ಸ್ವಯಂ ಪ್ರೇರಿತ ರಕ್ತದಾನಕ್ಕೆ ಮುಂದಾಗಲು ಯುವಕರಿಗೆ ಕರೆ
ಕನ್ನಡಪ್ರಭ ವಾರ್ತೆ ಹಾಸನ ಅ.1
ಅಪಘಾತ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ನಮ್ಮಲ್ಲಿ ಬೇಡಿಕೆ ಇರುವಷ್ಟು ರಕ್ತ ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಯುವ ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪಸಿಂಗ್ ಕರೆ ನೀಡಿದ್ದಾರೆ.
ನಗರದ ಬಿ.ಈ.ಜಿ.ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಬಿ.ಈ.ಜಿ. ಪ್ರಥಮ ದರ್ಜೆ ಕಾಲೇಜು ರಕ್ತ ನಿಧಿ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ದೇಹದಲ್ಲಿ 5 ಲೀಟರ್ ರಕ್ತ ಇರುತ್ತದೆ. ಒಂದು ಬಾರಿ 350 ಮಿ.ಲೀಟರ್ ರಕ್ತ ಮಾತ್ರ ತೆಗೆಯುವುದರಿಂದ ಯಾವುದೇ ತೊಂದೆಯಾಗುವುದಿಲ್ಲ ಎಂದರಲ್ಲದೆ ಯುವ ಜನತೆ ಆತಂಕಪಡದೆ ರಕ್ತದಾನದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕರಿ ಡಾ. ಪಿ.ಎಲ್.ನಟರಾಜ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಯುವ ಜನತೆಗೆ ರಕ್ತದಾನಕ್ಕೆ ಹೆಚ್ಚು ಆಧ್ಯತೆ ನೀಡಲಾಗುವುದು. ಇವರ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಅಧಿಕವಾಗಿರುತ್ತದೆ ಜೊತೆಗೆ ರಕ್ತದ ಗುಣಮಟ್ಟ ಉತ್ತಮವಾಗಿರುತ್ತದೆ. ಯುವ ಜನತೆ ರಕ್ತವೃದ್ಧಿ ಸಾಮರ್ಥ್ಯ ಹೊಂದಿರುತ್ತಾರೆ. ರಕ್ತ ಪಡೆಯುವ ಮುನ್ನ ರಕ್ತದಾನಿಗಳ ಸಾಮಾನ್ಯ ದೇಹಸ್ಥಿತಿ ಪರಿಶೀಲಿಸಲಾಗುವುದು. ಸೋಂಕುಗಳಿಂದ ಮುಕ್ತವಾಗಿದೆ ಎಂಬುದನ್ನು ಖಾತರಿಪಡಿಸಕೊಂಡ ನಂತರ ರಕ್ತ ಪಡೆಯಲಾಗುವುದು.
ಆರೋಗ್ಯವಂತ ಯುವ ಜನತೆ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಯಾವುದೇ ಆತಂಕಕ್ಕೆ ಒಳಗಾಗದೆ ರಕ್ತದಾನ ಮಾಡುವ ಮೂಲಕ ಮಾದರಿಯಾಗುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ಈ.ಜಿ. ಕಾಲೇಜಿನ ಪ್ರಾಂಶುಪಾಲ ಬಿ.ಈ.ಜಗದೀಶ್ ಮಾತನಾಡಿ, ಲಿಂಗಬೇಧ ಮರೆತು ರಕ್ತದಾನ ಮಾಡಬೇಕು. ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ರಕ್ತದ ಕೆಲವು ಗುಂಪಿಗೆ ಸಂಬಂಧಿಸಿದಂತೆ ರಕ್ತ ದೊರಕುವುದು ವಿರಳ. ಈ ನಿಟ್ಟಿನಲ್ಲಿ ಯುವ ಜನರು ರಕ್ತದಾನಕ್ಕೆ ಕೈಜೋಡಿಸಬೇಕು ಎಂದರು.
30 ಬಾರಿ ರಕ್ತದಾನ ಮಾಡಿರುವ ಡಾ. ವೈಶಾಖ ಸನ್ಮಾನ ಸ್ವೀಕರಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯವಂತರಾಗಿಯೂ ಇರಬಹುದು. ರಾಷ್ಟ್ರದ ಜನತೆಯ ಜೀವ ಉಳಿಸಲು ನಿಮ್ಮ ಪಾಲುದಾರಿಕೆಯು ಸೇರ್ಪಡೆಯಾಗುವುದರ ಜೊತೆಗೆ ಧನ್ಯತಾ ಭಾವ ಇರುತ್ತದೆ ಎಂದರು.
18 ಬಾರಿ ರಕ್ತದಾನ ಮಾಡಿರುವ ನಗರಸಭೆ ಸದಸ್ಯ ಎಚ್.ಎಂ.ಸುರೇಶ್ಕುಮಾರ್ ಮಾತನಾಡಿ, ಯುವಜನತೆ ಆತಂಕಪಡದೆ ರಕ್ತದಾನ ಮಾಡಿ ಇದೊಂದು ಪುಣ್ಯದ ಕೆಲಸ ಎಂದು ಯುವ ಜನತೆಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
15 ಬಾರಿ ರಕ್ತದಾನ ಮಾಡಿದ ವಾಣಿ ಶ್ರೀರಾಮ್ ಮಾತನಾಡಿ, ತಂದೆ-ತಾಯಿ ಮನಮೊಲಿಸಿ ರಕ್ತದಾನಕ್ಕೆ ಮುಂದಾಗುವಂತೆ ಯುವಜನತೆಗೆ ತಿಳಿಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ಯಾಮಲಾದೇವಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಶಂಕರ್, ಬ್ರಹ್ಮಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಬಿ. ಮರೀಗೌಡ, ಬಿಈಜಿ.ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎ.ರೇಖಾ, ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಪುರುಷೋತ್ತಮ್, ಡಾ.ರಾಜಗೋಪಾಲ್, ಡಾ. ಮಲ್ಲಿಕಾರ್ಜುನಸ್ವಾಮಿ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಐಸಿಟಿಸಿ ಜಿಲ್ಲಾ ಮೇಲ್ವಿಚಾರಕ ರವಿಕುಮಾರ ಬಿ.ಎಂ. ಸ್ವಾಗತಿಸಿದರು. ರಂಜಿತ ಪ್ರಾರ್ಥಿಸಿದರು. ಎಚ್.ಬಿ.ಅಜಿತ್ ನಿರೂಪಿಸಿದರು. ಡಿ.ಆರ್. ವಾಸು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

