ಅಕ್ರಮ ಮರಳು ಸಾಗಣೆ; 54 ಲಾರಿ ವಶ
ಹಾಸನ: ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 54 ಲಾರಿಗಳನ್ನು ಶುಕ್ರವಾರ ಜಿಲ್ಲಾದ್ಯಂತ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಹಾಸನ ಉಪವಿಭಾಗಾಧಿಕಾರಿ ಶರತ್, ತಹಸೀಲ್ದಾರ್ ಮಂಜುನಾಥ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರನ್ ಸೇರಿದಂತೆ ಇತರೆ ಅಧಿಕಾರಿಗಳು ದಿಢೀರ್ ಧಾಳಿ ನಡೆಸಿ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಸನ ಸೇರಿದಂತೆ ಚನ್ನರಾಯಪಟ್ಟಣ, ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಲಾರಿಗಳನ್ನು ತಮ್ಮ ವಶಕ್ಕೆ ಪಡೆದರು.
ನಗರದ ಚನ್ನಪಟ್ಟಣ ಸಮೀಪ ಅಕ್ರಮವಾಗಿ ಲಾರಿಗಳಲ್ಲಿ ಮರಳನ್ನು ತುಂಬಿಕೊಂಡು ನಿಂತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ 40 ಲಾರಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಪರವಾನಗಿ ಇಲ್ಲದೆ ಅನಧಿಕೃತವಾಗಿ ಲಾರಿಗಳಲ್ಲಿ ಮರಳು ತುಂಬಿಕೊಂಡು ಮಾರಾಟ ಮಾಡುತ್ತಿದ್ದರಿಂದ ಅಧಿಕಾರಿಗಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು, ಲಾರಿಗಳು ಮತ್ತು ಮರಳನ್ನು ವಶಕ್ಕೆ ತೆಗೆದುಕೊಂಡಿದ್ದು, ಒಂದು ವಾರದಲ್ಲಿ ಮರಳನ್ನು ಹರಾಜು ಮಾಡಲಾಗುತ್ತದೆ.
ಪರವಾನಗಿ ನೀಡಿಲ್ಲವೆಂಬ ಆರೋಪ: ಜಿಲ್ಲಾಡಳಿತ ಮರಳು ಸಾಗಿಸುವ ಲಾರಿಗಳಿಗೆ ಜಿಪಿಆರ್ಎಸ್ ಅಳವಡಿಕೆ ಮಾಡುವಂತೆ ಆದೇಶ ಮಾಡಿದೆ. ಅದರೆ ಲಾರಿ ಮಾಲೀಕರೆಲ್ಲ ಸೇರಿಕೊಂಡು ಲಾರಿ ಬಾಡಿಯನ್ನು ಕಟ್ ಮಾಡಿಸಿಕೊಂಡು ಜಿಪಿಆರ್ಎಸ್ ಅಳವಡಿಸಿಕೊಂಡಿದ್ದೇವೆ. ಜಿಲ್ಲಾಡಳಿತ ಹೇಳಿದಂತೆ ಮರಳು ಲಾರಿಯವರೆಲ್ಲ ನಡೆದುಕೊಂಡಿದ್ದರು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಮರಳನ್ನು ಸಾಗಿಸಲು ಜಿಲ್ಲಾಡಳಿತ ಪರವಾನಗಿ ನೀಡಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳೊಂದಿಗೆ ವಾಗ್ವಾದ: ಈವರೆಗೂ ನಾವು ಜನತಾ ಮನೆಗಳಿಗೆ ಮರಳನ್ನು ಸಾಗಿಸಿದ್ದೇವೆ. ಆದರೆ ಸಾರ್ವಜನಿಕರಿಗೆ ಮರಳು ಸಿಗದಂತಾಗಿದೆ. ಖಾಸಗಿಯವರಿಗೆ ಮರಳು ಸಿಗದಂತಾಗಿರುವುದರಿಂದ ಲಾರಿ ಮಾಲೀಕರು ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮರಳು ಸರಿಯಾಗಿ ಸಿಗದ ಕಾರಣ ಲಾರಿ ಮಾಲೀಕರಿಗೆ ತೊಂದರೆ ಉಂಟಾಗಿದೆ. ಜಿಲ್ಲಾಡಳಿತ ಹೇಳಿದಂತೆ ನಾವು ಜಿಪಿಆರ್ಎಸ್ ಅಳವಡಿಸಿಕೊಂಡಿದ್ದರೂ ಸಹ ಮರಳಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಸಕಲೇಶಪುರ ತಾಲೂಕಿನ ಆಲೆಬೇಲೂರಿನಲ್ಲಿ ಮರಳನ್ನು ಸ್ಟಾಕ್ ಮಾಡಿದ್ದರೂ ಮರಳನ್ನು ಸಾಗಿಸಲು ಪರವಾನಗಿ ನೀಡುತ್ತಿಲ್ಲ. ಇದರಿಂದ ಮರಳ ಸಮಸ್ಯೆ ಬಗೆಹರಿಯುವ ಬದಲಾಗಿ ಉಲ್ಬಣಗೊಂಡಿದೆ. ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವ ಬದಲಾಗಿದೆ ಇನ್ನು ಹೆಚ್ಚಿಗೆ ಮಾಡುತ್ತಿದ್ದಾರೆ. ಮರಳು ಸಾಗಿಸುವ ವಾಹನ ಎಂದು ಪರವಾನಗಿ ಮಾಡಿಸಿದ ಮೇಲೆ ಸಾಗಣೆ ಮಾಡಲು ಮರಳೇ ಸಿಗದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಲಾರಿ ಮಾಲೀಕರು ಪ್ರಶ್ನಿಸಿದರು.
ಪರವಾನಗಿ ಇಲ್ಲದೆ ಮರಳನ್ನು ಸಾಗಿಸುತ್ತಿದ್ದ ದೂರು ಬಂದ ಹಿನ್ನೆಲೆಯಲ್ಲಿ ಉಪವಿಭಾಗಧಿಕಾರಿ ನೇತೃತ್ವದಲ್ಲಿ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದು, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಪರವಾನಗಿ ಹೊಂದಿರುವ ಲಾರಿಗಳನ್ನು ಬಿಟ್ಟು, ಪರವಾನಗಿ ಇಲ್ಲದ ಲಾರಿಗಳಿಗೆ ತಂಡ ವಿಧಿಸಲಾಗುತ್ತದೆ. ಜೊತೆಗೆ ಅಕ್ರಮವಾಗಿ ಲಾರಿಗಳಲ್ಲಿದ್ದ ಮರಳನ್ನು ಒಂದು ವಾರದೊಳಗೆ ಹರಾಜು ಮಾಡಲಾಗುತ್ತದೆ.
- ಮಂಜುನಾಥ್, ತಹಸೀಲ್ದಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

