ಹಾಸನ

ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ವೇಷ ಸ್ಪರ್ಧೆ

Published On :

ಹೊಳೆನರಸೀಪುರ: ಮಕ್ಕಳ ದಿನಾಚರಣೆ ಪ್ರಯುಕ್ತ ಪಟ್ಟಣದ ವಾಸವಿ ಬಾಲಕರ ಸಂಘ ಮತ್ತು ವಾಸವಿ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಿವಿಧ ವೇಷ ಸ್ಪರ್ಧೆ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು.
ವಿವಿಧ ವೇಷ ಸ್ಪರ್ಧೆಯಲ್ಲಿ ಪುಟ್ಟಬಾಲಕರು ವೇಷ ಭೂಷಣಗಳನ್ನು ತೊಟ್ಟು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು. ಅಕ್ಕಮಹಾದೇವಿ ಸೇರಿದಂತೆ ವಿವಿಧ ವೇಷ ಭೂಷಣಗಳನ್ನು ಮಕ್ಕಳು ಪ್ರದರ್ಶಿಸಿದರು. ಪುಟ್ಟ ಮಕ್ಕಳಾದ ಪುಣ್ಯಶ್ರೀ ಪೇಪರ್ ಪ್ರಾಣಿಯಾಗಿ ಪ್ರಥಮ ಬಹುಮಾನ, ಮೇಘನ ವೆಜಿಟಬಲ್ ಪ್ರಾಣಿಯಾಗಿ ಎರಡನೆ ಬಹುಮಾನ ಹಾಗೂ ಮಹಮದ್ ಸುಖೀಯಾ ಕ್ಷತ್ರೀಯ ವೇಷದಲ್ಲಿ ಮೂರನೆ ಬಹುಮಾನ ಪಡೆದರು. ಸುಮಾರು ಅರವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ದುಷ್ಕರ್ಮಿಗಳಿಂದ ಹಣ್ಣಿನ ಅಂಗಡಿಗೆ ಬೆಂಕಿ
ಕ.ಪ್ರ.ವಾರ್ತೆ ,  ಹೊಳೆನರಸೀಪುರ ,  ನ. 15
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಣ್ಣಿನ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಪಟ್ಟಣದ ಮುಖ್ಯ ಬೀದಿಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ. ಅಕ್ರಂ ಎಂಬುವರು ಪಟ್ಟಣದ ಪೇಟೆ ಬೀದಿ ಬದಿಯಲ್ಲಿ ಹಣ್ಣಿನ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿ ಸಂಸಾರ ಸಾಗಿಸುತ್ತಿದ್ದ. ಎಂದಿನಂತೆ ಬುಧವಾರ ರಾತ್ರಿ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ್ದಾನೆ. ಆದರೆ ರಾತ್ರಿ 12.30 ರಲ್ಲಿ  ಏಕಾಏಕಿ ಅಂಗಡಿ ಬೆಂಕಿ ತಗುಲಿದ್ದು ಅಂಗಡಿಯಲ್ಲಿದ್ದ ಸಾವಿರಾರು ರುಪಾಯಿ ಬೆಲೆ ಬಾಳುವ ಹಣ್ಣುಗಳು ಬೆಂಕಿಗೆ ಆಹುತಿಯಾಗಿದೆ.
ವಿಷಯ ತಿಳಿದ ಅಕ್ರಂ ಆತುರಾತುರವಾಗಿ ಅಂಗಡಿ ಬಳಿಗೆ ಬಂದಿದ್ದಾನೆ. ಆದರೆ ಅಷ್ಟರೊಳಗೆ ಹಣ್ಣಿನ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಹೋಗಿತ್ತು. ಉತ್ತಮವಾಗಿ ವ್ಯಾಪಾರ ಆಗುತ್ತಿತ್ತು. ಆದರೆ ನನ್ನನ್ನು ಕಂಡರೆ ಆಗದ ಕೆಲವರು ನನ್ನ ಅಂಗಡಿಗೆ ಬೆಂಕಿ ಹಾಕಿರಬಹುದೆಂದು ಅಕ್ರಂ ಶಂಕೆ ವ್ಯಕ್ತಪಡಿಸಿದ್ದಾರೆ. ನಗರಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಕೊಂಡಿದ್ದಾರೆ.
ಇಂದು - ನಾಳೆ ವಿದ್ಯುತ್ ವ್ಯತ್ಯಯ
ಹಾಸನ: ಚಿಕ್ಕಕೊಂಡಗೊಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ಇರುವುದರಿಂದ ನ. 16 ರಂದು  ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಹಾಸನದ ವಿದ್ಯಾನಗರ, ಆಕಾಶವಾಣಿ, ಹೇಮಾವತಿ, ಶಂಖ, ಕಡಗ, ಸಾಲಗಾಮೆ, ಎಂಸಿಎಫ್, ಮುದ್ಲಾಪುರ, ದುದ್ಧ ಮತ್ತು ಬಸವಘಟ್ಟ ವಿವಿ ಕೇಂದ್ರದಿಂದ ಸರಬರಜಾಗುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ, ಸಾರ್ವಜನಿಕರು ಸಹಕರಿಸಬೇಕೆಂದು ನೋಡಲ್ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.  ನ.17 ರಂದು  ಬೆಳಗ್ಗೆ  10 ರಿಂದ ಸಂಜೆ 5 ರವರೆಗೆ 3ನೇ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಆನೇಹಳ್ಳಿ ಹೆರಗು, ದುದ್ದ ಸಂತೆಕೊಪ್ಪಲು, ಕೋಡಿಹಳ್ಳಿ, ಕಾರೆಬಾರೆ, ಕಿತ್ತನೆಕೆರೆ ನಂದಿಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇಂದು ಭಾಷಣ ಸ್ಪರ್ಧೆ
ಚನ್ನರಾಯಪಟ್ಟಣ: ಗ್ರಂಥಾಲಯ ಸಪ್ತಾಹ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನ.16ರಂದು ಬೆಳಗ್ಗೆ 10.30 ಗಂಟೆಗೆ ಗ್ರಂಥಾಲಯದ ಮಹತ್ವದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿದೆ. ಜಿಲ್ಲಾ ಎಸ್ಪಿ ರವಿ. ಡಿ. ಚನ್ನಣ್ಣನವರ್ ಉದ್ಘಾಟಿಸುವರು. ಪ್ರಾಂಶುಪಾಲ ಶಿವರಾಮೇಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಟ್ಟಾವರ ರಾಮದಾಸ್, ಎಸ್‌ಐ ರಾಜು ಹಾಗೂ ಸುರೇಶ್ ಭಾಗವಹಿಸುವರು.
'ಶಾದಿ ಭಾಗ್ಯದಿಂದ ಇತರ ಜನಾಂಗಗಳ ಬಡ ಹೆಣ್ಮಕ್ಕಳಿಗೆ ಅನ್ಯಾಯ'
ಕ.ಪ್ರ.ವಾರ್ತೆ ,  ಹಾಸನ ,  ನ. 15
ರಾಜ್ಯ ಸರ್ಕಾರದ ಶಾದಿಭಾಗ್ಯ ಯೋಜನೆಯಿಂದ ಕುರುಬ, ದಲಿತರು,  ಒಕ್ಕಲಿಗ, ಲಿಂಗಾಯತರು ಸೇರಿದಂತೆ ಆನೇಕ ಜನಾಂಗಗಳಿಗೆ ತೀವ್ರ ಅನ್ಯಾಯವಾಗುತ್ತದೆ ಎಂದು  ಸಮಾಜ ಸೇವಕ  ಹಾಗೂ  ಜಿಲ್ಲಾ ಕಾಂಗ್ರೆಸ್ಕಾರ್ಯಕಾರಿ ಸಮಿತಿ  ಸದಸ್ಯ ಕೆ.ಎಸ್.ತೀರ್ಥಪ್ಪ ದೂರಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳ ಮದುವೆಗೆ  50 ಸಾವಿರ ರು. ನೀಡಲಾಗುವುದು ಎಂದು  ಸರ್ಕಾರ ಹೇಳಿರುವುದೇನೋ ಸರಿ. ಆದರೆ ಒಂದೇ ಜನಾಂಗಕ್ಕೆ ಈ ಸೌಲಭ್ಯ ಕಲ್ಪಿಸಿದರೆ, ಉಳಿದ ಜನಾಂಗಕ್ಕೆ ಅನ್ಯಾಯವಾಗಲಿದೆ. ಆದ್ದರಿಂದ  ಈ ಯೋಜನೆಯನ್ನು ಎಲ್ಲಾ ಜನಾಂಗಕ್ಕೂ ವಿಸ್ತರಿಸಬೇಕು ಎಂದು ಹೇಳಿದ್ದಾರೆ. ಎಲ್ಲ ಪಂಗಡದವರಿಗೂ, ಎಲ್ಲ ಜಾತಿಗೂ  ಸಮಬಾಳು, ಸಮಪಾಲು  ಎಂಬ  ಬಸವಣ್ಣನವರ ಧ್ಯೇಯವಾಕ್ಯಕ್ಕೆ  ಸರ್ಕಾರ ಅಪಚಾರ ಎಸಗಿದಂತಾಗುತ್ತದೆ  ಎಂದು ಹೇಳಿರುವ ಅವರು, ಶೀಘ್ರವೇ ಈ ಯೋಜನೆಯನ್ನು  ಕೈ ಬಿಡಬೇಕು ಅಥವಾ ವಿಸ್ತರಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
226 ಉದ್ಯೋಗಆಕಾಂಕ್ಷಿಗಳ ನೋಂದಣಿ
ಹಾಸನ: ಜಿಲ್ಲೆಯಲ್ಲಿ ಅಕ್ಟೋಬರ್‌ನಲ್ಲಿ  ಉದ್ಯೋಗ ಬಯಸಿ 226 ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಜೆ.ಬಿ.ವಿಜಯಲಕ್ಷ್ಮಿ ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ 14,    ಎಸ್ಸೆಸ್ಸೆಲ್ಸಿ  ಹಾಗೂ ಪಿಯುಸಿ ವಿದ್ಯಾರ್ಹತೆ ಪಡೆದಿರುವ 129, ಪದವೀಧರರು 29 ಮತ್ತು ತಾಂತ್ರಿಕ ವಿದ್ಯಾರ್ಹತೆ ಪಡೆದಿರುವ 54 ಮಂದಿ ಸೇರಿದಂತೆ ಒಟ್ಟು 226 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಮಾಸಾಂತ್ಯಕ್ಕೆ ಪರಿಶಿಷ್ಟ ಜಾತಿಯ 918, ಪರಿಶಿಷ್ಟ ಪಂಗಡದ 140, ಅಂಗವಿಕಲರು 466 ಸೇರಿದಂತೆ ಒಟ್ಟು 12,515 ಅಭ್ಯರ್ಥಿಗಳು ಜೀವದಾಖಲೆಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.
ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
ಹಾಸನ: ಸಂಜೀವಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಪ್ರದೇಶ ಬಿಪಿಎಲ್ ಕುಟುಂಬಕ್ಕೆ ಸೇರಿದ ನಿರುದ್ಯೋಗಿ ಯುವಕ ಯುವತಿಯರು ಸ್ವಯಂ ಉದ್ಯೋಗ ಹೊಂದಲು ಹಾಸನದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ಸಂಸ್ಥೆ ಮೂಲಕ ನಾನಾ ವೃತ್ತಿಗಳಲ್ಲಿ ಕೌಶಲ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬದ ನಿರುದ್ಯೋಗಿ ಯುವಕ ಯುವತಿಯರು ಆಯಾ ಗ್ರಾಪಂ, ತಾಪಂ ಉಚಿತವಾಗಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ನ. 25 ರೊಳಗೆ ಆಯಾ ಗ್ರಾಪಂಗೆ  ಸಲ್ಲಿಸುವಂತೆ ಜಿಪಂ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತಿಳಿಸಿದ್ದಾರೆ. ಮಾಹಿತಿಗಾಗಿ  ಜಿಪಂ ಕಾರ್ಯಾಲಯದ ಯೋಜನಾ ನಿರ್ದೇಶಕರ ದೂ. 9480867002, ಸಹಾಯಕ ಯೋಜನಾಧಿಕಾರಿ  -9480867008, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯ್ತಿ  ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.
ಉಚಿತ ಆರೋಗ್ಯ ತಪಾಸಣೆ ಶಿಬಿರ
ಹಾಸನ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ  58ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ 257ನೇ ಟಿಪ್ಪು ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ  ಹಾಗೂ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮತ್ತು  ನಗರದ ವಾರ್ಡ್ ಕಾರ್ಯಕರ್ತರ  ಘೋಷಣೆ ಕಾರ್ಯಕ್ರಮವನ್ನು  ನ. 16 ರಂದು  ಬೆಳಗ್ಗೆ 10.30ಕ್ಕೆ   ನಗರದ ಪೆನ್ಷನ್ ಮೊಹಲ್ಲಾದ ಶಾಹಿ ಮಸೀದಿ ವೃತ್ತದಲ್ಲಿ  ಆಯೋಜಿಸಲಾಗಿದೆ. ಶಾಸಕ ಎಚ್.ಎಸ್.ಪ್ರಕಾಶ್ ಉದ್ಘಾಟಿಸುವರು. ಕರವೇ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಧ್ವಜಾರೋಹಣ ನೆರವೇರಿಸುವರು.
ಜಾವಗಲ್‌ನಲ್ಲಿ ಇಂದು ಗ್ರಾಮೀಣ ನಾಟಕೋತ್ಸವ
ಜಾವಗಲ್: ಜಾವಗಲ್‌ನ ಬಾಂಧವ್ಯ ಲೋಕ, ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಸಹಯೋಗದಲ್ಲಿ ಸಿರಿಗೆರೆ ಶಾಖಾ ಮಠ ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶಿವಕುಮಾರ ಕಲಾ ಸಂಘದ ಶಿವಸಂಚಾರ ಕಲಾವಿದರಿಂದ ಇಲ್ಲಿನ ಬಯಲು ರಂಗಮಂದಿರದಲ್ಲಿ ನ.16 ರಂದು ಗ್ರಾಮೀಣ ನಾಟಕೋತ್ಸವ ಏರ್ಪಡಿಸಲಾಗಿದೆ.
 ಸಂಜೆ ಸಂಜೆ 5.45ಕ್ಕೆ ನಾಟಕೋತ್ಸವನ್ನು ಬೆಳ್ಳಿತೆರೆಯ ನಿರ್ದೇಶಕ ಹಾಗೂ ವನ್ಯಜೀವಿ ಛಾಯಾಚಿತ್ರ ಗ್ರಾಹಕ ಕೆ.ಶಿವರುದ್ರಯ್ಯ ಉದ್ಘಾಟಿಸಲಿದ್ದಾರೆ. ಸಿರಿಗೆರೆ ಶಾಖಾ ಮಠ ಸಾಣೇಹಳ್ಳಿ ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ  ಸಾನಿಧ್ಯವಹಿಸಲಿದ್ದು, ಶಾಸಕ ವೈ.ಎನ್.ರುದ್ರೇಶ್‌ಗೌಡ ಅಧ್ಯಕ್ಷತೆ ವಹಿಸುವರು.
 ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಲಿದ್ದಾರೆ. ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಸಮಾಜ ಸೇವಕ ಯೋಗಾರವುಶ್, ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್, ಕೆ.ಎಸ್.ಲಿಂಗೇಶ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 7-15ಕ್ಕೆ  ಮಹಾಬೆಳಕು ನಾಟಕ ನಡೆಯಲಿದೆ. ನ.17ರಂದು ನಾಟಕ ಕುರಿತು ಅರಸೀಕೆರೆ ಉಪನ್ಯಾಸಕ ಡಾ.ಬಿ.ಡಿ.ಕುಮಾರ್ ಉಪನ್ಯಾಸ ನೀಡುವರು.
 ಗ್ರಾಪಂ ಅಧ್ಯಕ್ಷೆ ಕವಿತಮಂಜುನಾಥ್ ಅಧ್ಯಕ್ಷತೆ ವಹಿಸುವರು.  ಸಂಜೆ  7.15ಕ್ಕೆ ರಾತ್ರಿ ವಿಶ್ವಬಂಧು ಮರಳುಸಿದ್ದ ನಾಟಕ ನಡೆಯಲಿದೆ. ನ.18ರಂದು ಸಮಾರೋಪ ಸಮಾರಂಭ ಶಾಸಕ ವೈ.ಎನ್.ರುದ್ರೇಶ್‌ಗೌಡ  ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಶಾಸಕ ವೈ.ಎಸ್.ವಿ. ದತ್ತ ಸಮಾರೋಪ ಭಾಷಣ ಮಾಡಲಿದ್ದಾರೆ.  ಚಿಕ್ಕಮಗಳೂರು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಚಂದ್ರಕಲಾ, ಜಿಪಂ ಮಾಜಿ ಸದಸ್ಯ ರಾಜಶೇಖರ್, ಕೊರಟಗೆರೆ ಪ್ರಕಾಶ್ ಇತರರು  ಭಾಗವಹಿಸುವರು.
 ನಾನಾ ಕ್ಷೇತ್ರದಲ್ಲಿ ಸಾಧನೆಗೈದ  ಗಣ್ಯರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ನಂತರ ಶರಣಸತಿ ಲಿಂಗಪತಿ ನಾಟಕ ಪ್ರದರ್ಶನಗೊಳ್ಳಲಿದೆ.
ಗ್ರಂಥಾಲಯ ಸಪ್ತಾಹ ಪ್ರಯುಕ್ತ ಇಂದು, ನಾಳೆ ನಾನಾ ಸ್ಪರ್ಧೆ
ಹಾಸನ: ಪ್ರಸಕ್ತ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಅಂಗವಾಗಿ  ನಗರ ಕೇಂದ್ರ ಗ್ರಂಥಾಲಯವು ನ.16  ಮತ್ತು ನ.17 ರಂದು  ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ನಾನಾ ಸ್ಪರ್ಧೆಗಳನ್ನು ಏರ್ಪಡಿಸಿದೆ. 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ನ.16 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು  ಮಧ್ಯಾಹ್ನ 3 ರಿಂದ  ಸಂಜೆ 5 ರವರೆಗೆ  ಏರ್ಪಡಿಸಲಾಗಿದೆ.
  ನ.17 ರಂದು  ಬೆಳಗ್ಗೆ 11 ರಿಂದ  ಮಧ್ಯಾಹ್ನ  1 ರವರೆಗೆ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕಂಠಪಾಠ (ಹಚ್ಚೆವು ಕನ್ನಡದ ದೀಪಾ)ಯನ್ನು,  ಮಧ್ಯಾಹ್ನ 3 ರಿಂದ  ಸಂಜೆ 5 ರವರೆಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗೆ ಇಂದಿನ ಶಿಕ್ಷಣದಲ್ಲಿ ಗ್ರಂಥಾಲಯಗಳ ಮಹತ್ವ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
 ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರ, ಕಾಲೇಜು ಪ್ರಾಂಶುಪಾಲರ ಅನುಮತಿ ಪತ್ರವನ್ನು ತರಬೇಕು. ಒಂದು ಶಾಲೆಯಿಂದ, ಕಾಲೇಜಿನಿಂದ ಒಂದು ಸ್ಪರ್ಧೆಗೆ 4 ವಿದ್ಯಾರ್ಥಿಗಳು ಭಾಗವಹಿಸಬಹುದು. ಹೆಸರು ನೋಂದಾಯಿಸಲು ನ.14  ಕೊನೆ ದಿನ.
 ಹೆಸರನ್ನು ಕಚೇರಿಯ ಸಮಯ ಬೆಳಗ್ಗೆ  10 ರಿಂದ ಸಂಜೆ 5. 30 ರೊಳಗೆ  ತಾಂತ್ರಿಕ ವಿಭಾಗದಲ್ಲಿ ನೋಂದಾಯಿಸಿಕೊಳ್ಳತಕ್ಕದು. ಚಿತ್ರ ಬಿಡಿಸಲು ಹಾಳೆ ಮಾತ್ರ ಕೊಡಲಾಗುವುದು ಆದರೆ ಪೆನ್ನು, ರಟ್ಟು, ಬಣ್ಣದ ಸಾಮಾಗ್ರಿ ಇತ್ಯಾದಿಗಳನ್ನು ಸ್ಪರ್ಧಿಗಳೇ ತರಬೇಕು.
  ವಿಜೇತ ವಿದ್ಯಾರ್ಥಿಗಳ ಹೆಸರನ್ನು ಕಚೇರಿ ಸೂಚನ ಫಲಕದಲ್ಲಿ ಪ್ರಕಟಿಸಲಾಗುವುದು. ಬಹುಮಾನ ಸಮಾರೋಪ ಸಮಾರಂಭದಲ್ಲಿ ವಿತರಿಸಲಾಗುವುದು.
 ಹೆಚ್ಚಿನ ಮಾಹಿತಿಗಾಗಿ ಹಾಸನ ನಗರ ಕೇಂದ್ರ ಗ್ರಂಥಾಲಯದ ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.