ಹೊಳೆನರಸೀಪುರ: ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳ ಮುಖಂಡರು
ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ:
ಸ್ಥಳೀಯ ಸಂಸ್ಥೆಗಳ ಮಿನಿ-ಮಹಾಸಮರದಲ್ಲಿನ ಮತದಾನದ ಮೆಗಾಫೈಟ್ ಮುಕ್ತಾಯಗೊಂಡು ಫಲಿತಾಂಶವಷ್ಟೇ ಬಾಕಿ ಉಳಿದಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳೂ ಇನ್ನಿಲ್ಲದಂತೆ ಕಸರತ್ತು ಮಾಡಿ, ತಮ್ಮ ಕೈಲಾದ ಮಟ್ಟಿಗೆ ಮತಗಳನ್ನು ಸೆಳೆಯಲು ಅವಿರತ ಯತ್ನ ಮಾಡಿ, ಈಗ ತಮ್ಮ ಪ್ರಯತ್ನಕ್ಕೆ ಸಿಗಬಹುದಾದ ಮತಗಳ ಬಗ್ಗೆಯೇ ತಲೆಕೆಡಿಸಿಕೊಂಡು ಅದರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ತಾಲೂಕಿನ ರಾಜಕಾರಣದ ಬಗ್ಗೆ ಹೇಳುವುದಾದರೆ, ಇಲ್ಲಿ ಯಾವುದೇ ಜೆಡಿಎಸ್ ಅಭ್ಯರ್ಥಿ ಜಯ ಸಾಧಿಸಿದಲ್ಲಿ ಅದು ಜೆಡಿಎಸ್ ಅಧಿನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರ ವರ್ಚಸ್ಸು ಹಾಗೂ ಪರಿಶ್ರಮದಿಂದಲೇ ಹೊರತು ಯಾವುದೇ ಅಭ್ಯರ್ಥಿಯ ವೈಯಕ್ತಿಕ ಸಾಮರ್ಥ್ಯದಿಂದಲ್ಲ.
ಹಾಗೆಯೇ ಕಾಂಗ್ರೆಸ್‌ನ ಬಗ್ಗೆ ವಿಶ್ಲೇಷಿಸುವುದಾದರೆ ಇಲ್ಲಿ ಕಾಂಗ್ರೆಸ್ಸಿಗರಿಗೆ ಗೆಲ್ಲುವ ಶಕ್ತಿ ಇದ್ದರೂ ಅಂತಿಮವಾಗಿ ಸೊರಗುವುದು ಆ ಪಕ್ಷದಲ್ಲಿನ ಒಮ್ಮನಸ್ಸಿನ ಒಗ್ಗಟ್ಟಿನ ಕೊರತೆ ಮತ್ತು ಸಾಂಘಿಕ ಹೋರಾಟದ ವೈಫಲ್ಯದಿಂದ ಎಂಬುದನ್ನು ಅರ್ಥ ಮಾಡಿಕೊಂಡಲ್ಲಿ ಇಲ್ಲಿ ಪ್ರಸಕ್ತ ಪುರಸಭಾ ಚುನಾವಣೆಯಲ್ಲಿನ ಫಲಿತಾಂಶದ ಬಗ್ಗೆ ಯಾರು ಬೇಕಾದರೂ ಊಹೆ ಮಾಡಬಹುದಾಗಿದೆ.
ಎರಡು ಹೊಸ ಬೆಳವಣಿಗೆ: ಆದರೆ, ಈ ಬಾರಿಯ ಚುನಾವಣೆಯಲ್ಲಿ ಸರ್ವೇ ಸಾಮಾನ್ಯವಾದ ಮೇಲ್ಕಂಡ ಅಂಶಗಳನ್ನು ಹೊರತುಪಡಿಸಿ ಎರಡು ಹೊಸ ಬೆಳವಣಿಗೆಗಳನ್ನು ಗಮನಿಸಬಹುದಾಗಿದೆ. ಅವುಗಳೆಂದರೆ ಹಿಂದಿನ ಎಲ್ಲಾ ಚುನಾವಣೆಗಳಿಗಿಂತಲೂ ಈ ಬಾರಿ ಸಾಕಷ್ಟು ಪ್ರಬಲ ಎನಿಸಿಕೊಂಡಿದ್ದ ಪ್ರಮುಖ ಜೆಡಿಎಸ್ ಆಭ್ಯರ್ಥಿಗಳೂ ಕೂಡ ಮತದಾರರನ್ನು ಸೆಳೆಯಲು ಇನ್ನಿಲ್ಲದ ಸರ್ವ ರೀತಿಯ ಪ್ರಯತ್ನಗಳೊಂದಿಗೆ ಸತತವಾಗಿ ಬೆವರಿಳಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಒಂದಂಶವಾದರೆ, ದಶಕದಿಂದಲೂ ತನ್ನದೇ ಆದ ವೈಫಲ್ಯದಿಂದ ಸೊರಗಿದ್ದ ಕಾಂಗ್ರೆಸ್ ಈ ಬಾರಿ ಕಡೆಯ ಕ್ಷಣದಲ್ಲಿ ತನ್ನದೇ ಆದ ವೋಟ್ ಬ್ಯಾಂಕನ್ನು ಮರು ಸ್ಥಾಪಿಸಿಕೊಳ್ಳುವಲ್ಲಿ ಅಲ್ಪಮಟ್ಟಿಗೆ ಯಶಸ್ವಿಯಾಯಿತು ಎನ್ನುವುದು ಇನ್ನೊಂದು ಬಹುಮುಖ್ಯ ಅಂಶವಾಗಿದೆ.
ಪಕ್ಷೇತರರ ಟಾಂಗ್: ಇಲ್ಲಿ ಸೋಲು ಗೆಲುವು ಏನಿದ್ದರೂ ಅದು ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆಯೇ ಎಂಬುದು ಸರ್ವವಿಧಿತ. ಆದರೂ, ಈ ಬಾರಿ ಕೆಲವೊಂದು ವಾರ್ಡ್‌ಗಳಲ್ಲಿ ಈ ಎರಡೂ ಪಕ್ಷಗಳಿಗೂ ಟಾಂಗು ನೀಡುವ ಮಟ್ಟಿಗೆ ಪಕ್ಷೇತರ ಅಭ್ಯರ್ಥಿಗಳು ಕೂಡ ತಮ್ಮ ವರ್ಚಸ್ಸಿನಿಂದಲೇ ಎದುರಾಳಿಗಳ ನಿದ್ದೆಗೆಡಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿನ 2ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ರಂಗನಾಥ, 10ನೇ ವಾರ್ಡಿನ ಎಚ್.ವಿ.ಸುರೇಶ್‌ಕುಮಾರ್, 11ನೇ ವಾರ್ಡಿನ ಸರಸ್ವತಿ, 12ನೇ ವಾರ್ಡಿನ ಎಂ.ಎಸ್.ಶಾಂತರಾಜು ಹಾಗೂ ಕೆ.ಪ್ರಶಾಂತ್, 13ನೇ ವಾರ್ಡಿನ ಪರಮೇಶ, ಈ ಅಭ್ಯರ್ಥಿಗಳಿಗೆ ಅವರ ವಾರ್ಡ್‌ಗಳಲ್ಲಿನ ಮತದಾರರ ಒಲವು ಪ್ರಮುಖ ಜೆಡಿಎಸ್ ಹಾಗೂ ಕಾಂಗ್ರೆಸ್ಸಿಗಿಂತಲೂ ಹೆಚ್ಚಿನದಾಗಿದ್ದುದು ವಿಶೇಷವಾಗಿದೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯದ ಯಾವುದೇ ಪುರಸಭೆಗೂ ಬರದಷ್ಟು ಕೋಟಿಗಟ್ಟಳೆ ಅನುದಾನ ಹಾಗೂ ಅಭಿವೃದ್ಧಿಗಳು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ದಕ್ಷತೆಯಿಂದ ಲಭ್ಯವಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕೈಗೊಂಡಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣದಲ್ಲಿದ್ದ ಅಭ್ಯರ್ಥಿಗಳು ಮತದಾರರ ಮುಂದೆ ಮತಯಾಚಿಸಲು ತಮ್ಮ ಅಧಿನಾಯಕ ಎಚ್.ಡಿ.ರೇವಣ್ಣ ಅವರನ್ನೇ ಮುಂದೆ ಬಿಟ್ಟುಕೊಂಡು ಅವರ ನೆರಳಿನಡಿಯಲ್ಲಿ ಮತಯಾಚಿಸಿದ್ದನ್ನು ಕಂಡರೆ, ಇವರು ಅಧಿಕಾರದಲ್ಲಿದ್ದಾಗ ಇನ್ನೆಷ್ಟು ಸಮರ್ಥವಾಗಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿ ತಮ್ಮ ಪಕ್ಷ ಹಾಗೂ ನಾಯಕರಿಗೆ ಕೀರ್ತಿ ತಂದಿದ್ದರು ಎಂಬ ಸಾಮರ್ಥ್ಯದ ಅರಿವಾಗುತ್ತದೆ.
ವೈಫಲ್ಯಗಳೇನೇ ಇರಲಿ: ಇನ್ನು ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಗುರುತಿಸುವುದರಿಂದ ಹಿಡಿದು, ಟಿಕೆಟ್ ಹಂಚುವುದು, ನಂತರದಲ್ಲಿ ಕಣದಲ್ಲಿರುವ ಪಕ್ಷದ ಅಭ್ಯರ್ಥಿಗಳಿಗೆ ಸಂಪನ್ಮೂಲ ನೀಡಿ ಸಹಕರಿಸುವುದು, ಸಮರ್ಥವಾಗಿ ತಮ್ಮ ಅಭ್ಯರ್ಥಿಗಳ ಪರವಾಗಿ ಗಟ್ಟಿಯಾಗಿ ನಿಲ್ಲುವುದೂ ಸೇರಿದಂತೆ ಹಲವು ಸಂದರ್ಭದಲ್ಲಿ ಎಡವಟ್ಟುಗಳನ್ನು ಮಾಡಿಕೊಂಡರೂ, ಮತದಾನದ ದಿನದಂದು ಮಾತ್ರ ಇಡೀ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಸುತ್ತಾಡಿ ಎದುರಾಳಿಗಳ ಸುಲಲಿತ ಓಡಾಟಕ್ಕೆ ಬ್ರೇಕ್ ಹಾಕಲು ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದು ಕಂಡು ಬಂತು.
ಯಾರ ಯಶಸ್ಸು ಮತ್ತು ವೈಫಲ್ಯಗಳೇನೇ ಇರಲಿ, ನಿಜವಾದ ತೀರ್ಪು ನೀಡಿದ ಮತದಾರ ಪ್ರಭು ಮನೆಯಲ್ಲಿದ್ದರೆ, ಅವರು ನೀಡಿರುವ ತೀರ್ಪಿನ ಫಲ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಭದ್ರವಾಗಿದೆ.
ಆದರೂ ಇಲ್ಲಿ ನಡೆಯುತ್ತಿರುವ ಲೆಕ್ಕಾಚಾರಗಳನ್ನು ಗಮನಿಸಿದರೆ 23 ವಾರ್ಡ್‌ಗಳ ಪೈಕಿ ಅವಿರೋಧವಾಗಿ ಆಯ್ಕೆಯಾಗಿರುವ ಎರಡು ವಾರ್ಡ್‌ಗಳೂ ಸೇರಿದಂತೆ 14ರಿಂದ 15ವಾರ್ಡ್‌ಗಳಲ್ಲಿ ಜೆಡಿಎಸ್ ಗೆಲವು ಸಾಧಿಸಿ, ಕಾಂಗ್ರೆಸ್ 5ರಿಂದ 6 ವಾರ್ಡ್‌ಗಳನ್ನು ಗೆದ್ದು, ಪಕ್ಷೇತರ ಅಭ್ಯರ್ಥಿಗಳು 2 ರಿಂದ 3ವಾರ್ಡ್‌ಗಳನ್ನು ಗೆಲ್ಲಬಹುದು ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ.
ಆದರೆ ಇನ್ನೊಂದು ಸಮೀಕ್ಷೆ ಪ್ರಕಾರ ಜೆಡಿಎಸ್ 18 ಸ್ಥಾನ, ಕಾಂಗ್ರೆಸ್ 4 ಸ್ಥಾನ ಇನ್ನುಳಿದ 1ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯ ಕುರಿತಂತೆಯೂ ಪ್ರಬಲ ಲೆಕ್ಕಾಚಾರಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಎಲ್ಲಾ ಸಮೀಕ್ಷೆಗಳ ಆಧಾರದಲ್ಲಿ ಹೇಳುವುದಾದರೆ, ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವು ಮುಂಬರಲಿರುವ ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವುದಂತೂ ಸತ್ಯದ ಸಂಗತಿ ಎಂಬ ಮಾತುಗಳೂ ಕೂಡ ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

