ರೇಲ್ವೆ ಅಧಿಕಾರಿಗಳ ತಡೆದು ಜನಾಕ್ರೋಶ, ಗೊಂದಲ
ಕ.ಪ್ರ.ವಾರ್ತೆ ಅರಸೀಕೆರೆ ನ. 7
ಲಕ್ಷ್ಮೀಪುರದಿಂದ ಮಲ್ಲೇಶ್ವರಕ್ಕೆ ಹೋಗುವ ದಾರಿಯಲ್ಲಿ ಗೇಟ್ನಿರ್ಮಾಣ ಮಾಡಲು ಹೊರಟ ಇಲಾಖೆಯ ಅಧಿಕಾರಿಗಳನ್ನು ಗುರುವಾರ ಜನರು ತಡೆಹಿಡಿದು ಪ್ರಶ್ನಿಸಿದ್ದರಿಂದ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.
ಪಟ್ಟಣದ ಹೃದಯ ಭಾಗದಲ್ಲಿ ರೇಲ್ವೆ ಹಳಿ ಹಾದು ಹೋಗಿದ್ದು ಎರಡು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ಕಿರುಕುಳ ಉಂಟು ಮಾಡಿದ್ದು ಲಕ್ಷ್ಮೀಪುರದಿಂದ ಅಂಚೆಕೊಪ್ಪಲು, ಮಲ್ಲೇಶ್ವರ ನಗರ ಹಾಗೂ ಜಾವಗಲ್ಗೆ ಹೋಗಲು ಇದ್ದ ಗೇಟನ್ನು ತೆಗೆದುಹಾಕಿ ರೈಲ್ವೆ ಇಲಾಖೆ ತನ್ನ ಅಜ್ಞಾನದಿಂದ ಅವೈಜ್ಞಾನಿಕವಾಗಿ ನಿರ್ಮಿಸಿರುವ ಸೇತುವೆ ಮೂಲಕ ಸಂಚರಿಸಲು ಅನುವು ಮಾಡಿದ್ದರೂ ಇದರಿಂದ ಎರಡು ಕಿ.ಮೀ. ಬಳಸಿ ಬರಬೇಕಾಗುತ್ತದೆಯಲ್ಲದೆ ಇದು ಜನನಿಬಿಡ ಪ್ರದೇಶವಾದುದ್ದರಿಂದ ಕಳ್ಳಕಾಕರು ಹಾಗೂ ಪೋಲಿ ಹುಡುಗರ ಕಿರುಕುಳದಿಂದ ಜನರು ಪರಿತಪಿಸುವಂತಾಗಿದೆ.
ಈಗ ಲಕ್ಷ್ಮೀಪುರದಿಂದ ಮಲ್ಲೇಶ್ವರ ನಗರಕ್ಕೆ ಹೋಗಲು ಇದ್ದ ದಾರಿಗೆ ಗೇಟ್ ಹಾಕುತ್ತಿರುವುದನ್ನು ತಡೆಹಿಡಿದು ದಿನಕ್ಕೊಂದು ಅವಾಂತರ ಸೃಷ್ಟಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಖಂಡಿಸಿದರು. ಇದರಿಂದ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಸುದ್ದಿ ತಿಳಿದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ಥಳಕ್ಕೆ ಧಾವಿಸಿ, ಇಲಾಖೆ ಇರುವುದು ಸಾರ್ವಜನಿಕರ ಅನುಕೂಲಕ್ಕೋ ಅಥವಾ ಕಿರುಕುಳ ನಿಡುವುದಕ್ಕೋ ನಿಮ್ಗೇನು ಹೇಳೋರು-ಕೇಳೋರು ಯಾರೂ ಇಲ್ವೆ ಸಾಮಾನ್ಯ ಜನ್ರಿಗೆ ಈ ರೀತಿ ತೊಂದ್ರೆ ನೀಡೋದೆ ನಿಮ್ಕೆಲ್ಸನಾ, ಇದು ಯಾವ್ ನ್ಯಾಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಯಾವುದೇ ಕಾರಣಕ್ಕೂ ಮೇಲು ಸೇತುವೆ ನಿರ್ಮಾಣವಾಗುವವರೆಗೆ ಇಲ್ಲಿ ಗೇಟ್ ನಿರ್ಮಾಣ ಮಾಡಕೂಡದು ಎಂದು ತಾಕೀತು ಮಾಡಿದರು.
ಮಾಜಿ ಪ್ರಧಾನಿಗಳೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಲ್ಸೇತುವೆ ನಿರ್ಮಾಣ ಮಾಡುವವರೆಗೆ ಯಾವುದೇ ಕಾಮಗಾರಿ ನಡೆಸಿ ಜನರಿಗೆ ತೊಂದರೆ ನೀಡಬೇಡಿ ಎಂದು ಸಲಹೆ ನೀಡಿದ್ದರೂ ಪದೇ ಪದೇ ನಿಮ್ಮ ಇಂತಹ ದೌರ್ಜನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜನನಿಬಿಡ ಪ್ರದೇಶ ರೈಲ್ವೆ ಇಲಾಖೆಗೆ ಒಳಪಟ್ಟಿದೆ ಎಂಬ ಸಬೂಬು ನೀಡಿ ತೊಂದರೆ ನೀಡಲು ಮುಂದಾದರೆ ರಾಜ್ಯ ಸರ್ಕಾರದ ಹಾಗೂ ಪುರಸಭೆಯ ಎಲ್ಲಾ ಸಂಪರ್ಕರಸ್ತೆಗಳನ್ನು ಮುಚ್ಚಲು ಮುಂದಾಗಬೇಕಾದಿತು ಎಂದು ಎಚ್ಚರಿಸಿದರು. ಈಗಾಗಲೇ ರಾಜ್ಯ ಸರ್ಕಾರ ಮೇಲ್ಸೇತುವೆ ನಿರ್ಮಾಣಕ್ಕೆ ಶೇ.50ರಷ್ಟು ಹಣ ನೀಡಲು ಸಚಿವರು ಒಪ್ಪಿಕೊಂಡಿದ್ದು ಇನ್ನೆರಡು ದಿನದಲ್ಲಿ ರೇಲ್ವೆ ಮೇಲ್ಸೇತುವೆ ನೀಲನಕ್ಷೆಯನ್ನು ತಯಾರಿಸಿ ನೀಡದಿದ್ದರೆ ಸೋಮವಾರದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಉಪಾಧ್ಯಕ್ಷೆ ಭಾಗ್ಯಲತಾ ಮಂಜುನಾಥ್, ಸದಸ್ಯರಾದ ಖುಷಿಬಾಬು ಹಾಗೂ ಸ್ಥಳೀಯ ನಿವಾಸಿಗಳು ರೇಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿಯೇ ಇದ್ದ ರೈಲ್ವೆ ಇಲಾಖೆಯ ಅಧಿಕಾರಿಗಳಾದ ತಿರುಮಲ, ರಾಮಕೃಷ್ಣಯ್ಯ, ಎಂಜಿನಿಯರ್ ಆದಿಮೂರ್ತಿ ಸ್ಥಳಕ್ಕೆ ಆಗಮಿಸಿ ರೇಲ್ವೆ ಇಲಾಖೆಯ ಸೂಚನೆಯ ಅನುಸಾರ ರಸ್ತೆ ಬಂದ್ ಮಾಡುವ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದೇವೆ. ತಾವು ರಸ್ತೆ ಸಂಪರ್ಕಕ್ಕೆ ಪರ್ಯಾಯ ಆದೇಶ ಮಾಡಿಸಿದರೆ ರಸ್ತೆ ಬಂದ್ ಮಾಡುವುದಿಲ್ಲವೆಂದು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

