ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನೊಳಗೆ ಹೂತುಹೋದ ಜೆಸಿಬಿ
ಕ.ಪ್ರ.ವಾರ್ತೆ ಹೊಳೆನರಸೀಪುರ ನ.5
ಇದು ನಿಧಿ ಆಸೆಗಾಗಿ ಕಳ್ಳರ್ಯಾರೋ ರಾತ್ರೋ ರಾತ್ರಿ ಬಗೆದಿರುವ ಗುಂಡಿಯಲ್ಲ. ಬದಲಿಗೆ ಇಲ್ಲಿನ ಪುರಸಭೆ ಒಳಚರಂಡಿಯನ್ನು ದುರಸ್ತಿಗೊಳಿಸಲು ತೆಗೆಸಿರುವ ಗುಂಡಿ. ಕಾಮಗಾರಿಗಾಗಿ ರಸ್ತೆಯನ್ನು ಬಗೆದು ವಾರವೇ ಕಳೆದರೂ ಕಾಮಗಾರಿ ಪೂರ್ಣ ಮಾಡದೆ, ಗುಂಡಿಯನ್ನೂ ಮುಚ್ಚದ ಕಾರಣ ನಾಗರಿಕರು ಈ ರಸ್ತೆಯಲ್ಲಿ ಓಡಾಡದಂತಾಗಿದೆ.
ಪಟ್ಟಣದ ಸೀತಾವಿಲಾಸ ರಸ್ತೆಗೆ ಹೊಂದಿಕೊಂಡಂತೆ ಹಾಗೂ ದಾಸಗೌಡರ ಬೀದಿಯಲ್ಲಿರುವ ರಸ್ತೆಯಲ್ಲಿ ಒಳಚರಂಡಿ ಪದೇ ಪದೇ ತುಂಬಿಕೊಂಡು ವಾರಕ್ಕೊಮ್ಮೆಯಾದರೂ ಕೊಳಚೆ ನೀರು ಉಕ್ಕಿ ರಸ್ತೆ ಮೇಲೆಲ್ಲಾ ಹರಿಯುತ್ತಿತ್ತು. ಇದನ್ನು ಇಲ್ಲಿನ ಪುರಸಭೆಯವರು ಆಗಾಗ್ಗೆ ಸರಿಪಡಿಸುತ್ತಲೇ ಇದ್ದರೂ, ಸಮಸ್ಯೆ ಮುಗಿಯದ ಸಮಸ್ಯೆಯಾಗಿತ್ತು. ಈ ಕಾರಣದಿಂದ ಪುರಸಭೆಯವರು ಹಳೆಯದಾಗಿದ್ದ ಒಳಚರಂಡಿ ಲೈನನ್ನು ತೆಗೆದು ಹೊಸದಾದ ಲೈನನ್ನು ಅಳವಡಿಸಲು ತುರ್ತು ಕಾಮಗಾರಿಯಾಗಿ ಈ ಒಳಚರಂಡಿ ದುರಸ್ಥಿಯನ್ನು ಕೈಗೆತ್ತಿಕೊಂಡಿದ್ದರು.
ಒಳಚರಂಡಿ ದುರಸ್ತಿಗಾಗಿ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ರಸ್ತೆಯೇ ಕುಸಿಯಲಾರಂಭಿಸಿತು. ಏಕಾಏಕಿ ರಸ್ತೆಯ ಮಣ್ಣು ಕುಸಿದ ಪರಿಣಾಮವಾಗಿ ಸ್ಥಳದಲ್ಲಿ ಮಣ್ಣು ತೆಗೆಯುತ್ತಿದ್ದ ಜೆಸಿಬಿ ಯಂತ್ರವೂ ಮಣ್ಣಿನೊಂದಿಗೆ ಕುಸಿದು ಗುಂಡಿಯೊಳಗೆ ಸಿಕ್ಕಿಕೊಂಡಿತು.
ಘಟನಾ ನಂತರ ಸ್ಥಳಕ್ಕೆ ಧಾವಿಸಿದ ಪುರಸಭೆ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಮಣ್ಣಿನೊಳಗೆ ಸಿಲುಕಿದ್ದ ಜೆಸಿಬಿ ಯಂತ್ರವನ್ನು ಹರಸಾಹಸದಿಂದ ಹೊರ ತೆಗೆದರು. ಆದರೆ ನಂತರದಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಈ ಕಾಮಗಾರಿಯನ್ನು ಕೈಗೊಳ್ಳಲು ಯಾವುದೇ ಟೆಂಡರ್ ಕರೆಯದೆ, ತುರ್ತು ಕಾಮಗಾರಿಯಾಗಿ ಗುತ್ತಿಗೆದಾರರೊಬ್ಬರಿಗೆ ವಹಿಸಿ ಬೇಗನೆ ಕಾಮಗಾರಿ ಮುಗಿಸುವಂತೆ ಪುರಸಭೆ ಅಧಿಕಾರಿಗಳು ಹೇಳಿದ್ದರೆನ್ನಲಾಗಿದೆ.
ಆದರೆ ಈಗ ಇದ್ದಕ್ಕಿದ್ದಂತೆಯೇ ಮಣ್ಣೆಲ್ಲ ಕುಸಿದು ಜೆಸಿಬಿ ಯಂತ್ರವೂ ಮಣ್ಣಿನಲ್ಲಿ ಸಿಲುಕಿ ಅದನ್ನು ಹೊರತೆಗೆದ ಬಾಬ್ತು ಗುತ್ತಿಗೆದಾರನ ಮೇಲೆಯೇ ಬಿದ್ದಿದೆ. ಈ ಕಾರಣದಿಂದಾಗಿ ಈ ಕಾಮಗಾರಿಯನ್ನು ಕೈಗೊಂಡಲ್ಲಿ ನಷ್ಟವಾಗುವುದು ಗುತ್ತಿಗೆದಾರನಿಗೆ. ಆದ್ದರಿಂದಲೇ ಕಾಮಗಾರಿ ಅರ್ಧಕ್ಕೆ ನಿಂತು ವಾರವಾಗಿದೆ. ಇದರಿಂದ ಕಾಮಗಾರಿಯ ಸ್ಥಳದಲ್ಲಿನ ಅಕ್ಕ ಪಕ್ಕದ ಮನೆಗಳಲ್ಲಿನ ಒಳಚರಂಡಿ ಸಂಪರ್ಕವೂ ಕೈಕೊಟ್ಟಿದೆ.
ಎಲ್ಲಕ್ಕಿಂತಲೂ ಹೆಚ್ಚಾಗಿ ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದಾಗಿ ಈ ರಸ್ತೆಯಲ್ಲಿನ ವಾಹನ ಹಾಗೂ ನಾಗರಿಕ ಸಂಚಾರಕ್ಕೆ ಇನ್ನಿಲ್ಲದ ತೊಂದರೆಯಾಗಿದ್ದರೂ, ಹಬ್ಬದ ಕಾರಣದಿಂದಾಗಿ ನಾಲ್ಕೈದು ದಿನಗಳ ಸಾಲು ಸಾಲು ರಜೆಯಿಂದಾಗಿ ಪುರಸಭೆಯಲ್ಲಿ ಯಾರನ್ನೂ ಕೇಳಲಾಗದೇ, ಕಾಣಲೂ ಆಗದ ಸ್ಥಿತಿ ನಿರ್ಮಾಣವಾಗಿ ಸುತ್ತಮುತ್ತಲಿನ ನಿವಾಸಿಗಳಷ್ಟೇ ಅಲ್ಲದೇ, ನಾಗರಿಕರಾರೂ ಸಂಚರಿಸಲಾಗದ ಸ್ಥಿತಿ ಇದೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಪುರಸಭೆಯನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

