ಫಲಾನುಭವಿಗಳಿಗೆ ಯೋಜನೆ ತಲುಪದಿದ್ದರೆ ಅಧಿಕಾರಿಗಳೇ ಹೊಣೆ: ಸಿಎಂ
ಕನ್ನಡಪ್ರಭ ವಾರ್ತೆ ಹಾಸನ ಅ. 8
ರಾಜ್ಯ ಸರ್ಕಾರ ನಾನಾ ಯೋಜನೆಗಳ ಫಲ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಒಂದು ವೇಳೆ ತಲುಪದಿದ್ದರೇ ಜಿಲ್ಲಾಧಿಕಾರಿ, ಜಿಪಂ ಸಿಇಓ ಮತ್ತತಿರ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಮಂಗಳವಾರ ರಾತ್ರಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಿಎಂ, ದುಡ್ ಇದ್ರೆ ಮಾತ್ರ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗೋದು ಎಂಬ ದೂರು ಇದೆ. ಇದು ಸುಖಾ ಸುಮ್ಮನೆ ಬರುವುದಿಲ್ಲ.. ಅದರಲ್ಲಿ ಸತ್ಯಾಂಶವೂ ಇದೆ. ಅದಕ್ಕೆ ಅಧಿಕಾರಿಗಳು ಅವಕಾಶ ಕೊಡಬಾರದು . ಜನರನ್ನು ಕಚೇರಿಗಳಿಗೆ ಸುಮ್ಮನೆ ಅಲೆಸುವುದು, ವಿಳಂಬ ಮಾಡುವುದು ಸರಿಯಲ್ಲ ಎಂದು ಗುಡುಗಿದರು.
ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಉದ್ದೇಶ ಸರ್ಕಾರಿ ಕಾರ್ಯಕ್ರಮಗಳು ಕೆಳ ಹಂತದ ಜನರಿಗೆ ತಲುಪಲೆಂದು. ಈ ಉದ್ದೇಶವನ್ನು ಪ್ರಾಮಾಣಿಕವಾಗಿ ಈಡೇರಿಸಲು ಅಧಿಕಾರಿಶಾಹಿ ಯತ್ನಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ . ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊತ್ತು ಜನರು ಬೆಂಗಳೂರಿಗೆ ಬರುತ್ತಾರೆ. ಇದು ತಪ್ಪಬೇಕಾದರೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಒಗ್ಗಟ್ಟು ಪ್ರದರ್ಶಿಸಿದ ಶಾಸಕರು: ಸಭೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ, ಬೆಳೆ, ಆಸ್ತಿ ಪಾಸ್ತಿ ನಷ್ಟ, ಪರಿಹಾರ ಮತ್ತಿತರ ಬಗ್ಗೆ ಸುದೀರ್ಘ ಕಾಲ ಚರ್ಚೆ ನಡೆಯಿತು. ಮಳೆಯಿಂದ ಆದ ನಷ್ಟ ಮತ್ತು ಮಳೆಯಲ್ಲದೇ ಆದ ನಷ್ಟದ ಬಗ್ಗೆ ಮತ್ತಿತರ ವಿಷಯಗಳ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುವುದನ್ನು ಪತ್ತೆ ಹಚ್ಚಿ ಮಾತನಾಡಿದ ಶಾಸಕರು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಇರುವ ವಾಸ್ತವ ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಕುಡಿಯುವ ನೀರು, ಜಾನುವಾರುಗಳ ಕಾಲುಬಾಯಿ ಜ್ವರ ಮತ್ತಿತರ ವಿಚಾರಗಳು ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್,ಜೆಡಿಎಸ್ ಶಾಸಕರು ಪಕ್ಷಬೇಧ ಮರೆತು ಪರಸ್ವರ ಚರ್ಚೆ ಮಾಡಿದ್ದು ವಿಶೇಷವಾಗಿತ್ತು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಶಿವರಾಜ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶೇ.90 ರಷ್ಟು ಬಿತ್ತನೆ ಕಾರ್ಯ ನಡೆದಿದೆ. ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಆಗಿಲ್ಲ ಎಂದರು.
ಇದರಿಂದ ಆಕ್ರೋಶಗೊಂಡ ಶಾಸಕರಾದ ಎಚ್.ಡಿ.ರೇವಣ್ಣ, ಎ.ಮಂಜು, ಕೆ.ಎಂ. ಶಿವಲಿಂಗೇಗೌಡ, ವೈ.ಎನ್. ರುದ್ರೇಶ್ಗೌಡ, ಪಟೇಲ್ ಶಿವರಾಂ, ಎಚ್.ಎಸ್.ಪ್ರಕಾಶ್, ಸಿ.ಎನ್. ಬಾಲಕೃಷ್ಟ, ಮುಖ್ಯಮಂತ್ರಿಗಳೇ, ಅವರು (ಕೃಷಿ ಅಧಿಕಾರಿ) ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇಡೀ ತಾಲೂಕಿನಲ್ಲಿ ಆದ ಮಳೆ ಪ್ರಮಾಣದ ಬಗ್ಗೆ ನೀಡುತ್ತಾರೆ. ಕೆಲ ಹೋಬಳಿಗಳಲ್ಲಿ ಹೆಚ್ಚು ಮಳೆಯಾಗಿದ್ದರೆ ಕೆಲ ಹೋಬಳಿಗಳಲ್ಲಿ ಮಳೆಯೇ ಆಗಿಲ್ಲ.
ಹೊಳೆನರಸೀಪುರ ತಾಲೂಕಿನಲ್ಲಿ ಹಳ್ಳಿಮೈಸೂರು ಹೋಬಳಿಯಲ್ಲಿ ಮಳೆ ಇಲ್ಲದೇ ಹೊಗೆಸೊಪ್ಪು ನಾಶವಾಗಿದೆ. ಹಳೆಕೋಟೆ ಹೋಬಳಿಯಲ್ಲಿ ಮಳೆ ಇಲ್ಲ. ಕಸಬಾ ಹೋಬಳಿ ಬಿಟ್ಟರೆ ಇನ್ನೆಲ್ಲೂ ಮಳೆಯೇ ಆಗಿಲ್ಲ. ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಬೆಳೆಆಸ್ತಿ ಪಾಸ್ತಿ ನಷ್ಟವಾಗಿದ್ದರೇ, ಅರಸೀಕೆರೆ, ಚನ್ನರಾಯಪಟ್ಟಣ ಹಾಸನ ತಾಲೂಕುಗಳಲ್ಲಿ ಮಳೆಯಿಲ್ಲದೇ ಬೆಳೆ ನಾಶವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಪರಿಹಾರ ನೀಡುವ ಮುಂಚೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದರು.
ರು.1200 ಸಾಲದು: ಎಕರೆಗೆ ರು.1200 ನೀಡಿದರೆ ಏನೇನು ಸಾಲದು. ಹೆಚ್ಚು ಮಾಡಬೇಕು ಎಂದು ಶಾಸಕ ರೇವಣ್ಣ ವಾದಿಸಿದರೇ, ಅದಕ್ಕೆ ಧ್ವನಿಗೂಡಿಸಿದ ಶಾಸಕರಾದ ಪಟೇಲ್ ಶಿವರಾಂ, ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಹೆಚ್ಚು ಪರಿಹಾರ ನೀಡಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಿಎಂ, ವಿಧಾನಸೌಧದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಬರ ಎಂದು ಘೋಷಣೆ ಮಾಡಿ: ಅರಸೀಕೆರೆ ತಾಲೂಕಿನಲ್ಲಿ ಮಳೆಯಿಲ್ಲದೇ ಬೆಳೆ ನಾಶವಾಗಿದೆ. 800 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಅರಸೀಕೆರೆಯನ್ನು ಬರ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು..
ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ತೆಂಗು ಬೆಳೆ ಪರಿಹಾರ ನೀಡಬೇಕೆಂದು ರು. 585 ಕೋಟಿ ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಆದ ನಷ್ಟಕ್ಕೆ ರು. 2724 ಕೋಟಿ ಪರಿಹಾರ ನೀಡಬೇಕೆಂದು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲೇ ದೆಹಲಿಗೆ ಹೋಗಿ ಹಣ ಬಿಡುಗಡೆ ಮಾಡಲು ಯತ್ನಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

