ಕಾನೂನು, ಭಾವನಾತ್ಮಕ ಸಂಬಂಧಗಳ ಬಗ್ಗೆ ಅರಿವು ಮೂಡಿಸಬೇಕು
ಕ.ಪ್ರ. ವಾರ್ತೆ ಹಾಸನ ಮಾ 9
ನ್ಯಾಯಾಧೀಶರ ನೇತೃತ್ವದಲ್ಲಿ ಜನಸಾಮಾನ್ಯರಿಗೆ ಕಾನೂನಿನ ಹಾಗೂ ಭಾವನಾತ್ಮಕ ಸಂಬಂಧಗಳ ಬಗ್ಗೆ ಅರಿವು ಮೂಡಿಸುವಂತ ಕೆಲಸಗಳನ್ನು ಮಾಡಬೇಕು ಎಂದು ಬೆಂಗಳೂರಿನ ಮಧ್ಯಸ್ಥಿಕಾ ಕೇಂದ್ರದ ನಿರ್ದೇಶಕ ಎ.ವಿ.ಚಂದ್ರಶೇಖರ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ದಾಂಪತ್ಯದನುಬಂಧ, ಕೌಟುಂಬಿಕ ವ್ಯಾಜ್ಯಗಳ ಮಧ್ಯಸ್ಥಿಕೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ನವ ವಿವಾಹಿತರು ಸಣ್ಣ ಸಣ್ಣ ಕಾರಣಗಳಿಗೆ ವಿಚ್ಚೇಧನ ಪಡೆಯಲು ಮುಂದಾಗುತ್ತಿದ್ದಾರೆ. ಅಂತಹ ವಿರಸವನ್ನು ಅವರವರೇ ಕುಳಿತ ಸಮಾದಾನದಿಂದ ಬಗೆಹರಿಸಿಕೊಳ್ಳುವಂತಹ ವ್ಯವಸ್ಥೆ ಆಗಬೇಕು ಎಂದರು.
ಹಿಂದೆ ಅವಿಭಕ್ತ ಕುಟುಂಬಗಳಿದ್ದ ಸಂದರ್ಭದಲ್ಲಿ ಸಂಸಾರದಲ್ಲಿ ಏನೇ ಸಮಸ್ಯೆಗಳು ಇದ್ದರೂ ಮುಚ್ಚಿ ಹೋಗುತ್ತಿತ್ತು. ಆದರೆ ಈಗ ವಿಭಕ್ತ ಕುಟುಂಬಗಳಿಂದಾಗಿ ಸಂಸಾರದ ಗುಟ್ಟು ವ್ಯಾಧಿ ರಟ್ಟಾಗುತ್ತಿದೆ. ಅತ್ತೆ ಮಾವ ಇಲ್ಲದಂತಹ ಮನೆಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ದೊಡ್ಡ ವಿಶ್ವಾಸದ ಕೊರತೆ ಹೆಚ್ಚಾಗಿದ್ದರೂ ನಾವು ಪಾಶ್ಚಿಮಾತ್ಯರಿಗಿಂತ ಸ್ವಲ್ಪ ಕಾನೂನಿನ ವ್ಯವಸ್ಥೆ ಹಾಗೂ ವಿವಾಹ ದಾಂಪತ್ಯದ ವಿಚಾರದಲ್ಲಿ ಮುಂದಿದ್ದೇವೆ ಎಂದು ಹೇಳಿದರು.
ನಾಗರಿಕ ಸಮಾಜಕ್ಕೆ ವಿವಾಹ ತಳಪಾಯ: ನಾಗರಿಕ ಸಮಾಜಕ್ಕೆ ವಿವಾಹ ತಳಪಾಯವಾಗಿದ್ದು, ಇಲ್ಲಿ ಬಿರುಕು ಬಿಡುವುದು ಸಹಜ. ಅದನ್ನು ಸಮಾಧಾನದಿಂದ ಸರಿಪಡಿಸಿಕೊಂಡು ದಾಂಪತ್ಯ ನಡೆಸುವುದೇ ದಾಂಪತ್ಯದನುಬಂಧವಾಗಿದೆ. ನಾಗರಿಕ ಸಮಾಜವನ್ನು ಕಟ್ಟಿ ಬೆಳೆಸುವಂತಹ ಜವಾಬ್ದಾರಿ ಎಲ್ಲರ ಮೇಲಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದೇ ದಾಂಪತ್ಯ ಜೀವನ. ಯಾರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದಿಲ್ಲವೋ ಅಂತಹ ದಾಂಪತ್ಯ ಮುರಿದುಹೋಗುತ್ತದೆ ಎಂದರು.
ನಮ್ಮ ಕಾನೂನಿನ ಭೂಮಿಕೆಯನ್ನು ಸರಿಯಾಗಿ ಇಟ್ಟುಕೊಂಡಾಗ ಮಾತ್ರ ಜೀವನಕ್ಕೆ ಅರ್ಥ ಬರಲಿದೆ. ಮನುಷ್ಯನ ಹುಟ್ಟು ಸಾಮಾನ್ಯ ಹಾಗೂ ಸಾವು ಖಚಿತ. ಆದ್ದರಿಂದ ಪ್ರತಿಯೊಬ್ಬರು ಜೀವನದ ಆಗು ಹೋಗುಗಳಿಗೆ ಹೊಂದಿಕೊಂಡು ಜೀವನ ನಡೆಸಬೇಕು. ಅದನ್ನು ಬಿಟ್ಟು ದಾಂಪತ್ಯ ಜೀವನದಲ್ಲಿ ಸ್ವಲ್ಪ ಏರುಪೇರಾದರೂ ಜಗಳಗಳು ಉಂಟಾಗಿ ಪತಿ ಪತ್ನಿ ವಿಚ್ಚೇದನಕ್ಕೆ ಮುಂದಾಗುತ್ತಾರೆ. ಆದಕ್ಕೆ ಜನಸಾಮಾನ್ಯರು ಅವಕಾಶ ನೀಡಬಾರದು ಎಂದು ಹೇಳಿದರು. ಹಿಂದೆ ನ್ಯಾಯಾಧೀಶಕರು ಕೇವಲ ಕೋರ್ಟ್ ಮತ್ತು ಮನೆ ಅಂತ ಮಾತ್ರ ಇದ್ದರು. ಆದರೆ ಪ್ರಸ್ತುತ ನ್ಯಾಯಾಧೀಶರಿಗೆ ಬೇರೆ ಬೇರೆ ರೀತಿಯ ಜವಾಬ್ದಾರಿ ಹೊರಿಸಲಾಗಿದೆ. ದೇಶದಲ್ಲಿ ಬಹು ದೊಡ್ಡ ಸಂವಿಧಾನವನ್ನು ಹೊಂದಿದ್ದು, ಆರ್ಥಿಕ, ಸಾಮಾಜಿಕ ನ್ಯಾಯ ಒದಗಿಸಲು ಸಂಕಲ್ಪ ಹೊಂದಲಾಗಿದೆ ಎಂದರು.ನ್ಯಾಯಾಧೀಶರು ಮತ್ತು ವಕೀಲರು ಒಟ್ಟಿಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಾಗ ಸಮಾಜದಲ್ಲಿರುವ ಕೆಲವು ನ್ಯೂನತೆಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಎ.ಮುಸ್ತಫ ಹುಸೇನ್ ಮಾತನಾಡಿ, ಸಣ್ಣ ಸಣ್ಣ ವೈಷಮ್ಯಗಳಿಗೆ ವಿಚ್ಚೇಧನ ಪಡೆಯುವಂತಹ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ನ್ಯಾಯಾಲಯದಲ್ಲಿ ಸೂಕ್ತ ಕಾರಣಗಳಿದ್ದ ಸಂದರ್ಭದಲ್ಲಿ ಮಾತ್ರ ವಿಚ್ಚೇಧನ ನೀಡಲು ಸಾಧ್ಯವಾಗುತ್ತದೆ. ಸಣ್ಣಮಕ್ಕಳಂತೆ ಕಿತ್ತಾಡಿಕೊಂಡು ವಿಚ್ಫೇದನಕ್ಕೆ ಮುಂದಾಗುವುದು ಸರಿಯಲ್ಲ ಎಂದರು.
ಉಪನ್ಯಾಸ: ಬೆಳಿಗ್ಗೆ ನಡೆದ ಒಂದನೇ ಅಧಿವೇಶನದಲ್ಲಿ ಭಾರತೀಯ ಪರಂಪರೆ ಮತ್ತು ಕೌಟುಂಬಿಕ ಸಾಮರಸ್ಯ ಎಂಬ ವಿಷಯ ಕುರಿತು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಹಾಗೂ ಯೌಗಿಕ ಮನ ಶಾಸ್ತ್ರಜ್ಞ ಬಿ.ಎಸ್.ಶಾಸ್ತ್ರಿ ಮತ್ತು ಮಂಗಳೂರಿನ ಮಾನವ ಸಂಪನ್ಮೂಲ ವಿಕಾಸ ಸಂಶೋಧಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಉಪನ್ಯಾಸ ನೀಡಿದರು.
ಮಧ್ಯಾಹ್ನ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳು ಎಂಬ ವಿಷಯದ ಕುರಿತು ಹಾಸನ ಸರ್ಕಾರಿ ವೈದ್ಯಕೀಯ ಮಹಾ ವಿದ್ಯಾಲಯದ ಮನಶಾಸ್ತ್ರಜ್ಞೆ ಡಾ.ಜಿ.ಭಾರತಿ ಮತ್ತು ಹೊಳೆನರಸಿಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಬಿ.ಇರ್ಷಾದ್ ಉಪನ್ಯಾಸ ನೀಡಿದರು. 3ನೇ ಅಧಿವೇಶನದಲ್ಲಿ ದಾಂಪತ್ಯ ಸಾಫಲ್ಯ ಎಂಬ ವಿಷಯವಾಗಿ ಕನ್ನಡ ಪ್ರಜಾರಿ ಹಿರೇಮಗಳೂರು ಕಣ್ಣನ್ ಉಪನ್ಯಾಸ ನೀಡಿದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಎಚ್.ಜಿ.ವಿಜಯಕುಮಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ವಿಶ್ವನಾಥ್, ಸದಾಶಿವ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

