ಕುಡಿಯುವ ನೀರಿನ ಕಾಮಗಾರಿ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪ

Updated on: 

ಹಾಸನ: ಕುಡಿಯುವ ನೀರು ಮತ್ತು ಇದಕ್ಕೆ ಪೂರಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬುಧವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪ ನಡೆಯಿತು.
 ಅಧ್ಯಕ್ಷೆ ಅಂಬಿಕಾ ಅವರ ಪತಿ ರಾಮಣ್ಣ ತಮಗೆ ಸಂಬಂಧವಿಲ್ಲದಿದ್ದರೂ ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮೂಗು ತೂರುತ್ತಿದ್ದಾರೆ. ಮೊದಲೇ ಕ್ಷೇತ್ರದಲ್ಲಿ ಸಾಕಷ್ಟು ಹಾಹಾಕಾರ ಉಂಟಾಗಿದೆ. ಇಂತಹ ಸನ್ನಿವೇಶದಲ್ಲಿ ಕೆಲವು ಹಳ್ಳಿಗಳಿಗೆ ಬೋರ್ ವೆಲ್ ಮೂಲಕ ನೀರನ್ನು ಒದಗಿಸಲು ಜಿಪಂ ಗೆ ಕೇಳಿಕೊಳ್ಳಲಾಗಿತ್ತು. ಆದರೆ ಅಧ್ಯಕ್ಷರ ಪತಿ ತಮಗೆ ಬೇಕಾದ ಹಳ್ಳಿಗಳಿಗೆ ಬೋರ್‌ವೆಲ್‌ಗಳನ್ನು ಕೊರೆಸಿ ತಾವು ಕೇಳಿಕೊಂಡಿದ್ದ
ಬೋರ್‌ವೆಲ್‌ಗಳಿಗೆ ಅನುಮತಿ ನೀಡದೆ ತಮಗೆ ಬೇಕಾದ ಪಂಚಾಯ್ತಿಗಳಿಗೆ ಬೋರ್‌ವೆಲ್  ನೀಡಿ ತಮ್ಮ ಪಂಚಾಯ್ತಿಗಳನ್ನು ಕೈಬಿಡಲಾಗಿದೆ ಎಂದು ಸದಸ್ಯ ಕಿಶೋರ್  ಆರೋಪಿಸಿದರು.  ಅಧ್ಯಕ್ಷರ ಪತಿಯೇ ಜಿಲ್ಲಾ ಪಂಚಾಯ್ತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕುಡಿಯುವ ನೀರಿಗೆ ತಾಲೂಕಿನಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದ್ದು, ಅಂತರ್ಜಲ ಬತ್ತಿ ಹೋಗಿದೆ. ಕೆಲವು ಗ್ರಾಮಗಳಲ್ಲಿ ಕುಡಿಯಲು ತೊಟ್ಟು ನೀರಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧ್ಯಕ್ಷರ ಪತಿ ಮಧ್ಯಪ್ರವೇಶಿಸಿ ತಾರತಮ್ಯ ತೋರುತ್ತಿದ್ದಾರೆ. ಆದ್ದರಿಂದ ಕೂಡಲೇ ತಾವು ಸೂಚಿಸಿರುವ ಹೋಬಳಿಗಳಿಗೆ ಕೂಡಲೇ ಬೋರ್‌ವೆಲ್‌ಗಳನ್ನು ನೀಡುವಂತೆ ಆಧಿಕಾರಿಗಳಿಗೆ ನಿರ್ದೇಶನ ನೀಡಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು.
ತಾರತಮ್ಯ ಮಾಡಿಲ್ಲ:  ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅಂಬಿಕಾ ರಾಮಣ್ಣ ಅವರು, ತಾವು ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ರೀತಿಯ ರಾಜಕಾರಣ ಹಾಗೂ ತಾರತಮ್ಯ ಮಾಡುತ್ತಿಲ್ಲ. ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಕುಡಿಯುವ ನೀರಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ತಮ್ಮ ಪತಿ ಯಾವುದೇ ಸರ್ವಾಧಿಕಾರತ್ವ ಸಾಧಿಸುತ್ತಿಲ್ಲ. ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ರಾಜಕೀಯ ಕಾರಣಗಳಿಗಾಗಿ ಆರೋಪ ಮಾಡಿದರೇ ಯಾರು ನಂಬುವುದಿಲ್ಲ ಎಂದು ತಿಗುಗೇಟು ನೀಡಿದರು.  ಸದಸ್ಯ ರಂಗಸ್ವಾಮಿ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ಬೋರ್ ಕೊರೆಯಾಲಾಗುತ್ತಿದೆ. ಈ ವಿಚಾರವಾಗಿ ಯಾರು ಬೋರ್‌ವೆಲ್ ಕೊರೆಸುತ್ತಿದ್ದಾರೆ ಎಂಬ ಮಾಹಿತಿ ಎಲ್ಲೂ ಇಲ್ಲ. ಆದರೆ ಬೋರ್‌ಗಳನ್ನು ಕೊರೆದು ಬಿಲ್‌ಗಳನ್ನು ಮಾತ್ರ ಮಾಡಿಸಿಕೊಳ್ಳಲಾಗುತ್ತಿದೆ. ತಾವು ಕೇಳಿಕೊಂಡ ಸಂದರ್ಭದಲ್ಲಿ ಬೋರ್ ಕೊರೆಯದೇ ಈಗ ಬೋರ್‌ಗಳನ್ನು ಯಾರಿಗೂ ತಿಳಿಸದೇ ಕೊರೆಯುವ ಮೂಲಕ ಅಕ್ರಮ ಎಸಗಲಾಗುತ್ತಿದೆ ಎಂದು ಕಿಡಿಕಾರಿದರು.
ಕಾಮಗಾರಿ ವಿಳಂಬ:   ಸದಸ್ಯ ಸ್ವಾಮೀಗೌಡ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಆಕ್ಷ್ಯನ್ ಪ್ಲಾನ್ ಮಾಡಲು ಅಧಿಕಾರಿಗಳ ಕೊರತೆ ಇದೆ. ಇದರಿಂದ ಕಾಮಗಾರಿಗಳು ಬಹಳ ವಿಳಂಬವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಬರಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಸಾವಿರಾರು ಕಾಮಗಾರಿಗಳು ಬಾಕಿ ಇರುವುದರಿಂದ ಕೂಡಲೇ ಹೆಚ್ಚಿನ ಅಧಿಕಾರಿಗಳನ್ನು ನೇಮಿಸಿ ಆಕ್ಷ್ಯನ್ ಪ್ಲಾನ್ ಮುಗಿಸಬೇಕು ಎಂದು ಒತ್ತಾಯಿಸಿದರು.
 ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಈ ಬಗ್ಗೆ ದೂರುಗಳು ಬಂದಿದ್ದು, ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೂಡಲೇ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಸದಸ್ಯ ಮಲ್ಲಿಗೆವಾಳು ದ್ಯಾವಪ್ಪ ಮಾತನಾಡಿ, ಜಿಪಂ ಎಂಜಿನಿಯರಿಂಗ್ ವಿಭಾಗವು ಸಂಪೂರ್ಣವಾಗಿ ಸತ್ತುಹೋಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಅಧಿಕಾರಿಗಳು ಸಮರೋಪಾದಿಯಲ್ಲಿ ಕೈಗೊಳ್ಳದ ಕಾರಣ ಜನರು ಜನ ಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಈ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.  ಸದಸ್ಯ ಲಕ್ಷ್ಮಣ್ ಮಾತನಾಡಿ, ವಿದ್ಯುತ್ ಇಲಾಖೆಗೆ ಹಣವನ್ನು ಸಂದಾಯ ಮಾಡದ ಕಾರಣ ವಿದ್ಯುತ್ ಇಲಾಖೆಯು ವಿದ್ಯುತ್ ಕಾಮಗಾರಿಗಳನ್ನು ನಡೆಸದೆ ಅರ್ಧಕ್ಕೆ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ಕಂಬಗಳನ್ನು ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಸರಿಯಾಗಿ ವಿದ್ಯುತ್ ನೀಡದ ಕಾರಣ ಜನರು ಪರಿದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಈಗಾಗಲೇ ವಿದ್ಯುತ್ ಇಲಾಖೆಗೆ ಜಿಪಂ ವತಿಯಿಂದ 4 ಕೋಟಿ ರು.ಗಳನ್ನು ಸಂದಾಯ ಮಾಡಲಾಗಿದ್ದು, ಕೆಇಬಿ ಅವರು ಕಾಮಗಾರಿಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದರು.
 ಉಪ ಕಾರ್ಯದರ್ಶಿ (ಅಭಿವೃದ್ಧಿ) ಕರಿಯಪ್ಪ ಮಾತನಾಡಿ, ಅಧಿಕಾರಿಗಳು ಕೂಡಲೇ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಸಿದ್ದಪಡಿಸದಿದ್ದಲ್ಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
 ಜಿಪಂ ಉಪಾಧ್ಯಕ್ಷ ಬಿಳಿ ಚೌಡಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಚ್.ನಾಗರಾಜ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com