ಕೆಲವು ಕಡೆಯಷ್ಟೇ ಮಳೆ ಮಾಪನ- ಕೃಷಿ ಅಧಿಕಾರಿಗಳಿಂದ ತಪ್ಪು ಮಾಹಿತಿ
ಕ.ಪ್ರ. ವಾರ್ತೆ ಟಿ ಹಾರನಹಳ್ಳಿ ಟಿ ಮಾ.5
ಮಳೆ ಬಂದ ಸಂದರ್ಭದಲ್ಲಿ ಮಳೆ ಬೀಳುವ ಪ್ರಮಾಣ ಮತ್ತು ಅಳೆಯುವ ಉದ್ದೇಶದಿಂದ ಯಾವ ಭಾಗಗಳಲ್ಲಿ ಎಷ್ಟು ಮಳೆ ಬೀಳುತ್ತಿದೆ ಎಂಬ ವರದಿಗೆ ಮಳೆಮಾಪನ ಇಟ್ಟಿರುವುದು ಸರಿ. ಆದರೆ ಕೆಲವು ಭಾಗದಲ್ಲಿ ಮಾತ್ರ ಮಳೆ ಮಾಪನ ಇರಿಸಲಾಗಿದೆ. ಈ ಭಾಗದಲ್ಲಿ ಬಿದ್ದ ಮಳೆಗೆ ಅನುಗುಣವಾಗಿ ಸರ್ಕಾರಕ್ಕೆ ವರದಿಗಳು ಹೋಗುತ್ತಿದ್ದು, ಇದು ಅವೈಜ್ಞಾನಿಕ ಕ್ರಮವಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಕೆಲವು ಭಾಗಗಳಲ್ಲಿ ಸಮಷ್ಟಿಯಾಗಿ ಮಳೆಯಾಗದಿದ್ದರೂ ಈ ವರದಿ ಆಧಾರದಂತೆ ಕೃಷಿ ಚಟುವಟಿಕೆ ಇತರೆ ವರದಿಗಳನ್ನು ಸಿದ್ದಪಡಿಸಿ ಕೃಷಿ ಅಧಿಕಾರಿಗಳು ಕಳುಹಿಸುತ್ತಿದ್ದಾರೆ ಎಂಬುದು ರೈತರ ಅಳಲಾಗಿದೆ.
ಈ ಹಿಂದೆ ಸರ್ಕಾರ ಎಲ್ಲಾ ಗ್ರಾಪಂ ವ್ಯಾಪ್ತಿಗಳಿಗೆ ಮಳೆ ಮಾಪನ ಇಡಬೇಕೆಂದು ಚಿಂತನೆ ನಡೆಸಿತ್ತು. ಆದರೆ, ಈ ಯೋಜನೆ ಜಾರಿಗೆ ಬಂದಿಲ್ಲ. ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಮಳೆ ಮಾಪನವಿಟ್ಟರೆ ಇಲ್ಲಿ ಮಳೆ ಬೀಳುವ ಆಧಾರದ ಮೇಲೆ ವರದಿ ಕಳಿಸಲು ಸಹಕಾರವಾಗುತ್ತದೆ. ಇದರಿಂದ ನಿಖರವಾದ ಮಾಹಿತಿ ಸರ್ಕಾರಕ್ಕೆ ತಲುಪಿಸಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ರೈತ ಮುಖಂಡ ಬಸವರಾಜ್ ಹೇಳುವಂತೆ ತಾಲೂಕಿನಲ್ಲಿ ಯಳವಾರೆ, ಕಣಕಟ್ಟೆ, ಜಾವಗಲ್, ಗಂಡಸಿ ಗ್ರಾಮಗಳಲ್ಲಿ ನಾಲ್ಕು ಮಳೆಮಾಪನಗಳಿದ್ದು ಈ ಆಧಾರದ ಮೇಲೆ ವರದಿಗಳು ಸರ್ಕಾರಕ್ಕೆ ತಲುಪುತ್ತಿವೆ. ಆದರೆ ತಾಲೂಕಿನ ಕೆಲವು ಭಾಗದಲ್ಲಿ ಮಳೆಯೇ ಬೀಳುವುದಿಲ್ಲ. ಈ ಮಾಪನ ಇಟ್ಟ ಪ್ರದೇಶದಲ್ಲಿ ಮಳೆ ಬೀಳುತ್ತದೆ. ಈ ಆಧಾರದ ಮೇಲೆ ಕೃಷಿ ಇಲಾಖೆ ಕಳಿಸುವ ವರದಿಗಳು ಎಷ್ಟು ಪ್ರಾಮಾಣಿಕವಾಗಿದೆ ಅಧಿಕಾರಿಗಳು ಯೋಚಿಸಬೇಕಾಗಿದೆ ಎನ್ನುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಹಸಿರು ಸೇನೆ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಕಳೆದ ವರ್ಷ ಸರ್ಕಾರ ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಮಳೆ ಮಾಪನ ಅಳವಡಿಸುವುದಾಗಿ ಹೇಳಿತ್ತು. ಇಲ್ಲಿಯವರೆಗೆ ಈ ಯೋಜನೆ ಆರಂಭಿಸಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಎಷ್ಟಿದೆ ಎಂಬುದನ್ನು ಇದರಿಂದ ತಿಳಿಯುತ್ತದೆ.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಚಪ್ಪ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಜಿಲ್ಲೆಯಲ್ಲಿ 258 ಪಂಚಾಯ್ತಿಗಳಿದ್ದು 38 ಹೋಬಳಿ ಕೇಂದ್ರಗಳು ಸೇರಿ 54 ಸಾಮಾನ್ಯ ಮಳೆ ಕೇಂದ್ರಗಳು ಇವೆ. ಎಲ್ಲಾ ಗ್ರಾಪಂಗಳಲ್ಲಿ ಟೆಲಿಮೀಟರ್ ಅಳವಡಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು ಪಂಚಾಯ್ತಿ ಕಟ್ಟಡಗಳ ಸ್ಥಿತಿ ಬಗ್ಗೆ ವರದಿ ಕೇಳಲಾಗಿತ್ತು. ವರದಿಯ ಆಧಾರದ ಮೇಲೆ ಪಂಚಾಯ್ತಿಗಳಲ್ಲಿ ಮಾಪನ ಅಳವಡಿಸುವ ಬಗ್ಗೆ ಕ್ರಮತೆಗೆದುಕೊಳ್ಳುವುದಾಗಿತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

