ಕಾವೇರಿ ಒಡಲಲ್ಲಿ ಅನಾಚಾರ
ಅರಕಲಗೂಡು: ತಾಲೂಕಿನಲ್ಲಿ ಹರಿಯುವ ಎರಡು ಪ್ರಮುಖ ನದಿಗಳಾದ ಹೇಮಾವತಿ ಮತ್ತು ಕಾವೇರಿ ನದಿಗಳ ಪೈಕಿ ಇಂದು ಕಾವೇರಿ ನದಿ ಕಲುಷಿತಗೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವೇ.
ತಾಲೂಕಿನ ರಾಮನಾಥಪುರ,ಕೊಣನೂರು ಹೋಬಳಿಗಳಲ್ಲಿ ಹರಿಯುವ ಈ ನದಿ ಆ ಭಾಗದ ಜನರ ಜೀವನದಿಯಾಗಿದೆ. ಆರ್ಥಿಕವಾಗಿ ಆ ಭಾಗದ ಜನರು ಉತ್ತಮ ಬದುಕು ಸಾಗಿಸಲು ಕಾರಣವಾಗಿರುವ ಕಾವೇರಿ ನದಿಗೆ ಈಗ ಸಂರಕ್ಷಣೆ ಇಲ್ಲದಂತಾಗಿದೆ. ಈ ನದಿ ಪಾತ್ರದಲ್ಲಿ ವ್ಯಾಪಕವಾಗಿ ನಡೆದಿರುವ ಅಕ್ರಮ ಮರಳು ದಂಧೆ ನದಿಯ ಅಸ್ತಿತ್ವಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ನಡೆದಿದೆ.
ತಾಲೂಕಿನ ಮಾದಾಪುರ,ಕಟ್ಟೇಪುರ ಸುತ್ತಲಿನ ನದಿ ಪಾತ್ರದಲ್ಲಿ ನಡೆದಿರುವ ಅವ್ಯಾಹತ ಮರಳು ದಂಧೆಯಿಂದಾಗಿ ಕಾವೇರಿ ದಿನ ದಿನಕ್ಕೆ ಸೊರಗ ತೊಡಗಿದ್ದಾಳೆ.ಹಲವು ವರ್ಷಗಳಿಂದ ನದಿಯಲ್ಲಿ ಮರಳು ತೆಗೆಯುವ ಕೆಲಸ ನಡೆದಿದ್ದರೂ ಇತ್ತೀಚಿನ ದಿನಗಳಲ್ಲಿ ಮರಳು ಮಾರಾಟ ಒಂದು ಬಹು ಬೇಡಿಕೆಯುಳ್ಳ ಆದಾಯದ ಬದುಕಾಗಿ ರೂಪುಗೊಂಡಿದೆ.ಹಣ ಮಾಡುವ ಆತುರದಲ್ಲಿ ಕೆಲವರು ನಡೆಸುತ್ತಿರುವ ಪ್ರಾಕೃತಿಯ ಮೇಲಿನ ಹಲ್ಲೆ ಅಪಾಯಕಾರಿಯಾಗಿದೆ.
ಇದ್ದೂ ಇಲ್ಲದಂತಿರುವ ಇಲಾಖೆ: ಕಾವೇರಿ ಒಡಲಿಗೆ ಧಕ್ಕೆ ಆಗುತ್ತಿದ್ದರೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಇದ್ದೂ ಇಲ್ಲದಂತಾಗಿದೆ. ಆಗೊಮ್ಮೆ ಈಗೊಮ್ಮೆ ಧಾಳಿ ನಡೆಸಿ ಅಬ್ಬರದ ಪ್ರಚಾರ ಪಡೆಯುವ ಇಲಾಖೆ ಪರೋಕ್ಷವಾಗಿ ಮರಳು ದಂಧೆಕೋರರಿಗೆ ಸಹಕಾರ ನೀಡುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ವಾಮಾಚಾರ: ಪವಿತ್ರ ಕಾವೇರಿ ನದಿ ಭಾಗದಲ್ಲಿ ವ್ಯಾಪಕ ವಾಮಾಚಾರದಂತಹ ಅನಾಚಾರಗಳೂ ಸದ್ದಿಲ್ಲದೇ ನಡೆಯುತ್ತಿವೆ. ಇತ್ತೀಚೆಗಷ್ಟೇ ಬೆಳಕಿಗೆ ಬಂದ ದೇವಾಲಯಗಳ ಬೀಡು ಎಂದೇ ಖ್ಯಾತವಾಗಿರುವ ರಾಮನಾಥಪುರದ ಪವಿತ್ರ ಸ್ಥಳ ಗಾಯತ್ರಿ ಶಿಲೆಯ ಬಳಿಯೇ ವಾಮಾಚಾರದ ಕೃತ್ಯ ಹಾಡು ಹಗಲೇ ನಡೆದಿರುವುದು, ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ.
ಅಲ್ಲದೇ ನದಿಯ ಪಾವಿತ್ರ್ಯತೆಗೂ ಧಕ್ಕೆ ತರುವಂತಹುದಾಗಿದೆ. ನದಿ ಮಧ್ಯದಲ್ಲಿಯೇ ಪ್ರಾಣಿ ವಧೆ ನಡೆಯುತ್ತಿರುವುದು ನಿಜಕ್ಕೂ ದುರಂತವೇ ಸರಿ.ಇದಕ್ಕೆ ಇಲ್ಲಿ ಇರುವ ಪವಿತ್ರ ಗಾಯತ್ರಿ ಶಿಲೆಗಾಗಲೀ, ಗೋ ಕಲ್ಲಿಗಾಗಲೀ ಸೂಕ್ತ ರಕ್ಷಣೆ ಇಲ್ಲದಿರುವುದೂ ಒಂದು ಕಾರಣವಾಗಿದೆ.ಇವುಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.
ಜನಜಾಗೃತಿ ಅಗತ್ಯ: ನದಿ ಪಾತ್ರದ ಸಂರಕ್ಷಣೆ ಮತ್ತು ಮಾಲಿನ್ಯ ತಡೆಗೆ ಅಗತ್ಯ ಜನಜಾಗೃತಿ ಅಗತ್ಯವಾಗಿದ್ದು,ಪ್ರತಿ ದಿನ ಇಲ್ಲಿಗೆ ಬಂದು ಹೋಗುವ ಪ್ರವಾಸಿಗರು ತಿಂಡಿ-ತಿನಿಸುಗಳನ್ನು ತಿಂದು ಬೇಡವಾದ ವಸ್ತುಗಳನ್ನು ಅಲ್ಲಿಯೇ ಎಸೆದು ಹೋಗುವುದರಿಂದ ನದಿ ಮತ್ತಷ್ಟು ಕಲುಷಿತವಾಗುತ್ತಿದೆ.ಈ ನಿಟ್ಟಿನಲ್ಲಿ ಅಲ್ಲಿನ ಗ್ರಾಮಪಂಚಾಯಿತಿ ಮತ್ತು ಜಿಲ್ಲಾಢಳಿತ ಅಗತ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ.
ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ: ದೇವಾಲಯಗಳ ಬೀಡು ,ಪ್ರತಿದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿರುವ ರಾಮನಾಥಪುರವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ತೀವ್ರ ನಿರ್ಲಕ್ಷಿಸಿದೆ. ಗ್ರಾಮದ ಮತ್ತು ತಾಲೂಕಿನ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿ ಗೊಳಿಸುವಲ್ಲಿ ಹಿಂದೆ ಬಿದ್ದಿದೆ. ಕಾವೇರಿ ಒಡಲಿನ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-ಅ.ರಾ.ಸುಬ್ಬರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

