ಕಾವೇರಿ ಗ್ರಾಮೀಣ ಬ್ಯಾಂಕಲ್ಲಿ ಕಳವು ಯತ್ನ
ಚನ್ನರಾಯಪಟ್ಟಣ/ಹಾಸನ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಉದಯಪುರ ಕಲ್ಪತರು ಗ್ರಾಮೀಣ ಬ್ಯಾಂಕ್ ಕಟ್ಟಡದ ಹಿಂಭಾಗದ ಗೋಡೆ ಒಡೆದು ಕಳವು ಮಾಡುವ ಯತ್ನ ಗುರುವಾರ ರಾತ್ರಿ ನಡೆದಿದೆ.
ಬಳದರೆ ಗ್ರಾಪಂ ನೆಲ ಅಂತಸ್ತಿನಲ್ಲಿ ಬಾಡಿಗೆ ಆಧಾರದ ಕಟ್ಟಡದಲ್ಲಿ ನಡೆಯುತ್ತಿರುವ ಬ್ಯಾಂಕ್ ಲೂಟಿ ಮಾಡುವ ಸಲುವಾಗಿ 6ರಿಂದ 8 ಮಂದಿಯ ಕಳ್ಳರ ತಂಡ ಬ್ಯಾಂಕ್ನ ಮೊದಲನೇ ಅಂತಸ್ತಿನಲ್ಲಿರುವ ಗ್ರಾಪಂ ಕಚೇರಿಯಲ್ಲಿ ಆಧಾರ್ಗೆ ನಿಯೋಜನೆಗೊಂಡು ಅಲ್ಲಿಯೇ ತಂಗಿದ್ದ ಯುವಕನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಕಟ್ಟಡದಲ್ಲಿದ್ದ ಬ್ಯಾಂಕ್ ಸೈರನ್ ನಾಶಪಡಿಸಿ ಬ್ಯಾಂಕ್ನ ಹಿಂಭಾಗದ ಗೋಡೆ ಒಡೆದು ಒಳನುಗ್ಗಿದ್ದಾರೆ.
ಒಳನುಗ್ಗಿದ ಕಳ್ಳರ ತಂಡ ಮೊದಲು ಕಚೇರಿಯ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ನಂತರ ಭದ್ರತಾ ಕಪಾಟನ್ನು ಸಲಾಕೆಯಿಂದ ಮೀಟುವಲ್ಲಿ ವಿಫಲವಾಗಿ ಬಂದ ದಾರಿಗೆ ಸುಂಕವಿಲ್ಲದೆ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ರಾತ್ರಿ 12 ಗಂಟೆಗೆ: ಬ್ಯಾಂಕ್ ದಾಳಿ ನಡೆಸುವ ಮುನ್ನಾ ಸುತ್ತಮುತ್ತಲಿನ ಕಟ್ಟಡದಲ್ಲಿರುವವರ ಮೇಲೆ ನಿಗಾ ವಹಿಸಿರುವ ಕಳ್ಳರ ತಂಡ ಬ್ಯಾಂಕ್ ಕಟ್ಟಡದ ಮೊದಲ ಅಂತಸ್ತಿನಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ನಿಯೋಜನೆಗೊಂಡಿರುವ ಯುವಕ ಚಂದ್ರು ರಾತ್ರಿ 12ರ ಸಮಯದಲ್ಲಿ ತಾನೂ ತೆಗೆದುಕೊಂಡಿದ್ದ ರೇಲ್ವೆ ಸ್ಪರ್ಧಾತ್ಮಕ ಪರಿಕ್ಷೆಗೆ ಓದುತ್ತಿದ್ದ ಸಂದರ್ಭದಲ್ಲಿ ತಲೆಗೆ ಮಂಕಿ ಕ್ಯಾಪ್ ಕೈಗೆ ಗ್ಲೌಸ್ ತೊಟ್ಟಿದ್ದ ನಾಲ್ಕು ಮಂದಿ ಬಾಗಿಲು ತಟ್ಟಿ ತಾವು ಗ್ರಾಪಂ ಸದಸ್ಯರು ಬಾಗಿಲು ತೆರಿಯಿರಿ ಎಂದು ಕೂಗಿದ್ದಾರೆ. ರಾತ್ರಿ ಸಂದರ್ಭದಲ್ಲಿ ಯಾರಿಗೂ ಅವಕಾಶವಿಲ್ಲ ಎಂದು ಹೇಳಿದಾಗ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ.
ತಕ್ಷಣವೇ ಆತನ ಮೊಬೈಲ್ ಪೋನ್ನ್ನು ಕಸಿದುಕೊಂಡು ಆತನನ್ನು ರೂಮಿನಲ್ಲಿ ಕೂಡಿ ಹಾಕಿ ಇಬ್ಬರು ಬಾಗಿಲ ಆಚೆಯಲ್ಲಿ ಕುಳಿತು ಬೇರೆಯವರು ಕಳವು ಮಾಡಲು ಅವಕಾಶ ಕಲ್ಪಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ಬ್ಯಾಂಕ್ನ ಕಪಾಟು ತೆರೆಯುವ ಯತ್ನದಲ್ಲಿ ತೊಡಗಿಸಿಕೊಂಡು ನಂತರದಲ್ಲಿ ವಿಫಲ ಕಂಡು ರೂಮಿನೊಳಗೆ ಕೂಡಿ ಹಾಕಿದ್ದ ಚಂದ್ರುನನ್ನು ಬಾಗಿಲು ತೆರೆಯದೆ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರಿಗೆ ಮಾಹಿತಿ: ಚಂದ್ರನನ್ನು ಕೂಡಿ ಹಾಕಿದ್ದ ರೂಮಿನಲ್ಲಿದ್ದ ಗ್ರಾಪಂ ಲ್ಯಾಂಡ್ಲೈನ್ ಪೋನಿನಿಂದ ಪೊಲೀಸರಿಗೆ ವಿಷಯ ಮುಟ್ಟಿಸಿದ ತಕ್ಷಣವೇ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.
ಉದಯಪುರದ ಕಾವೇರಿ ಕಲ್ಪತರು ಬ್ಯಾಂಕ್ ಕಳವು ಯತ್ನವಾಗುತ್ತಿರುವುದು ಇದು ನಾಲ್ಕನೇ ಬಾರಿಯದಾಗಿದ್ದು, ಇಷ್ಟಾದರೂ ಬ್ಯಾಂಕ್ನ ವ್ಯವಸ್ಥಾಪಕರು ಸೂಕ್ತ ಭದ್ರತೆಗೆ ಯಾವುದೇ ವ್ಯವಸ್ಥೆ ಕಲ್ಪಿಸಿಕೊಂಡಿಲ್ಲದಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣರಾಗಿದ್ದಾರೆ.
ಶ್ವಾನದಳ, ಬೆರಳಚ್ಚು ತಜ್ಞರುಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

