ಕುಡುಕರ ಹಾವಳಿ ತಪ್ಪಿಸಿ
ಅರಕಲಗೂಡು ತಾ. ರಾಮನಾಥಪುರದರಲ್ಲಿ ಕುಡುಕರ ಹಾವಳಿ ವಿಪರೀತವಾಗಿದೆ. ಬಸವೇಶ್ವರ ವೃತ್ತ ಮುಂತಾದೆಡೆ ದುಬಾರಿ ಬೆಲೆಯ ಮದ್ಯ ಕಂಠಪೂರ್ತಿ ಕುಡಿದು ಪಟ್ಟಣದ ನಾನಾ ರಸ್ತೆ ರಸ್ತೆಗಳಲ್ಲಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತು ಇಲ್ಲಿ ನಿಜವಾಗಿದೆ. ಹಾಡುಹಗಲೇ ಫುಟ್ಪಾತ್ಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಆವರಣದ ಸಂತೆ ಕಟ್ಟೆಯ ಮೇಲೆ ಬಿಸಿಲು- ಮಳೆಯನ್ನು ಲೆಕ್ಕಿಸದೇ ಕುಡಿದು ಎಚ್ಚರವಿಲ್ಲದೇ ಆರಾಮವಾಗಿ ನಿದ್ರಿಸುತ್ತಿರುವುದು ಕಂಡು ಬರುತ್ತಿದೆ. ಕಾಟ್ಯಾಳು ಬಾರೆ, ರುದ್ರಪಟ್ಟಣ ಕ್ರಾಸ್ ಅನಂದೂರು ಹತ್ತಿರ ಹಾನಗಲ್ ಮುಂತಾದ ಕಡೆಗಳಲ್ಲಿ ರಾಜಾರೋಷವಾಗಿ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟ ಬೇಡವೆಂದು ಗ್ರಾಮಸ್ಥರು ಕೇಳಿಕೊಂಡರೂ ಮದ್ಯ ಮಾರಾಟ ಅವ್ಯಾಹತ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನೂದರೂ ಕ್ರಮ ಕೈಗೊಳ್ಳಬೇಕು.
- ಕೆ.ಎಸ್. ತೀರ್ಥಪ್ಪ, ಸಮಾಜ ಸೇವಕ
ಅನಗತ್ಯ ವಿದ್ಯುತ್ ಕಡಿತ ನಿಲ್ಲಿಸಿ
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅನಗತ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ಹೋಬಳಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಭಾರೀ ತೊಂದರೆ ಆಗುತ್ತಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಗಮನ ನೀಡಿ ಸಮಸ್ಯೆ ಬಗೆಹರಿಸಬೇಕಾಗಿದೆ. ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಹೋಬಳಿಯ ಕೆಸಗೋಡು, ನೀಲಹಳ್ಳಿ, ಮಲ್ಲೇಶನಗರ, ಗೌತಮನಗರ, ಕೆರಲೂರು, ವಾಟೇಹೊಳೆ, ಗುಮ್ಮನಹಳ್ಳಿ, ಸಿಂಗ್ರವಳ್ಳಿ, ಹೆಮ್ಮಗನಹಳ್ಳಿ ಸೇರಿದಂತೆ ಇನ್ನು ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಭಾರೀ ತೊಂದರೆಯಾಗುತ್ತಿದೆ. ಹಗಲು ಮತ್ತು ರಾತ್ರಿ ವೇಳೆ ಕೂಡಾ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಕುಡಿಯುವ ನೀರಿನ ಟ್ಯಾಂಕ್ಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಓವರ್ ಹೆಡ್ ಟ್ಯಾಂಕ್ಗಳಿಗೂ ನೀರು ಲೋಡ್ ಮಾಡಲಾಗುತ್ತಿಲ್ಲ. ಹೀಗಾಗಿ ಕುಡಿಯುವ ನೀರಿಗೆ ತೊಂದರೆಯಾಗಿದೆ.
- ಶ್ರೀಶಕ್ತಿ ಸ್ವಸಹಾಯ ಸಂಘ ಸದಸ್ಯರು
ಕ್ಯಾಂಟಿನ್ ತೆರವುಗೊಳಿಸಿ
ಹಾಸನ ನಗರದ ಸೋಮೇಶ್ವರ ಸಂಕೀರ್ಣದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಎದುರು ಬೀದಿ ಬದಿಯಲ್ಲಿ ಜೋಪಡಿ ಹಾಕಿಕೊಂಡು ಕ್ಯಾಂಟೀನ್ ವ್ಯಾಪಾರ ನಡೆಯುತ್ತಿದೆ. ಇಲ್ಲಿ ರಸ್ತೆ ಕಿರಿದಾಗಿರುವುದರಿಂದ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ತುಂಬಾ ಕಷ್ಟವಾಗಿದೆ.
ಈ ಬಗ್ಗೆ ಶಾಸಕ ಎಚ್.ಎಸ್.ಪ್ರಕಾಶ್ ನಗರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಈ ಕ್ಯಾಂಟೀನನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ನಗರಸಭೆ ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿ ಕ್ಯಾಂಟೀನನ್ನು ತೆರವುಗೊಳಿಸಿದ್ದರು. ಆದರೂ ಇದೇ ಜಾಗದಲ್ಲಿ ಮತ್ತೆ ಕ್ಯಾಂಟೀನ್ ಜೋಪಡಿ ಹಾಕಿಕೊಂಡು ವ್ಯಾಪಾರ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ, ಇಲ್ಲಿ ವಾಹನ ದಟ್ಟಣೆಯಾಗದಂತೆ ಕ್ಯಾಂಟೀನ್ ತೆರವುಗೊಳಿಸಬೇಕು. ಇದೇ ಸ್ಥಳದಲ್ಲಿ ದೇವಾಲಯವಿದ್ದು, ಮಾಂಸಾಹಾರಿ ಅಡುಗೆ ತಯಾರಿ ಮಾಡುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಸಂಬಂಧ ಪಟ್ಟವರು ಕ್ಯಾಂಟೀನ್ ತೆರವುಗೊಳಿಸಲು ಕ್ರಮ ಕೈಗೊಳ್ಳಿ.
- ಚಂದ್ರಶೇಖರ್, ಸುನಂದಮ್ಮ ಇತರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

