ಕಳಚಿದ ಜೆಡಿಎಸ್ ತೆನೆಗಳು, ಬಾಚಿಕೊಂಡ 'ಕೈ'
- ದಯಾಶಂಕರ ಮೈಲಿ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತವರು ಜಿಲ್ಲೆ ಅರ್ಥಾತ್ ಜೆಡಿಎಸ್ ಶಕ್ತಿ ಕೇಂದ್ರ ಹಾಸನ ಜಿಲ್ಲೆಯಲ್ಲಿ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೂ ಉಂಟು. ಸಂಘಟನೆ ಕೊರತೆ ನಡುವೆಯೂ ಕಾಂಗ್ರೆಸ್ ಕಳೆದ ಚುನಾವಣೆಗಿಂತ ಈಗ 22 ಸ್ಥಾನಗಳನ್ನು ಹೆಚ್ಚಾಗಿ ಪಡೆದುಕೊಂಡಿದೆ. ಬಿಜೆಪಿಯ ಕಮಲ ಹಿಂದಿಗಿಂತಲೂ ಈಗ ಮುರುಟಿ ಹೋಗಿದೆ ಎಂದೇ ಹೇಳಬಹುದು.
ಆದರೆ ಕೆಜೆಪಿ ಆಲೂರು ಪಟ್ಟಣ ಪಂಚಾಯ್ತಿ ಹಿಡಿದಿರುವುದಲ್ಲದೇ ಹಲವೆಡೆ ತನ್ನ ಖಾತೆ ತೆರೆಯುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಪಕ್ಷೇತರರ ಸಂಖ್ಯೆ ಹೆಚ್ಚಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮುಖಂಡರು ಸಂಯಮ, ವಿವೇಕಗಿಂತ ಹೆಚ್ಚಾಗಿ ಪಕ್ಷವೇ ಮುಖ್ಯ ಎಂಬ ಧ್ಯೇಯ ಪ್ರದರ್ಶಿಸದ ಕಾರಣ ಹಲವೆಡೆ ಬಂಡಾಯದ ಬಿಸಿ ಅನುಭವಿಸಿಬೇಕಾಯಿತು. ಸ್ಥಳೀಯ ಶಾಸಕ ಎಚ್.ಎಸ್. ಪ್ರಕಾಶ್ ಏರಿಗೆ ಎಳೆದರೆ, ಇತರೆ ಮುಖಂಡರು ನೀರಿಗೆ ಎಳೆದರು. ಈ ಹಗ್ಗ ಜಗ್ಗಾಟದಿಂದ ಜೆಡಿಎಸ್ ಹಿಂದಿನ ಚುನಾವಣೆಗಿಂತ ಈಗಿನ ಕಿರು ಕದನದಲ್ಲಿ ಕಳಪೆ ಪ್ರದರ್ಶನ ನೀಡಬೇಕಾಯಿತು.
ಕೆಲ ಕಡೆ ಪರಸ್ಪರ ಸೋಲಿಸಿಕೊಂಡಿದ್ದು ಸಹ ಉಂಟು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣನವರು ಟಿಕೆಟ್ ಹಂಚುವ ವೇಳೆ ತಮ್ಮ ಸಹೋದರಿ ಪುತ್ರಿಯ ವಿವಾಹದಲ್ಲಿ ತಲ್ಲೀನರಾಗಿದ್ದರಿಂದ ಸ್ಥಳೀಯ ಮುಖಂಡರು ಒಮ್ಮತದಿಂದ ಎಲ್ಲರೂ ಸಂಭಾಳಿಸಿಕೊಂಡು ಟಿಕೆಟ್ ಹಂಚುವಲ್ಲಿ ವಿಫಲರಾದರು ಎಂದು ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಜೆಡಿಎಸ್ ಗೊಂದಲವನ್ನು ಕಾಂಗ್ರೆಸ್ ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಿಲ್ಲ ಮತ್ತು ಮುಖಂಡರು ಬೀದಿಗಿಳಿದು ಪ್ರಚಾರ ಮಾಡಲಿಲ್ಲ. ಹಾಸನ ನಗರಸಭೆ, ಬೇಲೂರು, ಸಕಲೇಶಪುರ ಪುರಸಭೆ ಚುನಾವಣೆಯಲ್ಲಿ ಸಂಬಂಧಪಟ್ಟ ಮುಖಂಡರು ನಿರೀಕ್ಷಿತ ಪ್ರಮಾಣದಲ್ಲಿ ಶ್ರಮ ಹಾಕಲಿಲ್ಲ. ಇದರ ಪರಿಣಾಮ ಹಾಸನ ನಗರಸಭೆ, ಆಲೂರು ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಬೇಕಾಯಿತು ಎಂಬುದನ್ನು ಬಿಟ್ಟರೆ ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು, ಚನ್ನರಾಯಪಟ್ಟಣ ಪುರಸಭೆಗಳಲ್ಲಿ ಹಿಂದಿನ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ. ಇದು ಜೆಡಿಎಸ್ಗೆ ಎಚ್ಚರಿಕೆಯ ಗಂಟೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಲೂರು, ಹಾಸನದಲ್ಲಿ ಹಿನ್ನಡೆ: ಆಲೂರು ಪಟ್ಟಣ ಪಂಚಾಯ್ತಿಯಲ್ಲಿ ಕಳೆದ ಬಾರಿ 1 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಸೊನ್ನೆ ಸಂಪಾದಿಸಿದೆ. ಹಾಸನ ನಗರಸಭೆಯಲ್ಲಿ ಹಿಂದೆ 11 ರಲ್ಲಿ ಗೆದ್ದಿದ್ದ ಕಾಂಗ್ರೆಸ್ ತನ್ನ ಸಂಖ್ಯೆಯನ್ನು 9 ಕ್ಕೆ ಇಳಿಸಿಕೊಂಡಿದೆ. ಕಾಂಗ್ರೆಸ್ ಮುಖಂಡರ ಸಂಘಟನೆ ಕೊರತೆ ಮತ್ತಿತರ ಕಾರಣಗಳ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ 3 ರಲ್ಲಿ ಮಾತ್ರ ಗೆಲ್ಲಲು ಸಾಧ್ಯವಿದೆ ಎಂದು ಹೇಳಲಾಗುತ್ತಿತ್ತು. ಆದರೆ ಜೆಡಿಎಸ್ ಮುಖಂಡರ ಗೊಂದಲಮಯ ನಿರ್ಧಾರಗಳಲ್ಲಿ 9 ರಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ.
ಎಟಿಆರ್ ಎಲ್ಲಿ: ಅರಕಲಗೂಡು ಕ್ಷೇತ್ರಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲಿರುವ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಪಕ್ಷ ಸಂಘಟನೆಯನ್ನು ನಿರೀಕ್ಷಿತ ಪ್ರಮಾಣದಲ್ಲಿ ಮಾಡುತ್ತಿಲ್ಲ. ಮುಂದಾದರೂ ವಾಸ್ತವವನ್ನು ಅರ್ಥ ಮಾಡಿಕೊಂಡು ಚುನಾವಣೆ ಎದುರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಫಲಿತಾಂಶ ಗಮನಿಸಿದಾಗ ಅರಸೀಕೆರೆ ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲಿರುವ ಸಿ.ಎನ್. ಬಾಲಕೃಷ್ಣ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆಯನ್ನು ಎದುರಿಸಬೇಕಾತ್ತದೆ. ಈ ನಡುವೆ ಬೇಲೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಅವಿರತ ಹೋರಾಟ ನಡೆಸುತ್ತಿರುವ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡರಿಗೆ ಬೇಲೂರು ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಿರುವುದು ಬಲ ಬಂದಂತೆ ಆಗಿದೆ.
ಆಲೂರಿನಲ್ಲಿ ಕೆಜೆಪಿಗೆ ಬಂಪರ್
ಈ ಚುನಾವಣೆಯಲ್ಲಿ ಕೆಜೆಪಿ ಅರಸೀಕೆರೆ ಮತ್ತು ಸಕಲೇಶಪುರ ಪುರಸಭೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವೆರಡು ಕಡೆ ಹೆಚ್ಚಾಗಿ ಬಾರದೇ ಆಲೂರಿನಲ್ಲಿ 6 ಸ್ಥಾನಗಳನ್ನು ಪಡೆದು ಪಪಂಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅರಸೀಕೆರೆಯಲ್ಲಿ 1, ಹಾಸನ ನಗರಸಭೆಯಲ್ಲಿ 1 ಮತ್ತು ಸಕಲೇಶಪುರ ಪುರಸಭೆಯಲ್ಲಿ 2 ಸ್ಥಾನಗಳನ್ನು ಪಡೆದಿದೆ. 4 ಶಾಸಕರಿದ್ದರೂ ಜೆಡಿಎಸ್ ಆನೇಕ ಸ್ಥಾನಗಳನ್ನು ಕಳೆದುಕೊಂಡಿದ್ದರೆ ಬಿಜೆಪಿ ಅತ್ಯಂತ ಕಳಪೆ ಪ್ರದರ್ಶನ ಮಾಡಿದೆ. ಹೊಳೆನರಸೀಪುರ, ಸಕಲೇಶಪುರ, ಹಾಸನ, ಅರಸೀಕೆರೆಯಲ್ಲಿ ಜೆಡಿಎಸ್ ಶಾಸಕರಿದ್ದರೂ ಈ ಚುನಾವಣೆಯಲ್ಲಿ ನಿರೀಕ್ಷಿತ ಹೋರಾಟ ಮಾಡಿಲ್ಲ. ಅರಸೀಕೆರೆಯಲ್ಲಿ ಕಳೆದ ಚುನಾವಣೆಯಲ್ಲಿ 22 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಈಗ 11 ರಲ್ಲಿ ಗೆದ್ದು 11 ಸ್ಥಾನಗಳನ್ನು ಕಳೆದುಕೊಂಡಿದೆ. ಕೇವಲ 2 ರಲ್ಲಿ ಗೆದ್ದಿದ್ದ ಕಾಂಗ್ರೆಸ್ ಈಗ 11 ರಲ್ಲಿ ಗೆದ್ದಿದೆ. ಹಾಗೆಯೇ ಎಚ್.ಡಿ. ರೇವಣ್ಣನವರು ಪ್ರತಿನಿಧಿಸುವ ಹೊಳೆನರಸೀಪುರದಲ್ಲಿ ಕಾಂಗ್ರೆಸ್ 5 ರಲ್ಲಿ ಗೆದ್ದಿದೆ. ಸಕಲೇಶಪುರದಲ್ಲಿ 6 ಸ್ಥಾನಗಳನ್ನು ಪಡೆದಿದೆ. ಚನ್ನರಾಯಪಟ್ಟಣ ಪುರಸಭೆಯಲ್ಲಿ 8 ರಲ್ಲಿ ಗೆದ್ದಿದೆ. ಹಾಗೆಯೇ ಅರಕಲಗೂಡು ಪಪಂಯಲ್ಲಿ 7 ವಾರ್ಡ್ಗಳಲ್ಲಿ ಜಯಭೇರಿ ಬಾರಿಸಿದೆ.
ಜೆಡಿಎಸ್ಗೆ 90, ಕಾಂಗ್ರೆಸ್ಗೆ 55
2007 ರ ಚುನಾವಣೆಯಲ್ಲಿ ಜಿಲ್ಲೆಯ 1 ನಗರಸಭೆ, 5 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿಗಳ ಒಟ್ಟು 180 ಸ್ಥಾನಗಳ ಪೈಕಿ 126 ರಲ್ಲಿ ಗೆದ್ದಿದ್ದ ಜೆಡಿಎಸ್ 2013 ರಲ್ಲಿ 90 ಸ್ಥಾನಗಳಲ್ಲಿ ಪಡೆದು, 36 ಸ್ಥಾನಗಳನ್ನು ಕಳೆದುಕೊಂಡಿದೆ. ಹಿಂದೆ 33 ಸ್ಥಾನಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಈಗ 55 ಸ್ಥಾನಗಳನ್ನು ಪಡೆದು 22 ಸ್ಥಾನಗಳನ್ನು ಹೆಚ್ಚಿಗೆ ಪಡೆದುಕೊಂಡಿದೆ. ಉಳಿದಂತೆ 7 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈಗ ಕೇವಲ 3 ಸ್ಥಾನಗಳನ್ನು ಪಡೆದು, 4 ಸ್ಥಾನಗಳನ್ನು ಕಳೆದುಕೊಂಡಿದೆ.
ಹೋದ ಬಾರಿ 13 ಪಕ್ಷೇತರರು ಗೆದ್ದಿದ್ದರು. ಈಗ 22 ಮಂದಿ ಪಕ್ಷೇತರರು ಚುನಾಯಿತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

