ಜನರಲ್ಲಿ ಆಯುರ್ವೇದ ಬಗ್ಗೆ ಒಲವಿದೆ: ಸಿಇಒ ಉಪೇಂದ್ರ
ಹಾಸನ: ರಾಜ್ಯ ಸರ್ಕಾರದ ಆಯುಷ್ ಇಲಾಖೆ ಹಾಗೂ ಜಿಲ್ಲಾ ಆಯುಷ್ ಕಚೇರಿ ವತಿಯಿಂದ ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರವನ್ನು ಇತ್ತೀಚೆಗೆ ಲಯನ್ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಜನರಲ್ಲಿ ಆಯುರ್ವೇದದ ಬಗ್ಗೆ ಇರುವ ಒಲವಿದ್ದು, ಇನ್ನು ಹೆಚ್ಚು ಪ್ರಯೋಜನಕಾರಿ ಚಿಕಿತ್ಸೆಯನ್ನು ಜನರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶ್ಯಾಮಲಾದೇವಿ ಇದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿ.ಬಿ. ನಂಜರಾಜು ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ನೋಡಲ್ ಅಧಿಕಾರಿ ಡಾ. ನಾಗರಾಜ್ ವಂದಿಸಿದರು. ಕಾರ್ಯಕ್ರಮದಲ್ಲಿ 80 ಮಂದಿ ವೈದ್ಯರು ಭಾಗವಹಿಸಿ ಪ್ರಯೋಜನ ಪಡೆದರು.
ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಹಾಸನ ನಗರದ ವಿಜಯ ಆಂಗ್ಲ ಶಾಲೆಯ ಬಾಲಕಿಯರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ನೆಟ್ಬಾಲ್ ಕ್ರೀಡಾಕೂಟದಲ್ಲಿ ವಿಜೇತರಾಗಿ ದೆಹಲಿಯಲ್ಲಿ ನಡೆಯುವ ರಾಷ್ಟ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಅಧ್ಯಾಪಕರು ಜ್ಞಾನದಾಹಿಆಗಲಿ: ಸುಬ್ಬೇಗೌಡ
ಹಾಸನ: ನಗರದ ಸುಜಲ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಗಣಿತಶಾಸ್ತ್ರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಸುಜಲ ಸಮೂಹ ಸಂಸ್ಥೆಯ ಅಧ್ಯಕ್ಷ ಡಿ. ಸುಬ್ಬೇಗೌಡ ಮಾತನಾಡಿ, ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿ ಹಂತದಲ್ಲೂ ಅಧ್ಯಾಪಕರು ಜ್ಞಾನದಾಹಿಗಳಾಗಿದ್ದರೆ ಮಾತ್ರ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲು ಸಾಧ್ಯ. ಆದ್ದರಿಂದ ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎನ್. ರಾಜಮ್ಮ ಮಾತನಾಡಿದರು. ಇದೇ ಸಂದರ್ಭದಲ್ಲಿ 2012-13ನೇ ಸಾಲಿನಲ್ಲಿ ಗಣಿತಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸುಜಲ ಪಪೂ ಕಾಲೇಜಿನ ಕಾರ್ಯದರ್ಶಿ ಎಸ್. ಲೋಕೇಶ್, ವೇದಿಕೆಯ ಅಧ್ಯಕ್ಷ ಕೆ.ಪಿ. ರಾಮಚಂದ್ರ, ಸುಜಲ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರ್ ಇದ್ದರು. ವಿದ್ಯಾರ್ಥಿನಿ ಸ್ವಾತಿರಾಜ್ ಪ್ರಾರ್ಥಿಸಿದರು. ಉಪನ್ಯಾಸಕ ಎಚ್.ವಿ. ಚೇತನ್ ಸ್ವಾಗತಿಸಿದರು. ಟಿ.ಎನ್. ತಿಪ್ಪೇಸ್ವಾಮಿ ನಿರೂಪಿಸಿದರು. ವೇದಿಕೆಯ ಕಾರ್ಯದರ್ಶಿ ಡಿ.ವಿ. ಸುರೇಶ್ ವಂದಿಸಿದರು.
'ಎಂಇಎಸ್ ಶಾಸಕರ ಹೇಳಿಕೆ ಬಗ್ಗೆ ಯಾರೂ ಚರ್ಚಿಸಲಿಲ್ಲ'
ಚನ್ನರಾಯಪಟ್ಟಣ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಕನ್ನಡಿಗರನ್ನು ಹೀಯಾಳಿಸಿರುವ ಬಗ್ಗೆ ಯಾವ ಶಾಸಕರಾಗಲೀ ಅಥವಾ ಸಚಿವರಾಗಲೀ ಚರ್ಚೆಗೆ ಅವಕಾಶ ಕೋರಿಲ್ಲ. ಎಂದು ಸಂಸದೀಯ ವ್ಯವಹಾರ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯ ಕಟ್ಟಡ ಉದ್ಘಾಟನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಭಾಜಿ ಪಾಟೀಲ್ ಕನ್ನಡಿಗರನ್ನು ಹೀಯಾಳಿಸಿರುವ ಬಗ್ಗೆ ಯಾವ ಶಾಸಕರೂ ಕೂಡ ತೀವ್ರ ತೆರನಾಗಿ ಚರ್ಚೆ ಮಾಡದ ಕಾರಣ ಕ್ರಮ ತೆಗೆದುಕೊಳ್ಳುವುದಾದರೂ ಹೇಗೆ ಎಂದು ತಿಳಿಸಿದರು. ಬಿಜೆಪಿಯ ಸುರೇಶ್ಕುಮಾರ್ ಈ ಬಗ್ಗೆ ಚರ್ಚೆಯಲ್ಲಿ ಯಾವುದೇ ಮಹತ್ತರ ವಿಷಯ ಸಿಗದ ಕಾರಣ ಸಂಭಾಜಿ ಪಾಟೀಸ್ ಸದನದ ಹೊರಗೆ ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿರುವ ದಾಖಲೆಗಳನ್ನು ಕೇಳಲಾಗಿದೆ. ಅದು ಬಂದ ನಂತರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಡಾ. ರಾಜ್ ಅಭಿಮಾನಿಗಳ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಹಾಸನ: ಜಿಲ್ಲಾ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘಕ್ಕೆ ಇತ್ತೀಚೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ಪ್ರಶಾಂತ್ ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ. ಸಂಘದ ಗೌರವಾಧ್ಯಕ್ಷರಸಾಗಿ ಬಿ.ಜೆ. ಗೋಪಾಲಕೃಷ್ಣ, ಕಾರ್ಯಾಧ್ಯಕ್ಷರಾಗಿ ಡಿ.ಆರ್. ಪಳನಿ, ಉಪಾಧ್ಯಕ್ಷರಾಗಿ ಶಂಕರ್ ರಾಜು, ಪಾಲಿಕಾ ಕೃಷ್ಣ, ಎಚ್.ಸಿ. ಕುಮಾರ್, ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಮಂಜುನಾಥ ಶರ್ಮ ಅವರನ್ನು ನೇಮಿಸಲಾಗಿದೆ. ಸಹ ಕಾರ್ಯದರ್ಶಿಗಳಾಗಿ ಶಕೀಬ್, ಎಚ್.ಎಂ. ರಘು, ಸಂಘಟನಾ ಕಾರ್ಯದರ್ಶಿಗಳಾಗಿ ಬಿ.ಎಸ್. ಗುರುಪ್ರಸಾದ್, ರವಿಕುಮಾರ್, ಎಚ್.ಟಿ. ಜಯಶಂಕರ್, ಸಿ.ಆರ್. ಮಹೇಶ್, ಕಾನೂನು ಸಲಹೆಗಾರರಾಗಿ ಕೆ.ಎಸ್. ಶ್ಯಾಮಸುಂದರ್, ತಾರಾಚಂದನ್, ಯೋಗೇಶ್, ಮಾಧ್ಯಮ ಸಲಹೆಗಾರರಾಗಿ ಸ್ವರೂಪ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಚಿನ್ನಸ್ವಾಮಿ, ಎಚ್.ಆರ್. ಕಂಠಿ, ಪಾಂಡುರಂಗ(ಗೋವಾ), ಎಸ್.ಎಚ್. ಆನಂದ್(ಬಾಳೆಹಣ್ಣು), ಬಾಬು(ಹಣ್ಣಿನಂಗಡಿ), ಮಾರಣ್ಣ, ಎ. ರಾಮು, ಶಂಕರ(ರಾಜ್ಕುಮಾರ್ ನಗರ), ವಾಸು(ಆಟೋ) ಹಾಗೂ ಹೂವಿನ ಸೀನ ಅವರನ್ನು ನೇಮಕ ಮಾಡಲಾಗಿದೆ.
ಮಕ್ಕಳ ಹುಟ್ಟುಹಬ್ಬಕ್ಕೆ ಪುಸ್ತಕ ಉಡುಗೊರೆ ನೀಡಿ: ನವಾಬ್
ಹಾಸನ: ಮಕ್ಕಳ ಹುಟ್ಟುಹಬ್ಬಕ್ಕೆ ಮೊಬೈಲ್, ಬೈಕ್ಗಳನ್ನು ಕೊಟ್ಟು ಕೆಡುಕಿನತ್ತ ಪ್ರೇರೇಪಿಸುತ್ತಿದ್ದೇವೆಯೇ ಹೊರತು ಜ್ಞಾನ ದೀವಿಗೆಯಾದ ಪುಸ್ತಕವನ್ನು ಉಡುಗೊರೆಯಾಗಿ ಕೊಡುವುದಿಲ್ಲ ಎಂದು ಸಾಹಿತಿ ಬೇಲೂರು ನವಾಬ್ ವಿಷಾದಿಸಿದರು. ಶಾಂತಿ ಪ್ರಕಾಶನದ ರಜತ ಮಹೋತ್ಸವ ಪ್ರಯುಕ್ತ ಶಾಂತಿಗಾಗಿ ಸಾಹಿತ್ಯ ಅಭಿಯಾನದಡಿಯಲ್ಲಿ ನಗರದ ಗೌಸ್ ಮೊಹಿಯುದ್ದೀನ್ ಕಾಂಪ್ಲೆಕ್ಸ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೃಹತ್ ಪುಸ್ತಕ ಮೇಳ ಹಾಗೂ ವಿಷನ್ ಎಕ್ಸ್ಪೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪುಸ್ತಕ ಪ್ರದರ್ಶವನ್ನು ನಗರದ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವು ಮೌಲಾನಾ ಅಜರುಲ್ಲಾ ಖಾನ್ ಅವರ ಕುರಾನ್ ಪಠಣದಿಂದ ಪ್ರಾರಂಭಗೊಂಡಿತು. ಸ್ವಾಗತ ಸಮಿತಿಯ ಕಾರ್ಯದರ್ಶಿ ಸೈಯದ್ ನಸಾರುಲ್ಲಾ ಶರೀಫ್, ಸಾಹಿತಿ ಶೈಲಜಾ ಮಾತನಾಡಿದರು. ಹಿರಿಯ ವಕೀಲ ನಾರಾಯಣಸ್ವಾಮಿ ಇದ್ದರು.
ಜನತಾ ಬಜಾರ್ ಶಾಖೆಗಳ ಅಭಿವೃದ್ಧಿಗೆ ಬಹುಮಾನ ಡ್ರಾ
ಹಾಸನ: ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಸ್ಥೆಯ ಜನತಾ ಬಜಾರ್ ಶಾಖೆಗಳ ವ್ಯಾಪಾರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿದ್ದ ಬಹುಮಾನ ಯೋಜನೆಯ ಬಹುಮಾನಗಳ ಡ್ರಾ ಸಮಾರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಹಕಾರ ಸಂಘಗಳ ಉಪ ನಿಬಂಧಕ ಇಲಿಯಾಸ್ ಉಲ್ಲಾ ಷರೀಫ್ ಅವರು ಸಮಾರಂಭ ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಸಿ. ವಾಸುದೇವ್ ಮತ್ತು ಸಂಸ್ಥೆಯ ಆಡಳಿತ ಮಂಡಳಿ ಎಲ್ಲ ನಿರ್ದೇಶಕರು ಇದ್ದರು. ಇಫ್ಕೋ ಸಂಸ್ಥೆಯ ಹಿರಿಯ ಕ್ಷೇತ್ರೀಯ ವ್ಯವಸ್ಥಾಪಕ ಎಚ್.ಕೆ. ರಮಾನಂದ ಮತ್ತು ಸಹಾಯಕ ವ್ಯವಸ್ಥಾಪಕ ನಾರಾಯಣಸ್ವಾಮಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಹಾಗೂ ಸಂಸ್ಥೆಯ. ಪ್ರಧಾನ ವ್ಯವಸ್ಥಾಪಕ ಎಂ.ಡಿ. ಪರಮೇಶ ಮತ್ತು ಜನತಾ ಬಜಾರ್ ಶಾಖೆಗಳ ವ್ಯವಸ್ಥಾಪಕರು ಇದ್ದರು.
ಎಂಕಾಂ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಕಾರ್ಯಕ್ರಮ
ಹಾಸನ: ನಗರದ ಎನ್ಡಿಆರ್ಕೆ ಕಾಲೇಜಿನ ಎಂ.ಕಾಂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಉದ್ಯೋಗಕ್ಕಾಗಿ ಮಾಹಿತಿಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಶಾಮಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ವಿವಿಯ ಉದ್ಯೋಗ ಮಾಹಿತಿ ಕೇಂದ್ರದ ನಿರ್ದೇಶಕ ವೆಂಕಟೇಶಪ್ಪ ಮಾತನಾಡಿ, ಅಧ್ಯಯನದ ಅವಧಿಯಲ್ಲಿಯೇ ಮುಂದಿನ ಭವಿಷ್ಯಕ್ಕಾಗಿ ಬೇಕಾದ ಉದ್ಯೋಗ ಮಾಹಿತಿ ಗ್ರಹಿಸುವ ಕಡೆ ಗಮನಹರಿಸಬೇಕು. ವಿದ್ಯಾರ್ಥಿಗಳು ಕ್ರೀಯಾಶೀಲರಾಗಬೇಕು ಎಂದರು. ವಿಭಾಗದ ಸಂಯೋಜಕ ಪ್ರೊ. ಎ. ರವಿಕಾಂತ್, ಉಪನ್ಯಾಸಕರಾದ ಎಚ್.ಡಿ. ರಾಮಪ್ರಿಯ, ಮೋವಿನಕುಮಾರ್, ಅವಿನಾಶ್, ರೂಪ ಇದ್ದರು. ವಿದ್ಯಾರ್ಥಿನಿ ವಿದ್ಯಾ ಪ್ರಾರ್ಥಿಸಿದರು. ಸಾರಾ ಸುಬಿಯಾಖಾನ್ ನಿರೂಪಿಸಿದರು. ಕಾವ್ಯಾ ಸ್ವಾಗತಿಸಿದರು. ಸುಚಿತಾ ವಂದಿಸಿದರು.
ಬಿಜೆಪಿ ಕಾರ್ಯಕಾರಿಣಿ ಸಭೆ
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಮತಾ ಉದಯ್, ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.
ಗೂಡ್ಸ್ ಆಟೋಗೆ ಲಾರಿ ಡಿಕ್ಕಿ; ತಿಪಟೂರಿನ ವ್ಯಕ್ತಿ ಸಾವು
ಹಾಸನ: ಲಾರಿ ಗೂಡ್ಸ್ ಆಟೋಗೆ ಡಿಕ್ಕಿ ಮಾಡಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ-ತಿಪಟೂರು ರಸ್ತೆಯಲ್ಲಿ ಇತ್ತೀಚೆಗೆ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ರಸ್ತೆ ಆದಿನಾಯಕನಹಳ್ಳಿ ಗ್ರಾಮದ ಆಸೀಫ್ ಪಾಷಾ(35) ಸಾವನ್ನಪ್ಪಿದ ದುರ್ದೈವಿ. ಆಸೀಫ್ ಅವರು ತಮ್ಮ ಗ್ರಾಮದ ಖಲೀಮ್, ಆದಿಲ್ ಅವರೊಂದಿಗೆ ಗೂಡ್ಸ್ ಆಟೋದಲ್ಲಿ ಚನ್ನರಾಯಪಟ್ಟಣದಿಂದ ಅಡಕೆ ಕಾಯಿ ಮೂಟೆ ತುಂಬಿಕೊಂಡು ವಾಪಸ್ ಊರಿಗೆ ಹೋಗಲು ಚನ್ನರಾಯಪಟ್ಟಣ-ತಿಪಟೂರು ರಸ್ತೆ, ಅಯ್ಯರಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ಬಂದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ಆಟೋ ಪಲ್ಟಿಯಾಗಿ ರಸ್ತೆಗೆ ಬಿದ್ದು ತೀವ್ರ ಗಾಯವಾಗಿದ್ದ ಆಸೀಫ್ ಪಾಷಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ಶಂಕರನಾಯಕ ಅವರು ನುಗ್ಗೇಹಳ್ಳಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕೂಲಿಗಾಗಿ ವಲಸೆ ತಡೆಗೆ ಖಾತ್ರಿ ಪೂರಕ: ಕೃಷ್ಣಮೂರ್ತಿ
ಜಾವಗಲ್: ಎಂಜಿಎನ್ಆರ್ಇಜಿ ಯೋಜನೆಯು ಬಡ ಕುಟುಂಬಗಳಿಗೆ ಜೀವನಾಧಾರವಾಗಿದ್ದು, ಕೂಲಿಗಾಗಿ ವಲಸೆ ಹೋಗುವುದನ್ನು ತಡೆಗಟ್ಟಲು ಪೂರಕವಾಗಿದೆ ಎಂದು ಅರಸೀಕೆರೆ ತಾಪಂ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಜಾವಗಲ್ ಗ್ರಾಮ ಪಂಚಾಯ್ತಿ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎಂಜಿಎನ್ಆರ್ಇಜಿ ಯೋಜನೆಯ ಅರ್ಧ ವಾರ್ಷಿಕ ಅವಧಿಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ಪರಿಶೋಧನಾ ಗ್ರಾಮ ಸಂಪನ್ಮೂಲ ವ್ಯಕ್ತಿ ಪುನೀತ್ ಮಾತನಾಡಿದರು. ಪಿಡಿಒ ಚಂದ್ರಶೇಖರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್, ಗ್ರಾಪಂ ಉಪಾದ್ಯಕ್ಷ ರಂಗಸ್ವಾಮಿ, ಸದಸ್ಯರಾದ ಪ್ರಭಾಕರ, ಪರಮೇಶ, ಕುಮಾರ್ ಶೆಟ್ಟಿ ಇದ್ದರು.
ಅರಕಲಗೂಡು ತಾಲೂಕು ದಸಂಸ ಸಮಿತಿ ಪುನಾರಚನೆ
ಹಾಸನ: ಅರಕಲಗೂಡು ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ತಾಲೂಕು ಸಮಿತಿಯನ್ನು ಪುನಾರಚನೆ ಮಾಡಲಾಯಿತು. ತಾಲೂಕು ಸಂಚಾಲಕರಾಗಿ ಹಾನಗಲ್ ಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ತಾಲೂಕು ಸಂಘಟನಾ ಸಂಚಾಲಕರಾಗಿ ಮರೂರು ಮೂರ್ತಿ, ತಾಲೂಕು ಸಂಘಟನಾ ಸಂಚಾಲಕರಾಗಿ ಜಗದೀಶ್, ಅಣ್ಣಯ್ಯ, ರಮೇಶ್, ನವೀನ್, ರಘು, ರಾಜು ಕೃಷ್ಣಮೂರ್ತಿ ಮತ್ತು ಮಹಿಳಾ ಘಟಕದ ತಾಲೂಕು ಸಂಚಾಲಕರಾಗಿ ಸುಜಾತ, ಮಂಜುಳಮ್ಮ, ರತ್ನಮ್ಮ, ವಿಜಯ, ಜಯಲಕ್ಷ್ಮಮ್ಮ ಅವರನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ 4 ಜಿಲ್ಲೆಯ ವಿಭಾಗೀಯ ಸಂಚಾಲಕರಾದ ಎಚ್.ಪಿ. ಮಂಜು, ಜಿಲ್ಲಾ ಸಂಚಾಲಕ ಜವರಯ್ಯ, ಜಿಲ್ಲಾ ಸಂಘಟನಾ ಸಂಚಾಲಕ ಸಣ್ಣಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ರಾಮಚಂದ್ರ ಅವರ ಸಮ್ಮುಖದಲ್ಲಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಯಿತು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಂಘಟನೆಯ ಅಭ್ಯರ್ಥಿಯನ್ನು ನಿಲ್ಲಿಸಲು ಮುಂದಾಗಿದೆ. ಆದ್ದರಿಂದ ಜಿಲ್ಲೆಯ. ತಾಲೂಕಿನ ಎಲ್ಲ ಕಾರ್ಯಕರ್ತರು ಅಭ್ಯರ್ಥಿಯನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದ್ದಾರೆ.
ರೈತನ ಆತ್ಮಹತ್ಯೆ; ರೈತ ಸಂಘದಿಂದ ಪ್ರತಿಭಟನೆ
ರಾಮನಾಥಪುರ: ಕಬ್ಬು ಬೆಳೆಗಾರ ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶನಿವಾರ ಅರಕಲಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸಿ ಪ್ರತಿಭಟನೆ ನಡೆಸಿದರು. ಸರ್ಕಾರದ ಬೇಜವಾಬ್ದಾರಿ ಮತ್ತು ಮುಖ್ಯಮಂತ್ರಿಗಳ ಭಂಡ ಮತ್ತು ಮಂಡತನದ ಧೋರಣೆಯಿಂದಾಗಿ ಧರಣಿ ನಡೆಸುತ್ತಿದ್ದ ಕಬ್ಬು ಬೆಳೆಗಾರರನ್ನು ಸಂಪರ್ಕಿಸದೆ ಮತ್ತು ಕಬ್ಬಿಗೆ ಸರಿಯಾದ ಬೆಂಬಲ ಬೆಲೆ ನೀಡದೆ ತಮ್ಮದೇಯಾದ ರೀತಿಯಲ್ಲಿ ಭಂಡಾತನವನ್ನು ಪ್ರದರ್ಶಿಸಿ ದೇಶದ ಬೆನ್ನೆಲಬಾಗಿರುವ ರೈತನಿಗೆ ಆತ್ಮಹತ್ಯೆಯ ಹಾದಿ ಹಿಡಿಯುವಂತೆ ಮಾಡಿರುವುದು ನಿಜಕ್ಕೂ ರಾಜ್ಯದ ರಾಜಕೀಯಲ್ಲಿ ತಲೆತಗ್ಗಿಸುವಂಥ ವಿಷಯವಾಗಿದೆ ಎಂದು ಖಂಡಿಸಿದರು. ಪಟ್ಟಣದ ಕನಕ ವೃತ್ತದಿಂದ ಹೊರಟ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ತೆರಳಿ ಶಿರಸ್ತೇದಾರ್ ರಂಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಎಲೆಕ್ಟ್ರಾನಿಕ್ ತೂಕದ ಯಂತ್ರ ಮೂಲೆಗುಂಪು
ಹೊಳೆನರಸೀಪುರ: ರೈತರ ಅನುಕೂಲಕ್ಕಾಗಿ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ತೂಕ ಮಾಡುವ ಯಂತ್ರ ಅಳವಡಿಸಿ ನಾಲ್ಕಾರು ತಿಂಗಳಿಂದ ಆರಂಭ ಮಾಡುವಲ್ಲಿ ಮೀನಮೇಷ ಎಣಿಸುತ್ತಿರುವ ಘಟನೆ ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ನಡೆದಿದೆ. ತಾಲೂಕಿನ ರೈತರು ತರುವ ದವಸ, ಧಾನ್ಯಗಳನ್ನು ಮಾರಾಟ ಮಾಡುವ ಮೊದಲು ತೂಕ ಮಾಡುವುದು ವಾಡಿಕೆ. ಆದರೆ ಲಾರಿಗಟ್ಟಲೇ ಬರುವ ದವಸ, ಧಾನ್ಯಗಳನ್ನು ತೂಕ ಮಾಡುವ ಸಲುವಾಗಿ ಐವತ್ತು ಮೆಟ್ರಿಕ್ ಟನ್ ತೂಕದ ಎಲೆಕ್ಟ್ರಾನಿಕ್ ಯಂತ್ರ ಇದೀಗ ಮೂಲೆಗುಂಪಾಗಿದೆ. ಯಂತ್ರದ ಉದ್ಘಾಟನೆಗೊಂಡು ಆರು ತಿಂಗಳು ಕಳೆದಿದ್ದರೂ ಸಹ ರೈತರಿಗೆ ಕೈಗೆಟುಕದೆ ಇದ್ದು ತುಕ್ಕು ಹಿಡಿಯವಂತೆ ಆಗಿದೆ ಎಂಬುದು ರೈತರ ಆರೋಪವಾಗಿದೆ.
ಸೋಲಾರ್ ಅವ್ಯವಸ್ಥೆಗೆ ಕಂಪನಿ ನಿರ್ಲಕ್ಷ್ಯ; ಆರೋಪ
ಹಾಸನ: ಸಾಲ ಮಾಡಿ ಸೋಲಾರ್ ಕೊಂಡರೂ ಸರಿಯಾಗಿ ಇದರ ಉಪಯೋಗ ದೊರಕಲಿಲ್ಲ. ಸಂಬಂಧಿಸಿದ ಕಂಪನಿಯವರು ನಿರ್ಲಕ್ಷಿಸುತ್ತಿದ್ದಾರೆಂದು ಸಮೀಪದ ಕೂಡಲೂರು ಗ್ರಾಮ ವಾಸಿ ರವಿ ಆರೋಪಿಸಿದ್ದಾರೆ. ರಾಮನಾಥಪುರದ ಬಿಳಗೂಲಿ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ತಮ್ಮ ನೂತನ ಮನೆಗೆ ಸೋಲಾರ್ ವಾಟರ್ ಹೀಟರ್ ಅಳವಡಿಸಲೆಂದು ಹಾಸನದ ಒಆರ್ಬಿ ಎಂಜಿನಿಯರಿಂಗ್ನಲ್ಲಿ 2 ಸೋಲಾರ್ಗಳನ್ನು ಸಾಲ ಮಾಡಿದ ಹಣದಿಂದ ಖರೀದಿಸಿ ತಂದು ಅಳವಡಿಸಿದ ಒಂದೂವರೆ ವರ್ಷದಲ್ಲೇ ಒಂದು ಸೋಲಾರ್ನಿಂದ ನೀರು ಸೋರಿಕೆ ಶುರುವಾಗಿದ್ದು, 2012ರ ಆ.17ರಂದು ಸೋಲಾರ್ ಸೋರಿಕೆ ದೂರು ಹೇಳಿಕೆ ದಾಖಲಿಸಿದ್ದು, ಇದುವರೆಗೂ ಸರ್ವೀಸ್ ನೀಡುವುದಾಗಲೀ ಅಥವಾ ಬದಲಿಸುವುದಾಗಲೀ ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮಣಚನಹಳ್ಳಿ; ರಾಜ್ಯೋತ್ಸವ
ಮಣಚನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
'ಅಕ್ಕ' ಕನ್ನಡ ಧಾರಾವಾಹಿಗೆ ಈಗ ಕೋರ್ಟಿನ ಕಡಿವಾಣ
ಇದೇ ಸೋಮವಾರ ಡಿಸೆಂಬರ್ ಎರಡರಿಂದ ರಾತ್ರಿ ಎಂಟೂವರೆಗೆ ಈಟೀವಿಯಲ್ಲಿ ಪ್ರಸಾರವಾಗಬೇಕಿದ್ದ ಅಕ್ಕ ಕನ್ನಡ ಧಾರಾವಾಹಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಲೇಖಕಿ ಹಾಗೂ ಕಿರುತೆರೆ ನಿರ್ಮಾಪಕಿ-ನಿರ್ದೇಶಕಿ ರೇಖಾರಾಣಿ ಅವರ ಕಣ್ಮಣಿ ಎಂಬ ಕತೆಯನ್ನು ಕದ್ದು ಅಕ್ಕ ಧಾರಾವಾಹಿ ನಿರ್ಮಿಸಲಾಗಿದೆ ಎಂದು ನೀಡಲಾಗಿದ್ದ ದೂರನ್ನು ಪರಿಶೀಲಿಸಿದ ಸಿವಿಲ್ಕೋರ್ಟ್ ನಂ.10ರ ನ್ಯಾಯಾಧೀಶರು ಶುಕ್ರವಾರ ಅಕ್ಕ ಧಾರಾವಾಹಿಗೆ ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆ ನಡೆದು ವಿವಾದ ಇತ್ಯರ್ಥ ಆಗುವವರೆಗೆ ಧಾರಾವಾಹಿಯು ಪ್ರಸಾರವಾಗುವಂತಿಲ್ಲ ಎಂದು ಕೋರ್ಟು ಆದೇಶ ನೀಡಿದೆ. ಇದು ತಮ್ಮದೇ ಕತೆಯ ಕೃತಿಚೌರ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿಕೆ ನೀಡಿರುವ ರೇಖಾ ರಾಣಿ ಇದಕ್ಕೆ ನೇರ ಕಾರಣ ಪ್ರಸ್ತುತ ಚಾನಲ್ನ ಧಾರಾವಾಹಿ ವಿಭಾಗದ ಮುಖ್ಯಸ್ಥರು ಎಂದು ಆರೋಪ ಹೊರಿಸಿದ್ದಾರೆ.
ಬ್ಯಾಂಕಾಕ್ನಲ್ಲಿ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ಬ್ಯಾನ್
ಪುನೀತ್ ರಾಜ್ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಶೂಟಿಂಗಿಗೆ ವಿಘ್ನ. ಆದರೆ ಹಾಗಂತ ಅದು ಶಾಶ್ವತ ವಿಘ್ನ ಅಲ್ಲ ಬಿಡಿ. ಅದೇನಿದ್ದರೂ ಕೇವಲ 'ಎಮರ್ಜೆನ್ಸಿ' ವಿಘ್ನ. ಬ್ಯಾಂಕಾಕ್ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ನಿನ್ನಿಂದಲೇ ಚಿತ್ರತಂಡ ಯೋಜನೆ ಮಾಡಿತ್ತು. ಅದರಂತೆ ಶೂಟಿಂಗ್ ಕೂಡ ಎರಡು ದಿನದ ಹಿಂದೆ ಶುರುವಾಗಿತ್ತು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬ್ಯಾಂಕಾಕ್ ನಗರದಲ್ಲಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಚಿತ್ರೀಕರಣಕ್ಕೆ ಯಾವ ತೊಂದರೆ ಇಲ್ಲದಿದ್ದರೂ ಸಾರ್ವಜನಿಕ ಸಭೆಗಳು, ಮೆರವಣಿಗೆಗಳ ಕಾರಣ ಚಿತ್ರೀಕರಣ ನಡೆಸುವುದು ಸುಲಭವಾಗಿರಲಿಲ್ಲ. ಈ ಕಾರಣಕ್ಕಾಗಿ ನಿನ್ನಿಂದಲೇ ಚಿತ್ರತಂಡ ಎರಡು ದಿನಗಳ ಕಾಲ ಶೂಟಿಂಗ್ ನಿಲ್ಲಿಸಬೇಕಾಗಿತ್ತು. ಅದರಂತೆ ಎರಡು ದಿನಗಳ ಬ್ರೇಕ್ನ ನಂತರ ಈಗ ಮತ್ತೆ ನಿನ್ನಿಂದಲೇ ಶುರುವಾಗಿದೆ.
ಅವರು ಹೇಳಿದ್ದು
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಬಿಎಸ್ವೈ ಶಕ್ತಿ ಬೇಕು. ಶೀಘ್ರವೇ ಕೇಂದ್ರದ ವರಿಷ್ಠರು ಅವರನ್ನು ಬಿಜೆಪಿ ಸೇರಿಸಿಕೊಳ್ಳುತ್ತಾರೆ. ಅವರು ಕೂಡ ಪಕ್ಷಕ್ಕೆ ಮರಳುವ ಸೂಚನೆ ನೀಡಿದ್ದಾರೆ.
ಟಿ ಕೆ.ಎಸ್. ಈಶ್ವರಪ್ಪಮಾಜಿ ಡಿಸಿಎಂ
ಒಳಮರ್ಮ
ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈ ಇಲ್ಲದೆ ನನಗೂ ಗೆಲ್ಲಲಾಗಿಲ್ಲ. ಲೋಕಸಭೆ ಚುನಾವಣೆಯಲ್ಲೂ ಅದೇ ಪರಿಸ್ಥಿತಿ ಮರುಕಳಿಸದಿರಲೆಂದು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ ಎಂದು ಹೇಳಿದಂತಿದೆ!
ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
@VishweshwarBhat
ನಮ್ಮ ಕಚೇರಿ ವಿಳಾಸ
ಎಂಐಜಿ 16, 2ನೇ ಮುಖ್ಯರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ, ಕುವೆಂಪುನಗರ, ಹಾಸನ - 573201 ದೂ.: 269511, ಮೊ.ಸಂ. : 9448323207
ಓದುಗರಲ್ಲಿ ಮನವಿ
ನೀವು ಕನ್ನಡಪ್ರಭ ಪತ್ರಿಕೆಗೆ ಚಂದಾದಾರರಾಗಬೇಕೆ? ಸಂಪರ್ಕಿಸಿ ದೂರವಾಣಿ
8884216777
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

