಯಕ್ಷ ಶಿವರಾಂ ಮತ್ತವರ ಬೆಂಬಲಿಗರ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿವರಾಂ, ಕಾರ್ಯಕಾರಿ ಸಮಿತಿ ಸಭೆ ಕರೆದು ತಮ್ಮ ವಿರುದ್ದ ಆರೋಪ ಮಾಡಿದ ಮೂವರನ್ನು ಪಕ್ಷದಿಂದ ಅಮಾನತು ಮಾಡುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.
ಸಮರ್ಥನೆ
ತಮ್ಮನ್ನು ಅಮಾನತು ಮಾಡಿದ ಸಭೆಯಲ್ಲಿ ಇದ್ದವರು ಪಕ್ಷ ವಿರೋಧಿಗಳು. ಅಮಾನತು ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷರಿಗೆ ಮಾಡಿರುವ ಶಿಫಾರಸ್ಸಿಗೆ ಚಿಕ್ಕಾಸಿನ ಕಿಮ್ಮತ್ತು ಇಲ್ಲ. ನಾವು ಪಕ್ಷವನ್ನು ಪ್ರಪಾತಕ್ಕೆ ಉರುಳಿಸುತ್ತಿರುವ ಜಿಲ್ಲಾಧ್ಯಕ್ಷರ ವಿರುದ್ಧ ಟೀಕೆ ಮಾಡಿದ್ದೇವೆ ವಿನಃ ಪಕ್ಷದ ವಿರುದ್ಧವಲ್ಲ. ಪಕ್ಷ ಉಳಿಸಲೆಂದೇ ಅಧ್ಯಕ್ಷ ಶಿವರಾಂ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕೆಂದು ಹೇಳಿದ್ದೇವೆ ಎಂದು ಎಂ.ಕೆ. ಶೇಷೇಗೌಡರು ಸಮರ್ಥಿಸಿಕೊಂಡಿದ್ದಾರೆ.
ಕೆಲ ಕಾಂಗ್ರೆಸಿಗರು ಜಿಲ್ಲಾಧ್ಯಕ್ಷರು ಸೇರಿದಂತೆ ಕೆಲ ಮುಖಂಡರ ಕಾರ್ಯ ವೈಖರಿ ಸರಿಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯವರನ್ನು ಖುದ್ದು ಭೇಟಿ ಮಾಡಿ ದೂರಿದ್ದಾರೆ.
ಹೀಗೆ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಮುಂದೆ ಮುಖಂಡರು ತಮ್ಮ ವಾಕ್ಸಮರವನ್ನು ಮುಂದುವರಿಸಿದರೇ ಕಾಂಗ್ರೆಸ್ ಹಾಸನ ಜಿಲ್ಲೆಯಲ್ಲಿ ಮುರಿದ ಮನೆಯಾಗುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಸಿಎಂ ಬಳಿಗೆ ದೂರು
ಹಾಸನ ಜಿಲ್ಲೆ ಕಾಂಗ್ರೆಸ್ ಮುಖಂಡರು ಈಗ ಪರಸ್ಪರ ವೈಷಮ್ಯದ ಹಾದಿ ತುಳಿಯುತ್ತಿದ್ದು, ಕೆಲವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು. ಇಲ್ಲದಿದ್ದರೇ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದು ದೂರಿರುವುದಲ್ಲದೇ, ಶಿವರಾಂ ವಿರುದ್ಧ ಬಹಿರಂಗವಾಗಿಯೇ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿವರಾಂ ಅವರು, ತಮ್ಮ ಬಹಿರಂಗವಾಗಿ ಟೀಕಿಸಿದ ಮೂವರು ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರಿಗೆ ಶಿಫಾರಸ್ಸು ಮಾಡುವ ನಿರ್ಣಯವನ್ನು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

