ಹಾಸನ

ಪ್ರತಿಪಕ್ಷದವರಂತೆ ವರ್ತಿಸಿದ ಕಾಂಗ್ರೆಸ್ ಮುಖಂಡರು

Published On :

ಕ.ಪ್ರ.ವಾರ್ತೆ ,  ಹಾಸನ ,  ನ.13
ಇದೊಂದು ರೀತಿ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಧರಣಿ ನಡೆಸುವ ಜನರಿಂದ ಅಹವಾಲು ಮನವಿ ಸ್ವೀಕರಿಸಬೇಕಾದ ಜಿಲ್ಲಾಧಿಕಾರಿಯೇ ಧರಣಿ ಕುಳಿತಂತೆ...
ಬುಧವಾರ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ ಪರಿಯನ್ನು ಕಂಡು ಈ ಮಾತನ್ನು ಹೇಳಬೇಕಾಗುತ್ತದೆ.
ಕಾಂಗ್ರೆಸ್ ಮುಖಂಡ ಎಚ್.ಕೆ.ಜವರೇಗೌಡ, ಎಚ್.ಪಿ. ಮೋಹನ್, ಎಚ್.ಕೆ. ಮಹೇಶ್ ಹಾಗೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಮಂಜುನಾಥ ದತ್ತ ಅವರು, ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿ.
ಮುಖಂಡರಿಗೆ ಮಂತ್ರಿಗಳು ಏಕೆ, ಮುಖ್ಯಮಂತ್ರಿಗಳೇ ಪರಮಾಪ್ತರಾಗಿದ್ದಾರೆ. ಹಾಗೆಂದ ಮೇಲೆ ಸಿಎಂ ಅವರನ್ನು ಖುದ್ದು ಭೇಟಿ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಹೇಳಿದರೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇತ್ತು. ಹಾಗೇ ಮಾಡದೆ ಸುದ್ದಿಗೋಷ್ಠಿ ನಡೆಸಿ ವಿರೋಧಪಕ್ಷದವರಂತೆ ಆಗ್ರಹಿಸುವುದು ಎಷ್ಟು ಸರಿ. ಆಡಳಿತ ಪಕ್ಷದ ಮುಖಂಡರೇ ವಿರೋಧಪಕ್ಷದವರಂತೆ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದು ಸರಿಯಲ್ಲ ಎಂದು ಹೇಳಲಾಗುತ್ತಿದೆ.
ಮುಖಂಡರು ಗೋಷ್ಠಿಯಲ್ಲಿ ಆಗ್ರಹಿಸಿದ್ದು: ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ತಂಡವೊಂದನ್ನು ರಚಿಸಿ ಕ್ರಿಯಾ ಯೋಜನೆ ತಯಾರು ಮಾಡಬೇಕು.
ಈ ಬಾರಿ ಕೆಲವು ಕಡೆ ಅತೀವೃಷ್ಟಿ ಹಾಗೂ ಮತ್ತೆ ಕೆಲವು ಕಡೆಗಳಲ್ಲಿ ಅನಾವೃಷ್ಟಿ ಉಂಟಾಗಿರುವುದರಿಂದ ಜಿಲ್ಲೆಯ ಕೆರೆ ಕಟ್ಟೆಗಳಿಗೆ ನೀರು ತುಂಬಿಲ್ಲ. ಇದರಿಂದ ಮುಂದಿನ ಎರಡುಮೂರು ತಿಂಗಳಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಜನತೆ ಎದುರಿಸುವಲ್ಲಿ ಅನುಮಾನವಿಲ್ಲ.
ಅದಕ್ಕಾಗಿ ಭೂಗರ್ಭ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಅವರಿಂದ ಜಿಲ್ಲೆಯ ಯಾವ ಯಾವ ಭಾಗದಲ್ಲಿ ಎಷ್ಟೆಷ್ಟು ಅಂತರ್ಜಲ ಮಟ್ಟವಿದೆ ಎಂಬುದನ್ನು ವರದಿಯನ್ನು ಸಿದ್ಧಪಡಿಸಬೇಕು. ಜಿಲ್ಲೆಯಲ್ಲಿ 3 ಜಲಾಶಯಗಳಿದ್ದು, ಶಾಶ್ವತ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಸಹಕಾರ ನೀಡಬೇಕು. ಜೊತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹ ಏನೇ ಕೆಲಸವಿದ್ದರೂ ಕುಡಿಯುವ ನೀರಿನ ವಿಚಾರಕ್ಕೆ ಮೊದಲ ಆದ್ಯತೆ ನೀಡಿ ಕೆಲಸ ನಿರ್ವಹಿಸಬೇಕು.
ಸಮಾಜ ಸೇವಕ ಮಂಜುನಾಥ್ ದತ್ತ ಮಾತನಾಡಿ, ತಾಲೂಕಿನ ಶಾಂತಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯವರು ರಸ್ತೆ ಅಭಿವೃದ್ಧಿ ಪಡಿಸಿದ್ದಾರೆ. ರಸ್ತೆ ಅಭಿವೃದ್ಧಿಗೆ ಜಮೀನು ನೀಡಿದ ರೈತರಿಗೆ ಇನ್ನು ಸರಿಯಾಗಿ ಪರಿಹಾರ ನೀಡಿಲ್ಲ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಶುಲ್ಕ ವಸೂಲಿ ಮಾಡಲು ಮುಂದಾಗಿದೆ. ಜೊತೆಗೆ ಈ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಸರಿಯಾದ ರೀತಿಯಲ್ಲಿ ಅನುವು ಮಾಡಿಕೊಡದೆ ಏಕಾಏಕಿ ಈ ರೀತಿ ರಸ್ತೆ ಶುಲ್ಕ ವಸೂಲಿ ಮಾಡಲು ಮುಂದಾಗಿರುವುದು ಸರಿಯಲ್ಲ.
ಮೊದಲು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಶಾಂತಿಗ್ರಾಮದ ಜನರು ಓಡಾಡಲು ರಸ್ತೆ ವ್ಯವಸೆ ಕಲ್ಪಿಸದೇ ರಸ್ತೆ ಶುಲ್ಕದ ವಸೂಲಿ ಕಾರ್ಯ ಮಾಡಿದರೆ ಅದರ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮುಖಂಡರಾದ ಎಚ್.ಕೆ.ಮಹೇಶ್, ಹೆಮ್ಮಿಗೆ ಮೋಹನ್, ರವಿ ಇತರರು ಇದ್ದರು.
ನಾನು ಕಾಂಗ್ರೆಸಿಗನಲ್ಲ
ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರ ಸಂಬಂಧ ಇಲ್ಲಿಗೆ ಬಂದಿದ್ದೇನೆ ಅಷ್ಟೇ. ನಾನು ಕಾಂಗ್ರೆಸ್ಸಿಗನಲ್ಲ ಎಂದು ಪ್ರಗತಿ ಪರ ಹೋರಾಟಗಾರ ಮಂಜುನಾಥ ದತ್ತ ಸ್ಪಷ್ಟಪಡಿಸಿದ್ದಾರೆ. ಬುಧವಾರ ಕಾಂಗ್ರೆಸ್ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅವರು, ಕಾಂಗ್ರೆಸ್ಸಿಗರೊಂದಿಗೆ ಇಲ್ಲಿಗೆ ಬಂದಿರಬಹುದಾದರೂ ನಾನು ಕಾಂಗ್ರೆಸ್ಸಿಗನಲ್ಲ. ತಾಲೂಕಿನ ಶಾಂತಿಗ್ರಾಮ ಸಮೀಪ ರಸ್ತೆ ಸುಂಕ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಅದನ್ನು ವಿರೋಧ ವ್ಯಕ್ತ ಮಾಡಲಷ್ಟೇ ಇಲ್ಲಿಗೆ ಬಂದಿದ್ದೇನೆ. ಜನ ವಿರೋಧಿ ಕೃತ್ಯಗಳನ್ನು ವಿರೋಧಿಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ ಎಂದು ಪ್ರತಿಪಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.