ಸಿಎಂಗೆ ತಾಲೂಕು ಸಮಸ್ಯೆಗಳ ಮನವರಿಕೆ: ಕಾಂಗ್ರೆಸ್ ಮುಖಂಡರು
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಅ. 5
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಗೆ ಅ.8ರಂದು ಆಗಮಿಸುತ್ತಿರುವ ಸಂದರ್ಭದಲ್ಲಿ ತಾಲೂಕಿನ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಕಾಂಗ್ರೆಸ್ ಮುಖಂಡ ಎಚ್.ಆರ್.ನಾರಾಯಣ್ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಒಡೆದ ಮನೆಯಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದಲ್ಲಿ ಇದು ತುಂಬಿದ ಮನೆಯಾಗಿದೆ. ತಾಲೂಕಿನ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಕ್ಕೆ ತೆರಳುವ ಸಂದರ್ಭದಲ್ಲಿ ಎಲ್ಲ ಮುಖಂಡರು ತಾಲೂಕಿನಲ್ಲಿ ಅಭಿವೃದ್ಧಿಯು ಏಕಪಕ್ಷೀಯವಾಗಿ ನಡೆಯುತ್ತಿರುವುದನ್ನು ಸಿದ್ದರಾಮಯ್ಯ ಗಮನಕ್ಕೆ ತಂದು, ಸಾರ್ವಜನಿಕವಾಗಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಪ್ರಮುಖ ಸಮಸ್ಯೆಗಳಾದ ಸೂರನಹಳ್ಳಿ ಬಳಿಯಲ್ಲಿನ 83 ಎಕರೆಗಳಷ್ಟು ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವುದನ್ನು ರದ್ದುಗೊಳಿಸಿ ಕೃಷಿ ಭೂಮಿಯನ್ನು ಮರಳಿ ರೈತರಿಗೆ ನೀಡುವಂತೆ ಕೋರಿಕೆ, ರೈಲ್ವೆ ಗೇಟುಗಳ ಬದಲಾವಣೆ, ಗ್ರಾಮೀಣ ಪ್ರದೇಶಗಳಿಗೆ ಸರ್ಕಾರ ಘೋಷಿಸಿರುವ ಯೋಜನೆಗಳ ಅನುಷ್ಠಾನ ಹಾಗೂ ಇಲ್ಲಿನ ಪುರಸಭೆಗೆ ಮುಖ್ಯಮಂತ್ರಿಗಳ ನಿಧಿಯಲ್ಲಿ ರಾಜ್ಯ ಸರ್ಕಾರ ನೀಡಿರುವ 5 ಕೋಟಿ ರು.ಗಳ ಕಾಮಗಾರಿಯ ಗುಣಮಟ್ಟ ಹಾಗೂ ವಸ್ತುಸ್ಥಿತಿಯನ್ನು ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು. ಮುಖಂಡ ಕೆ.ರಾಜೇಗೌಡ ಮಾತನಾಡಿ, ತಾಲೂಕಿನಲ್ಲಿ ಪ್ರಮುಖವಾಗಿ ನಿಷ್ಪಕ್ಷಪಾತ ಆಡಳಿತವನ್ನು ನೀಡಲಾಗದೇ, ಸ್ಥಳೀಯ ಶಾಸಕರು ತಮ್ಮದೇ ಆದ ಹಿಂಬಾಲಕರನ್ನು ಜೊತೆಗಿಟ್ಟುಕೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ದುರಾಡಳಿತ ನೀಡುತ್ತಿರುವುದರ ಬಗ್ಗೆ ನಿಗಾವಹಿಸಲು ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದರು.
ಪುರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಹೊನ್ನಿಕೊಪ್ಪಲು ಮಂಜೇಗೌಡ ಮಾತನಾಡಿ, ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿ ಆರಂಭಗೊಂಡು 5 ವರ್ಷಗಳಾದರೂ, ಪೂರ್ಣಗೊಳ್ಳದಿದ್ದರೂ ಗುತ್ತಿಗೆದಾರನಿಗೆ ಮೇಲಿಂದ ಮೇಲೆ ಬಿಲ್ ನೀಡುತ್ತಿರುವುದು, ಪಟ್ಟಣದಲ್ಲಿ ನಡೆಯುತ್ತಿರುವ ಆಕ್ರಮ ಕಾಮಗಾರಿಗಳು ಹಾಗೂ ಅವುಗಳ ಸ್ಥಿತಿ, ಆಶ್ರಯ ಮನೆಗಳ ಹಂಚಿಕೆಯಲ್ಲಿ ನಡೆಸಲಾಗಿರುವ ಆಕ್ರಮಗಳ ಕುರಿತಂತೆ ಮುಖ್ಯಮಂತ್ರಿಗಳು ಹಾಸನದಲ್ಲಿ ನಡೆಯುವ ಜಿಲ್ಲಾ ಜನತಾದರ್ಶನದಲ್ಲಿ ಸಿಎಂ ಗಮನ ಸೆಳೆಯಲಾಗುವುದು ಎಂದು ಹೇಳಿದರು. ಯಳ್ಳೇಶಪುರ ನಂಜೇಗೌಡ, ಸಮಾಜಸೇವಕ ಜಯರಾಮು ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

