ಜ.12 ಹಿಂದುಳಿದ ವರ್ಗಗಳ ಸಮಾವೇಶ
ಕ.ಪ್ರ.ವಾರ್ತೆ ಹಾಸನ ಡಿ. 30
ದಶಮಾನೋತ್ಸವ ಹಾಗೂ ಹಿಂದುಳಿದ ವರ್ಗಗಳ ಜನಜಾಗೃತಿ ಸಮಾವೇಶವನ್ನು ಬೆಂಗಳೂರಿನಲ್ಲಿ ಜ.12ರಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಸುರೇಶ್ ಎಂ. ಲಾತೂರ್ ತಿಳಿಸಿದರು.
ನಗದರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಸೇರಿದಂತೆ ಇತರೆ ಸಚಿವರು, ಸಂಸದರು, ಶಾಸಕರು ಹಾಗೂ ಹಿಂದುಳಿದ ವರ್ಗಗಳ ನೇತಾರರು ಸಮಾರಂಭದಲ್ಲಿ ಭಾಗವಹಿಸಿಲಿದ್ದಾರೆ ಎಂದರು.
ಒಕ್ಕೂಟಕ್ಕೆ ಆಗ್ರಹ: ಸಮಾವೇಶದಲ್ಲಿ ಹಿಂದುಳಿದ ಜಾತಿಗಳು ಶೋಷಣೆಗೆ ಒಳಗಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಮಾನತೆಗಾಗಿ ಹೋರಾಟ ಮಾಡಿ, ರಾಜ್ಯಾದ್ಯಂತ ಸಂಘಟಿಸಿ ಅವರಿಗೆ ಆಗುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಅನ್ಯಾಯದ ಬಗ್ಗೆ ಅರಿವು ಮೂಡಿಸುವುದು. ರಾಜ್ಯ ಸರ್ಕಾರ ಜಾತಿವಾರು ಜನಗಣತಿಯನ್ನು 2014ನೇ ಏಪ್ರಿಲ್ ಮತ್ತು ಮೇ ನಲ್ಲಿ ನಡೆಸಲು ತೀರ್ಮಾನಿಸಿದೆ. ಈ ಜನಗಣತಿಯನ್ನು ಕೂಡಲೇ ನಡೆಸಿ ಹಿಂದುಳಿದ ಜಾತಿಗಳನ್ನು ಗುರುತಿಸುವುದಕ್ಕೆ ಒಕ್ಕೂಟ ಆಗ್ರಹಿಸಲಿದೆ.
ಬೇಡಿಕೆಗಳು: ಹಲವು ಮೇಲ್ವರ್ಗ ಜಾತಿಯ ಸಂಘಗಳು ತಮ್ಮನ್ನು ಪ್ರವರ್ಗ 2ಎ ಗೆ ಸೇರಿಸಬೇಕು ಎಂದು ಸಭೆ ಸಮಾರಂಭಗಳನ್ನು ಮಾಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವೈಜ್ಞಾನಿಕ ಸಮೀಕ್ಷೆಯಿಲ್ಲದೆ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ ಅವರನ್ನು ಪ್ರವರ್ಗ 2ಎ ಗೆ ಸೇರಿಸುವುದು ಒಕ್ಕಟದ ವಿರೋಧವಿದೆ. ಹಿಂದುಳಿದ ವರ್ಗಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿಯೂ ಮೀಸಲಾತಿ ನೀಡಬೇಕು. ಮುಂದಿನ ಮುಂಗಡ ಪತ್ರದಲ್ಲಿ ಅನುದಾನ ರಹಿತ ಹಿಂದುಳಿದ ಜಾತಿಗಳು ನಡೆಸುತ್ತಿರುವ ಉಚಿತ ವಿದ್ಯಾರ್ಥಿ ನಿಲಯದ ನಿರ್ವಹಣ ವೆಚ್ಚಕ್ಕಾಗಿ ರು. 5 ಲಕ್ಷ ಮಂಜೂರು ಮಾಡಲಾಗಿದೆ. ಈ ಅನುದಾನವನ್ನು ರಾಜ್ಯದಲ್ಲಿ ಇರುವ ಹಿಂದುಳಿದ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ನೀಡಬೇಕು. ವಿಧಾನಸಭೆ ಹಾಗೂ ಲೋಕಸಭೆಗೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ತರಬೇಕು ಎಂಬ ಕೇಂದ್ರಸರ್ಕಾರದ ನಿಲುವು ಸ್ವಾಗರ್ತಾಹವಾಗಿದ್ದು, ಅದರಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು. ಹಿಂದುಳಿದ ಜಾತಿಗಳಿಗೂ ಸಹಿತ ವಿಧಾನಸಭೆ ಹಾಗೂ ಲೋಕರಸಭೆಗಳಿಗೆ ರಾಜಕೀಯ ಮೀಸಲಾತಿ ನೀಡಬೇಕು. ರಾಜ್ಯದಲ್ಲಿ ಶೇ. 50ರಷ್ಟು ಹಿಂದುಳಿದ ಜನರಿದ್ದಾರೆ. ಆದರೆ ಕೇವಲ 38 ಶಾಸಕರು ಮಾತ್ರ ಇದ್ದಾರೆ. ಆದ್ದರಿಂದ ರಾಜಕೀಯ ಮೀಸಲಾತಿ ನೀಡಬೇಕು.
ರಾಜ್ಯದಲ್ಲಿ ನಿಗಮ ಮಂಡಳಿ, ಸ್ಥಳೀಯ ಸಂಸ್ಥೆಗಳು ಹಾಗೂ ಸಹಕಾರಿ ಸಂಘಗಳ ನೇಮಕಾತಿಯಲ್ಲಿ ಹಿಂದುಳಿದ ಜಾತಿಯವರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಅವರು ನ್ಯಾಯಯುತವಾದ ಸ್ಥಾನಮಾನಗಳನ್ನು ನಿಗಮ ಮಂಡಳಿ, ಸಹಕಾರ ಸಂಘಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ನೀಡಬೇಕು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಕರ್ನಾಟಕ ಲೋಕಸಭಾ ಆಯೋಗದ ಸ್ಥಾನಮಾನವನ್ನು ಅಧ್ಯಕ್ಷರು ಹಾಗೂ ಇತರ ಸದಸ್ಯರಿಗೆ ನೀಡಲಾಗಿತ್ತು. ಆದರೆ ಸರ್ಕಾರ ಈ ಸ್ಥಾನಮಾನವನ್ನು ತೆಗೆದುಹಾಕಿದ್ದಾರೆ. ಈ ಬಗ್ಗೆ ಚರ್ಚಿಸಿ ಹಿಂದಿನಂತೆ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕು.
ಹಿಂದುಳಿದ ವರ್ಗಗಳ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಗರಿಷ್ಠ ರು. 5 ಲಕ್ಷವನ್ನು ಹಿಂದುಳಿದ ವರ್ಗಗಳ ಆಯುಕ್ತರು ಮಂಜೂರು ಮಾಡುತ್ತಿದ್ದು, ಈ ಹಣ ಸಾಕಾಗದ ಕಾರಣ ಪ್ರತಿ ಸಮುದಾಯ ಭವನಕ್ಕೆ ಆಯುಕ್ತರ ಹಂತದಲ್ಲಿ 25 ಲಕ್ಷ ರು.ಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಹಂತದಲ್ಲಿ ರು. 50 ಲಕ್ಷವನ್ನು ಭವನ ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮಂಜೂರು ಮಾಡಬೇಕು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಒತ್ತಾಯಿಸುವುದಾಗಿ ಹೇಳಿದರು.
ಆದ್ದರಿಂದ ಹಿಂದುಳಿದ ವರ್ಗಗಳ ಜಾತಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಕಾಳೇಗೌಡ, ಜಿಲ್ಲಾಧ್ಯಕ್ಷ ಅಣ್ಣಪ್ಪಶೆಟ್ಟಿ, ಮಹಿಳಾ ಸಂಚಾಲಕಿ ಪ್ರೇಮಮ್ಮ, ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

