ಹಾಸನ

ಮಧ್ಯವರ್ತಿಗಳಿಂದ ರಾಜ್ಯ ಬೊಕ್ಕಸ ಲೂಟಿ: ಎಚ್ಡಿಕೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ನ. 1
ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ರಾಜ್ಯ ಸರ್ಕಾರ ಅವೈಜ್ಞಾನಿಕ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಈ ಮೂಲಕ ಮಧ್ಯವರ್ತಿಗಳು ರಾಜ್ಯದ ಬೊಕ್ಕಸ ಲೂಟಿ ಮಾಡಲು ಅವಕಾಶ ನೀಡಿದ್ದು, ಕೂಡಲೇ ರಾಜ್ಯದ ಆರ್ಥಿಕ ಸ್ಥಿತಿ ಗತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
  ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ, ಅನಾವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಇನ್ನೂ ಪರಿಹಾರ ನೀಡಿಲ್ಲ. ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಲಾಗಿಲ್ಲ. ಕಾಲುಬಾಯಿ ಜ್ವರದಿಂದ ಮೃತಪಟ್ಟ ಜಾನುವಾರುಗಳಿಗೆ ಸೂಕ್ತ ಪರಿಹಾರ ನಿಗದಿ ಮಾಡಿಲ್ಲ ಮತ್ತು ಹಿಂದಿನ ಅಧಿವೇಶನದಲ್ಲೆ ಡೆಂಘೀ ಜ್ವರದಿಂದ ಮೃತಪಟ್ಟ ಕುಟುಂಬದವರಿಗೆ ಲಕ್ಷ ರು. ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇವತ್ತಿಗೂ ನಯಾಪೈಸೆ ಪರಿಹಾರ ನೀಡಿಲ್ಲ. ಇದನ್ನು ಗಮನಿಸಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇಲ್ಲ ಎಂಬ ಭಾವನೆ ಮೂಡುತ್ತದೆ ಎಂದು ಶಂಕಿಸಿದರು.
ಎಪಿಎಲ್ ಕಾರ್ಡ್ದಾರರಿಗೆ ನೀಡುತ್ತಿದ್ದ ಅಕ್ಕಿಯನ್ನು ರದ್ದು ಮಾಡಿ ಬಿಪಿಎಲ್ಕಾರ್ಡ್ದಾರರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಘೋಷಣೆ ಮಾಡಲಾಯಿತು. ಆದರೆ ಇದು ಕಾಳಸಂತೆಕೋರರು ಅಕ್ಕಿ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಯೋಜನೆ ಅಕ್ಕಿ ಸದ್ಬಳಕೆ ಆಗುತ್ತಿಲ್ಲ. ವಿತರಣೆಯೂ ಸರಿಯಾಗಿ ಆಗುತ್ತಿಲ್ಲ.
ವಿದ್ಯಾಸಿರಿ ಯೋಜನೆಯಡಿ ವಸತಿ ನಿಲಯ ಸೌಲಭ್ಯ ಹೊಂದದ ಕೇವಲ 20 ಸಾವಿರ ಹಿಂದುಳಿದ ವಿದ್ಯಾರ್ಥಿಗಳಿಗೆ ತಲಾ 1,500 ರು. ನೀಡಲಾಗುವುದು ಎಂದು ನಿರ್ಧರಿಸಲಾಗಿದೆ. ಆದರೆ ರಾಜ್ಯಾದ್ಯಂತ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. 20 ಸಾವಿರ ವಿದ್ಯಾರ್ಥಿಗಳು ಮಾತ್ರ ಸೌಲಭ್ಯ ಪಡೆದರೆ ಇನ್ನುಳಿದವರು ಏನು ಮಾಡಬೇಕು.
ಶಾದಿ ಭಾಗ್ಯ: ಯೋಜನೆಯಡಿ ವರ್ಷಕ್ಕೆ ಸಾವಿರ ಕುಟುಂಬಗಳ ಹೆಣ್ಣುಮಕ್ಕಳಿಗೆ ಮಾತ್ರ ತಲಾ 50 ಸಾವಿರ ರು. ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಹಾಗಾದರೆ ಉಳಿದ ಕುಟುಂಬಗಳು ಏನು ಮಾಡಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಸಿಎಂ ಮತ್ತವರ ಸಾಹಿತಿಗಳು, ಪ್ರಗತಿಪರರು ಇತರೇ ಜನಾಂಗಗಳಲ್ಲೂ ಬಡವರಿದ್ದಾರೆ ಎಂಬುದು ಏಕೆ  ಗೊತ್ತಾಗಲಿಲ್ಲ ಎಂದು ಎಚ್ಡಿಕೆ ಪ್ರಶ್ನಿಸಿದರು.
ದಲಿತರು, ಬ್ರಾಹ್ಮಣರು, ಸವಿತಾ ಸಮಾಜ, ನಾಯಕರು, ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಎಲ್ಲಾ ಜನಾಂಗಗಳಲ್ಲೂ ಕಡು ಬಡವರಿದ್ದಾರೆ ಎಂಬ ಸಾಮಾನ್ಯ ತಿಳಿವಳಿಕೆ ಇಲ್ಲದಿರುವುದು ದುರಂತ.
 ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಅವೈಜ್ಞಾನಿಕ ಜನಪ್ರಿಯ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಮಕ್ಮಲ್ಟೋಪಿ ಹಾಕಲಾಗುತ್ತಿದೆ. ಮಧ್ಯವರ್ತಿಗಳು ಬೊಕ್ಕಸ ಲೂಟಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ಸರ್ಕಾರ ಪುಲ್ ಸ್ಟಾಪ್ ಹಾಕಬೇಕು ಎಂದು ಆಗ್ರಹಿಸಿದರು.
ವರ್ಗಾವಣೆ ದಂಧೆ: ಹಿಂದಿನ ಯಾವ ಸರ್ಕಾರಗಳು ಮಾಡದಷ್ಟು ವರ್ಗಾವಣೆ ದಂಧೆ ಈಗಿನ ಸರ್ಕಾರದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆಯಲ್ಲಂತೂ ಅಧಿಕಾರಿಗಳು ದೊಡ್ಡ ಮೊತ್ತದ ಕಪ್ಪಕಾಣಿಕೆಯನ್ನು ತೆತ್ತು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
 ಇಂತಹ ಅಧಿಕಾರಿಗಳು ಭ್ರಷ್ಟಾಚಾರ ನಡೆಸದೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾರೆ ಎಂಬುದು ಭ್ರಮೆಯಷ್ಟೇ. ಅವರಿಂದ ಎಷ್ಟರ ಮಟ್ಟಿಗೆ ರಸ್ತೆಗಳ ದುರಸ್ತಿ ಆಗುತ್ತದೆ   ರಸ್ತೆಗಳನ್ನು ದುರಸ್ತಿ ಪಡಿಸಲು ಪ್ರತಿ ಜಿಲ್ಲೆಗೆ ಕೇವಲ 5 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಹೇಳಿರುವುದು ಹಾಸ್ಯಸ್ಪದ ಎಂದು ಟೀಕಾಪ್ರಹಾರ ನಡೆಸಿದರು.
ರಾಜ್ಯ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಸರ್ಕಾರವಾಗಿದೆ ಹೊರತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿಲ್ಲ. ಸರ್ಕಾರ ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸರ್ಕಾರದ ಲೋಪಗಳನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಳ್ಳಲಾಗುವುದು. ಸರ್ಕಾರವೇ ಮಾಡಿರುವ ತಪ್ಪುಗಳಿಂದ ಅಧಿವೇಶನ ನಡೆಸುವುದು ಸುಲಭವಲ್ಲ ಎಂದು ಹೇಳಿದರು.
ಹಿರೇಮಠ ವಿರುದ್ಧ ಕೇಸ್ ಸರಿಯಲ್ಲ:  ಅಕ್ರಮ ಗಣಿಗಾರಿಕೆ ಹೊರ ತೆಗೆದ ಸಮಾಜ ಪರಿವರ್ತನಾ ಸಂಸ್ಥೆಯ ಎಸ್. ಆರ್. ಹಿರೇಮಠ ಅವರ ವಿರುದ್ಧ ವಿದೇಶಿ ಹಣ ದುರ್ಬಳಕೆ ವಿರುದ್ಧ ಕೇಸ್ ದಾಖಲಿಸಲು ಸಿಎಂ ತ್ವರಿತ ಆದೇಶಿಸಿದ್ದಾರೆ.
 ಆದರೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕಲಾಗುತ್ತಿದೆ. ಸಿಎಂ ಹಿಂಬಾಲಕರೇ ಗಣಿಕೋರರನ್ನು ರಕ್ಷಿಸುತ್ತಿರುವ ಬಗ್ಗೆ ತಮ್ಮಲ್ಲಿ ಅಗತ್ಯ ಮಾಹಿತಿ ಇದೆ ಎಂದು ಎಚ್ಚರಿಕೆ ನೀಡಿದರು.
ಯಡಿಯೂರಪ್ಪನವರಿಗೆ ಕೃತಜ್ಞತೆ: ಮಾಜಿ ಸಿಎಂ ಯಡಿಯೂರಪ್ಪನವರು, ಮಾಜಿ ಪ್ರಧಾನಿ ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೇಳಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ಚುನಾವಣೆ ವೇಳೆ ನಡೆಯುವ ಆಂತರಿಕ ಒಳ ಒಪ್ಪಂದದ ಮೂಲಕ ಬೆನ್ನಿಗೆ ಚೂರಿ ಹಾಕುವುದು ತಪ್ಪು ಎಂದು ಮುಗುಮ್ಮಾಗಿ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.