ಹಾಸನ

ಗ್ರಾಮೀಣರ ಪಟ್ಟಣ ವ್ಯಾಮೋಹ

Published On :

ಹೊಳೆನರಸೀಪುರ: ಪ್ರಸ್ತುತ ಗ್ರಾಮೀಣ ಪ್ರದೇಶಗಳ ಯುವಕರು ವ್ಯವಸಾಯ ಮಾಡುವುದನ್ನು ಕೈಬಿಟ್ಟು ಪಟ್ಟಣ ಸೇರುತ್ತಿರುವುದು ವಿಷಾದಕರ ಸಂಗತಿ ಎಂದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
 ತಾಲೂಕಿನ ತಟ್ಟೇಕರೆ ಪುನರ್‌ವಸತಿ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ಪ್ರತಿಷ್ಠಾಪನೆ ಮತ್ತು ಶ್ರೀರಾಮಮಂದಿರದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ತಾವು ರಾಜಕೀಯಕ್ಕೆ ಬಂದ ನಂತರ ಈ ಗ್ರಾಮ ಸೇರಿದಂತೆ ತಾಲೂಕಿನಲ್ಲಿ ಹಲವು ಗ್ರಾಮಗಳು ಹೇಮಾವತಿ ಅಣೆಕಟ್ಟೆ ನಿರ್ಮಾಣದ ನಂತರ ಶೀತಪೀಡಿತ ಪ್ರದೇಶಗಳಾಗಿದ್ದು, ಅದರಲ್ಲಿ ತಟ್ಟೇಕರೆ ಗ್ರಾಮ ಶೀತಪೀಡಿತ ಪ್ರದೇಶವೆಂದು ಘೋಷಿಸಲಾಯಿತು. ನಂತರ ಗ್ರಾಮವನ್ನು ಪುನರ್‌ವಸತಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದರಿಂದ ಇಂದು ಪುನರ್‌ವಸತಿ ಗ್ರಾಮದಲ್ಲಿ ಬಹುತೇಕ ಎಲ್ಲರಿಗೂ ನಿವೇಶನಗಳನ್ನು ನೀಡಿ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ.
 ಈ ಸಂಬಂದ ನೂತನ ನಿವೇಶನಗಳನ್ನು ನೀಡುವಲ್ಲಿ ಸುಮಾರು 186 ಫಲಾನುಭವಿಗಳು ಇದ್ದು ಅದರಲ್ಲಿ 144 ಮಂದಿಗೆ ನಿವೇಶನಗಳನ್ನು ನೀಡಲಾಗಿದೆ. ಉಳಿದವುಗಳನ್ನು ಸದ್ಯದಲ್ಲೆ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ ಗೌಡರು, ಪುನರ್‌ವಸತಿ ಗ್ರಾಮ ನಿರ್ಮಾಣಕ್ಕಾಗಿ  42 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಪ್ರತಿ ಫಲಾನುಭವಿಗೆ 60 ಅಡಿ ಉದ್ದ 50 ಅಡಿ ಅಗಲದ ನಿವೇಶನಗಳನ್ನು ನೀಡಿ ಜತೆಗೆ ಮನೆ ಕಟ್ಟಲು ತಲಾ ಎಪ್ಪತ್ತೈದು ಸಾವಿರ ರು. ಸಹ ನೀಡಲಾಗಿದೆ.
 ಪುನರ್‌ವಸತಿ ಗ್ರಾಮದಲ್ಲಿಂದು ಉದ್ಥಾಟನೆ ಗೊಳ್ಳುತ್ತಿರುವ ದೇವಾಲಯಕ್ಕೆ ಸುಮಾರು ಅರವತ್ತೈದು ಲಕ್ಷ ರುಪಾಯಿಗಳನ್ನು ನೀರಾವರಿ ಇಲಾಖೆ ಮೂಲಕ ವೆಚ್ಚಮಾಡಲಾಗಿದೆ. ಇದೇ ರೀತಿ ಶೀತಪೀಡಿತವಾಗಿರುವ ಪ್ರದೇಶಗಳಾದ ತೆವಡಳ್ಳಿ ಮತ್ತು ಚಿಕ್ಕಚಾಗಳ್ಳಿ ಗ್ರಾಮಗಳಲ್ಲಿನ ಜನರು ಶೀತ ಪೀಡಿತದಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಆ ಗ್ರಾಮಗಳನ್ನು ಶೀತ ಪೀಡಿತ ಪ್ರದೇಶವೆಂದು ಗುರುತಿಸಿ ಅಲ್ಲಿನ ರೈತರಿಗೆ ದೊರಕಬೇಕಾದ ಎಲ್ಲ ಸವಲತ್ತುಗಳನ್ನು ನೀಡಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
 ತಾವು ಕಳೆದ 1962 ರಲ್ಲಿ ಶಾಸಕರಾದ ನಂತರ ರಾಜಕೀಯ ಜೀವನದಲ್ಲಿ ಏರುಪೇರು ಕಂಡಿದ್ದೇನೆ. ನಾನು ಎಂದೂ ಕುಟುಂಬ ರಾಜಕೀಯ ಮಾಡಿದವನಲ್ಲ. ನಾನು ಶಾಸಕನಾದ ಮೇಲೆ ಬಹಳಷ್ಟು ಮಂದಿಗಳನ್ನು ರಾಜಕೀಯದಲ್ಲಿ ಗುರುತಿಸಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲು ಪ್ರಾಮಾಣಿಕ ಯತ್ನ ಮಾಡಿದ್ದೇನೆ. ಕೆರಗೋಡು ಪುಟ್ಟಸ್ವಾಮಿಗೌಡ, ಅಣ್ಣೇಚಾಕನೇಹಳ್ಳಿ ದೊಡ್ಡೇಗೌಡ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿದೆ. ಜತೆಗೆ ಎಚ್.ಕೆ.ಜವರೇಗೌಡ ಅವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡಿದೆ. ಆದರೆ ಅವರುಗಳು ಮಾಡಿದ್ದಾದರೂ ಏನು  ಎಂದು ಪ್ರಶ್ನಿಸಿದ ಅವರು, ಆ ಸ್ಥಾನಕ್ಕೆರಿದವರು ಯಾರೂ ನನ್ನ ಕುಟುಂಬದವರಲ್ಲ ಎಂಬುದನ್ನು ತಾವು ತಿಳಿಸಬಯಸಿರುವುದಾಗಿ ನುಡಿದರು.
 ತಾವು ಶಾಸಕರಾಗಿದ್ದ ಅವಧಿಯಲ್ಲಿ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸುವ ಸಲುವಾಗಿ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ತರಲು ಪ್ರಯತ್ನಿಸಿ ಸಫಲತೆ ಕಂಡಿದ್ದೆ.
  ಆದರೆ ಕಾರ್ಖಾನೆ ಆರಂಭಕ್ಕೆ ಮುನ್ನ ತಾವು  ಜೈಲು ಸೇರಬೇಕಾದಾಗಿ ರಾತ್ರೋರಾತ್ರಿ ನಮ್ಮ ತಾಲೂಕಿನ ಹೇಮಾವತಿ ಸಹಕಾರಿ ಕಾರ್ಖಾನೆ ಚನ್ನರಾಯಪಟ್ಟಣದ ಶ್ರೀನಿವಾಸಪುರಕ್ಕೆ ಬದಲಾಯ್ತು. ಈಗ ಯಾರು ಬೇಕಾದರು ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆಯ ಪರವಾನಗಿಯನ್ನು ನೋಡಿ ಅದರಲ್ಲಿ ಇರುವುದು ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ, ಹೊಳೆನರಸೀಪುರ ಎಂದು ಇದೆ ಇದನ್ನು ಬದಲಿಸಲು ಇಂದು ಸಾಧ್ಯವಿಲ್ಲ, ಮುಂದೆಯೂ ಸಾಧ್ಯವಿಲ್ಲ ಎಂದರು.
 ಶಾಸಕನಾಗಿದ್ದಾಗಲೂ ತಮ್ಮ ಜಮೀನಿನಲ್ಲಿ ಅಲೂಗಡ್ಡೆ ನಾಟಿ ಮಾಡಿ ಬರುತ್ತಿದ್ದೆ, ಅಂದು ತಮ್ಮ ಪತ್ನಿ ಚನ್ನಮ್ಮ ಅವರು ತಮ್ಮನ್ನು ಶಾಸಕರಾಗಿದ್ದು ಕೊಂಡು ಭೂಮಿಯಲ್ಲಿ ನಾಟಿ ಮಾಡುತ್ತಿದ್ದೀರಲ್ಲ ಎಂದು ಎಷ್ಟೋ ಭಾರಿ ಬೇಸರಿಸಿದ್ದುಂಟು ಎಂದು ಹಳೇಯ ಗತಕಾಲದ ತಮ್ಮ ದೈನಂದಿನ ದಿನಚರಿಯನ್ನು ಸಭಿಕರ ಮುಂದಿಟ್ಟರು.
 ವೇದಿಕೆಯಲ್ಲಿ ಆಸೀನರಾಗಿದ್ದ ದೇವೇಗೌಡ ಅವರು ಹಲವಾರು ಮಹಿಳೆಯರು ತಮ್ಮ ಕುಂದು ಕೊರತೆಗಳನ್ನು ನಿವೇದಿಸಲು ಮುಂದಾದಾಗ ಗೌಡರು ಮಹಿಳೆಯ ಸಮಸ್ಯೆಗಳನ್ನು ಶಾಂತಚಿತ್ತರಾಗಿ ಅವಲೋಕಿಸಿ ತಮ್ಮ ಕೈಲಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
 ಶಾಸಕ ರೇವಣ್ಣ  ಮಾತನಾಡಿ,  ತಟ್ಟೇಕರೆಗ್ರಾಮ ಮುಂದಿನ ದಿನಗಳಲ್ಲಿ ಬೆಳೆದು ಹೊಳೆನರಸೀಪುರ ಪಟ್ಟಣದಂತೆ ಇದು ಸಹ ನಗರ ಪ್ರದೇಶ ಆಗಲಿದೆ ಎಂದು ತಿಳಿಸಿ ಪ್ರಸ್ತುತ ಪಟ್ಟಣದಲ್ಲಿ ನಿವೇಶನದ ಬೆಲೆ ಎರಡು ಸಾವಿರ ದಾಟಿದೆ.
 ನಾವು ಇಂದು ಪುನರ್‌ವಸತಿ ಗ್ರಾಮದಲ್ಲಿ ನೀಡಿರುವ ಬೆಲೆಯನ್ನು ಅವಲೋಕಿಸಿದಾಗಿ ಪ್ರತಿ ನಿವೇಶನದ ಬೆಲೆ ಹತ್ತರಿಂದ ಹನ್ನೇರಡು ಲಕ್ಷಗಳಾಗಲಿದೆ.
  ಅದ್ದರಿಂದ ಹಣದ ಆಸೆಗೆ ನೀವುಗಳು ಪಡೆದಿರುವ ನಿವೇಶನಗಳನ್ನು ಬೇರೆಯವರಿಗೆ ದೊರಕುವಂತೆ ಮಾಡಬಾರದೆಂದು ಫಲಾನುಭವಿಳಿಗೆ ಕಿವಿಮಾತು ಹೇಳಿದರು.
 ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಗ್ರಾಮದ ಹಿರಿಯರು ಇನ್ನೂ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.