ಹಾಸನ

ಜಿಲ್ಲೆ ಅಭಿವೃದ್ಧಿಗೆ ಧರಣಿ ಮಾಡಿದ್ರೆ ತಪ್ಪೇನು: ದೇವೇಗೌಡ

Published On :

ಕ.ಪ್ರ.ವಾರ್ತೆ೤ ಬೇಲೂರು೤ ನ.8
ರಾಜ್ಯದ ಅಭಿವೃದ್ಧಿಗಾಗಿ ತಾವು ಯಾವುದೇ ಹೋರಾಟಕ್ಕೂ ಸಿದ್ಧವಾಗಿದ್ದು, ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರಲು ಹಿಂಜರಿಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಗುರುವಾರ ಸಮುದಾಯ ಭವನ ಶಂಕುಸ್ಥಾಪನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗಾಗಿ ತಾವು ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಮುಂದೆ ಧರಣಿ ಕುಳಿತಿದ್ದೆ. ಮಾಜಿ ಪ್ರಧಾನಿಯಾಗಿ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ಕೂರುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ಟೀಕೆ ಮಾಡಿದ್ದರು. ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಧರಣಿ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ಈಗಲೂ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಯನ್ನು ಕಡೆಗಣಿಸುತ್ತಿದ್ದು ಅಭಿವೃದ್ಧಿಗಾಗಿ ಒತ್ತಾಯಿಸಿ ತಾವು ಮತ್ತೆ ಧರಣಿ ಕೂರಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಸ್ಪರ್ಧಿಸಲು ರು. 50 ಬೇಕು: ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು,  ಶ್ರೀಸಾಮಾನ್ಯರ ಹಣ ಚುನಾವಣೆಯಲ್ಲಿ ಹೊಳೆಯಾಗಿ ಹರಿಯುತ್ತಿದೆ. ದೇಶ ಹಾಗೂ ರಾಜ್ಯ ಎಷ್ಟು ಕೆಡಬೇಕೋ ಅಷ್ಟು ಕೆಟ್ಟಿದ್ದು ಮುಂದಿನ ದಿನಗಳನ್ನು ನೆನೆದು ತಮಗೆ ಗಾಬರಿಯಾಗುತ್ತಿದೆ.  ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಕನಿಷ್ಟ 50 ಕೋಟಿ ರು. ಇದ್ದರೆ ಮಾತ್ರ ಸಾಧ್ಯ ಎಂಬ ವಾತಾವರಣ ನಿಮಾರ್ಣವಾಗಿದೆ. ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸಬೇಕೋ ಬೇಡವೋ ಎಂಬ ಗೊಂದಲ ತಮ್ಮನ್ನು ಕಾಡುತ್ತಿದೆ ಎಂತಲೂ ಹೇಳಿದರು.
ಕಳೆದ 6 ತಿಂಗಳು ತೀವ್ರ ಅನಾರೋಗ್ಯ ತಮ್ಮನ್ನು ಕಾಡಿತ್ತು. ಆದರೆ ದೇವರ ಅನುಗ್ರಹದಿಂದ ಮತ್ತೆ ನಿಮ್ಮ ಮುಂದೆ ಬಂದು ನಿಲ್ಲುವಂತಾಗಿದೆ. ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ, 18 ತಿಂಗಳು ಮುಖ್ಯಮಂತ್ರಿಯಾಗಿದ್ದು, 13 ತಿಂಗಳು ಪ್ರಧಾನ ಮಂತ್ರಿಯಾಗಿದ್ದು ಕೂಡಾ ದೇವರ ಆಟ ಎಂದು ಈಗಲೂ ತಾವು ಭಾವಿಸುತ್ತಿದ್ದು ಮುಂದಿನ ದಿನವನ್ನು ದೇವರಿಗೇ ಬಿಟ್ಟಿರುವುದಾಗಿ ತಿಳಿಸಿದರು. ತಾವು ಪ್ರಧಾನಿಯಾಗಿದ್ದ 13 ತಿಂಗಳ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದ ಪಾರದರ್ಶಕ ಆಡಳಿತವನ್ನು ನೀಡಿದ ಹೆಮ್ಮೆ ತಮಗಿದೆ. ಪ್ರತಿಪಕ್ಷಗಳು ಕೂಡ ಯಾವುದೇ ಆರೋಪವಿಲ್ಲದ ತಮ್ಮ ಆಡಳಿತವನ್ನು ಪ್ರಶಂಸೆ ಮಾಡಿದ್ದವು. ಜಮ್ಮು ಕಾಶ್ಮೀರ ವಿವಾದವನ್ನು ತಾವೇ ಖುದ್ಧಾಗಿ ಹೋಗಿ ಪರಿಶೀಲಿಸಿ ಬಂದಿದ್ದೆ. ನೀವು ಅಲ್ಲಿಗೆ ಹೋದರೆ ಗುಂಡು ಹೊಡೆಯುತ್ತಾರೆ ಎಂದು ಹೆದರಿಸಿದ್ದರು. ಆದರೆ ಆದಾವುದಕ್ಕೂ ತಾವು ಜಗ್ಗಲಿಲ್ಲ. ಈಗಲೂ ಅಷ್ಟೇ ಲೋಕಸಭೆ ಚುನಾವಣೆಗೆ ದೇವೇಗೌಡರು ನಿಲ್ಲಲಿ, ಖಂಡಿತಾ ಸೋಲಿಸುತ್ತೇವೆ ಎಂದು ಪಣ ತೊಡುವವರಿದ್ದಾರೆ. ಆದರೆ ಜನತೆಯ ಪ್ರೀತಿ ಆಶೀರ್ವಾದ ಇರುವವರೆಗೆ ಅಂತಹ ವಿರೋಧಿಗಳ ಬೆದರಿಕೆಗ ತಾವು ಅಂಜುವುದಿಲ್ಲ ಎಂದು ಹೇಳಿದರು.
ಜನತೆ ರೋಸಿದ್ದಾರೆ: ಈಗಾಗಲೇ ದೇಶವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಹುರಿದು ಮುಕ್ಕಿದ್ದು ಜನತೆ ರೋಸಿ ಹೋಗಿದ್ದಾರೆ. ತೃತೀಯ ರಂಗದ ಬಗ್ಗೆ ಈಗಾಗಲೆ 16 ಪಕ್ಷಗಳು ಸೇರಿ ಸಮಾಲೋಚನೆ ನಡೆಸಿದ್ದು ತಮ್ಮನ್ನು ಆಹ್ವಾನಿಸಿದ್ದಾರೆ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಜತೆ ಕೈ ಜೋಡಿಸಿದ್ದು ತಪ್ಪು ಎಂಬುದು ತಮಗೆ ಗೊತ್ತಿತ್ತು. ಈಗ ಅದರಿಂದ ಪಾಠ ಕಲಿತಿದ್ದು ರಾಜ್ಯ ಜನತೆಯ, ರೈತರ ಪರವಾಗಿ ಹೋರಾಟ ಮಾಡಬೇಕಾದರೆ ಹೆಚ್ಚು ಸ್ಥಾನವನ್ನು  ಜೆಡಿಎಸ್ ಗೆಲ್ಲಬೇಕಾದ ಅನಿವಾರ್ಯತೆ ಇದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ತೋ.ಚ. ಅನಂತಸುಬ್ಬರಾಯ, ಜಿಪಂ ಸದಸ್ಯ ಚಂದ್ರೇಗೌಡ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಜೆಡಿಎಸ್ ಮುಖಂಡ ನಟರಾಜ್ ಮಾತನಾಡಿದರು. ತಾಪಂ ಅಧ್ಯಕ್ಷೆ ಸುಮಿತ್ರಾ ರುದ್ರಯ್ಯ, ಮಾಜಿ ಉಪಾಧ್ಯಕ್ಷ ಮೋಹನ್ಕುಮಾರ್, ಗ್ರಾಪಂ ಮಾಜಿ ಸದಸ್ಯ ಗಣೇಶ್, ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎ.ನಾಗರಾಜ್, ಗ್ರಾಪಂ ಅಧ್ಯಕ್ಷೆ ಸಾಹಿರಾಬಾಹು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.