'ಭೂ' ಬೆದರಿಕೆ; ಕ್ರಮಕ್ಕೆ ಆಗ್ರಹಿಸಿ ಕಾಚೀಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ. ವಾರ್ತೆ ಹಾಸನ ಮಾ.12
ವಿನಾಕಾರಣ ತೊಂದರೆ ನೀಡುತ್ತಿರುವ ಸರ್ಕಾರಿ ಶಾಲೆಯ ಶಿಕ್ಷಕ ಪ್ರಭಾಕರ್ ಹಾಗೂ ಗ್ರಾಮಸ್ಥರಾದ ಉದಯಕುಮಾರ್, ಮೋಹನ್ರವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಬೇಲೂರು ತಾಲೂಕಿನ ಕಾಚೀಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ದಲಿತರಿಗೆ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಬೇಲೂರು ತಾಲೂಕಿನ ಸನ್ಯಾಸಿಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಕಾಚೀಹಳ್ಳಿ ಗ್ರಾಮದ ಸರ್ವೇ ನಂ.77ರಲ್ಲಿ 30 ಎಕರೆ ಸರ್ಕಾರಿ ಗೋಮಾಳವಿದೆ. ಈ ಜಾಗದಲ್ಲಿ ಎಲ್ಲಾ ವರ್ಗದ ಜನರು 30 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸವಾಗಿದ್ದು, ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರು ಈ ಜಾಗದಲ್ಲಿ ಮನೆಯನ್ನು ನಿರ್ಮಿಸಿಕೊಂಡು ಶಾಂತಿಯಿಂದ ವಾಸ ಮಾಡುತ್ತಿದ್ದಾರೆ.
ಗ್ರಾಮದ ಮಂಜಯ್ಯ ಎಂಬವರ ಪುತ್ರ ಪುಟ್ಟರಾಜು ಅವರು ಸರ್ವೇ ನಂ.77ರಲ್ಲಿ 2 ಎಕರೆ ಜಾಗದಲ್ಲಿ ವ್ಯವಸಾಯ ಮಾಡಿಕೊಂಡು ಬೇರೆಯವರಿಗೆ ತೊಂದರೆ ನೀಡದೆ ಕಷ್ಟಪಟ್ಟು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಊರಿನ ಕೆಲವು ಸ್ಥಳೀಯ ಮುಖಂಡರು ಗ್ರಾಮದ ಶಾಲೆಗೆ ಒಂದು ಎಕರೆ ಜಾಗವನ್ನು ಬಿಟ್ಟುಕೊಂಡುವಂತೆ ಪಟ್ಟು ಹಿಡಿದಿದ್ದರು. ಆ ಸಂದರ್ಭದಲ್ಲಿ ಮಾನವೀಯತೆಯಿಂದ ಶಾಲೆಗೆ 1 ಎಕರೆ ಜಾಗವನ್ನು ಬಿಟ್ಟುಕೊಡಲಾಗಿದೆ.
ಹೀಗಿರುವಾಗ ಶಾಲೆಯ ಪಕ್ಕದಲ್ಲಿ ಇನ್ನೂ ಸಾಕಷ್ಟು ಜಾಗವಿದ್ದರೂ ಉದ್ದೇಶಪೂರ್ವಕವಾಗಿ ವಶಪಡಿಸಿಕೊಂಡು, ಶಾಲೆಯ ಪಕ್ಕದಲ್ಲಿ ಇರುವ ಜಾಗವನ್ನು ಬಳಸಿಕೊಳ್ಳದೆ ಬಡ ದಲಿತರಿಗೆ ತೊಂದರೆ ನೀಡಿ ಭೂಮಿಯನ್ನು ಲಪಟಾಯಿಸುತ್ತಿದ್ದಾರೆ. ಈ ಬಗ್ಗೆ ಯಾರಿಗೂ ಸ್ಪಷ್ಟವಾಗಿ ಅರ್ಥವಾಗದ ಕಾರಣ ಭೂಮಿಯನ್ನು ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಂದಾಯ ಅಧಿಕಾರಿಗಳು ಕೂಡ ಯಾವುದೇ ರೀತಿಯ ತೊಂದರೆಗಳನ್ನು ಬಡ ದಲಿತ ಕುಟುಂಬಗಳಿಗೆ ನೀಡುತ್ತಿಲ್ಲ. ಆದರೆ ಶಾಲೆಯ ಮಾಸ್ಟರ್ ಪ್ರಭಾಕರ್ ಮತ್ತು ಗ್ರಾಮಸ್ಥರಾದ ಉದಯಕುಮಾರ್, ಮೋಹನ್ ಸೇರಿದಂತೆ ಇತರರು ಜಾಗವನ್ನು ತೆರವುಗೊಳಿಸದಿದ್ದಲ್ಲಿ ಕಟ್ಟಡವನ್ನು ಕಿತ್ತುಹಾಕಬೇಕಾಗುತ್ತದೆ. ಗುಡಿಸಲಿಗೆ ಬೆಂಕಿ ಹಚ್ಚುತ್ತೇವೆ ಮತ್ತು ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಕುಟುಂಬದರಿಗೆ ಈ ನಿವೇಶನವನ್ನು ಬಿಟ್ಟರೆ ಉಳುಮೆಗೆ ಬೇರೆ ಯಾವುದೇ ರೀತಿಯ ಜಾಗ ಇಲ್ಲ. ಈ ಇವರ ಹೊಟ್ಟೆ ಮೇಲೆ ಹೊಡೆಯಲು ಕೆಲವು ಗ್ರಾಮಸ್ಥರು ಮುಂದಾಗಿದ್ದಾರೆ. ಈ ಮೂಲಕ ದೌರ್ಜನ್ಯ ಎಸಗುವ ಮೂಲಕ ಪದೇ ಪದೇ ತೊಂದರೆ ನೀಡುತ್ತಿದ್ದು, ಭಯದಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಪುಟ್ಟರಾಜು ಅವರ ತಂದೆ ಮತ್ತು ತಾಯಿ ಇಬ್ಬರು ವೃದ್ಧರಾಗಿದ್ದು, ರಾತ್ರಿ ಸಮಯದಲ್ಲಿ ಯಾವಾಗ ಗ್ರಾಮಸ್ಥರು ದಾಳಿ ನಡೆಸುತ್ತಾರೋ ಎಂಬ ಭಯ ಆವರಿಸಿದೆ. ಆದ್ದರಿಂದ ಬೆದರಿಕೆ ಒಡ್ಡಿರುವ ಪ್ರಭಾಕರ್ ಮತ್ತು ಗ್ರಾಮಸ್ಥರಾದ ಉದಯಕುಮಾರ್, ಮೋಹನ್ರ್ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಂಡು ವಾಸವಾಗಿರುವ ಜಾಗದಲ್ಲಿ ತೆರವುಗೊಳಿಸದಂತೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಟಿ.ಸಿ.ಶಿವಕುಮಾರ್, ಟಿ.ಎಂ.ಪುಟ್ಟರಾಜು, ಮಧು, ಮಲ್ಲೇಶ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

